ಕನ್ನಡ ಸುದ್ದಿ / ಕ್ರಿಕೆಟ್ /
ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್; ಇಂದಿನ ಐಪಿಎಲ್ ಪಂದ್ಯದ 10 ಪ್ರಮುಖ ಅಂಶಗಳು
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಐಪಿಎಲ್ ಪಂದ್ಯಕ್ಕೆ ಸಂಬಂಧಿಸಿದಂತೆ ಪ್ರಮುಖ 10 ಅಂಶಗಳು ಇಲ್ಲಿವೆ. ಡೆಲ್ಲಿ ತಂಡಕ್ಕೆ ಇದು ಔಪಚಾರಿಕ ಪಂದ್ಯವಾಗಿದ್ದು, ಗೆದ್ದರೂ ಪ್ಲೇಆಫ್ ಪ್ರವೇಶ ಅಸಾಧ್ಯ. ಆದರೆ, ಫೈನಲ್‌ಗೆ ಬೇಗನೆ ಲಗ್ಗೆ ಇಡುವ ನಿಟ್ಟಿನಲ್ಲಿ ಪಂಜಾಬ್‌ಗೆ ಗೆದ್ದರೆ ಲಾಭವಿದೆ.

ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್; ಇಂದಿನ ಐಪಿಎಲ್ ಪಂದ್ಯದ 10 ಪ್ರಮುಖ ಅಂಶಗಳು (PTI)
ಐಪಿಎಲ್ 2025ರಲ್ಲಿ ಮೇ 24ರ ಶನಿವಾರ ಒಂದು ಪಂದ್ಯ ನಡೆಯುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಜೈಪುರದಲ್ಲಿ ಮುಖಾಮುಖಿಯಾಗಲಿವೆ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಡೆಲ್ಲಿ ತಂಡವು ಗೆಲುವಿನೊಂದಿಗೆ ತನ್ನ ಅಭಿಯಾನವನ್ನು ಮುಗಿಸಲು ಎದುರು ನೋಡುತ್ತಿದೆ. ಅತ್ತ ಪಿಬಿಕೆಎಸ್ ತಂಡವು ಅಗ್ರ-2 ಸ್ಥಾನವನ್ನು ಪಡೆಯಲು ಮುಂದಿನ ಪಂದ್ಯವನ್ನು ಗೆದ್ದೇ ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿದೆ. ಈ ಪಂದ್ಯವು ತಟಸ್ಥ ಸ್ಥಳದಲ್ಲಿ ನಡೆಯುತ್ತಿದ್ದರೂ, ಪಂಜಾಬ್ ತಂಡಕ್ಕೆ ತವರು ಮೈದಾನವಾಗಲಿದೆ. ಪಂದ್ಯಕ್ಕೆ ಸಂಬಂಧಿಸಿದಂತೆ ಪ್ರಮುಖ 10 ಅಂಶಗಳನ್ನು ನೋಡೋಣ.
- ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವು ಮೇ 8ರಂದು ನಡೆಯಬೇಕಿತ್ತು. ಅಂದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡವು 10.1 ಓವರ್‌ಗಳಲ್ಲೇ ಕೇವಲ 1 ವಿಕೆಟ್ ಕಳೆದುಕೊಂಡು 122 ರನ್ ಗಳಿಸಿದ್ದಾಗ ಪಂದ್ಯವನ್ನು ಮೊಟಕುಗೊಳಿಸಲಾಯ್ತು. ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾದ ಕಾರಣದಿಂದ ಐಪಿಎಲ್ ಅನ್ನು ಒಂದು ವಾರ ಮುಂದೂಡಲಾಯ್ತು. ಈ ಪಂದ್ಯವನ್ನು ಮೇ 24ಕ್ಕೆ ಮತ್ತೆ ನಡೆಸಲಾಗುತ್ತಿದೆ.
- 2021ರಿಂದ ಉಭಯ ತಂಡಗಳ ನಡುವೆ ಆಡಿರುವ ಏಳು ಪಂದ್ಯಗಳಲ್ಲಿ ಡಿಸಿ ತಂಡವು ಐದರಲ್ಲಿ ಗೆದ್ದಿದೆ. ಆದರೆ ಒಟ್ಟಾರೆ ದಾಖಲೆಯ ವಿಷಯದಲ್ಲಿ ಉಭಯ ತಂಡಗಳ ನಡುವೆ ಪ್ರಬಲ ಪೈಪೋಟಿ ಕಾಣುತ್ತಿದೆ. ಪಿಬಿಕೆಎಸ್ ತಂಡವು 17 ಪಂದ್ಯಗಳಲ್ಲಿ ಗೆದ್ದಿದ್ದರೆ, ಡಿಸಿ 16 ಪಂದ್ಯಗಳಲ್ಲಿ ಗೆದ್ದು ಬೀಗಿದೆ.
- ನಾಯಕ ಅಕ್ಷರ್ ಪಟೇಲ್ ಜ್ವರದ ಕಾರಣ ಮುಂಬೈ ಇಂಡಿಯನ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಆಡಿರಲಿಲ್ಲ. ಹೀಗಾಗಿ ಈ ಋತುವಿನಲ್ಲಿ ತಂಡದ ಕೊನೆಯ ಪಂದ್ಯಕ್ಕೆ ಅಕ್ಷರ್ ಲಭ್ಯವಿರುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.
- ವಿಪ್ರಾಜ್ ನಿಗಮ್ ಅವರ ಫಿಟ್‌ನೆಸ್‌ನ ಬಗ್ಗೆಯೂ ಗೊಂದಲಗಳಿವೆ. ಅತ್ತ ಮುಖೇಶ್ ಕುಮಾರ್ ಕೂಡ ಆಟದ ಸಮಯದಲ್ಲಿ ಸೆಳೆತ ಅನುಭವಿಸಿದರು. ಫಿಟ್ ಆಗಿದ್ದರೆ ಮಾತ್ರ ಇವರಿಬ್ಬರೂ ಆಡಬಹುದು.
