ಪಂಜಾಬ್‌ vs ಆರ್‌ಸಿಬಿ, ಮುಂಬೈ vs ಸಿಎಸ್‌ಕೆ; ಪಿಚ್‌-ಹವಾಮಾನ ವರದಿ ಹಾಗೂ ಸಂಭಾವ್ಯ ಆಡುವ ಬಳಗ
ಕನ್ನಡ ಸುದ್ದಿ  /  ಕ್ರಿಕೆಟ್  /  ಪಂಜಾಬ್‌ Vs ಆರ್‌ಸಿಬಿ, ಮುಂಬೈ Vs ಸಿಎಸ್‌ಕೆ; ಪಿಚ್‌-ಹವಾಮಾನ ವರದಿ ಹಾಗೂ ಸಂಭಾವ್ಯ ಆಡುವ ಬಳಗ

ಪಂಜಾಬ್‌ vs ಆರ್‌ಸಿಬಿ, ಮುಂಬೈ vs ಸಿಎಸ್‌ಕೆ; ಪಿಚ್‌-ಹವಾಮಾನ ವರದಿ ಹಾಗೂ ಸಂಭಾವ್ಯ ಆಡುವ ಬಳಗ

ವಾರಾಂತ್ಯ ಭಾನುವಾರ 2 ಪಂದ್ಯಗಳು ನಡೆಯುತ್ತಿದ್ದು, ಆರ್‌ಸಿಬಿ ತಂಡದ ಪಂದ್ಯವೂ ನಡೆಯಲಿದೆ. ಮುಲ್ಲನ್ಪುರ ಮತ್ತು ಮುಂಬೈ ಪಿಚ್‌, ಹವಾಮಾನ ವರದಿ ಹಾಗೂ ನಾಲ್ಕು ತಂಡಗಳ ಸಂಭಾವ್ಯ ಆಡುವ ಬಳಗದ ಮಾಹಿತಿ ಇಲ್ಲಿದೆ.

ಪಂಜಾಬ್‌ vs ಆರ್‌ಸಿಬಿ, ಮುಂಬೈ vs ಸಿಎಸ್‌ಕೆ; ಪಿಚ್‌-ಹವಾಮಾನ ವರದಿ ಹಾಗೂ ಸಂಭಾವ್ಯ ಆಡುವ ಬಳಗ
ಪಂಜಾಬ್‌ vs ಆರ್‌ಸಿಬಿ, ಮುಂಬೈ vs ಸಿಎಸ್‌ಕೆ; ಪಿಚ್‌-ಹವಾಮಾನ ವರದಿ ಹಾಗೂ ಸಂಭಾವ್ಯ ಆಡುವ ಬಳಗ (PTI, HT)

ಐಪಿಎಲ್‌ 18ನೇ ಆವೃತ್ತಿಯಲ್ಲಿ ಈ ವಾರದ ಎರಡನೇ ಡಬಲ್ ಹೆಡರ್ ನಡೆಯುತ್ತಿದೆ. ಭಾನುವಾರ (ಏಪ್ರಿಲ್‌ 20) ನಡೆಯಲಿರುವ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮತ್ತೊಮ್ಮೆ ಎದುರಿಸಲಿದೆ. ಉಭಯ ತಂಡಗಳು ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಎದುರಾಗಿದ್ದವು. ಇದೀಗ ಒಂದು ದಿನದ ಪ್ರಯಾಣ ಬ್ರೇಕ್‌ ನಂತರ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ದಿನದ ಎರಡನೇ ಪಂದ್ಯದಲ್ಲಿ ತಲಾ ಐದು ಬಾರಿ ಐಪಿಎಲ್‌ ಟ್ರೋಫಿ ಗೆದ್ದಿರುವ ಎರಡು ತಂಡಗಳಾದ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಎದುರಾಗುತ್ತಿವೆ. ಹೀಗಾಗಿ ಭಾನುವಾರ ದಿನವಿಡೀ ರೋಚಕ ಪಂದ್ಯ ನಡೆಯುವ ನಿರೀಕ್ಷೆ ಇದೆ.

