ಟೀಮ್‌ ಇಂಡಿಯಾ ಆಲ್‌ರೌಂಡ್‌ ಆಟಕ್ಕೆ ತಲೆಬಾಗಿದ ಆಸೀಸ್; ಎರಡನೇ ಟಿ20ಯಲ್ಲಿ ಭಾರತಕ್ಕೆ 44 ರನ್‌ ಜಯ
ಕನ್ನಡ ಸುದ್ದಿ  /  ಕ್ರಿಕೆಟ್  /  ಟೀಮ್‌ ಇಂಡಿಯಾ ಆಲ್‌ರೌಂಡ್‌ ಆಟಕ್ಕೆ ತಲೆಬಾಗಿದ ಆಸೀಸ್; ಎರಡನೇ ಟಿ20ಯಲ್ಲಿ ಭಾರತಕ್ಕೆ 44 ರನ್‌ ಜಯ

ಟೀಮ್‌ ಇಂಡಿಯಾ ಆಲ್‌ರೌಂಡ್‌ ಆಟಕ್ಕೆ ತಲೆಬಾಗಿದ ಆಸೀಸ್; ಎರಡನೇ ಟಿ20ಯಲ್ಲಿ ಭಾರತಕ್ಕೆ 44 ರನ್‌ ಜಯ

India vs Australia 2nd T20: ತಿರುವನಂತಪುರದಲ್ಲಿ ನಡೆದ ಭಾರತ ಆಸ್ಟ್ರೇಲಿಯಾ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡವು ಭರ್ಜರಿ ಜಯ ಸಾಧಿಸಿದೆ.

ಭಾರತದ ಆಟಗಾರರ ಸಂಭ್ರಮಾಚರಣೆ
ಭಾರತದ ಆಟಗಾರರ ಸಂಭ್ರಮಾಚರಣೆ (AFP)

ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿಯೂ ಭಾರತ ರೋಚಕ ಜಯ ಸಾಧಿಸಿದೆ. ನವೆಂಬರ್‌ 26ರ ಭಾನುವಾರ ತಿರುವನಂತಪುರದ ಗ್ರೀನ್‌ಫೀಲ್ಡ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸೀಸ್‌ ವಿರುದ್ಧ ಸೂರ್ಯಕುಮಾರ್‌ ಯಾದವ್‌ ಬಳಗವು 44 ರನ್‌ಗಳ ಅಂತರದಿಂದ ಗೆದ್ದು ಬೀಗಿದೆ.

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ, ಅಗ್ರ ಕ್ರಮಾಂಕದ ಮೂವರು ಬ್ಯಾಟರ್‌ಗಳ ಅರ್ಧಶತಕದ ನೆರವಿಂದ 4 ವಿಕೆಟ್‌ ಕಳೆದುಕೊಂಡು 235 ರನ್‌ ಗಳಿಸಿತು. ಚೇಸಿಂಗ್ ನಡೆಸಿದ‌ ಕಾಂಗರೂ ಬಳಗವು 9 ವಿಕೆಟ್‌ ಕಳೆದುಕೊಂಡು 191 ರನ್‌ ಗಳಿಸಲಷ್ಟೇ ಶಕ್ತವಾಯ್ತು.

