ಆರ್‌ಸಿಬಿ ತವರಿನಲ್ಲಿ ಎರಡನೇ ಗೆಲುವಿನ ಹುಡುಕಾಟದಲ್ಲಿ ಪಂಜಾಬ್‌ ಕಿಂಗ್ಸ್;‌ ಹೀಗಿದೆ ಬಲಿಷ್ಠ ಆಡುವ ಬಳಗ
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್‌ಸಿಬಿ ತವರಿನಲ್ಲಿ ಎರಡನೇ ಗೆಲುವಿನ ಹುಡುಕಾಟದಲ್ಲಿ ಪಂಜಾಬ್‌ ಕಿಂಗ್ಸ್;‌ ಹೀಗಿದೆ ಬಲಿಷ್ಠ ಆಡುವ ಬಳಗ

ಆರ್‌ಸಿಬಿ ತವರಿನಲ್ಲಿ ಎರಡನೇ ಗೆಲುವಿನ ಹುಡುಕಾಟದಲ್ಲಿ ಪಂಜಾಬ್‌ ಕಿಂಗ್ಸ್;‌ ಹೀಗಿದೆ ಬಲಿಷ್ಠ ಆಡುವ ಬಳಗ

RCB vs PBKS: ಐಪಿಎಲ್‌ 2024ರ ಆವೃತ್ತಿಯ 6ನೇ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳು ಕಣಕ್ಕಿಳಿಯುತ್ತಿವೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಬಾರಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಮೊದಲ ಗೆಲುವಿಗೆ ಫಾಫ್‌ ಪಡೆ ಎದುರು ನೋಡುತ್ತಿದೆ.

ಆರ್‌ಸಿಬಿ ತವರಿನಲ್ಲಿ ಎರಡನೇ ಗೆಲುವಿನ ಹುಡುಕಾಟದಲ್ಲಿ ಪಂಜಾಬ್‌ ಕಿಂಗ್ಸ್
ಆರ್‌ಸಿಬಿ ತವರಿನಲ್ಲಿ ಎರಡನೇ ಗೆಲುವಿನ ಹುಡುಕಾಟದಲ್ಲಿ ಪಂಜಾಬ್‌ ಕಿಂಗ್ಸ್ (AFP)

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ತವರಿನ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದ ಪಂಜಾಬ್‌ ಕಿಂಗ್ಸ್‌ (Punjab Kings), ಆರ್‌ಸಿಬಿ (Royal Challengers Bengaluru) ವಿರುದ್ಧ ಎರಡನೇ ಗೆಲುವಿಗಾಗಿ ಬೆಂಗಳೂರಿಗೆ ಬಂದಿಳಿದಿದೆ. ಅತ್ತ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಚೆಪಾಕ್‌ನಲ್ಲಿ ನಡೆದ ಐಪಿಎಲ್‌ 2024ರ ಉದ್ಘಾಟನಾ ಪಂದ್ಯದಲ್ಲಿ ಸೋತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು, ತನ್ನದೇ ತವರಿನಲ್ಲಿ ಅಭಿಮಾನಿಗಳ ಮುಂದೆ ಮೊದಲ ಪಂದ್ಯವಾಡಲು ಸಜ್ಜಾಗಿ ನಿಂತಿದೆ. ಕಳೆದ ಕೆಲವು ವರ್ಷಗಳಲ್ಲಿ ತನ್ನದೇ ತವರಿನಲ್ಲಿ ಆರ್‌ಸಿಬಿ ಅಷ್ಟೇನೂ ಯಶಸ್ಸು ಕಂಡಿಲ್ಲ ಎನ್ನುವುದು ಸತ್ಯ. ಈ ಬಾರಿ ಕಠಿಣ ಸವಾಲಿನೊಂದಿಗೆ ತವರಿನ ಅಭಿಯಾನ ಆರಂಭವಾಗುತ್ತಿದ್ದು, ಶಿಖರ್‌ ಧವನ್‌ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಫಾಫ್‌ ಡುಪ್ಲೆಸಿಸ್‌ ಬಳಗಕ್ಕೆ ಸುಲಭದ ತುತ್ತಂತೂ ಅಲ್ಲ.

ಮಾರ್ಚ್‌ 25ರ ಸೋಮವಾರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ 17ನೇ ಆವೃತ್ತಿಯ 6ನೇ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಪಂಜಾಬ್‌ ಕಿಂಗ್ಸ್‌ ಮುಖಾಮುಖಿಯಾಗುತ್ತಿವೆ. ಡೆಲ್ಲಿ ತಂಡದ ವಿರುದ್ಧ ಬಲಿಷ್ಠ ಆಡುವ ಬಳಗದೊಂದಿಗೆ ಕಣಕ್ಕಿಳಿದು 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದ ತಂಡವು, ಆರ್‌ಸಿಬಿಯ ಬಲಿಷ್ಠ ಬ್ಯಾಟಿಂಗ್‌ ಲೈನಪ್‌ಗೆ ಸವಾಲೆಸೆಯಲು ಮುಂದಾಗಿದೆ. ಮೊದಲ ಪಂದ್ಯದಲ್ಲಿ ನಿರೀಕ್ಷಿತ ಯಶಸ್ಸು ಕಂಡ ತಂಡವು, ಆರ್‌ಸಿಬಿ ವಿರುದ್ಧವೂ ಅದೇ ಆಡುವ ಬಳಗವನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಇಬ್ಬರು ಆಂಗ್ಲ ಆಟಗಾರರು ಅಬ್ಬರಿಸಿದರು. ಸ್ಯಾಮ್ ಕರನ್ 63 ರನ್‌ ಗಳಿಸಿದರೆ, ಲಿಯಾಮ್ ಲಿವಿಂಗ್‌ಸ್ಟನ್ ನಿರ್ಣಾಯಕ 38 ರನ್‌ ಸಿಡಿಸಿದರು. ಇವರು ತಂಡದ ಪ್ರಮುಖ ಆಲ್‌ರೌಂಡರ್‌ಗಳಾಗಿದ್ದಾರೆ.

