ಕನ್ನಡ ಸುದ್ದಿ  /  Cricket  /  Posters Supporting Rohit Sharma Dumped Outside Wankhede Stadium Video Viral Ahead Of Hardik Pandya Boos Mi Vs Rr Jra

ವಾಂಖೆಡೆ ಮೈದಾನದ ಹೊರಗಡೆ ರೋಹಿತ್ ಶರ್ಮಾ ಬೆಂಬಲಿತ ಪೋಸ್ಟರ್‌ಗಳ ರಾಶಿ; ಫ್ರಾಂಚೈಸ್‌ ವಿರುದ್ಧ ಫ್ಯಾನ್ಸ್‌ ಗರಂ

ರೋಹಿತ್ ಶರ್ಮಾ ಅವರನ್ನು ಬೆಂಬಲಿಸುವ ಫಲಕಗಳು ಹಾಗೂ ಪೋಸ್ಟರ್‌ಗಳನ್ನು, ಮುಂಬೈನ ವಾಂಖೆಡೆ ಮೈದಾನದ ಹೊರಗಡೆ ಎಸೆದಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

ವಾಂಖೆಡೆ ಮೈದಾನದ ಹೊರಗಡೆ ರೋಹಿತ್ ಶರ್ಮಾ ಬೆಂಬಲಿತ ಪೋಸ್ಟರ್‌ಗಳ ರಾಶಿ
ವಾಂಖೆಡೆ ಮೈದಾನದ ಹೊರಗಡೆ ರೋಹಿತ್ ಶರ್ಮಾ ಬೆಂಬಲಿತ ಪೋಸ್ಟರ್‌ಗಳ ರಾಶಿ (Screengrab)

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ರಾಜಸ್ಥಾನ್‌ ರಾಯಲ್ಸ್ (MI vs RR) ತಂಡಗಳ ನಡುವಿನ ಪಂದ್ಯಕ್ಕೂ ಮುನ್ನವೇ, ಮೈದಾನದಲ್ಲಿ ಹಾರ್ದಿಕ್‌ ಪಾಂಡ್ಯ ವಿರುದ್ಧ ಘೋಷಣೆಗಳು ಕೇಳಿಬರುವ ನಿರೀಕ್ಷೆ ಇತ್ತು. ರೋಹಿತ್‌ ಅವರನ್ನು ತಂಡದ ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್‌ ಪಾಂಡ್ಯ ಅವರಿಗೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಬಳಿಕ, ಫ್ರಾಂಚೈಸ್‌ ನಡೆಗೆ ಅಭಿಮಾನಿಗಳಿಂದ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿವೆ. ಈ ಹಿಂದೆ ಅಹಮದಾಬಾದ್‌ ಹಾಗೂ ಹೈದರಾಬಾದ್‌ನಲ್ಲಿ ನಡೆದ ಪಂದ್ಯಗಳ ವೇಳೆ ಇದು ಸ್ಪಷ್ಟವಾಗಿತ್ತು. ಹೀಗಾಗಿ ಮುಂಬೈನಲ್ಲೂ ಇದೇ ರೀತಿಯ ಬೆಳವಣಿಗೆ ನಡೆಯುವ ನಿರೀಕ್ಷೆಯಿಂದ, ಮುಂಬೈ ಮ್ಯಾನೇಜ್‌ಮೆಂಟ್‌ ಇದಕ್ಕೆ ತಡೆ ಹಾಕಿದೆ.

ವಾಣಿಜ್ಯ ನಗರಿಯಲ್ಲಿ ಪಂದ್ಯದ ಆರಂಭಕ್ಕೂ ಮುನ್ನವೇ, ರೋಹಿತ್ ಶರ್ಮಾ ಬೆಂಬಲಿತ ಪೋಸ್ಟರ್‌ಗಳನ್ನು ವಾಂಖೆಡೆ ಕ್ರೀಡಾಂಗಣದ ಹೊರಗೆ ಎಸೆದಿರುವ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಮುಂಬೈ ಹಾಗೂ ರಾಜಸ್ಥಾನ ನಡುವಿನ ಐಪಿಎಲ್ ಪಂದ್ಯಕ್ಕೂ ಮುನ್ನ ಅಭಿಮಾನಿಗಳು ವಾಂಖೆಡೆ ಕ್ರೀಡಾಂಗಣ ಪ್ರವೇಶಿಸುವ ಮೊದಲು, ಅವರ ಬಳಿಯಿದ್ದ ತಮ್ಮ ಪೋಸ್ಟರ್‌ಗಳು ಹಾಗೂ ಫಲಕಗಳನ್ನು ಒಳಗೆ ಕೊಂಡುಹೋಗದಂತೆ ಸೂಚಿರುವುದಾಗಿ ಫ್ಯಾನ್ಸ್‌ ಆರೋಪಿಸಿದ್ದಾರೆ.

