ಸಿಬಿಎಸ್​​ಸಿ ಟಾಪರ್​, ಸೈಕಾಲಜಿ ಪದವಿ, ಬಾಸ್ಕೆಟ್ ಬಾಲ್ ಚಾಂಪಿಯನ್; ಇವರು ಭಾರತ ಮಹಿಳಾ ಕ್ರಿಕೆಟ್ ತಂಡದ ಹೊಸ ಪ್ರತಿಭೆ!
ಕನ್ನಡ ಸುದ್ದಿ  /  ಕ್ರಿಕೆಟ್  /  ಸಿಬಿಎಸ್​​ಸಿ ಟಾಪರ್​, ಸೈಕಾಲಜಿ ಪದವಿ, ಬಾಸ್ಕೆಟ್ ಬಾಲ್ ಚಾಂಪಿಯನ್; ಇವರು ಭಾರತ ಮಹಿಳಾ ಕ್ರಿಕೆಟ್ ತಂಡದ ಹೊಸ ಪ್ರತಿಭೆ!

ಸಿಬಿಎಸ್​​ಸಿ ಟಾಪರ್​, ಸೈಕಾಲಜಿ ಪದವಿ, ಬಾಸ್ಕೆಟ್ ಬಾಲ್ ಚಾಂಪಿಯನ್; ಇವರು ಭಾರತ ಮಹಿಳಾ ಕ್ರಿಕೆಟ್ ತಂಡದ ಹೊಸ ಪ್ರತಿಭೆ!

Pratika Rawal: ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​​​ಗೆ ಪದಾರ್ಪಣೆ ಮಾಡಿ ಮಿಂಚಿನ ಪ್ರದರ್ಶನ ನೀಡಿದ ಭಾರತ ಮಹಿಳಾ ತಂಡದ ಪ್ರತೀಕಾ ರಾವಲ್ ಅವರು ಬೆಳೆದು ಬಂದ ಹಾದಿ ಎಂಥವರಿಗೂ ಸ್ಫೂರ್ತಿ.

ಸಿಬಿಎಸ್​​ಸಿ ಟಾಪರ್​, ಸೈಕಾಲಜಿ ಪದವಿ, ಬಾಸ್ಕೆಟ್ ಬಾಲ್ ಚಾಂಪಿಯನ್; ಇವರು ಭಾರತ ಮಹಿಳಾ ಕ್ರಿಕೆಟ್ ತಂಡದ ಹೊಸ ಪ್ರತಿಭೆ!
ಸಿಬಿಎಸ್​​ಸಿ ಟಾಪರ್​, ಸೈಕಾಲಜಿ ಪದವಿ, ಬಾಸ್ಕೆಟ್ ಬಾಲ್ ಚಾಂಪಿಯನ್; ಇವರು ಭಾರತ ಮಹಿಳಾ ಕ್ರಿಕೆಟ್ ತಂಡದ ಹೊಸ ಪ್ರತಿಭೆ! (BCCI X)

ಪ್ರತೀಕಾ ರಾವಲ್... ಬಹುತೇಕ ಮಂದಿಗೆ ಈ ಹೆಸರಿನ ಪರಿಚಯ ಇಲ್ಲ. ಇವರು ಭಾರತ ಮಹಿಳಾ ತಂಡದ ಕ್ರಿಕೆಟ್ ಆಟಗಾರ್ತಿ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಉದಯವಾದ ಹೊಸ ಪ್ರತಿಭೆ. 2024ರ ಡಿಸೆಂಬರ್​ ಅಂತ್ಯದಲ್ಲಿ ನಡೆದ ಏಕದಿನ ಕ್ರಿಕೆಟ್​ ಸರಣಿಯಲ್ಲಿ ಕೆರಿಬಿಯನ್ನರ ವಿರುದ್ಧ ತಮ್ಮ ಸಾಮರ್ಥ್ಯ ಮತ್ತು ಕೌಶಲ್ಯ ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ಅವರ ಬ್ಯಾಟಿಂಗ್ ಶೈಲಿ, ಶಾಟ್ ಸೆಲೆಕ್ಷನ್, ಫೀಲ್ಡಿಂಗ್, ಬೌಲಿಂಗ್ ಎಲ್ಲವೂ ಅದ್ಭುತವಾಗಿತ್ತು. ಮೈದಾನದಲ್ಲಿ ಅವರ ಆತ್ಮವಿಶ್ವಾಸ ಹೆಚ್ಚಾಗಿ ಆಕರ್ಷಿಸಿತು. ಪ್ರತೀಕಾ ರಾವಲ್ (Pratika Rawal Story) ನೀಡಿರುವ ಪ್ರದರ್ಶನ ಭಾರತ ತಂಡಕ್ಕೆ ಹೊಸ ಭರವಸೆ ಮೂಡಿಸಿದೆ ಎಂದರೂ ತಪ್ಪಾಗುವುದಿಲ್ಲ.

