PKL 12: ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಗೂ ಮುನ್ನ ಈ ಮೂರು ತಂಡಗಳು ಹೆಡ್ಕೋಚ್ ಬದಲಿಸುವುದು ಅಗತ್ಯ
PKL season 12: ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ಆರಂಭಕ್ಕೂ ಮುನ್ನ ಈ 3 ತಂಡಗಳು ಹೆಡ್ಕೋಚ್ ಬದಲಿಸುವುದು ಅಗತ್ಯ. ಯಾವ ತಂಡಗಳಲ್ಲಿ ಕೋಚ್ ಬದಲಾವಣೆ ಅಗತ್ಯ? ಏಕೆ? ಇಲ್ಲಿದೆ ವಿವರ.
ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿ 2024ರ ಡಿಸೆಂಬರ್ 29ರಂದು ಮುಕ್ತಾಯಗೊಂಡಿತು. ಹರಿಯಾಣ ಸ್ಟೀಲರ್ಸ್ ಟ್ರೋಫಿಯನ್ನು ಎತ್ತಿ ಹಿಡಿಯುವುದರೊಂದಿಗೆ ನೂತನ ಚಾಂಪಿಯನ್ ಆಯಿತು. ಪಿಕೆಎಲ್ 11ರಲ್ಲಿ ಒಂದೆರಡು ತಂಡಗಳು ಕಳಪೆ ಪ್ರದರ್ಶನ ನೀಡಿದ್ದು ಬಿಟ್ಟರೆ ಉಳಿದಂತೆ ಎಲ್ಲಾ ತಂಡಗಳು ಪ್ಲೇ ಆಫ್ ಪ್ರವೇಶಿಸಲು ಜಿದ್ದಾಜಿದ್ದಿನ ಪೈಪೋಟಿ ನಡೆಸಿದ್ದವು. ಪ್ಲೇಆಫ್ಗೆ ಯಾವ ತಂಡಗಳು ಅರ್ಹತೆ ಪಡೆಯಲಿವೆ ಎಂದು ಅಂದಾಜು ಮಾಡಲೂ ಕಷ್ಟವಾಗಿತ್ತು. ಅಷ್ಟರ ಮಟ್ಟಿಗೆ ರೋಚಕತೆ ಸೃಷ್ಟಿಸಿತ್ತು. ಇದರ ನಡುವೆ ಪ್ರಸ್ತುತ 12ನೇ ಆವೃತ್ತಿಯ ಪಿಕೆಎಲ್ ಆರಂಭಕ್ಕೆ ಸಿದ್ಧತೆ ನಡೆಯುತ್ತಿದ್ದು, ಇದೇ ವೇಳೆ 3 ತಂಡಗಳ ಕೋಚ್ ಬದಲಾವಣೆ ಮಾಡುವ ಅಗತ್ಯ ಇದೆ.
ಕಬಡ್ಡಿಯಲ್ಲಿ ಕೋಚ್ಗಳು ಬಹುದೊಡ್ಡ ಪಾತ್ರ ಹೊಂದಿರುತ್ತಾರೆ. ಕೇವಲ 40 ನಿಮಿಷಗಳ ಆಟದಲ್ಲಿ ತ್ವರಿತ ಚಿಂತನೆ, ತಂತ್ರಗಾರಿಕೆ ರೂಪಿಸಬೇಕು. ಇದು ಅತ್ಯಂತ ಸವಾಲಿನದಾಯಕ ಸಂಗತಿ. ಪಿಕೆಎಲ್ 2024ರಲ್ಲಿ ಮನ್ಪ್ರೀತ್ ಸಿಂಗ್ ಅವರು ಮತ್ತೊಮ್ಮೆ ತಾನು ಅದ್ಬುತ ಮಾರ್ಗದರ್ಶಕ ಎಂದು ಸಾಬೀತುಪಡಿಸಿದರು. ತನ್ನ ಕೋಚಿಂಗ್ ಅಡಿ ಈ ಬಾರಿ ಹರಿಯಾಣ ಸ್ಟೀಲರ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಇವರ ಮಾರ್ಗದರ್ಶನದಲ್ಲೇ 2023ರಲ್ಲೂ ಹರಿಯಾಣ ರನ್ನರ್ಅಪ್ ಆಗಿತ್ತು. ಆದರೆ ಕೆಲವು ಕೋಚ್ಗಳ ಅಡಿಯಲ್ಲಿ ಹಲವು ತಂಡಗಳು ಕಳಪೆ ಪ್ರದರ್ಶನ ನೀಡುತ್ತಿವೆ. ಅದರಂತೆ, ಪ್ರೊ ಕಬಡ್ಡಿ ಲೀಗ್‌ನ ಮುಂದಿನ ಸೀಸನ್ಗೂ ಮುನ್ನ ತಮ್ಮ ಮುಖ್ಯಕೋಚ್ ಬದಲಾಯಿಸಬೇಕಾದ ಮೂರು ತಂಡಗಳು ಇಲ್ಲಿವೆ.
