ಐಪಿಎಲ್‌ 2025: 2ನೇ ಬಾರಿಗೆ ಮುಖಾಮುಖಿಯಾಗುತ್ತಿವೆ 4 ಬಲಿಷ್ಠ ತಂಡಗಳು; ಭಾನುವಾರದ ಡಬಲ್‌ ಹೆಡರ್‌ನ 10 ಅಂಶಗಳು
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್‌ 2025: 2ನೇ ಬಾರಿಗೆ ಮುಖಾಮುಖಿಯಾಗುತ್ತಿವೆ 4 ಬಲಿಷ್ಠ ತಂಡಗಳು; ಭಾನುವಾರದ ಡಬಲ್‌ ಹೆಡರ್‌ನ 10 ಅಂಶಗಳು

ಐಪಿಎಲ್‌ 2025: 2ನೇ ಬಾರಿಗೆ ಮುಖಾಮುಖಿಯಾಗುತ್ತಿವೆ 4 ಬಲಿಷ್ಠ ತಂಡಗಳು; ಭಾನುವಾರದ ಡಬಲ್‌ ಹೆಡರ್‌ನ 10 ಅಂಶಗಳು

ಐಪಿಎಲ್‌ 18ನೇ ಆವೃತ್ತಿಯ ಮೊದಲ ಹಂತದ ಪಂದ್ಯಗಳು ಬಹುತೇಕ ಅಂತ್ಯವಾಗಿದೆ. ಇದೀಗ ತಂಡಗಳ ನಡುವಿನ ಎರಡನೇ ಮುಖಾಮುಖಿಗೆ ವೇದಿಕೆ ಸಜ್ಜಾಗಿವೆ. ನಾಳೆ (ಏ.20) 4 ಬಲಿಷ್ಠ ತಂಡಗಳು ಈ ಬಾರಿ ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ.

2ನೇ ಬಾರಿಗೆ ಮುಖಾಮುಖಿಯಾಗುತ್ತಿವೆ 4 ಬಲಿಷ್ಠ ತಂಡಗಳು; ಭಾನುವಾರದ ಡಬಲ್‌ ಹೆಡರ್‌ನ 10 ಅಂಶಗಳು
2ನೇ ಬಾರಿಗೆ ಮುಖಾಮುಖಿಯಾಗುತ್ತಿವೆ 4 ಬಲಿಷ್ಠ ತಂಡಗಳು; ಭಾನುವಾರದ ಡಬಲ್‌ ಹೆಡರ್‌ನ 10 ಅಂಶಗಳು (PTI, IPL)

ಐಪಿಎಲ್‌ನಲ್ಲಿ ಭಾನುವಾರದ ಡಬಲ್ ಹೆಡರ್ ದಿನದಂದು ಆರ್‌ಸಿಬಿ ಪಂದ್ಯ ಕೂಡಾ ನಡೆಯುತ್ತಿದೆ. ಏಪ್ರಿಲ್‌ 20ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸ್ಪರ್ಧಿಸುತ್ತಿವೆ. ಇದೇ ವೇಳೆ ಎರಡನೇ ಪಂದ್ಯದಲ್ಲಿ ತಲಾ ಐದು ಬಾರಿಯ ಚಾಂಪಿಯನ್‌ಗಳಾದ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಎದುರಾಗುತ್ತಿವೆ. ಈ ನಾಲ್ಕು ತಂಡಗಳು ಈ ಬಾರಿ ಟೂರ್ನಿಯಲ್ಲಿ ಎರಡನೇ ಬಾರಿಗೆ ಪರಸ್ಪರ ಮುಖಾಮುಖಿಯಾಗುತ್ತಿವೆ. ಭಾನುವಾರದ ಎರಡು ರೋಚಕ ಪಂದ್ಯಗಳ ಕುರಿತ 10 ಅಂಶಗಳು ಇಲ್ಲಿವೆ.