ಚೊಚ್ಚಲ ಸರಣಿಯಲ್ಲೇ ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದ ಪ್ರತೀಕಾ, ಆಡಿದ 3 ಪಂದ್ಯಗಳಲ್ಲೇ 1 ಅರ್ಧಶತಕ ಸಹಿತ 134 ರನ್ ಬಾರಿಸಿ ಮಿಂಚಿದರು. ಬೌಲಿಂಗ್​ನಲ್ಲೂ 2 ವಿಕೆಟ್​ ಕಿತ್ತಿರೋದು ವಿಶೇಷ. ಶೆಫಾಲಿ ವರ್ಮಾ ಅಲಭ್ಯತೆಯಲ್ಲಿ ಸ್ಥಾನ ಪಡೆದಿದ್ದ ಪ್ರತೀಕಾ ಅವರಿಗೆ ಮುಂದಿನ ಸರಣಿಗಳಿಗೆ ಅವಕಾಶ ಸಿಕ್ಕರೂ ಆರಂಭಿಕ ಸ್ಥಾನದಲ್ಲಿ ಕಣಕ್ಕಿಳಿಯುತ್ತಾರೆ ಎನ್ನುವುದು ಅನುಮಾನ. ಕ್ರಿಕೆಟ್ ಮಾತ್ರವಲ್ಲ, ಬಾಸ್ಕೆಟ್ ಬಾಲ್ ಪ್ಲೇಯರ್​ ಕೂಡ ಹೌದು. ಅಲ್ಲದೆ, 24 ವರ್ಷದ ಆಟಗಾರ್ತಿ ಸಿಬಿಎಸ್​​ಸಿಯಲ್ಲಿ ಟಾಪರ್ ಆಗಿದ್ದರು. ಸೈಕಾಲಜಿಯಲ್ಲಿ ಪದವಿ ಕೂಡ ಪಡೆದಿದ್ದಾರೆ.

ಪ್ರತೀಕಾ ರಾವಲ್ ಆರಂಭಿಕ ಜೀವನ

ಪ್ರತೀಕಾ ರಾವಲ್ ಹುಟ್ಟಿದ್ದು 2000ರ ಸೆಪ್ಟೆಂಬರ್​ 1ರಂದು. ಹರಿಯಾಣದ ಪ್ರೇಮ್ ನಗರದಲ್ಲಿ ಜನಿಸಿದ್ದು (ದೆಹಲಿಯ ನೆರೆಹೊರೆ ಪ್ರದೇಶ). ಆಕೆಯ ತಂದೆ ಪ್ರದೀಪ್ ರಾವಲ್. ಪ್ರತೀಕಾಗೆ ಕ್ರಿಕೆಟ್​​ ಆಡಬೇಕೆಂಬ ಕನಸು ಚಿಗುರಿದ್ದು 4ನೇ ವಯಸ್ಸಿನಲ್ಲಿ. ಇಲ್ಲಿನ ಬರಾಖಂಬಾ ರಸ್ತೆಯಲ್ಲಿರುವ ಮಾಡರ್ನ್ ಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ ಮುಗಿಸಿದರು. ನಂತರ ಉನ್ನತ ಶಿಕ್ಷಣಕ್ಕೆ ನವದೆಹಲಿಗೆ ಬಂದ ಪ್ರತೀಕಾ, ಜೀಸಸ್ ಮತ್ತು ಮೇರಿ ಕಾಲೇಜಿನಲ್ಲಿ ಮನೋವಿಜ್ಞಾನದಲ್ಲಿ ಪದವಿ ಪಡೆದರು. ಸಿಬಿಎಸ್​ಸಿ 12ನೇ ಬೋರ್ಡ್ ಪರೀಕ್ಷೆಯಲ್ಲಿ 92.5 ಶೇಕಡಾ ಅಂಕ ಪಡೆದಿದ್ದರು.

