ನಿನ್ ದಮ್ಮಯ್ಯ ಅಂತೀನಿ, ಆಡಿಯೋ ಮ್ಯೂಟ್ ಮಾಡು ಪ್ಲೀಸ್; ಕ್ಯಾಮರಾಮೆನ್ಗೆ ಕೈಮುಗಿದು ಬೇಡ್ಕೊಂಡ ರೋಹಿತ್ ಶರ್ಮಾ
Rohit Sharma: ಲಕ್ನೋ ಸೂಪರ್ ಜೈಂಟ್ಸ್ ಪಂದ್ಯದ ನಂತರ ಸಹ ಆಟಗಾರರೊಂದಿಗೆ ಮಾತನಾಡುತ್ತಿದ್ದ ರೋಹಿತ್ ಶರ್ಮಾ ಅವರು ಕ್ಯಾಮರಾಮೆನ್ ಕಂಡೊಡನೆ, ಬ್ರದರ್ ಆಡಿಯೋ ಮ್ಯೂಟ್ ಮಾಡಿ ಎಂದು ಕೈ ಮುಗಿದು ಕೇಳಿದ್ದಾರೆ.
ಮುಂಬೈ ಇಂಡಿಯನ್ಸ್ (Mumbai Indians) ತಂಡದ ಸ್ಟಾರ್ ಆಟಗಾರ ರೋಹಿತ್ ಶರ್ಮಾ (Rohit Sharma) ಅವರು ಅಭಿಷೇಕ್ ನಾಯರ್ ಅವರ ಜೊತೆಗಿನ ಖಾಸಗಿ ಚಾಟ್ನಲ್ಲಿ ಫ್ರಾಂಚೈಸಿಯನ್ನು ಟೀಕಿಸುವ ವಿಡಿಯೋ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಅಧಿಕೃತ ಖಾತೆಯಿಂದ ಸೋರಿಕೆಯಾಗಿತ್ತು. ತಂಡದಲ್ಲಿ ಎಲ್ಲವೂ ಸರಿಯಿಲ್ಲ ಸೇರಿದಂತೆ ಎಂಐ ಮಾಲೀಕರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಘಟನೆಯ ನಂತರ ಎಚ್ಚೆತ್ತುಕೊಂಡ ರೋಹಿತ್, ಕ್ಯಾಮರಾಮೆನ್ ಕಂಡೊಡನೆ ಆಡಿಯೋ ಮ್ಯೂಟ್ ಮಾಡುವಂತೆ ಕೈ ಮುಗಿದು ಕೇಳಿಕೊಂಡಿದ್ದಾರೆ.
ಮೇ 11ರ ಶನಿವಾರ ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಮುಂಬೈ ಇಂಡಿಯನ್ಸ್ (MI) ನಡುವಿನ ಘರ್ಷಣೆಗೆ ಒಂದು ದಿನ ಮೊದಲು ಪೋಸ್ಟ್ ಮಾಡಿದ ವಿಡಿಯೋವನ್ನು ಕೋಲ್ಕತ್ತಾ ಫ್ರಾಂಚೈಸಿ ಅಳಿಸಿದರೂ ಕ್ಷಣಾರ್ಧದಲ್ಲಿ ಫ್ಯಾನ್ಸ್ ಅದನ್ನು ವೈರಲ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮುಂಬೈ ಲೋಪಗಳನ್ನು, ತಂಡದಲ್ಲಿರುವ ಅಸಮಾಧಾನ ಮತ್ತು ತನ್ನ ಕೊನೆಯ ಐಪಿಎಲ್ ಎಂದು ರೋಹಿತ್ ಹೇಳಿರುವುದನ್ನು ನಾವು ಕಾಣಬಹುದು. ಇದರ ಬೆನ್ನಲ್ಲೇ ಹಿಟ್ಮ್ಯಾನ್ ಮುಂಬೈ ತೊರೆಯುವುದು ಖಚಿತಗೊಂಡಿತು. ಈಗ ಮತ್ತದೇ ಸನ್ನಿವೇಶ ನಡೆದಿದ್ದು ರೋಹಿತ್ ಎಚ್ಚರಗೊಂಡಿದ್ದಾರೆ.
