ನ್ಯೂಯಾರ್ಕ್ ಮೈದಾನಕ್ಕೆ ನುಗ್ಗಿ ರೋಹಿತ್ ಶರ್ಮಾ ತಬ್ಬಿಕೊಂಡ ಫ್ಯಾನ್; ಪೊಲೀಸರು ಹಿಡಿಯುವಾಗ ನೋಯಿಸಬೇಡಿ ಎಂದ ಹಿಟ್‌ಮ್ಯಾನ್
ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಭದ್ರತೆಯನ್ನು ಉಲ್ಲಂಘಿಸಿದ ಅಭಿಮಾನಿಯೊಬ್ಬರು ನ್ಯೂಯಾರ್ಕ್ ಕ್ರೀಡಾಂಗಣಕ್ಕೆ ನುಗ್ಗಿದ್ದಾರೆ. ರೋಹಿತ್ ಶರ್ಮಾ ಅವರನ್ನು ತಬ್ಬಿಕೊಳ್ಳಲು ಪ್ರಯತ್ನಿಸುವಾಗ ಪೊಲೀಸರು ಆತನನ್ನು ಹಿಡಿದಿದ್ದಾರೆ.
ಅಮೆರಿಕದಲ್ಲಿ ಕ್ರಿಕೆಟ್ ಸಂಭ್ರಮ ಕಳೆಗಟ್ಟಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಚಾಲನೆ ಸಿಕ್ಕಿದೆ. ಅದಕ್ಕೂ ಮುನ್ನ ನ್ಯೂಯಾರ್ಕ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ (Nassau County International Cricket Stadium) ಜೂನ್ 1ರ ಶನಿವಾರ ಭಾರತ ತಂಡ ಮೊದಲ ಅಭ್ಯಾಸ ಪಂದ್ಯ ಆಡಿತು. ಬಾಂಗ್ಲಾದೇಶ (India vs Bangladesh) ವಿರುದ್ಧದ ಏಕೈಕ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ 60 ರನ್‌ಗಳಿಂದ ಗೆದ್ದಿತು. ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಆಕ್ರಮಣಕಾರಿ ಆಟದ ನೆರವಿನಿಂದ ಭಾರತ 5 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಚೇಸಿಂಗ್‌ನಲ್ಲಿ ಬೇಗನೆ ವಿಕೆಟ್ ಕಳೆದುಕೊಂಡ ಬಾಂಗ್ಲಾ, ಗುರಿ ತಲುಪಲು ವಿಫಲವಾಯ್ತು.
ಪಂದ್ಯವನ್ನು ವೀಕ್ಷಿಸಲು ನ್ಯೂಯಾರ್ಕ್‌ನ ನೂತನ ಕ್ರೀಡಾಂಗಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಈ ನಡುವೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ಭೇಟಿಯಾಗಲು ಮೈದಾನದ ಭದ್ರತೆಯನ್ನು ಉಲ್ಲಂಘಿಸಿ ಅಭಿಮಾನಿಯೊಬ್ಬರು ನೇರವಾಗಿ ಮೈದಾನಕ್ಕೆ ನುಗ್ಗಿದ್ದಾರೆ. ಬಾಂಗ್ಲಾದೇಶ ತಂಡ ಚೇಸಿಂಗ್ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.