ಚಿಕ್ಕಂದಿನಲ್ಲಿ ಕ್ರಿಕೆಟ್ ಜೊತೆಗೆ ನಿಯಮಿತವಾಗಿ ಬಾಸ್ಕೆಟ್ ಬಾಲ್​ ಆಡುತ್ತಿದ್ದರು. ಶಾಲಾ ದಿನಗಳಿಂದಲೇ ಬಾಸ್ಕೆಟ್ ಬಾಲ್ ಆಟದಲ್ಲಿ ಪರಿಣಿತರಾಗಿದ್ದಳು. ಆಗ ರಾಜೇಂದರ್ ನಗರದ ಬಾಲ ಭಾರತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಳು. ಶಾಲಾ ಹಂತದಲ್ಲಿ ಆಟದಲ್ಲಿ ಅದ್ಭುತ ಪ್ರತಿಭೆ ತೋರುತ್ತಿದ್ದ ಕಾರಣ ತಮ್ಮ ಶಾಲೆಗೆ ಸೇರಿಸಿಸುವಂತೆ ಮಾಡರ್ನ್ ಸ್ಕೂಲ್, 6ನೇ ತರಗತಿಯಲ್ಲಿದ್ದ ಪ್ರತೀಕಾರನ್ನು ಸಂಪರ್ಕಿಸಿದ್ದರಂತೆ. ಶಿಕ್ಷಣ ಮತ್ತು ಕ್ರೀಡೆ ಎರಡನ್ನೂ ಸಮತೋಲನಗೊಳಿಸಿದ ಪ್ರತೀಕಾ, 2019ರ ಜನವರಿಯಲ್ಲಿ 64ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬಾಸ್ಕೆಟ್ ಬಾಲ್​ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಕ್ರೀಡೆಯಲ್ಲಿ ಮಾತ್ರವಲ್ಲ, ಶಿಕ್ಷಣದಲ್ಲೂ ಅವರು ಟಾಪರ್​ ಆಗಿದ್ದರು. 2019ರಲ್ಲಿ ತನ್ನ ಸಿಬಿಎಸ್​​ಸಿ ಪರೀಕ್ಷೆಯಲ್ಲಿ (12ನೇ ತರಗತಿ ಬೋರ್ಡ್ ಪರೀಕ್ಷೆ) ಪ್ರತೀಕಾ, ಇಂಗ್ಲಿಷ್​​ನಲ್ಲಿ 93 ಅಂಕ, ಮನೋವಿಜ್ಞಾನ 93, ರಾಜ್ಯಶಾಸ್ತ್ರ 89, ಅರ್ಥಶಾಸ್ತ್ರ 95 ಮತ್ತು ದೈಹಿಕ ಶಿಕ್ಷಣ 88 ಅಂಕ ಪಡೆದಿದ್ದರು. ಆಕೆ ವಿಭಿನ್ನ ವೃತ್ತಿಜೀವನದ ಆಯ್ಕೆಗೆ ಹಲವು ಅವಕಾಶಗಳು ಇದ್ದವು. ಆದರೆ ಪ್ರತೀಕಾ ಆಯ್ಕೆ ಮಾಡಿದ್ದು ಕ್ರಿಕೆಟ್. 10ನೇ ವಯಸ್ಸು ಅಂದರೆ ನಾಲ್ಕನೇ ತರಗತಿಯಲ್ಲಿದ್ದಾಗ ಕ್ರಿಕೆಟ್ ಅಕಾಡೆಮಿಗೆ ಸೇರಿದಳು. ತಂದೆ ಪ್ರದೀಪ್ ರಾವಲ್ ಅವರು ಬಿಸಿಸಿಐ ಪ್ರಮಾಣೀಕೃತ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್‌ನ ಲೆವೆಲ್-II ಅಂಪೈರ್ (ಡಿಡಿಸಿಎ) ಆಗಿದ್ದರು.