ತಮ್ಮ ಬಳಿಯಿದ್ದ ಪೋಸ್ಟರ್‌ಗಳನ್ನು ಮೈದಾನದ ಒಳಗೆ ಕೊಂಡೊಯ್ಯಲು ಅನುಮತಿ ನೀಡಿಲ್ಲ ಎಂದು ಎಕ್ಸ್ ಬಳಕೆದಾರರು ಹೇಳಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ವಿರುದ್ಧ ಘೋಷಣೆಗಳು ಕೇಳಿಬರುವ ನಿರೀಕ್ಷೆಯಿತ್ತು. ಅದರಂತೆ ಮಾಜಿ ನಾಯಕ ರೋಹಿತ್‌ ಶರ್ಮಾಗೆ ಬೆಂಬಲ ಸೂಚಿಸುವ ಪೋಸ್ಟರ್‌ಗಳನ್ನು ಅಭಿಮಾನಿಗಳು ಮೈದಾನಕ್ಕೆ ತಂದಿದ್ದರು. ಆದರೆ, ಯಾವುದೇ ಪೋಸ್ಟರ್‌ ಪ್ರದರ್ಶನಕ್ಕೂ ಅವಕಾಶ ನೀಡಲಾಗಿಲ್ಲ.

ಇದನ್ನೂ ಓದಿ | ಮುಂಬೈ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ಆಯ್ಕೆ; ಸ್ಯಾಮ್ಸನ್‌ ಬಳಗದಲ್ಲಿ ಒಂದು ಬದಲಾವಣೆ

ಪಂದ್ಯ ಆರಂಭವಾದ ಬಳಿವೂ, ಸ್ಟೇಡಿಯಂನಲ್ಲಿ ಯಾವುದೇ ರೀತಿಯ ಪೋಸ್ಟರ್‌ಗಳು ಕಾಣಿಸಲಿಲ್ಲ. ಮೊದಲ ಇನ್ನಿಂಗ್ಸ್‌ ವೇಳೆ ಅಭಿಮಾನಿಗಳನ್ನು ತೋರಿಸುವಾಗ, ಕ್ಯಾಮರಾಮೆನ್‌ ಯಾವುದೇ ಪೋಸ್ಟರ್‌ಗಳತ್ತ ಜೂಮ್‌ ಹಾಕಿಲ್ಲ. ಹೀಗಾಗಿ ಪೋಸ್ಟರ್‌ಗಳ ಪ್ರದರ್ಶನಕ್ಕೆ ಅವಕಾಶ ನೀಡದಿರುವುದು ಸ್ಪಷ್ಟವಾಗಿದೆ.

ನಾಯಕತ್ವ ಬದಲಾವಣೆ ಬಳಿಕ, ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಯು ಸೋಷಿಯಲ್‌ ಮೀಡಿಯಾದಲ್ಲಿ ಲಕ್ಷಾಂತರ ಬೆಂಬಲಿಗರನ್ನು ಕಳೆದುಕೊಂಡಿದೆ. ಆ ಬಳಿಕ ಅಹ್ಮದಾಬಾದ್ ಮತ್ತು ಹೈದರಾಬಾದ್‌ನಲ್ಲಿ ನಡೆದ ಪಂದ್ಯಗಳ ವೇಳೆ ಹಾರ್ದಿಕ್ ಪಾಂಡ್ಯ ವಿರುದ್ಧ ಘೋಷಣೆಗಳು ಕೇಳಿಬದಿದ್ದವು. ತವರು ಮೈದಾನದಲ್ಲಿ ಮೊದಲ ಪಂದ್ಯವಾದ ಕಾರಣ, ಇಲ್ಲೂ ಅದೇ ನಿರೀಕ್ಷೆಗಳಿದ್ದವು. ಆದರೆ, ಅದಕ್ಕೆ ಕಡಿವಾಣ ಹಾಕಲಾಗಿದೆ.

ಹಾರ್ದಿಕ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಟೂರ್ನಿಯಲ್ಲಿ‌ ಕಳಪೆ ಆರಂಭ ಪಡೆದಿದೆ. ಆರಂಭಿಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 6 ರನ್‌ಗಳಿಂದ ಸೋತ ಬಳಿಕ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎರಡನೇ ಪಂದ್ಯದಲ್ಲಿಯೂ 31 ರನ್‌ಗಳಿಂದ ಸೋಲೊಪ್ಪಿತು. ಇದೀಗ ರಾಜಸ್ಥಾನ ವಿರುದ್ಧದ ಮೂರನೇ ಪಂದ್ಯದಲ್ಲಿ ಮೇಲಿಂದ ಮೇಲೆ ವಿಕೆಟ್‌ ಕಳೆದುಕೊಂಡ ತಂಡವು, ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿದೆ.

ರಾಜಸ್ಥಾನ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ

ಇಶಾನ್ ಕಿಶನ್ (ವಿಕೆಟ್‌ ಕೀಪರ್), ರೋಹಿತ್ ಶರ್ಮಾ, ನಮನ್ ಧೀರ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಜೆರಾಲ್ಡ್ ಕೋಟ್ಜಿ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಜಸ್ಪ್ರೀತ್ ಬುಮ್ರಾ, ಕ್ವೇನಾ ಮಫಕಾ.

IPL_Entry_Point