ರೋಹಿತ್-ಕೊಹ್ಲಿ ಕೈ ಹಿಡಿದು ಸಂತೈಸಿದ ಪ್ರಧಾನಿ; ಡ್ರೆಸ್ಸಿಂಗ್ ರೂಮ್ಗೆ ಮೋದಿ ಬಂದ ವಿಡಿಯೋ ವೈರಲ್
Prime Minister Narendra Modi: ಆಸ್ಟ್ರೇಲಿಯಾ ವಿರುದ್ಧ ಸೋತ ನಂತರ ಭಾರತ ತಂಡದ ಡ್ರೆಸ್ಸಿಂಗ್ ರೂಮ್ಗೆ ಭೇಟಿಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರು ಆಟಗಾರರಿಗೆ ಧೈರ್ಯ ತುಂಬಿರುವ ವಿಡಿಯೋ ವೈರಲ್ ಆಗುತ್ತಿದೆ.
ನವೆಂಬರ್ 19ರಂದು ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ (Narendra Modi) ನಡೆದ 2023ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ (ICC ODI World Cup 2023) ಆಸ್ಟ್ರೇಲಿಯಾ ವಿರುದ್ಧ (India vs Australia) ಸೋತ ನಂತರ ಭಾರತ ತಂಡದ ಡ್ರೆಸ್ಸಿಂಗ್ ರೂಮ್ಗೆ ಭೇಟಿಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರು (Prime Minister Narendra Modi) ಆಟಗಾರರಿಗೆ ಧೈರ್ಯ ತುಂಬಿರುವ ವಿಡಿಯೋ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಸ್ವತಃ ಪ್ರಧಾನಿ ಮೋದಿಯವರೇ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ಅವರಿಗೆ ಸಾಂತ್ವನ ಹೇಳುತ್ತಿರುವ ಫೋಟೋಗಳು ವೈರಲ್ ಆಗಿದೆ. ಇದೀಗ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಎಲ್ಲರಿಗೂ ಧೈರ್ಯ ಹೇಳಿದ್ದಾರೆ.
ಕೊಹ್ಲಿ-ರೋಹಿತ್ ಕೈ ಹಿಡಿದು ಸಾಂತ್ವ ಹೇಳಿದ ಮೋದಿ
ಇದೀಗ ವೈರಲ್ ಆದ ವಿಡಿಯೋದಲ್ಲಿ ಮೋದಿ ಅವರು ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ವಿರಾಟ್ ಕೊಹ್ಲಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ರೋಹಿತ್-ಕೊಹ್ಲಿ ಕೈ ಕೈ ಹಿಡಿದ ಮೋದಿ, ಹುರಿದುಂಬಿಸಿದ್ದಾರೆ. ಆಟಗಾರರ ಪ್ರದರ್ಶನ ಮತ್ತು ವಿಶ್ವಕಪ್‌ನಲ್ಲಿ ತಂಡದ ಅದ್ಭುತ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ನವೆಂಬರ್ 20ರಂದು ಶಮಿ ಮತ್ತು ಜಡೇಜಾ ಡ್ರೆಸ್ಸಿಂಗ್ ರೂಮ್ನಲ್ಲಿ ಮೋದಿ ಅವರ ಜೊತೆಗಿರುವ ಫೋಟೋ ಹಂಚಿಕೊಂಡಿದ್ದರು. ಮೋದಿ ಸಮಾಧಾನ ಪಡಿಸಿದ ಕುರಿತು ಇಬ್ಬರು ಆಟಗಾರರು ವಿವರಿಸಿದ್ದರು. ಈಗ ಡ್ರೆಸ್ಸಿಂಗ್ ರೂಮ್ಗೆ ಭೇಟಿಕೊಟ್ಟ ವಿಡಿಯೋ ಹಂಚಿಕೊಂಡ ಮೋದಿ, ವಿಶ್ವಕಪ್ ಫೈನಲ್ ನಂತರ ಭಾರತ ತಂಡದ ಡ್ರೆಸ್ಸಿಂಗ್ ರೂಮ್ನಲ್ಲಿ ಆಟಗಾರರನ್ನು ಭೇಟಿಯಾಗಿದ್ದೆ. ಇಡೀ ಭಾರತವು ಇಂದಿಗೂ ಮತ್ತು ಯಾವಾಗಲೂ ಅವರೊಂದಿಗೆ ನಿಂತಿರುತ್ತದೆ ಎಂದು ಹೇಳಿದ್ದಾರೆ.