ಪ್ರತೀಕಾ ಕ್ರಿಕೆಟ್​ ವೃತ್ತಿಜೀವನ ಆರಂಭವಾಗಿದ್ದು ಹೇಗೆ?

ಇಶಾಂತ್ ಶರ್ಮಾ ಮತ್ತು ನಿತೀಶ್ ರಾಣಾ ಸೇರಿ ಹಲವಾರು ಕ್ರಿಕೆಟಿಗರಿಗೆ ಮಾರ್ಗದರ್ಶನ ನೀಡಿದ ಅನುಭವಿ ಕೋಚ್ ಶರ್ವನ್ ಕುಮಾರ್ ಅವರ ರೋಹ್ಟಕ್ ರೋಡ್ ಜಿಮ್ಖಾನಾ ಕ್ರಿಕೆಟ್ ಅಕಾಡೆಮಿಗೆ ಪ್ರತೀಕಾ ಸೇರಿದಳು. ಪ್ರದೀಪ್ ತಮ್ಮ 10 ವರ್ಷದ ಮಗಳನ್ನು ಅಕಾಡೆಮಿಗೆ ಕರೆದೊಯ್ದಾಗ, 'ಆಟದ ಬಗ್ಗೆ ತುಂಬಾ ಉತ್ಸಾಹ ಹೊಂದಿರುವ ಪುಟ್ಟ ಹುಡುಗಿ'ಯನ್ನು ಕಂಡು ಶರ್ವನ್ ಆಶ್ಚರ್ಯಚಕಿತರಾಗಿಬಿಟ್ಟರಂತೆ. ನನ್ನ ಅಕಾಡೆಮಿಯಲ್ಲಿ ತರಬೇತಿ ಪಡೆದ ಮೊದಲ ಹುಡುಗಿ ಪ್ರತೀಕಾ ಎಂದಿದ್ದಾರೆ ಶರ್ವನ್.

ಆಟದಲ್ಲಿ ಅಪಾರ ಕೌಶಲಗಳನ್ನು ಬೆಳೆಸಿಕೊಂಡ ಆಕೆಯನ್ನು ಅಂಡರ್​-17 ನಂತರ ರೈಲ್ವೇಸ್ ತಂಡದ ಕೋಚ್​ ದೀಪ್ತಿ (ಧ್ಯಾನಿ) ಅವರ ಬಳಿ ಸೇರಿಸಲಾಯಿತು. ಧ್ಯಾನಿ ಅವರ ಮಾರ್ಗದರ್ಶನದಲ್ಲಿ ಪ್ರತೀಕಾ, ಸತತ ಗಂಟೆಗಳ ಕಾಲ ಅಭ್ಯಾಸ ನಡೆಸಿದರು. ಆದರೆ ಆಕೆಗೆ ಈ ಹಿಂದೆ, ಜಿಮ್ಖಾನಾ ಅಕಾಡೆಮಿಯಲ್ಲಿ ಕಡಿಮೆ ಸಮಯ ಸಿಕ್ಕಿತ್ತು. ಕ್ರಮೇಣ ಅವರು ದೆಹಲಿಯ ವಯೋಮಾನದ ತಂಡಗಳಲ್ಲಿ ಸ್ಥಾನ ಪಡೆದ ಯುವ ಆಟಗಾರ್ತಿ, ಹಿರಿಯ ಮಹಿಳಾ ತಂಡದಲ್ಲೂ ಸ್ಥಾನ ಪಡೆಯಲು ಯಶಸ್ವಿಯಾದರು.