3. ಪ್ರಶಾಂತ್ ಸುರ್ವೆ (ಬೆಂಗಾಲ್ ವಾರಿಯರ್ಸ್)
ಬೆಂಗಾಲ್ ವಾರಿಯರ್ಸ್ ತಂಡವು ತಮ್ಮ ಹಿಂದಿನ ಮುಖ್ಯಕೋಚ್ ಕೆ ಬಾಸ್ಕರನ್ ಅವರನ್ನು ಪಿಕೆಎಲ್ 11 ಆರಂಭಕ್ಕೂ ಮೊದಲೇ ಬಿಡುಗಡೆ ಮಾಡಿತ್ತು. ಬಳಿಕ ಅಂದಿನ ಸಹಾಯಕ ಕೋಚ್ ಆಗಿದ್ದ ಪ್ರಶಾಂತ್ ಸುರ್ವೆ ಅವರನ್ನೇ ಮುಖ್ಯಕೋಚ್ ಸ್ಥಾನಕ್ಕೆ ಬಡ್ತಿ ನೀಡಿತ್ತು. ಆದರೆ, ಅವರ ಮಾರ್ಗದರ್ಶನದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಬೆಂಗಾಲ್ ವಿಫಲವಾಗಿದೆ. ಈ ಬಾರಿ 22 ಪಂದ್ಯಗಳಲ್ಲಿ 5 ಗೆಲುವು, 14 ಸೋಲು, 3 ಡ್ರಾ ಸಾಧಿಸಿ 41 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 10ನೇ ಸ್ಥಾನ ಪಡೆಯಿತು. ಸೀಸನ್ 7ರಲ್ಲಿ ಟ್ರೋಫಿಯನ್ನು ಎತ್ತಿಹಿಡಿದಿದ್ದ ವಾರಿಯರ್ಸ್ ಮತ್ತೆ ಚಾಂಪಿಯನ್ ಆಗಲಿಲ್ಲ. ಅಂದಿನಿಂದ ಪ್ಲೇಆಫ್‌ಗಳಿಗೆ ಅರ್ಹತೆ ಪಡೆಯುವಲ್ಲೂ ವಿಫಲವಾಗುತ್ತಿದೆ.
ಕಳಪೆ ಪ್ರದರ್ಶನ ನೀಡಿರುವ ಹಿನ್ನೆಲೆ ಸುರ್ವೆ ಅವರಿಗೆ ಮುಖ್ಯಕೋಚ್ ಆಗಿ ಬಡ್ತಿ ನೀಡಿರುವುದೇ ತಪ್ಪು ನಿರ್ಧಾರವೇ ಎಂಬ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ. ಪ್ರಬಲ ತಂಡವನ್ನು ಹೊಂದಿದ್ದರೂ, ವಾರಿಯರ್ಸ್ ಉತ್ತಮ ಸಂಯೋಜನೆ ಮಾಡುವಲ್ಲಿ ವಿಫಲರಾಗಿದ್ದಾರೆ. ಈ ಋತುವಿನ ಮೊದಲು ಪಿಕೆಎಲ್ನಲ್ಲಿ ಯಶಸ್ವಿ ನಾಯಕನಾಗಿದ್ದ ಫಾಜೆಲ್ ಅತ್ರಾಚಲಿ ಕೂಡ ತಂಡಕ್ಕೆ ಅತ್ಯುತ್ತಮ ಕೊಡುಗೆ ನೀಡಲು ವಿಫಲರಾದರು. ವಾರಿಯರ್ಸ್ ಮುಂದಿನ ಋತುವಿನಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬೇಕಾದರೆ, ತಮ್ಮ ಕಾರ್ಯತಂತ್ರವನ್ನು ಬೇರು ಮಟ್ಟದಿಂದ ಮರು-ಆಲೋಚಿಸಬೇಕು. ಧನಾತ್ಮಕ ಫಲಿತಾಂಶ ಹೊರ ತೆಗೆಯಲು ಹೆಚ್ಚು ಅನುಭವಿ ಕೋಚ್ ಹುಡುಕುವುದು ಅಗತ್ಯ.
