ಕನ್ನಡ ಸುದ್ದಿ / ಕ್ರಿಕೆಟ್ /
ಪಂಜಾಬ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್; ಕ್ವಾಲಿಫೈಯರ್ 1ರಲ್ಲಿ ಆಡಲು ಬೇಕು ಗೆಲುವು, ಪಂದ್ಯದ 10 ಮುಖ್ಯಾಂಶಗಳು
ಕ್ವಾಲಿಫೈಯರ್ 1ರಲ್ಲಿ ಆಡುವ ಗುರಿ ಇಟ್ಟುಕೊಂಡು ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಇಲ್ಲಿ ಗೆದ್ದ ತಂಡಕ್ಕೆ ಲಾಭ. ಸೋತ ತಂಡವು ಬಹುತೇಕ ಎಲಿಮನೇಟರ್ ಪಂದ್ಯದಲ್ಲಿ ಆಡಬೇಕಾಗುತ್ತದೆ.

ಪಂಜಾಬ್ vs ಮುಂಬೈ: ಕ್ವಾಲಿಫೈಯರ್ 1ರಲ್ಲಿ ಆಡಲು ಬೇಕು ಗೆಲುವು, ಪಂದ್ಯದ 10 ಮುಖ್ಯಾಂಶಗಳು (PTI)
ಐಪಿಎಲ್ 2025ರ ಆವೃತ್ತಿಯ ಲೀಗ್ ಹಂತದಲ್ಲಿ ಇನ್ನೆರಡು ಪಂದ್ಯಗಳು ಮಾತ್ರವೇ ಬಾಕಿ ಉಳಿದಿವೆ. ಟೂರ್ನಿಯ 69ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಎರಡೂ ತಂಡಗಳಿಗೆ ಈ ಪಂದ್ಯ ತುಂಬಾ ಮುಖ್ಯ. ಶನಿವಾರ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಪಂಜಾಬ್ ಕಿಂಗ್ಸ್ ತಂಡವು ಇದೀಗ ಎಂಐ ವಿರುದ್ಧ ಗೆದ್ದರಷ್ಟೇ ಲೀಗ್ ಹಂತದಲ್ಲಿ ಅಗ್ರ ಎರಡು ಸ್ಥಾನದೊಳಗೆ ಮುಗಿಸಲು ಸಾಧ್ಯ. ಗುಜರಾತ್ ಟೈಟಾನ್ಸ್ ವಿರುದ್ದದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆದ್ದ ನಂತರ, ಅಗ್ರ ನಾಲ್ಕು ತಂಡಗಳಿಗೂ ಟಾಪ್ 2 ಒಳಗೆ ಸ್ಥಾನ ಪಡೆಯುವ ಅವಕಾಶ ಕೊಟ್ಟಿದೆ. ಹೀಗಾಗಿ ಮುಂಬೈ ಕೂಡಾ ಗೆದ್ದರೆ ಅಗ್ರ ಎರಡರಲ್ಲಿ ಒಂದು ಸ್ಥಾನ ಪಡೆಯಲಿದೆ.
ಪ್ರಮುಖ ಪಂದ್ಯಕ್ಕೆ ಸಂಬಂಧಿಸಿದಂತೆ 10 ಅಂಶಗಳನ್ನು ನೋಡೋಣ.
- ಸಿಎಸ್‌ಕೆ ವಿರುದ್ಧ ಗುಜರಾತ್ ಸೋತ ನಂತರ ಮುಂಬೈ ಹಾಗೂ ಪಂಜಾಬ್ ತಂಡಗಳಿಗೆ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ಮುಗಿಸುವ ಅವಕಾಶವಿದೆ. ಇಂದಿನ ಪಂದ್ಯದಲ್ಲಿ ಯಾವ ತಂಡ ಗೆಲ್ಲುತ್ತದೋ ಅದು ಕ್ವಾಲಿಫೈಯರ್ 1ರಲ್ಲಿ ಆಡಲಿದೆ. ಇಲ್ಲಿ ಗೆದ್ದರಷ್ಟೇ ಸಾಕು.