ಇದನ್ನೂ ಓದಿ | ಆರ್‌ಸಿಬಿ vs ಪಂಜಾಬ್‌ ಐಪಿಎಲ್‌ ಹಣಾಹಣಿ ಯಾವಾಗ; ನೇರಪ್ರಸಾರ ಹಾಗೂ ಮೊಬೈಲ್‌ನಲ್ಲಿ ಉಚಿತ ವೀಕ್ಷಣೆ ಹೇಗೆ?

ಆರಂಭಿಕರಾಗಿ ನಾಯಕ ಶಿಖರ್‌ ಧವನ್‌ ಮತ್ತು ಜಾನಿ ಬೇರ್‌ಸ್ಟೋ ಕಣಕ್ಕಿಳಿಯಲಿದ್ದಾರೆ. ಸ್ಯಾಮ್‌ ಕರನ್‌ ಹಾಗೂ ಜಿತೇಶ್ ಶರ್ಮಾ ಬ್ಯಾಟಿಂಗ್‌ ಲೈನಪ್‌ಗೆ ಬಲ ತುಂಬಬಲ್ಲರು. ಪ್ರಭಾಸಿಮ್ರಾನ್‌ ಸಿಂಗ್‌ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಬ್ಯಾಟಿಂಗ್‌ ಮಾಡುವ ಸಾಧ್ಯತೆ ಇದೆ. ಲಿವಿಂಗ್‌ಸ್ಟನ್, ಶಶಾಂಕ್ ಸಿಂಗ್ ಫಿನಿಶಿಂಗ್‌ ಪಾತ್ರ ನಿರ್ವಹಿಸಲಿದ್ದಾರೆ. ಕಳೆದ ಪಂದ್ಯದಲ್ಲಿ ಗೋಲ್ಡನ್‌ ಡಕ್‌ ಆಗಿದ್ದ ಅವರು, ಸ್ಥಾನ ಕಳೆದುಕೊಂಡರೂ ಅಚ್ಚರಿಯಿಲ್ಲ.

ಸ್ಪಿನ್ನಿಂಗ್‌ ಆಯ್ಕೆಯಾಗಿ ಹರ್‌ಪ್ರೀತ್ ಬ್ರಾರ್ ಮೊದಲ ಆಯ್ಕೆಯಾಗಿದ್ದಾರೆ. ಅವರಿಗೆ ರಾಹುಲ್‌ ಚಹಾರ್‌ ಸಾಥ್‌ ನೀಡಲಿದ್ದಾರೆ. ವೇಗಿಗಳ ಬಳಗದಲ್ಲಿ ಅರ್ಷದೀಪ್ ಸಿಂಗ್, ರಬಾಡಾ ಮತ್ತು ಹರ್ಷಲ್ ಪಟೇಲ್ ಪ್ರಮುಖರು. ಇವರಿಗೆ ಕರನ್‌ ಕೂಡಾ ಸಾಥ್‌ ನೀಡಲಿದ್ದಾರೆ.‌ ತಂಡದಲ್ಲಿ ಬೌಲಿಂಗ್ ಆಯ್ಕೆಗಳು ಹಲವಿದ್ದು, ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳುವ ಅವಕಾಶವಿದೆ.

ಇಂಪ್ಯಾಕ್ಟ್‌ ಸಬ್‌ಸ್ಟಿಟ್ಯೂಷನ್

ಪಂಜಾಬ್‌ ತಂಡವು ಒಂದು ವೇಳೆ ಮೊದಲು ಬ್ಯಾಟಿಂಗ್‌ ಮಾಡಿದರೆ, ಪ್ರಭಾಸಿಮ್ರಾನ್ ಸಿಂಗ್ ಆಡುವ ಬಳಗದಲ್ಲಿ ಸ್ಥಾನ ಪಡೆಯಬಹುದು. ಆ ಸಂದರ್ಭದಲ್ಲಿ ಅರ್ಷದೀಪ್ ಸಿಂಗ್ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಆಡಬಹುದು.

ಪಂಜಾಬ್‌ ಕಿಂಗ್ಸ್‌ ಸಂಭಾವ್ಯ ಆಡುವ ಬಳಗ

ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋ, ಪ್ರಭಾಸಿಮ್ರಾನ್ ಸಿಂಗ್(ಇಂಪ್ಯಾಕ್ಟ್‌ ಪ್ಲೇಯರ್), ಸ್ಯಾಮ್ ಕರನ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ಲಿಯಾಮ್ ಲಿವಿಂಗ್‌ಸ್ಟನ್, ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಹಾರ್, ಅರ್ಷದೀಪ್ ಸಿಂಗ್.‌

Whats_app_banner