ಬೃಹತ್‌ ಮೊತ್ತದ ಚೇಸಿಂಗ್‌ಗೆ ಇಳಿದ ಆಸ್ಟ್ರೇಲಿಯಾ ಕೂಡಾ ಸ್ಫೋಟಕ ಆರಂಭ ಪಡೆಯಿತು. ಆದರೆ ಭಾರತ ಆರಂಭಿಕ ಮುನ್ನಡೆ ಪಡೆಯಿತು. 19 ರನ್‌ ಗಳಿಸಿದ್ದ ಮ್ಯಾಥ್ಯೂ ಶಾರ್ಟ್‌ ಅವರನ್ನು ರವಿ ಬಿಷ್ನೋಯ್‌ ಕ್ಲೀನ್‌ ಬೋಲ್ಡ್‌ ಮಾಡಿದರು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಇಂಗ್ಲಿಸ್‌ ಕೇವಲ 2 ರನ್‌ ಗಳಿಸಿ ಔಟಾದರು. ಮ್ಯಾಕ್ಸ್‌ವೆಲ್‌ ಆಟ 12 ರನ್‌ಗೆ ಸೀಮಿತವಾಯ್ತು. ಅವರ ಬೆನ್ನಿಗೆ 19 ರನ್‌ ಗಳಿಸಿದ್ದ ಸ್ಮಿತ್‌ ಕೂಡಾ ವಿಕೆಟ್‌ ಒಪ್ಪಿಸಿದರು.

ಒಂದು ಹಂತದಲ್ಲಿ 58 ರನ್‌ ವೇಳೆಗೆ 4 ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ಟಿಮ್‌ ಡೇವಿಡ್‌ ಮತ್ತು ಸ್ಟೋಯ್ನಿಸ್ ಆಸರೆಯಾದರು. ಕೇವಲ 38 ಎಸೆತಗಳಲ್ಲಿ ಈ ಜೋಡಿ 81 ರನ್‌ ಕಲೆ ಹಾಕಿತು. ತಂಡವನ್ನು ಗೆಲುವಿನತ್ತ ಕೊಂಡೊಯ್ಯತ್ತಿದ್ದವರ ವೇಗಕ್ಕೆ ಬಿಷ್ಣೋಯ್‌ ಬ್ರೇಕ್‌ ಹಾಕಿದರು. 37 ರನ್‌ ಗಳಿಸಿದ ಡೇವಿಡ್‌, ಗಾಯಕ್ವಾಡ್‌ಗೆ ಕ್ಯಾಚ್‌ ನೀಡಿ ವಿಕೆಟ್‌ ಒಪ್ಪಿಸಿದರು.

ತಮ್ಮ ಆಟ ಮುಂದುವರೆಸಿದ ಸ್ಟೋಯ್ನಿಸ್‌, 25 ಎಸೆತಗಳಲ್ಲಿ 4 ಸಿಕ್ಸರ್‌ ಸಹಿತ 45 ರನ್‌ ಗಳಿಸಿ ಮುಕೇಶ್‌ ಕುಮಾರ್‌ಗೆ ವಿಕೆಟ್‌ ನೀಡಿದರು. ಸೀನ್‌ ಅಬಾಟ್‌ ಮತ್ತು ನಾಥನ್‌ ಎಲ್ಲಿಸಿ ಒಬ್ಬರ ಬಳಿಕ ಮತ್ತೊಬ್ಬರಂತೆ ಪ್ರಸಿದ್ಧ್‌ ಕೃಷ್ಣ ಎಸೆತದಲ್ಲಿ ಕ್ಲೀನ್‌ ಬೋಲ್ಡ್‌ ಆದರು. ಡೆತ್‌ ಓವರ್‌ಗಳಲ್ಲಿ ಅಬ್ಬರಿಸಿದ ನಾಯಕ ವೇಡ್‌, 42 ರನ್‌ ಗಳಿಸಿದರು. ಆದರೆ ತಂಡದ ಗೆಲುವು ಸಾಧ್ಯವಾಗಲಿಲ್ಲ.

ಭಾರತದ ಪರ ರವಿ ಬಿಷ್ಣೋಯ್‌ ಹಾಗೂ ಪ್ರಸಿದ್ಧ ಕೃಷ್ಣ ತಲಾ ಮೂರು ವಿಕೆಟ್‌ ಪಡೆದರು.