ದಿನದ ಎರಡು ಮಹತ್ವದ ಪಂದ್ಯಗಳಿಗೆ ಸಂಬಂಧಿಸಿದಂತೆ ಪಿಚ್‌, ಹವಾಮಾನ ವರದಿ ಹಾಗೂ ಸಂಭಾವ್ಯ ತಂಡಗಳ ಮಾಹಿತಿ ಇಲ್ಲಿದೆ.

ಮುಲ್ಲನ್ಪುರ ಕ್ರೀಡಾಂಗಣದ ಪಿಚ್ ವರದಿ

ಪಿಬಿಕೆಎಸ್‌ ತವರು ಮೈದಾನ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳಿಗೆ ಅನುಕೂಲಕರವಾಗಿದೆ. ಆದರೆ, ಕೊನೆಯ ಪಂದ್ಯದಲ್ಲಿ ಇಲ್ಲಿ ಪಂಜಾಬ್‌ ತಂಡ ಸಾಧಾರಣ ಮೊತ್ತ ಕಲೆ ಹಾಕಿಯೂ ಪಂದ್ಯ ಗೆದ್ದಿತ್ತು. ಹೀಗಾಗಿ ಪಿಚ್‌ ವರ್ತನೆಯನ್ನು ನಿಖರವಾಗಿ ಅಂದಾಜಿಸುವುದು ಕಷ್ಟ. ಈ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೆ ಕೇವಲ 8 ಐಪಿಎಲ್ ಪಂದ್ಯಗಳು ಮಾತ್ರ ನಡೆದಿವೆ. ಮೊದಲು ಬ್ಯಾಟಿಂಗ್ ಮಾಡಿದ ತಂಡ 5 ಪಂದ್ಯಗಳನ್ನು ಗೆದ್ದಿದ್ದರೆ, ಚೇಸಿಂಗ್‌ ಮಾಡಿದ ತಂಡ 3 ಪಂದ್ಯಗಳನ್ನು ಗೆದ್ದಿದೆ. ಮುಲ್ಲನ್‌ಪುರದಲ್ಲಿ ಪಂಜಾಬ್ ಕಿಂಗ್ಸ್ ತಂಡ ಇಲ್ಲಿಯವರೆಗೆ ಆಡಿರುವ 8 ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಈ ಬಾರಿ ಇಲ್ಲಿ ನಡೆದ ಪಂದ್ಯಗಳಲ್ಲಿ, ಇಬ್ಬನಿ ಬಹಳ ಕಡಿಮೆ ಇತ್ತು. ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಬಹುದು.

ಮುಲ್ಲನ್‌ಪುರ ಹವಾಮಾನ ವರದಿ

ಭಾನುವಾರ ಮಧ್ಯಾಹ್ನ ಮುಲ್ಲನ್‌ಪುರದಲ್ಲಿ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರುವ ನಿರೀಕ್ಷೆಯಿದೆ. ಆರ್ದ್ರತೆಯು ಕೇವಲ 17 ಪ್ರತಿಶತದಷ್ಟಿರುತ್ತದೆ. ಪಂದ್ಯದ ಸಮಯದಲ್ಲಿ ಮಳೆಯಾಗುವ ಸಾಧ್ಯತೆ ಕೇವಲ 2 ಶೇಕಡದಷ್ಟಿದೆ ಎಂದು ಹವಾಮಾನ ವರದಿ ತಿಳಿಸಿದೆ.