ಮೋದಿಗೆ ಧನ್ಯವಾದ ಎಂದ ಶಮಿ
ವೇಗಿ ಮೊಹಮ್ಮದ್ ಶಮಿ ತನ್ನ ಎಕ್ಸ್ ಖಾತೆಯಲ್ಲಿ ಮೋದಿ ಸಂತೈಸಿದ ಚಿತ್ರದೊಂದಿಗೆ ಪೋಸ್ಟ್ ಮಾಡಿದ್ದಾರೆ. ದುರದೃಷ್ಟವಶಾತ್ ನಿನ್ನೆ ನಮ್ಮ ದಿನವಾಗಿರಲಿಲ್ಲ. ಟೂರ್ನಿಯುದ್ದಕ್ಕೂ ನಮ್ಮ ತಂಡ ಮತ್ತು ನನ್ನನ್ನು ಬೆಂಬಲಿಸಿದ ಭಾರತೀಯ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ವಿಶೇಷವಾಗಿ ಡ್ರೆಸ್ಸಿಂಗ್ ರೂಮ್ಗೆ ಆಗಮಿಸಿ ತಂಡದ ಆಟಗಾರರ ಉತ್ಸಾಹ ಹೆಚ್ಚಿಸಿದ್ದಕ್ಕೆ ಮೋದಿ ಅವರಿಗೆ ಧನ್ಯವಾದಗಳು. ನಾವು ಮತ್ತೆ ಬಲಿಷ್ಠವಾಗಿ ಕಂಬ್ಯಾಕ್ ಮಾಡುತ್ತೇವೆ ಎಂದಿದ್ದಾರೆ.
ಮೋದಿ ಮಾತು ಪ್ರೇರಕ
ರವೀಂದ್ರ ಜಡೇಜಾ ಟ್ವೀಟ್ ಮಾಡಿ, ಮೋದಿಗೆ ಧನ್ಯವಾದ ಹೇಳಿದ್ದಾರೆ. ಮೋದಿ ಅವರು ಡ್ರೆಸ್ಸಿಂಗ್ ರೂಮ್ಗೆ ಭೇಟಿ ನೀಡಿದ್ದು, ವಿಶೇಷ ಮತ್ತು ಸ್ಫೂರ್ತಿದಾಯಕ. ನಾವು ಅದ್ಭುತ ಪಂದ್ಯಾವಳಿಯನ್ನೇ ಹೊಂದಿದ್ದೆವು. ಆದರೆ, ನಿನ್ನೆ ನಾವು ಅಲ್ಪಾವಧಿಗೆ ಕೊನೆಗೊಂಡಿದ್ದೇವೆ. ನಾವೆಲ್ಲ ಎದೆಗುಂದಿದ್ದೇವೆ. ಆದರೆ ನಿಮ್ಮ ಪ್ರೀತಿ ಬೆಂಬಲ ನಮ್ಮನ್ನು ಮುಂದುವರಿಸುತ್ತಿದೆ ಎಂದಿದ್ದಾರೆ.
ಮೋದಿ ಟ್ವೀಟ್
ಪಂದ್ಯದ ನಂತರ ಮೋದಿ ಸಹ ಟ್ವಿಟ್ ಮಾಡಿದ್ದರು. ಆತ್ಮೀಯ ಟೀಮ್ ಇಂಡಿಯಾ.. ಈ ವಿಶ್ವಕಪ್‌ನಲ್ಲಿ ನಿಮ್ಮ ಪ್ರತಿಭೆ, ಸಂಕಲ್ಪ ಗಮನಾರ್ಹ. ನೀವು ತುಂಬಾ ಉತ್ಸಾಹದಿಂದ ಆಡಿದ್ದೀರಿ. ನಿಮ್ಮ ಆಟದ ಬಗ್ಗೆ ದೇಶಕ್ಕೆ ಹೆಮ್ಮೆ ಇದೆ. ನಾವು ಇಂದು ಮಾತ್ರವಲ್ಲ, ಎಂದೆಂದಿಗೂ ನಿಮ್ಮೊಂದಿಗೆ ಇರುತ್ತೇವೆ ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ.