111 ರನ್ ಗಳಿಸಿಯೂ ಕೆಕೆಆರ್ ವಿರುದ್ಧ 16 ರನ್ನಿಂದ ರೋಚಕ ಗೆಲುವು ಸಾಧಿಸಿದ ಪಂಜಾಬ್; ಚರಿತ್ರೆ ಸೃಷ್ಟಿಸಿದ ಅಯ್ಯರ್ ಪಡೆ
ಐಪಿಎಲ್ನ 31ನೇ ಪಂದ್ಯದಲ್ಲಿ ಯುಜ್ವೇಂದ್ರ ಚಹಲ್ ಅವರ ಸ್ಪಿನ್ ದಾಳಿಗೆ ತತ್ತರಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 12 ರನ್ಗಳಿಂದ ರೋಚಕ ಗೆಲುವು ಸಾಧಿಸಿದೆ.

2025ರ ಇಂಡಿಯನ್ ಪ್ರೀಮಿಯರ್ ಲೀಗ್ 31ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ಗೆ ಪಂಜಾಬ್ ಕಿಂಗ್ಸ್ ಏಟಿಗೆ ಎದಿರೇಟು ನೀಡಿದೆ. ಹರ್ಷಿತ್ ರಾಣಾ (25/3), ವರುಣ್ ಚಕ್ರವರ್ತಿ (21/2) ಮತ್ತು ಸುನಿಲ್ ನರೈನ್ (14/2) ಅವರ ಮಾರಕ ಬೌಲಿಂಗ್ ದಾಳಿಗೆ ಪ್ರತಿದಾಳಿ ನಡೆಸಿದ ಪಂಜಾಬ್, ಹಾಲಿ ಚಾಂಪಿಯನ್ ಕೋಲ್ಕತ್ತಾಗೆ ಠಕ್ಕರ್ ಕೊಟ್ಟಿದೆ. ಕೇವಲ 111 ರನ್ ಗಳಿಸಿದ್ದರೂ ಡಿಫೆಂಡ್ ಮಾಡಿಕೊಂಡ ಶ್ರೇಯಸ್ ಅಯ್ಯರ್ ನೇತೃತ್ವದ ತಂಡ ನೈಟ್ ರೈಡರ್ಸ್ ತಂಡವನ್ನು 16 ರನ್ಗಳಿಂದ ಮಣಿಸಿದೆ.
ಕಡಿಮೆ ಮೊತ್ತವನ್ನು ಡಿಫೆಂಡ್ ಮಾಡಿಕೊಂಡು ಗೆದ್ದ ಕಿಂಗ್ಸ್, ಐಪಿಎಲ್ನಲ್ಲಿ ಚರಿತ್ರೆ ಸೃಷ್ಟಿಸಿದೆ. ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ 116 ರನ್ ಡಿಫೆಂಡ್ ಮಾಡಿಕೊಂಡಿದ್ದ ದಾಖಲೆಯನ್ನು ಮುರಿದಿದೆ. ಈ ಸಾಧಾರಣ ಗುರಿ ಬೆನ್ನಟ್ಟಿದ ಕೆಕೆಆರ್ 95 ರನ್ಗೆ ಆಲೌಟ್ ಆಯಿತು. ಯುಜ್ವೇಂದ್ರ ಚಹಲ್ ಅದ್ಭುತ ಪ್ರದರ್ಶನ ನೀಡುವುದರೊಂದಿಗೆ ಎದುರಾಳಿ ತಂಡದ ಗೆಲುವನ್ನು ಕಸಿದುಕೊಂಡರು. ಇದೀಗ ಟೂರ್ನಿಯಲ್ಲಿ 4ನೇ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಕೆಕೆಆರ್ ಸುಲಭ ಗೆಲುವು ಕೈ ಚೆಲ್ಲಿತು.
ಚಂಢೀಗಡದ ಮುಲ್ಲನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಬೌಲರ್ಗಳ ಮೇಲಾಟದಲ್ಲಿ ಪಂಜಾಬ್ ಕಿಂಗ್ಸ್ ಮೇಲುಗೈ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿ ಪಂಜಾಬ್ ಕಿಂಗ್ಸ್ 15.3 ಓವರ್ಗೆ 111 ರನ್ಗೆ ಆಲೌಟಾದರೆ, ಕೋಲ್ಕತ್ತಾ ತಂಡವು 15.1 ಓವರ್ಗಳಲ್ಲಿ 95 ರನ್ಗೆ ಸರ್ವಪತನ ಕಂಡಿತು. ಒಂದು ಹಂತದಲ್ಲಿ ಮೂರು ವಿಕೆಟ್ಗೆ 72 ರನ್ ಗಳಿಸಿದ್ದ ಕೆಕೆಆರ್ ಬಳಿಕ ಸತತ ವಿಕೆಟ್ ಕಳೆದುಕೊಂಡು ಸೋಲಿನ ಕಹಿ ಅನುಭವಿಸಿತು.
ಯುಜ್ವೇಂದ್ರ ಚಹಲ್ ಅಬ್ಬರ, ಕೆಕೆಆರ್ ತತ್ತರ
112 ರನ್ ಗುರಿ ಬೆನ್ನಟ್ಟಿದ ಕೆಕೆಆರ್ ಸುಲಭ ಗುರಿ ಬೆನ್ನಟ್ಟುವ ಲೆಕ್ಕಾಚಾರದಲ್ಲಿತ್ತು. ಆದರೆ ಮೊದಲ ಓವರ್ನಲ್ಲೇ ಸುನಿಲ್ ನರೈನ್ (5) ಮತ್ತು ಮರು ಓವರ್ನಲ್ಲಿ ಕ್ವಿಂಟನ್ ಡಿ ಕಾಕ್ (2) ಔಟಾದರು. ಈ ಇಬ್ಬರಿಗೂ ಗೇಟ್ ಪಾಸ್ ಕೊಟ್ಟಿದ್ದು, ಕ್ಸೇವಿಯರ್ ಬಾರ್ಟ್ಲೆಟ್ ಮತ್ತು ಮಾರ್ಕೋ ಜಾನ್ಸನ್. ಬಳಿಕ 3ನೇ ವಿಕೆಟ್ಗೆ 55 ರನ್ಗಳ ಜೊತೆಯಾಟ ಬಂತು. ಆಂಗ್ಕ್ರಿಶ್ ರಘುವಂಶಿ ಮತ್ತು ಅಜಿಂಕ್ಯ ರಹಾನೆ ಜೋಡಿ ಸುಲಭ ಗೆಲುವಿನ ಸನಿಹಕ್ಕೆ ತಂದಿಟ್ಟಿದ್ದರು. ಆದರೆ ಈ ಹಂತದಲ್ಲಿ ಅಟ್ಯಾಕ್ ಮಾಡಿದ ಯುಜ್ವೇಂದ್ರ ಚಹಲ್, ಸತತ ವಿಕೆಟ್ ಪಡೆದು ಕೆಕೆಆರ್ ಕನಸು ಭಗ್ನಗೊಳಿಸಿದರು.
ರಘುವಂಶಿ 37 ರನ್ ಗಳಿಸಿದರೆ, ರಹಾನೆ 17 ರನ್ ಕಲೆ ಹಾಕಿದರು. ಆದರೆ ಇಬ್ಬರನ್ನೂ ಔಟ್ ಮಾಡಿದ್ದು ಚಹಲ್. ಬಳಿಕ ರಿಂಕು ಸಿಂಗ್ (2) ಮತ್ತು ರಮಣ್ ದೀಪ್ ಸಿಂಗ್ಗೂ (0) ಗೇಟ್ಪಾಸ್ ಕೊಟ್ಟರು. ಚಹಲ್ಗೆ ಸಾಥ್ ಕೊಟ್ಟ ಜಾನ್ಸನ್ ಅವರು ಹರ್ಷಿತ್ ರಾಣಾ (3) ಮತ್ತು ಆಂಡ್ರೆ ರಸೆಲ್ರನ್ನು (17) ಔಟ್ ಮಾಡಿದರು. ವೆಂಕಟೇಶ್ ಅಯ್ಯರ್ರನ್ನು ಗ್ಲೆನ್ ಮ್ಯಾಕ್ಸ್ವೆಲ್ ಹೊರ ದಬ್ಬಿದರು.
ಕಡಿಮೆ ಮೊತ್ತ ರಕ್ಷಿಸಿಕೊಂಡ ತಂಡಗಳು (ಐಪಿಎಲ್)
111/10 - ಪಂಜಾಬ್ vs ಕೆಕೆಆರ್, ಮುಲ್ಲನ್ಪುರ, 2025
116/9 - ಸಿಎಸ್ಕೆ vs ಪಂಜಾಬ್, ಡರ್ಬನ್, 2009
118/10 - ಎಸ್ಆರ್ಹೆಚ್ vs ಮುಂಬೈ, ಮುಂಬೈ, 2018
119/8 - ಪಂಜಾಬ್ vs ಮುಂಬೈ, ಡರ್ಬನ್, 2009
119/8 - ಎಸ್ಆರ್ಹೆಚ್ vs ಪುಣೆ, ಪುಣೆ, 2013
ಅಯ್ಯರ್ ಪಡೆ 111ಕ್ಕೆ ಕುಸಿತ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ಗೆ ಪ್ರಭುಸಿಮ್ರಾನ್ ಸಿಂಗ್ (30) ಮತ್ತು ಪ್ರಿಯಾಂಶ್ ಆರ್ಯ (22) ಉತ್ತಮ ಅರಂಭ ನೀಡಿದರು. ನಾಯಕ ಶ್ರೇಯಸ್ ಶೂನ್ಯ ಸುತ್ತಿದರೆ, ಮೊದಲ ಬಾರಿ ಅವಕಾಶ ಪಡೆದ ಜೋಸ್ ಇಂಗ್ಲೀಸ್ 2 ರನ್ಗೆ ಔಟಾದರು. ನೆಹಾಲ್ ವಧೇರಾ 10, ಮ್ಯಾಕ್ಸವೆಲ್ 7, ಸೂರ್ಯಾಂಶ್ ಶೆಡ್ಗೆ 4 ರನ್, ಶಶಾಂಕ್ 18 ರನ್ ಗಳಿಸಿದರು. ಕೊನೆಯಲ್ಲಿ ಕ್ಸೇವಿಯರ್ ಬಾರ್ಟ್ಲೆಟ್ 11 ರನ್ಗಳ ಕಾಣಿಕೆ ನೀಡಿದರು. ಕೆಕೆಆರ್ ಪರ ಹರ್ಷಿತ್ ರಾಣಾ ಮೂರು ವಿಕೆಟ್, ವರುಣ್, ನರೈನ್ ತಲಾ ಎರಡು, ವೈಭವ್ ಮತ್ತು ಆ್ಯನ್ರಿಚ್ ನೋಕಿಯಾ ತಲಾ ಒಂದು ವಿಕೆಟ್ ಪಡೆದರು.