- ಸಣ್ಣ ಪುಟ್ಟ ಸಮಸ್ಯೆಯಿಂದಾಗಿ ಡಿಸಿ ವಿರುದ್ಧದ ಪಂದ್ಯದಲ್ಲಿ ಯುಜ್ವೇಂದ್ರ ಚಾಹಲ್ ಆಡಿರಲಿಲ್ಲ ಎಂದು ಸ್ಪಿನ್ ಕೋಚ್ ಸುನಿಲ್ ಜೋಶಿ ಹೇಳಿದ್ದರು. ಆದರೆ, ಮಣಿಕಟ್ಟಿನ ಗಾಯದಿಂದಾಗಿ ಮುಂಬೈ ವಿರುದ್ಧದ ಪಂದ್ಯದಿಂದಲೂ ಅವರು ಹೊರಗುಳಿಯುವ ಸಾಧ್ಯತೆ ಇದೆ ಎಂದು ಇಎಸ್‌ಪಿಎನ್ ವರದಿ ಮಾಡಿದೆ.
- ಪಂಜಾಬ್ ಹಾಗೂ ಮುಂಬೈ ನಡುವಿನ ಪಂದ್ಯವು ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇಲ್ಲಿ ನಡೆದ ಕಳೆದ ಎಂಟು ಪಂದ್ಯಗಳಲ್ಲಿ, ಏಳು ಬಾರಿ 200ಕ್ಕೂ ಹೆಚ್ಚು ರನ್ ಹರಿದು ಬಂದಿದೆ. ಕೊನೆಯ ಪಂದ್ಯದಲ್ಲಿ ಪಿಬಿಕೆಎಸ್ ವಿರುದ್ಧ ಡೆಲ್ಲಿ ಚೇಸಿಂಗ್ ಮಾಡಿ ಗೆದ್ದಂತೆ, ರಾತ್ರಿ ಪಂದ್ಯದಲ್ಲಿ ಚೇಸಿಂಗ್ ಮಾಡುವುದು ತಂಡಗಳ ಆದ್ಯತೆ. ಇಬ್ಬನಿ ಬರುವುದರಿಂದ ಚೇಸಿಂಗ್ ತುಸು ಸುಲಭವಾಗಲಿದೆ.
- ಪಂದ್ಯದ ಸಮಯವಾದ ಸಂಜೆ 7ರಿಂದ ರಾತ್ರಿ 11 ಗಂಟೆಯವರೆಗೆ ಜೈಪುರದಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ. ತಾಪಮಾನವು ಕ್ರಮೇಣ ನಿಧಾನವಾಗಿ ಇಳಿಯುತ್ತದೆ. ಹೀಗಾಗಿ ಪಂದ್ಯಕ್ಕೆ ಮಳೆಯ ಆತಂಕ ಇಲ್ಲ.
- ಇಲ್ಲಿಯವರೆಗೆ ಎರಡೂ ತಂಡಗಳ ನಡುವೆ ನಡೆದಿರುವ 32 ಪಂದ್ಯಗಳಲ್ಲಿ ಮುಂಬೈ 17 ಪಂದ್ಯಗಳಲ್ಲಿ ಗೆದ್ದಿದ್ದರೆ, ಪಂಜಾಬ್ 15 ಪಂದ್ಯಗಳಲ್ಲಿ ಗೆದ್ದಿದೆ. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಎರಡು ತಂಡಗಳ ಪ್ರದರ್ಶನ ಕಳಪೆಯಾಗಿದೆ. ಮುಂಬೈ ಇಲ್ಲಿ ಒಂಬತ್ತು ಪಂದ್ಯಗಳಲ್ಲಿ ಕೇವಲ ಮೂರರಲ್ಲಿ ಗೆದ್ದಿದ್ದರೆ, ಪಿಬಿಕೆಎಸ್ ತಂಡ ಆಡಿದ ಎಂಟು ಪಂದ್ಯಗಳಲ್ಲಿ ಗೆಲುವಿನ ಸಂಖ್ಯೆ ಕೇವಲ ಎರಡು ಮಾತ್ರ.
- ಪಂಜಾಬ್ ತಂಡಕ್ಕೆ ಸ್ಫೋಟಕ ಆಟಗಾರರೇ ಬಲ. ಆರಂಭಿಕ ಆಟಗಾರರಾದ ಪ್ರಭ್‌ಸಿಮ್ರಾನ್ ಸಿಂಗ್ ಮತ್ತು ಪ್ರಿಯಾಂಶ್ ಆರ್ಯ ಈ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ನಾಯಕ ಶ್ರೇಯಸ್ ಅಯ್ಯರ್ ಮುಂಬೈ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ ಪ್ರಮುಖ ಅಸ್ತ್ರವಾಗಲಿದ್ದಾರೆ. ಎಂಐ ಬೌಲರ್‌ಗಳ ವಿರುದ್ಧ ಅವರ ದಾಖಲೆ ಉತ್ತಮವಾಗಿದೆ.