ಹಿಟ್‌ಮ್ಯಾನ್ ತಬ್ಬಿಕೊಳ್ಳಲು ಬಂದ ಅಭಿಮಾನಿಯನ್ನು ಪೊಲೀಸರು ಬಂದು ಹಿಡಿದಿದ್ದಾರೆ. ರೋಹಿತ್ ಅವರನ್ನು ತಬ್ಬಿಕೊಳ್ಳುತ್ತಿದ್ದಂತೆಯೇ ಇಬ್ಬರು ಪೊಲೀಸರು ಅಭಿಮಾನಿಯನ್ನು ಹಿಡಿದು ಕೈಕೋಳ ತೊಡಿಸಿದ್ದಾರೆ. ರೋಹಿತ್ ಅವರಿಂದ ಅಭಿಮಾನಿಯನ್ನು ಬೇರ್ಪಡಿಸುವ ಸಂದರ್ಭದಲ್ಲಿ ಆತ ಕೆಳಕ್ಕೆ ಬಿದ್ದಿದ್ದಾನೆ. ಅಲ್ಲೇ ಕೈಕೋಳ ತೊಡಿಸಿ ಪೊಲೀಸರು ಕರೆದೊಯ್ದಿದ್ದಾರೆ. ಈ ವೇಳೆ ಅಭಿಮಾನಿಯೊಂದಿಗೆ ಸೌಮ್ಯವಾಗಿ ನಡೆದುಕೊಂಡು ಆತನಿಗೆ ನೋಯಿಸದಂತೆ ಪೊಲೀಸರಿಗೆ ಹಿಟ್‌ಮ್ಯಾನ್ ಮನವಿ ಮಾಡಿದ್ದಾರೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವರ್ಷ ಇದು ಮೂರನೇ ಬಾರಿಗೆ ಅಭಿಮಾನಿಯೊಬ್ಬರು ರೋಹಿತ್ ಅವರನ್ನು ಭೇಟಿಯಾಗಲು ಭದ್ರತೆಯನ್ನು ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿದ್ದಾರೆ. ಈ ಹಿಂದೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಸಮಯದಲ್ಲಿ, ಹೈದರಾಬಾದ್‌ನಲ್ಲಿ ನಡೆದ ಪಂದ್ಯದ ವೇಳೆ ಅಭಿಮಾನಿಯೊಬ್ಬರು ರೋಹಿತ್ ಅವರನ್ನು ಭೇಟಿಯಾಗಿ ಪಾದ ಸ್ಪರ್ಷಿಸಿದ್ದರು. ಆ ಬಳಿಕ ಐಪಿಎಲ್ 2024ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದಾಗ ಮತ್ತೋರ್ವ ಅಭಿಮಾನಿ ಮೈದಾನಕ್ಕೆ ಪ್ರವೇಶಿಸಿದ್ದರು.
ಬಾಂಗ್ಲಾದೇಶ ವಿರುದ್ಧ ನ್ಯೂಯಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಗೆದ್ದಿದೆ. ಇದರೊಂದಿಗೆ ಇದೇ ಮೈದಾನದಲ್ಲಿ ನಡೆಯಲಿರುವ ಟೂರ್ನಿಯ ಪ್ರಮುಖ ಪಂದ್ಯಗಳಿಗೂ ಮುನ್ನ ವಿಶ್ವಾಸ ಹೆಚ್ಚಿಸಿಕೊಂಡಿದೆ.
ಟಿ20 ವಿಶ್ವಕಪ್ ನಲ್ಲಿ ಭಾರತವು ಲೀಗ್ ಹಂತದಲ್ಲಿ ಒಟ್ಟು ನಾಲ್ಕು ಪಂದ್ಯಗಳಲ್ಲಿ ಆಡಲಿದ್ದು, ಅದರಲ್ಲಿ ಮೂರು ಮ್ಯಾಚ್ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 5ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಆ ಬಳಿಕ 9ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದರಿಸಲಿದೆ.
ಭಾರತ ಟಿ20 ವಿಶ್ವಕಪ್ ತಂಡ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಾಲ್.
ಟಿ20 ವಿಶ್ವಕಪ್ 2024ರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಕೆನಡಾ ವಿರುದ್ಧ ದಾಖಲೆಯ ಚೇಸಿಂಗ್; ಟಿ20 ವಿಶ್ವಕಪ್ ಪದಾರ್ಪಣೆ ಪಂದ್ಯದಲ್ಲೇ ಗೆದ್ದು ಬೀಗಿದ ಯುಎಸ್ಎ