- ಪಂಜಾಬ್ ತಂಡವು ಈ ಬಾರಿ ಮೊದಲು ಬ್ಯಾಟಿಂಗ್ ಮಾಡಿದ ಎಂಟು ಪಂದ್ಯಗಳಲ್ಲಿ ಆರು ಬಾರಿ 200ಕ್ಕೂ ಹೆಚ್ಚು ರನ್ ಗಳಿಸಿದೆ. ಇದಕ್ಕೂ ಮುನ್ನ ಇಂಥಾ ಸಾಧನೆಯನ್ನು 2014ರಲ್ಲಿ ಕೆಕೆಆರ್ ತಂಡ ಮಾಡಿತ್ತು.
- ಸುಮಾರು ಒಂದು ವಾರದ ನಂತರ ಪಿಬಿಕೆಎಸ್ ತಂಡವು ಮೈದಾನಕ್ಕೆ ಇಳಿಯಲಿದೆ. ಕಳೆದ ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಬೆರಳಿನ ಗಾಯದಿಂದಾಗಿ ಫೀಲ್ಡಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರ ಫಿಟ್‌ನೆಸ್ ಕೂಡಾ ಈ ಪಂದ್ಯದ ಪ್ರಮುಖ ಅಂಶ.
- ಜೋಶ್ ಇಂಗ್ಲಿಸ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಆರನ್ ಹಾರ್ಡಿ ಪಂಜಾಬ್ ಶಿಬರ್ ಸೇರಿಕೊಂಡಿದ್ದಾರೆ. ಅಲ್ಲದೆ ಮುಂದಿನ ಪಂದ್ಯದಲ್ಲಿ ಆಡುವ ಬಳಗದ ಆಯ್ಕೆಗೆ ಲಭ್ಯವಿದ್ದಾರೆ. ಕೈಲ್ ಜೇಮಿಸನ್ ಕೂಡ ಆಯ್ಕೆಗೆ ಇರಲಿದ್ದಾರೆ.
- ಪ್ರಸಕ್ತ ಋತುವಿನಲ್ಲಿ ಪಂಜಾಬ್ ತಂಡದ ಅಗ್ರ ಕ್ರಮಾಂಕದ ಆಟಗಾರರು ಅಮೋಘ ಫಾರ್ಮ್‌ನಲ್ಲಿದ್ದಾರೆ. ಇವರ ಸರಾಸರಿ 36.5. ಗುಜರಾತ್ ಟೈಟನ್ಸ್ (58.3), ಲಕ್ನೋ ಸೂಪರ್ ಜೈಂಟ್ಸ್ (40.5) ಮತ್ತು ಆರ್‌ಸಿಬಿ (37.3) ಆರಂಭಿಕರ ನಂತರ ನಾಲ್ಕನೇ ಸ್ಥಾನದಲ್ಲಿ ಇವರಿದ್ದಾರೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡವು ತೀರಾ ಕಳಪೆ ಆರಂಭವನ್ನು ಹೊಂದಿದೆ. ತಂಡದ ಅಗ್ರ ಕ್ರಮಾಂಕದ ಮೂವರು ಬ್ಯಾಟರ್‌ಗಳ ಸರಾಸರಿ ಕೇವಲ 27.1 ಆಗಿದೆ.
- ಪಂಜಾಬ್ ತಂಡದ ಯಶಸ್ಸಿನಲ್ಲಿ ಆರಂಭಿಕ ಜೋಡಿಯಾದ ಪ್ರಭ್‌ಸಿಮ್ರಾನ್ ಸಿಂಗ್ ಮತ್ತು ಪ್ರಿಯಾಂಶ್ ಆರ್ಯ ಕೊಡುಗೆಯೇ ದೊಡ್ಡದು. ಪವರ್‌ಪ್ಲೇನಲ್ಲಿ ಉತ್ತಮ ಆರಂಭ ಕೊಟ್ಟಿದ್ದಾರೆ. ಈ ಇಬ್ಬರು ಈ ಋತುವಿನಲ್ಲಿ ಇಲ್ಲಿಯವರೆಗೆ 350ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
- ಪಂದ್ಯವು ಜೈಪುರದಲ್ಲಿ ನಡೆಯುತ್ತಿದೆ. ಜೈಪುರದಲ್ಲಿ ಪ್ರಸಕ್ತ ಋತುವಿನಲ್ಲಿ ಇದುವರೆಗೆ ಐದು ಪಂದ್ಯಗಳು ನಡೆದಿದ್ದು, ಐದು ಬಾರಿ 200ಕ್ಕಿಂತ ಹೆಚ್ಚು ರನ್ ಹರಿದು ಬಂದಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡ ಇಲ್ಲಿ ಮೂರು ಬಾರಿ ಗೆದ್ದಿದೆ. ಇಲ್ಲಿ ಈವರೆಗೆ ಯಶಸ್ವಿಯಾಗಿ ಚೇಸಿಂಗ್ ಮಾಡಿದ ಗರಿಷ್ಠ ಗುರಿ 210 ರನ್.
ಇದನ್ನೂ ಓದಿ | ಆರ್‌ಸಿಬಿ ಸೇರಿದ ಮೊದಲ ವರ್ಷವೇ ನಾಯಕನ ಪಟ್ಟ ಪಡೆದ ಜಿತೇಶ್ ಶರ್ಮಾ; ರಜತ್ ಪಾಟೀದಾರ್ ಇಂಪ್ಯಾಕ್ಟ್ ಪ್ಲೇಯರ್