  1. ಭಾನುವಾರದ ಐಪಿಎಲ್‌ ಪಂದ್ಯಗಳು ಹಲವು ಕಾರಣಗಳಿಂದ ವಿಶೇಷ. ಭಾರತ ಕ್ರಿಕೆಟ್‌ನ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ, ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಸೇರಿದಂತೆ ಘಟಾನುಘಟಿ ಆಟಗಾರರು ಮೈದಾನಕ್ಕಿಳಿಯಲಿದ್ದಾರೆ.
  2. ಪಂಜಾಬ್‌ ಮತ್ತು ಆರ್‌ಸಿಬಿ ತಂಡಗಳು ಒಂದು ದಿನದ ಹಿಂದಷ್ಟೇ ಬೆಂಗಳೂರಿನಲ್ಲಿ ಮುಖಾಮುಖಿಯಾಗಿದ್ದವು. ಮಳೆ ಬಾಧಿಸಿದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಗೆದ್ದು ಬೀಗಿತ್ತು. ಈ ಪಂದ್ಯವು ಪಿಬಿಕೆಎಸ್‌ ತವರು ಚಂಡೀಗಢದ ಮುಲ್ಲನ್‌ಪುರದಲ್ಲಿ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಲ್ಲಿ ಎದುರಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಅತ್ತ ಪಂಜಾಬ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದತ್ತ ಕಣ್ಣಿಟ್ಟಿದೆ.
  3. ಮುಲ್ಲನ್ಪುರದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ ಇತಿಹಾಸ ನಿರ್ಮಿಸಿತ್ತು. ಕೇವಲ 111 ರನ್‌ಗಳನ್ನು ಯಶಸ್ವಿಯಾಗಿ ಡಿಫೆಂಡ್‌ ಮಾಡಿಕೊಂಡು ದಾಖಲೆ ಬರೆಯಿತು. ಆರ್‌ಸಿಬಿ ವಿರುದ್ಧವೂ ಈ ದಾಖಲೆ ವಿಸ್ತರಿಸಲು ತಂಡ ಈಗ ಎದುರು ನೋಡುತ್ತಿದೆ.
  4. ತವರಿನಲ್ಲಿ ಈ ಬಾರಿ ಒಂದೂ ಪಂದ್ಯ ಗೆಲ್ಲದ ಆರ್‌ಸಿಬಿ, ಹೊರಗೆ ಆಡಿದ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಗೆದ್ದಿದೆ. ಕೋಲ್ಕತ್ತಾ, ಚೆನ್ನೈ, ಮುಂಬೈ ಹಾಗೂ ಜೈಪುರದಲ್ಲಿ ಪಂದ್ಯ ಗೆದ್ದು ಇದೀಗ ಚಂಡೀಗಢದಲ್ಲೂ ಗೆಲ್ಲುವ ವಿಶ್ವಾಸದಲ್ಲಿದೆ.
  5. ಪಂಜಾಬ್‌ ತಂಡದ ಲಾಕಿ ಫರ್ಗುಸನ್ ಗಾಯದ ಸಮಸ್ಯೆಯಿಂದ ಇನ್ನೂ ತಂಡದ ಹೊರಗುಳಿದಿದ್ದಾರೆ. ಈ ಋತುವಿನ ಉಳಿದ ಪಂದ್ಯಗಳಿಂದ ಅವರು ಹೊರಗುಳಿಯುವ ಸಾಧ್ಯತೆ ಇದೆ. ಅತ್ತ ಆರ್‌ಸಿಬಿ ತಂಡದಲ್ಲಿ ಯಾವುದೇ ಗಾಯಾಳುಗಳ ವರದಿ ಇಲ್ಲ.
  6. ಪಂಜಾಬ್‌ ಹಾಗೂ ಆರ್‌ಸಿಬಿ ತಂಡಗಳ ನಡುವಿನ ಮುಖಾಮುಖಿ ಪಂದ್ಯಗಳಲ್ಲಿ ಪಂಜಾಬ್‌ ಮೇಲುಗೈ ಸಾಧಿಸಿದೆ. ಪಿಬಿಕೆಎಸ್‌ 18 ಪಂದ್ಯಗಳಲ್ಲಿ ಗೆದ್ದರೆ, ಆರ್‌ಸಿಬಿ 16ರಲ್ಲಿ ಗೆದ್ದಿದೆ.