ಭಾರತದ ಸ್ಫೋಟಕ ಆಟ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ, ಅದ್ಭುತ ಆರಂಭ ಪಡೆಯಿತು. ಯಶಸ್ವಿ ಜೈಸ್ವಾಲ್‌ ಆರಂಭದಿಂದಲೇ ವೇಗದ ಆಟಕ್ಕೆ ಮಣೆ ಹಾಕಿದರು. ಅಲ್ಲದೆ ಪವರ್‌ಪ್ಲೇ ಒಳಗಡೆ ಅರ್ಧಶತಕ ಸಿಡಿಸಿದರು. ರುತುರಾಜ್‌ ಗಾಯಕ್ವಾಡ್‌ ಹಾಗೂ ಜೈಸ್ವಾಲ್‌ ಜೊತೆಗೂಡಿ ಮೊದಲನೇ ವಿಕೆಟ್‌ಗೆ 77 ರನ್‌ಗಳ ಜೊತೆಯಾಟವಾಡಿದರು. ಕೇವಲ 25 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ 53 ರನ್‌ ಸಿಡಿಸಿದ ಜೈಸ್ವಾಲ್‌ ಎಲ್ಲಿಸ್‌ಗೆ ವಿಕೆಟ್‌ ಒಪ್ಪಿಸಿದರು.

ಇದನ್ನೂ ಓದಿ | ಐಪಿಎಲ್ ಫ್ರಾಂಚೈಸಿಗಳು ಉಳಿಸಿಕೊಂಡ ಹಾಗೂ ಬಿಡುಗಡೆ ಮಾಡಿದ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ

ಎರಡನೇ ವಿಕೆಟ್‌ಗೆ ಒಂದಾದ ಗಾಯಕ್ವಾಡ್‌ ಮತ್ತು ಕಿಶನ್‌ ಬ್ಯಾಟ್‌ನಿಂದಲೂ ಅರ್ಧಶತಕದ ಜೊತೆಯಾಟ ಬಂತು. 32 ಎಸೆತಗಳಲ್ಲಿ 4 ಸಿಡಿಲಬ್ಬರದ ಸಿಕ್ಸರ್‌ ಜೊತೆಗೆ 52 ರನ್‌ ಗಳಿಸಿದ ಕಿಶನ್‌ ಸ್ಟೋಯ್ನಿಸ್‌ ಎಸೆತದಲ್ಲಿ ಔಟಾದರು. ಈ ವೇಳೆ ಬಂದ ನಾಯಕ ಸೂರ್ಯಕುಮಾರ್‌ 19 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ಅಬ್ಬರದಾಟ ಮುಂದುವರೆಸಿದ ರುತುರಾಜ್‌, 58 ರನ್‌ ಗಳಿಸಿ ಕೊನೆಯ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದರು.

ಭಾರತದ ಇನ್ನಿಂಗ್ಸ್‌ಗೆ ಸ್ಫೋಟಕ ಅಂತ್ಯ ತಂದವರು ರಿಂಕು ಸಿಂಗ್. 344ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿ ಕೇವಲ 9 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಆಕರ್ಷಕ ಸಿಕ್ಸರ್‌ ಜೊತೆಗೆ 31 ರನ್‌ ಗಳಿಸಿದರು. ಇವರ ಇನ್ನಿಂಗ್ಸ್‌ ಭಾರತದ ಮೊತ್ತವನ್ನು 230ರ ಗಟಿದಾಟಿಸಲು ನೆರವಾಯ್ತು. ತಿಲಕ್‌ ವರ್ಮ್‌ 7 ರನ್‌ ಗಳಿಸಿದರು.

ಆಸೀಸ್ ಪರ ನಥನ್‌ ಎಲ್ಲಿಸ್‌ 3 ವಿಕೆಟ್‌ ಪಡೆದರೆ, ಸ್ಟೋಯ್ನಿಸ್‌ 1 ವಿಎಕಟ್‌ ಕಬಳಿಸಿದರು.

ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಈಗಾಗಲೇ ಗೆದ್ದಿರುವ ಭಾರತ, ಸದ್ಯ ಎರಡನೇ ಪಂದ್ಯವನ್ನು ಕೂಡಾ ಗೆದ್ದು ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

Whats_app_banner