ವೈರಲ್ ಆಯ್ತು ಟೀಮ್‌ ಇಂಡಿಯಾ ಟಿ20 ವಿಶ್ವಕಪ್‌ ಜೆರ್ಸಿ ಎನ್ನಲಾದ ಫೋಟೋ; ಬಕ್ವಾಸ್ ಎಂದು ನೆಟ್ಟಿಗರು ಟ್ರೋಲ್
ಕನ್ನಡ ಸುದ್ದಿ  /  ಕ್ರಿಕೆಟ್  /  ವೈರಲ್ ಆಯ್ತು ಟೀಮ್‌ ಇಂಡಿಯಾ ಟಿ20 ವಿಶ್ವಕಪ್‌ ಜೆರ್ಸಿ ಎನ್ನಲಾದ ಫೋಟೋ; ಬಕ್ವಾಸ್ ಎಂದು ನೆಟ್ಟಿಗರು ಟ್ರೋಲ್

ವೈರಲ್ ಆಯ್ತು ಟೀಮ್‌ ಇಂಡಿಯಾ ಟಿ20 ವಿಶ್ವಕಪ್‌ ಜೆರ್ಸಿ ಎನ್ನಲಾದ ಫೋಟೋ; ಬಕ್ವಾಸ್ ಎಂದು ನೆಟ್ಟಿಗರು ಟ್ರೋಲ್

ಭಾರತದ ಟಿ20 ವಿಶ್ವಕಪ್ ಜೆರ್ಸಿ ಎನ್ನಲಾದ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಇದಕ್ಕೆ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಬಗೆಬಗೆಯ ಪ್ರತಿಕ್ರಿಯೆ ವ್ಯಕ್ತವಾಗಿವೆ.

ವೈರಲ್ ಆಯ್ತು ಟೀಮ್‌ ಇಂಡಿಯಾ ಟಿ20 ವಿಶ್ವಕಪ್‌ ಜೆರ್ಸಿ ಎನ್ನಲಾದ ಫೋಟೋ
ವೈರಲ್ ಆಯ್ತು ಟೀಮ್‌ ಇಂಡಿಯಾ ಟಿ20 ವಿಶ್ವಕಪ್‌ ಜೆರ್ಸಿ ಎನ್ನಲಾದ ಫೋಟೋ

ಈ ವರ್ಷದ ಮಹತ್ವದ ಐಸಿಸಿ ಟೂರ್ನಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದೆ. ಜೂನ್‌ ತಿಂಗಳಲ್ಲಿ ಚುಟುಕು ವಿಶ್ವಸಮರ ನಡೆಯುತ್ತಿದೆ. ಜಾಗತಿಕ ಕ್ರಿಕೆಟ್‌ ಅಭಿಮಾನಿಗಳು ಮತ್ತೊಮ್ಮೆ ಕ್ರಿಕೆಟ್ ವೈಭವಕ್ಕೆ ಸಜ್ಜಾಗುತ್ತಿದ್ದಾರೆ. ಈ ಬಾರಿ ವೆಸ್ಟ್ ಇಂಡೀಸ್ ಮತ್ತು ಯುಎಸ್ ದೇಶಗಳು ಜಂಟಿಯಾಗಿ ಟೂರ್ನಿಯನ್ನು ಆಯೋಜಿಸುತ್ತಿವೆ. ಜೂನ್ 2ರಿಂದ 29ರವರೆಗೆ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದ್ದು, ಬಾರ್ಬಡೋಸ್‌ನಲ್ಲಿ ಫೈನಲ್‌ ಪಂದ್ಯ ನಡೆಯುತ್ತಿದೆ. ಮಹತ್ವದ ಟೂರ್ನಿಗಾಗಿ ಬಿಸಿಸಿಐ ಈಗಾಗಲೇ 15 ಸದಸ್ಯರ ಭಾರತ ಕ್ರಿಕೆಟ್‌ ತಂಡವನ್ನು ಪ್ರಕಟಿಸಿದೆ.