  7. ಪಿಬಿಕೆಎಸ್‌ ತವರು ಮೈದಾನ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೆ ಕೇವಲ 8 ಐಪಿಎಲ್ ಪಂದ್ಯಗಳು ಮಾತ್ರ ನಡೆದಿವೆ. ಮೊದಲು ಬ್ಯಾಟಿಂಗ್ ಮಾಡಿದ ತಂಡ 5 ಪಂದ್ಯಗಳನ್ನು ಗೆದ್ದಿದ್ದರೆ, ರನ್ ಬೆನ್ನಟ್ಟಿದ ತಂಡ 3 ಪಂದ್ಯಗಳನ್ನು ಗೆದ್ದಿದೆ. ಪಂಜಾಬ್ ಕಿಂಗ್ಸ್ ತಂಡ ಇಲ್ಲಿ ಈವರೆಗೆ ಆಡಿರುವ 8 ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ.
  8. ಚೆನ್ನೈ ಮತ್ತು ಮುಂಬೈ ತಂಡಗಳು ಈ ಬಾರಿ ಟೂರ್ನಿಯಲ್ಲಿ ನಿರೀಕ್ಷಿತ ಆರಂಭ ಪಡೆದಿಲ್ಲ. ಎರಡೂ ತಂಡಗಳು ತಲಾ 7 ಪಂದ್ಯಗಳಲ್ಲಿ ಆಡಿದ್ದು, ಸಿಎಸ್‌ಕೆ 5ರಲ್ಲಿ ಸೋತಿದೆ. ಕೊನೆಯ ಪಂದ್ಯದಲ್ಲಿ ಗೆಲುವಿನ ಹಳಿಗೆ ಬಂದಿರುವ ತಂಡ, ಅದನ್ನು ಮುಂದುವರೆಸುವ ವಿಶ್ವಾಸದಲ್ಲಿದೆ. ಅತ್ತ ಮುಂಬೈ ತಂಡ 4 ಪಂದ್ಯಗಳಲ್ಲಿ ಸೋತಿದ್ದು, ಕೊನೆಯ ಎರಡು ಪಂದ್ಯಗಳಲ್ಲಿ ಗೆಲುವಿನ ರುಚಿ ನೋಡಿದೆ.
  9. ಮುಂಬೈ ವಿರುದ್ಧದ ಪಂದ್ಯಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹೊಸ ಆಟಗಾರನ ಸೇರ್ಪಡೆಯಾಗಿದೆ. ಡೆವಾಲ್ಡ್‌ ಬ್ರೆವಿಸ್ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಲಾಗಿದೆ. ಇವರನ್ನು ನೇರವಾಗಿ ಆಡುವ ಬಳಗಕ್ಕೆ ಸೇರಿಸುವ ನಿರೀಕ್ಷೆ ಇದೆ.
  10. ಎಂಐ ಹಾಗೂ ಸಿಎಸ್‌ಕೆ ತಂಡಗಳು ಐಪಿಎಲ್‌ ಇತಿಹಾಸದ ಅತ್ಯಂತ ಯಶಸ್ವಿ ತಂಡಗಳು. ಉಭಯ ತಂಡಗಳು ಐಪಿಎಲ್‌ನಲ್ಲಿ ಈವರೆಗೆ 38 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ 18 ಪಂದ್ಯಗಳಲ್ಲಿ ಮುಂಬೈ ಗೆದ್ದರೆ, ಸಿಎಸ್‌ಕೆ 20 ಪಂದ್ಯಗಳಲ್ಲಿ ಗೆದ್ದಿದೆ. ಉಭಯ ತಂಡಗಳು ಟೂರ್ನಿಯಲ್ಲಿ ಎರಡನೇ ಬಾರಿ. ಎದುರಾಗುತ್ತಿವೆ. ಮೊದಲ ಮುಖಾಮುಖಿಯಲ್ಲಿ ಸಿಎಸ್‌ಎಕೆ 4 ವಿಕೆಟ್‌ಗಳಿಂದ ಗೆದ್ದಿತ್ತು.

ಇದನ್ನೂ ಓದಿ | ಪಂಜಾಬ್‌ vs ಆರ್‌ಸಿಬಿ, ಮುಂಬೈ vs ಸಿಎಸ್‌ಕೆ; ಪಿಚ್‌-ಹವಾಮಾನ ವರದಿ ಹಾಗೂ ಸಂಭಾವ್ಯ ಆಡುವ ಬಳಗ

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.