ಆಡಿಯೋ ಮ್ಯೂಟ್ ಮಾಡು ಎಂದ ರೋಹಿತ್ ಶರ್ಮಾ
ಮೇ 17ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದ ನಂತರ ಸಹ ಆಟಗಾರರೊಂದಿಗೆ ಚರ್ಚೆ ನಡೆಸುತ್ತಿರುವ ಅವಧಿಯಲ್ಲಿ ಕ್ಯಾಮರಾ ಇದ್ದದ್ದನ್ನು ನೋಡಿದ್ದ ಭಾರತೀಯ ಕ್ರಿಕೆಟ್ ತಂಡದ ನಾಯಕ ಮತ್ತೊಮ್ಮೆ ಅದೇ ತಪ್ಪನ್ನು ಮಾಡದಂತೆ ನೋಡಿಕೊಂಡರು. ಧವಲ್ ಕುಲಕರ್ಣಿ ಸಹ ಅಲ್ಲೇ ಇದ್ದರು. ಕ್ಯಾಮರಾಮೆನ್ ಕಡೆ ನೋಡಿದ ರೋಹಿತ್, ಆಡಿಯೋ ಕ್ಲಿಪ್ ಸ್ವಿಚ್ ಆಫ್ ಮಾಡುವಂತೆ ವಿನಂತಿಸಿದ್ದಾರೆ. 37 ವರ್ಷದ ಹಿಟ್ಮ್ಯಾನ್, ಅಭಿಷೇಕ್ ನಾಯರ್ ಜೊತೆಗಿನ ಚಾಟ್ ಬಗ್ಗೆ ಉಲ್ಲೇಖಿಸಿ ಒಂದು ಕ್ಲಿಪ್ ಈಗಾಗಲೇ ತನ್ನನ್ನು ತೊಂದರೆಗೆ ಸಿಲುಕಿಸಿದೆ ಎಂದು ಕ್ಯಾಮರಾಮೆನ್ಗೆ ತಿಳಿಸಿದ್ದಾರೆ.
"ಭಾಯ್ ಯಾರ್, ಆಡಿಯೋ ಬಂದ್ ಕರೋ ಭಾಯ್, ಏಕ್ ಆಡಿಯೋ ನೆ ತೋ ಮೇರಾ ವಾತ್ ಲಗಾ ದಿಯಾ ಹೈಂ (ದಯವಿಟ್ಟು ಆಡಿಯೋ ಮ್ಯೂಟ್ ಮಾಡಿ, ಈಗಾಗಲೇ ಒಂದು ಆಡಿಯೋ ನನಗೆ ತೊಂದರೆ ಕೊಟ್ಟಿದೆ) ಎಂದು ರೋಹಿತ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ತೋರಿಸಿರುವ ಕ್ಲಿಪ್‌ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪ್ರಸ್ತುತ ಆ ಆಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಡಿಲಿಟ್ ಮಾಡಲಾಗಿದೆ. ರೋಹಿತ್ 2025ರ ಐಪಿಎಲ್ಗೂ ಮುನ್ನ ಎಂಐ ತೊರೆಯುವುದು ಪಕ್ಕಾ ಆಗಿದೆ. ಯಾವ ತಂಡಕ್ಕೆ ಹೋಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಲಕ್ನೋ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತೊಂದು ಸೋಲು ಅನುಭವಿಸಿತು. ಮುಂಬೈನ ಐಕಾನಿಕ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 6 ವಿಕೆಟ್ ನಷ್ಟಕ್ಕೆ 214 ರನ್ ಪೇರಿಸಿತು. ನಿಕೋಲಸ್ ಪೂರನ್ 75 ರನ್ ಗಳಿಸಿದರು. ಈ ಗುರಿ ಬೆನ್ನಟ್ಟಿದ ಮುಂಬೈ 18 ರನ್ಗಳಿಂದ ಶರಣಾಯಿತು. 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ರೋಹಿತ್ ಶರ್ಮಾ 68 ರನ್ ಸಿಡಿಸಿದರು. ಮುಂಬೈ ಜೆರ್ಸಿಯಲ್ಲಿ ರೋಹಿತ್ ಆಡುವುದು ಇದೇ ಕೊನೆ ಎಂದು ಹೇಳಲಾಗುತ್ತಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)