ಒಂದೆಡೆ ಭಾರತದಲ್ಲಿ ಈಗ ಐಪಿಎಲ್‌ ಪಂದ್ಯಾವಳಿ ನಡೆಯುತ್ತಿದ್ದು, ಅತ್ತ ವಿಶ್ವಕಪ್‌ ಜ್ವರ ಶುರುವಾಗಿದೆ. ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ಭಾರತ ತಂಡದ ಅಧಿಕೃತ ಟಿ20 ವಿಶ್ವಕಪ್ ಜೆರ್ಸಿ ಅನಾವರಣಕ್ಕಾಗಿ ಕಾಯುತ್ತಿದ್ದಾರೆ. ಸದ್ಯ ಅಡಿಡಾಸ್ ಬ್ರಾಂಡ್‌ ಬಿಸಿಸಿಐನ ಅಧಿಕೃತ ಕಿಟ್ ಪ್ರಾಯೋಜಕತ್ವ ಹೊಂದಿದ್ದು, ಏಕದಿನ ಮತ್ತು ಟಿ20 ಪಂದ್ಯಗಳಿಗೆ ವಿಭಿನ್ನ ಸ್ವರೂಪದ ಜೆರ್ಸಿ ತಯಾರಿಸುತ್ತಿದೆ. ಏಕದಿನ ಸ್ವರೂಪದ ಜೆರ್ಸಿಯು ಕಾಲರ್ ಜೆರ್ಸಿಯಾಗಿದ್ದು, ಹುಲಿಯ ಪಟ್ಟೆಗಳನ್ನು ಕಾಣಬಹುದು. ಇದೇ ವೇಳೆ ಟಿ20 ಜೆರ್ಸಿಯಲ್ಲಿ ತ್ರಿವರ್ಣ ಧ್ವಜದ ಮಧ್ಯದಲ್ಲಿರುವ ಅಶೋಕ ಚಕ್ರವನ್ನು ನೋಡಬಹುದು.

ಬಿಸಿಸಿಐ ಕಡೆಯಿಂದ ಬಾರತದ ಟಿ20 ವಿಶ್ವಕಪ್‌ ಜೆರ್ಸಿ ಇನ್ನೂ ಅನಾವರಣಗೊಂಡಿಲ್ಲ. ಆದರೆ, ಸೋಷಿಯಲ್‌ ಮೀಡಿಯಾದಲ್ಲಿ ಮಾತ್ರ ಭಾರತದ ವಿಶ್ವಕಪ್‌ ಜೆರ್ಸಿ ಎನ್ನಲಾದ ಫೋಟೋಗಳು ಹರಿದಾಡುತ್ತಿವೆ. ಇದೇ ಜೆರ್ಸಿ ತೊಟ್ಟು ಐಸಿಸಿ ಈವೆಂಟ್‌ನಲ್ಲಿ ಭಾರತದ ಕಣಕ್ಕಿಳಿಯಲಿದೆ ಎನ್ನುವ ಫೋಟೋ ವೈರಲ್ ಆಗಿದೆ. ವಿ ಆಕಾರದ ಕುತ್ತಿಗೆಯ ಮೇಲೆ ತ್ರಿವರ್ಣ ಧ್ವಜದ ಪಟ್ಟೆಗಳನ್ನು ಹೊಂದಿರುವ ಜೆರ್ಸಿ ಇದಾಗಿದ್ದು, ತೋಳುಗಳ ಭಾಗವನ್ನು ಕೇಸರಿ ಬಣ್ಣದಿಂದ ತುಂಬಲಾಗಿದೆ. ಇದರಲ್ಲಿ ಅಡಿಡಾಸ್ ಪಟ್ಟೆಗಳನ್ನು ಕಾಣಬಹುದು.