- ಜಸ್ಪ್ರೀತ್ ಬುಮ್ರಾ ಮತ್ತು ಟ್ರೆಂಟ್ ಬೌಲ್ಟ್ ವಿರುದ್ಧ ಅಯ್ಯರ್ 64ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಇವರಿಬ್ಬರು ತಲಾ ಒಮ್ಮೆ ಮಾತ್ರ ಅವರನ್ನು ಔಟ್ ಮಾಡಲು ಸಾಧ್ಯವಾಗಿದೆ. ದೀಪಕ್ ಚಹರ್ ಮತ್ತು ಕರ್ಣ್ ಶರ್ಮಾ ಈವರೆಗೂ ಅಯ್ಯರ್ ಅವರನ್ನು ಔಟ್ ಮಾಡಿಲ್ಲ. ಇವರ ಬೌಲಿಂಗ್‌ನಲ್ಲಿ ಕ್ರಮವಾಗಿ 136 ಮತ್ತು 158ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಮಿಚೆಲ್ ಸ್ಯಾಂಟ್ನರ್ ಎಂಟು ಇನ್ನಿಂಗ್ಸ್‌ಗಳಲ್ಲಿ ಒಮ್ಮೆ ಮಾತ್ರ ಔಟ್ ಮಾಡಿದ್ದಾರೆ.
- ಮುಂಬೈ ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ, ಪಿಬಿಕೆಎಸ್ ವಿರುದ್ಧ 16 ಪಂದ್ಯಗಳಲ್ಲಿ 23 ವಿಕೆಟ್ ಕಬಳಿಸಿದ್ದಾರೆ. ಕೇವಲ 6.3ರ ಎಕಾನಮಿ ಹಾಗೂ 15.8ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.
- ಎಂಟು ಟಿ20 ಇನ್ನಿಂಗ್ಸ್‌ಗಳಲ್ಲಿ ಮೂರರಲ್ಲಿ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಔಟ್ ಮಾಡಿರುವ ಸ್ಟೊಯ್ನಿಸ್, ಪಂಜಾಬ್ ತಂಡಕ್ಕೆ ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್‌ನಲ್ಲೂ ಅಸ್ತ್ರವಾಗಬಹುದು. ಮುಂಬೈನ ಅತ್ಯಂತ ಯಶಸ್ವಿ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೂಡ ಟಿ20 ಪಂದ್ಯಗಳಲ್ಲಿ ಎರಡು ಬಾರಿ ಸ್ಟೋಯ್ನಿಸ್ ಬೌಲಿಂಗ್‌ಗೆ ಬಲಿಯಾಗಿದ್ದಾರೆ. ಆದರೂ ಇಬ್ಬರ ಸ್ಟ್ರೈಕ್ ರೇಟ್ ಉತ್ತಮವಾಗಿದೆ.
- ಈ ಬಾರಿ ಸೂರ್ಯಕುಮಾರ್ ನಂತರ, ದಕ್ಷಿಣ ಆಫ್ರಿಕಾದ ರೆಯಾನ್ ರಿಕಲ್ಟನ್ ಮುಂಬೈ ತಂಡದ ಯಶಸ್ವಿ ಬ್ಯಾಟರ್ ಆಗಿದ್ದಾರೆ. ಈ ಋತುವಿನಲ್ಲಿ ಅವರು 13 ಇನ್ನಿಂಗ್ಸ್‌ಗಳಲ್ಲಿ 30ರ ಸರಾಸರಿ ಮತ್ತು 150ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 361 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳೂ ಸೇರಿವೆ.
ಇದನ್ನೂ ಓದಿ | ಕ್ಲಾಸೆನ್ ಶತಕ, ದಾಖಲೆಯ ಮೊತ್ತ; ಕೆಕೆಆರ್ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಐಪಿಎಲ್‌ಗೆ ಸನ್‌ರೈಸರ್ಸ್ ಹೈದರಾಬಾದ್ ಗುಡ್‌ಬೈ