2. ಉದಯ ಕುಮಾರ್ ಮತ್ತು ಧರ್ಮರಾಜ್ ಚೆರೆಲಾತನ್ (ತಮಿಳು ತಲೈವಾಸ್)
ಇಬ್ಬರು ಮುಖ್ಯಕೋಚ್ಗಳೊಂದಿಗೆ 2024ರ ಪಿಕೆಎಲ್ನಲ್ಲಿ ಕಣಕ್ಕೆ ಇಳಿದಿದ್ದ ತಮಿಳ್ ತಲೈವಾಸ್ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. 22 ಪಂದ್ಯಗಳಲ್ಲಿ 8 ಗೆಲುವು, 13 ಸೋಲು, 1 ಡ್ರಾ ಸಾಧಿಸಿದ ತಲೈವಾಸ್ 50 ಅಂಕ ಪಡೆದು ಲೀಗ್ನಿಂದಲೇ ಹೊರಬಿತ್ತು. ಹೆಡ್ಕೋಚ್ಗಳಾಗಿ ಉದಯ ಕುಮಾರ್-ಧರ್ಮರಾಜ್ ಚೇರಲತನ್ ಅವರನ್ನು ನೇಮಿಸಲಾಗಿತ್ತು. ಆದರೆ, ಇಬ್ಬರು ಅನುಭವಿಗಳು ತಂಡದ ಆಟಗಾರರಿಂದ ಅದ್ಭುತ ಪ್ರದರ್ಶನ ಹೊರ ತರಲು ವಿಫಲರಾದರು. ಹರಾಜಿನಲ್ಲಿ ಸಚಿನ್ ತನ್ವಾರ್-ನರೇಂದ್ರ ಕಂಡೋಲಾ ಅವರಂತಹ ದೊಡ್ಡ ಆಟಗಾರರೇ ಇದ್ದರೂ ಅವರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಈ ಋತುವಿನಲ್ಲಿ ತಲೈವಾಸ್ ವೈಫಲ್ಯಕ್ಕೆ ಸ್ಟಾರ್ ಆಟಗಾರರ ಗಾಯಗಳು ಪ್ರಮುಖ ಕಾರಣ. ಎಲ್ಲದಕ್ಕಿಂತ ಮುಖ್ಯವಾಗಿ ಇಬ್ಬರು ಕೋಚ್ಗಳಿದ್ದರೂ ಉತ್ತಮ ಫಲಿತಾಂಶ ಬರದ ಕಾರಣ ಇಬ್ಬರನ್ನು ಬದಲಿಸುವುದು ಅಗತ್ಯ.
1. ರಣಧೀರ್ ಸಿಂಗ್ ಸೆಹ್ರಾವತ್ (ಬೆಂಗಳೂರು ಬುಲ್ಸ್)
ಅರ್ಜುನ ಪ್ರಶಸ್ತಿ ಪುರಸ್ಕೃತ ರಣಧೀರ್ ಸಿಂಗ್ ಸೆಹ್ರಾವತ್ ಅವರು ಟೂರ್ನಿ ಆರಂಭದಿಂದಲೂ ಬೆಂಗಳೂರು ಬುಲ್ಸ್ ಪರವೇ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಂದಿನಿಂದ ತಂಡದ ಅವಿಭಾಜ್ಯ ಅಂಗವಾದ ರಣಧೀರ್ ಅವರ ಮಾರ್ಗದರ್ಶನದಲ್ಲಿ ಸೀಸನ್ 6ರಲ್ಲಿ ಒಮ್ಮೆ ಮಾತ್ರ ಬೆಂಗಳೂರು ಟ್ರೋಫಿ ಗೆದ್ದಿದೆ. ಈವರೆಗೂ 11 ಸೀಸನ್‌ಗಳು ಕಳೆದಿದ್ದು, ತಂಡಕ್ಕೆ ಅನೇಕ ಆಟಗಾರರು ಬಂದು ಹೋಗಿದ್ದಾರೆ. ಆದರೆ ಅವರ ಕೋಚಿಂಗ್ ಅಡಿಯಲ್ಲಿ ವರ್ಷದಿಂದ ವರ್ಷಕ್ಕೆ ಬುಲ್ಸ್ ಭೀಕರ ವೈಫಲ್ಯ ಅನುಭವಿಸುತ್ತಿದೆ. ಅದರಲ್ಲೂ ಸೀಸನ್ 11ರಲ್ಲಿ ಬುಲ್ಸ್ ಕೇವಲ 2 ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 12ನೇ ಸ್ಥಾನ ಪಡೆದಿತ್ತು. ಭವಿಷ್ಯದಲ್ಲಿ ಫ್ರಾಂಚೈಸಿ ಮತ್ತೊಂದು ಟ್ರೋಫಿ ಗೆಲ್ಲಬೇಕು ಎಂದರೆ ಬುಲ್ಸ್ ಫ್ರಾಂಚೈಸಿ ಕಟ್ಟುನಿಟ್ಟಾದ ನಿರ್ಧಾರ ತೆಗೆದುಕೊಳ್ಳಬೇಕಿದೆ. ಟೀಮ್ ಮ್ಯಾನೇಜ್ಮೆಂಟ್ ಕೋಚ್ ಆಗಿ ರಣಧೀರ್ ಅವರನ್ನೇ ಮುಂದುವರೆಸುತ್ತದೆಯೋ ಅಥವಾ ಸೀಸನ್ 12ಕ್ಕೆ ಬದಲಾವಣೆ ಮಾಡುತ್ತದೆಯೇ ಎಂಬುದನ್ನು ಕಾದುನೋಡೋಣ.