2021ರಲ್ಲಿ ತನ್ನ ಚೊಚ್ಚಲ ವರ್ಷದಲ್ಲಿ ಪ್ರತೀಕಾ ದೆಹಲಿ ಪರ 155 ಎಸೆತಗಳಲ್ಲಿ 161 ರನ್ ಗಳಿಸುವುದರೊಂದಿಗೆ ಮೊದಲ ಬಾರಿಗೆ ಮಾಧ್ಯಮದಲ್ಲಿ ದೊಡ್ಡ ಹೆಡ್​ಲೈನ್ ಆದರು. 2022-23 ಋತುವಿನಲ್ಲಿ 14 ಪಂದ್ಯಗಳಲ್ಲಿ 552 ಲಿಸ್ಟ್ ಎ ರನ್‌ ಗಳಿಸಿ ಗಮನ ಸೆಳೆದರು. ನಂತರದ ಏಳು ಇನ್ನಿಂಗ್ಸ್‌ಗಳಲ್ಲಿ 411 ರನ್ ಸಿಡಿಸಿ ಭಾರತ ತಂಡಕ್ಕೆ ಆಯ್ಕೆ ಮಾಡಲು ಆಯ್ಕೆದಾರರಿಗೆ ಪರೋಕ್ಷವಾಗಿ ಸಂದೇಶ ಕಳುಹಿಸಿದರು. 2024ರ ಆರಂಭದಲ್ಲಿ ನಡೆದ ಅಂಡರ್-23 ತಂಡ ಟಿ20 ಕ್ರಿಕೆಟ್​ ಟೂರ್ನಿಯಲ್ಲಿ ಪ್ರತೀಕಾ ದೆಹಲಿ ತಂಡದ ನಾಯಕತ್ವ ವಹಿಸಿದ್ದರು. ಅಲ್ಲದೆ, ಅವರ ನಾಯಕತ್ವದಲ್ಲಿ ದೆಹಲಿ ಟಿ20 ಟ್ರೋಫಿ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಫೈನಲ್​ನಲ್ಲಿ ಮಧ್ಯಪ್ರದೇಶ ವಿರುದ್ಧ 3 ರನ್‌ಗಳಿಂದ ಸೋತಿತು.

ಇದಾದ ನಂತರ ರೈಲ್ವೇಸ್ ತಂಡದ ಪರ ಕಣಕ್ಕಿಳಿದಿದ್ದ ರಾವಲ್, ಸೀನಿಯರ್ ಮಹಿಳಾ ಏಕದಿನ ಟ್ರೋಫಿಯ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ರಾವಲ್ 8 ಪಂದ್ಯಗಳಿಂದ 68.50 ಸರಾಸರಿಯಲ್ಲಿ 411 ರನ್ ಗಳಿಸುವ ಮೂಲಕ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿ ಹೊರಹೊಮ್ಮಿದರು. ಇದೆಲ್ಲರ ಪ್ರದರ್ಶನಕ್ಕೆ ಬೆರಗಾದ ಆಯ್ಕೆದಾರರು, ಭಾರತ ತಂಡಕ್ಕೆ ಆಯ್ಕೆ ಮಾಡಿದರು. ಇದೀಗ ಭಾರತದ ರಾಷ್ಟ್ರೀಯ ಮಹಿಳಾ ತಂಡದಲ್ಲೂ ಉತ್ತಮ ಪ್ರದರ್ಶನ ನೀಡಿದ್ದು ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದ್ದಾರೆ. ಇದೀಗ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಆರ್​​ಸಿಬಿ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತೀಕಾ ರಾವಲ್ ಅವರಿಗೆ ಮತ್ತಷ್ಟು ಯಶಸ್ಸು ಸಿಗಲಿ ಎನ್ನುವುದು ನಮ್ಮೆಲ್ಲರ ಆಶಯ.

(ಮಾಹಿತಿ - ವಿಕಿಪೀಡಿಯಾ, ಸ್ಪೋರ್ಟ್ಸ್​ ಸ್ಟಾರ್ ವೆಬ್​ಸೈಟ್)

Whats_app_banner