ವಾಂಖೆಡೆ ಕ್ರೀಡಾಂಗಣ ಪಿಚ್‌ ವರದಿ

ಮುಂಬೈ ಇಂಡಿಯನ್ಸ್‌ ಮತ್ತು ಸಿಎಸ್‌ಕೆ ತಂಡಗಳ ನಡುವಿನ ಪಂದ್ಯವು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಣ್ಣ ಬೌಂಡರಿಗಳನ್ನು ಹೊಂದಿರುವ ಮೈದಾನವು ಬ್ಯಾಟರ್‌ಗಳಿಗೆ ಹೆಚ್ಚು ಆದ್ಯತೆ ನೀಡಿದೆ. ಬ್ಯಾಟರ್‌ಗಳ ಸ್ವರ್ಗ ಎಂದೇ ಕರೆಯಲ್ಪಡುವ ಮೈದಾನದಲ್ಲಿ ಚೇಸಿಂಗ್ ಮಾಡುವ ತಂಡ ಹೆಚ್ಚಾಗಿ ಮೇಲುಗೈ ಸಾಧಿಸುತ್ತದೆ. ಹೀಗಾಗಿ ಟಾಸ್ ಗೆಲ್ಲುವ ತಂಡಗಳು ಮೊದಲು ಬೌಲಿಂಗ್ ಮಾಡಲು ಎದುರು ನೋಡುತ್ತದೆ.

ಮುಂಬೈ ಹವಾಮಾನ ವರದಿ

ಕಡಲ ತಡಿಯ ನಗರಿ ಮುಂಬೈನಲ್ಲಿ ಬೇಸಿಗೆಯ ತಾಪಮಾನ ಹೆಚ್ಚಿರುತ್ತದೆ. ಹವಾಮಾನ ಮುನ್ಸೂಚನೆಗಳ ಪ್ರಕಾರ ಮುಂಬೈನಲ್ಲಿ ನಗರದಲ್ಲಿ ಗರಿಷ್ಠ ತಾಪಮಾನವು 32 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನವು 28 ಡಿಗ್ರಿ ಸೆಲ್ಸಿಯಸ್‌ಗೆ ತಲುಪಬಹುದು. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇಲ್ಲ.

ಸಂಭಾವ್ಯ ತಂಡಗಳು (ಇಂಪ್ಯಾಕ್ಟ್‌ ಆಟಗಾರ)

ಆರ್‌ಸಿಬಿ: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟನ್, ಜಿತೇಶ್ ಶರ್ಮಾ (ವಿ.ಕೀ), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಸುಯಶ್ ಶರ್ಮಾ, ಯಶ್ ದಯಾಳ್.‌ (ದೇವದತ್‌ ಪಡಿಕಲ್/‌ಮನೋಜ್‌ ಭಾಂಡಗೆ)

ಪಿಬಿಕೆಎಸ್‌: ಪ್ರಿಯಾಂಶ್ ಆರ್ಯ, ನೆಹಾಲ್ ವಧೇರಾ, ಶ್ರೇಯಸ್ ಅಯ್ಯರ್ (ನಾಯಕ), ಶಶಾಂಕ್ ಸಿಂಗ್, ಜೋಶ್ ಇಂಗ್ಲಿಸ್ (ವಿ.ಕೀ), ಮಾರ್ಕಸ್ ಸ್ಟೊಯ್ನಿಸ್, ಮಾರ್ಕೊ ಜಾನ್ಸೆನ್, ಹರ್ಪ್ರೀತ್ ಬ್ರಾರ್, ಕ್ಸೇವಿಯರ್ ಬಾರ್ಟ್ಲೆಟ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್.

ಸಿಎಸ್‌ಕೆ: ರಚಿನ್ ರವೀಂದ್ರ, ಡೆವೊನ್ ಕಾನ್ವೇ, ರಾಹುಲ್ ತ್ರಿಪಾಠಿ, ವಿಜಯ್ ಶಂಕರ್, ಶಿವಂ ದುಬೆ, ಎಂಎಸ್ ಧೋನಿ (ನಾಯಕ ಮತ್ತು ವಿ.ಕೀ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ಖಲೀಲ್ ಅಹ್ಮದ್, (ಮಥೀಶ ಪತಿರಾಣ)

ಎಂಐ: ರಿಯಾನ್ ರಿಕೆಲ್ಟನ್ (ವಿ.ಕೀ), ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧಿರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ಕರ್ಣ್ ಶರ್ಮಾ, (ರೋಹಿತ್ ಶರ್ಮಾ)

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.