ಈ ಜೆರ್ಸಿಯನ್ನೇ ಭಾರತ ಧರಿಸುತ್ತಾ ಎನ್ನುವ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಒಂದು ವೇಳೆ ಇದುವೇ ಅಧಿಕೃತ ಜೆರ್ಸಿಯಾಗಿದ್ದರೆ, ಬಿಸಿಸಿಐ ಮತ್ತು ಅಡಿಡಾಸ್‌ಗೆ ಅಚ್ಚರಿಯಾಗಲಿದೆ. ಜೆರ್ಸಿ ಅನಾವರಣವನ್ನು ಸಾಮಾನ್ಯವಾಗಿ ಗೌಪ್ಯವಾಗಿ ಇಡಲಾಗುತ್ತದೆ. ಇದರ ನಡುವೆ ಫೋಟೋ ಲೀಕ್‌ ಆಗಿದ್ದರೆ ಅದು ಬಿಸಿಸಿಐಗೆ ತೀವ್ರ ಮುಜುಗರವಾದಂತಾಗಿಲಿದೆ.

ಇದನ್ನೂ ಓದಿ | ಐಪಿಎಲ್‌ನಲ್ಲಿ ಸುನಿಲ್‌ ನರೈನ್‌ ವಿಶೇಷ ಮೈಲಿಗಲ್ಲು; ಜಡೇಜಾ, ಬ್ರಾವೋ ಬಳಿಕ ಈ ಸಾಧನೆ ಮಾಡಿದ 3ನೇ ಆಲ್‌ರೌಂಡರ್

ವೈರಲ್‌ ಜೆರ್ಸಿ ಫೋಟೋಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಯೊಬ್ಬರು, "ಚೆನ್ನಾಗಿಲ್ಲ" ಎಂದು ಹೇಳಿದರೆ. ಮತ್ತೊಬ್ಬರು 'ತರಬೇತಿ ಕಿಟ್' ಎಂದು ಕರೆದಿದ್ದಾರೆ. ಇನ್ನೊಬ್ಬ ಅಭಿಮಾನಿ ಇದನ್ನು "ತೀರಾ ಕೆಟ್ಟದಾಗಿದೆ" ಎಂದು ಹೇಳಿದ್ದಾರೆ.

ಐಸಿಸಿ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ರೋಹಿತ್ ಶರ್ಮಾ ಟೀಮ್‌ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ರಿಷಭ್ ಪಂತ್ ವಿಕೆಟ್‌ ಕೀಪರ್‌ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಸಂಜು ಸ್ಯಾಮ್ಸನ್ ಆಯ್ಕೆಯಾಗಿದ್ದು, ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಕೈಬಿಡಲಾಗಿದೆ. ಕಳಪೆ ಫಾರ್ಮ್‌ ನಡುವೆಯೂ ಹಾರ್ದಿಕ್‌ ಪಾಂಡ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ನಿರೀಕ್ಷೆಯಂತೆಯೇ ಶಿವಂ ದುಬೆ ಆಯ್ಕೆಯಾಗಿದ್ದು, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಮತ್ತು ಯಜ್ವೇಂದ್ರ ಚಾಹಲ್ ಸ್ಥಾನ ಪಡೆದಿದ್ದಾರೆ. ಮೊಹಮ್ಮದ್‌ ಶಮಿ ಆಯ್ಕೆಗೆ ಲಭ್ಯವಿಲ್ಲದ ಕಾರಣ ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ತಂಡದಲ್ಲಿದ್ದಾರೆ.

ಪ್ರಧಾನ ತಂಡದಿಂದ ಅಚ್ಚರಿಯ ರೀತಿಯಲ್ಲಿ ಹೊರಬಿದ್ದಿರುವ ಶುಭ್ಮನ್ ಗಿಲ್ ಹಾಗೂ ರಿಂಕು ಸಿಂಗ್ ಮೀಸಲು ಪಟ್ಟಿಯಲ್ಲಿದ್ದಾರೆ. ಖಲೀಲ್ ಅಹ್ಮದ್ ಮತ್ತು ಆವೇಶ್ ಖಾನ್ ಇವರೊಂದಿಗೆ ಸ್ಥಾನ ಪಡೆದಿದ್ದಾರೆ.

Whats_app_banner