ಮತ್ತೊಮ್ಮೆ ಚೇಸಿಂಗ್‌ನಲ್ಲಿ ಎಡವಿದ ರಾಜಸ್ಥಾನ ರಾಯಲ್ಸ್; ಪ್ಲೇಆಫ್ ಹಂತಕ್ಕೆ ಪಂಜಾಬ್ ಕಿಂಗ್ಸ್ ಸನಿಹ
ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ 2025ರ ಆವೃತ್ತಿಯ ಪ್ಲೇಆಫ್ ಹಂತಕ್ಕೆ ಮತ್ತಷ್ಟು ಹತ್ತಿರವಾಗಿದೆ. ರಾಜಸ್ಥಾನ ರಾಯಲ್ಸ್ ವಿರುದ್ದ ರೋಚಕ ಜಯ ಸಾಧಿಸಿದ ಶ್ರೇಯಸ್ ಅಯ್ಯರ್ ಬಳಗವು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿದೆ.

ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸೋಲಿನ ಸರಪಳಿ ಮುಂದುವರೆದಿದೆ. ಮತ್ತೊಮ್ಮೆ ಚೇಸಿಂಗ್ ವೇಳೆ ಎಡವಿದೆ. ಅತ್ತ ಪಂಜಾಬ್ ಕಿಂಗ್ಸ್ ತಂಡವು ಪ್ಲೇಆಫ್ ರೇಸ್‌ಗೆ ಮತ್ತಷ್ಟು ಹತ್ತಿರವಾಗಿದೆ. ಜೈಪುರದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಆತಿಥೇಯ ರಾಯಲ್ಸ್ ತಂಡವನ್ನು 10 ರನ್‌ಗಳಿಂದ ಮಣಿಸಿದ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಅಲ್ಲದೇ ಪ್ಲೇಆಫ್ ಹಂತಕ್ಕೇರಲು ಇನ್ನೊಂದೇ ಹೆಜ್ಜೆ ಹಿಂದಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್, ವೇಗದ ಆಟಕ್ಕೆ ಮಣೆ ಹಾಕಿತು. ವಿಕೆಟ್ ಕಳೆದುಕೊಂಡರೂ, ನಿರಂತರವಾಗಿ ರನ್ ಹರಿದು ಬಂತು. ಪ್ರಿಯಾಂಶ್ ಆರ್ಯ 9, ಪ್ರಭ್‌ಸಿಮ್ರನ್ ಸಿಂಗ್ 21 ರನ್ ಗಳಿಸಿದರು. ಬದಲಿ ಆಟಗಾರನಾಗಿ ತಂಡದ ಪರ ಈ ಬಾರಿ ಮೊದಲ ಪಂದ್ಯವಾಡಿದ ಮಿಚೆಲ್ ಓವನ್ ಎದುರಿಸಿದ ಎರಡನೇ ಎಸೆತದಲ್ಲೇ ಔಟಾದರು. ಈ ವೇಳೆ ನೆಹಾಲ್ ವಧೇರ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಉತ್ತಮ ಜೊತೆಯಾಟವಾಡಿದರು. ಆದರೆ ನಾಯಕ ಆಟ 30 ರನ್‌ಗಳಿಗೆ ಅಂತ್ಯವಾಯ್ತು. ಆದರೆ ಅಬ್ಬರಿಸಿದ ವಧೇರ ಭರ್ಜರಿ ಅರ್ಧಶತಕ ಸಿಡಿಸಿದರು. 37 ಎಸೆತಗಳಲ್ಲಿ ತಲಾ 5 ಬೌಂಡರಿ ಹಾಗೂ ಸಿಕ್ಸರ್ ಸಹಿತ 70 ರನ್ ಸ್ಫೋಟಿಸಿದರು. ಕೊನೆತಲ್ಲಿ ಶಶಾಂಕ್ ಸಿಂಗ್ ಅಜೇಯ 59 ರನ್ ಬಾರಿಸಿದರೆ, ಅಜ್ಮತುಲ್ಲಾ 21 ರನ್ ಗಳಿಸಿದರು.
ಬೃಹತ್ ಮೊತ್ತವನ್ನು ಗುರಿ ಬೆನ್ನಟ್ಟಿದ ರಾಜಸ್ಥಾನಕ್ಕೆ ಉತ್ತಮ ಆರಂಭ ಸಿಕ್ಕಿತು. ಸ್ಫೋಟಕ ಯುವ ಜೋಡಿಯಾದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಮೊದಲ ವಿಕೆಟ್‌ಗೆ 76 ರನ್ ಜೊತೆಯಾಟವಾಡಿದರು. ವೈಭವ್ 15 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 40 ರನ್ ಬಾರಿಸಿದರು. ಜೈಸ್ವಾಲ್ 25 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು.
ನಾಯಕ ಸಂಜು ಸ್ಯಾಮ್ಸನ್ 20 ರನ್ ಗಳಿಸಿದರೆ, ರಿಯಾನ್ ಪರಾಗ್ 13, ಹೆಟ್ಮಾಯರ್ 11 ರನ್ ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ಧ್ರುವ್ ಜುರೆಲ್ ಅರ್ಧಶತಕ ಬಾರಿಸಿದರು. ಆದರೆ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಕೊನೆಯ ಓವರ್ ಥ್ರಿಲ್ಲರ್
ಕೊನೆಯ ಓವರ್‌ನಲ್ಲಿ ತಂಡದ ಗೆಲುವಿಗೆ 22 ರನ್‌ಗಳು ಬೇಕಿದ್ದವು. ಜಾನ್ಸೆನ್ ಎಸೆದ ಓವರ್‌ನಲ್ಲಿ ಕೇವಲ 11 ರನ್ ಮಾತ್ರ ಬಿಟ್ಟುಕೊಟ್ಟರು. ಅಲ್ಲದೆ 2 ಪ್ರಮುಖ ವಿಕೆಟ್ ಪಡೆದರು. ಓವರ್‌ನ ಮೂರನೇ ಎಸೆತದಲ್ಲಿ ಧ್ರುವ್ ಜುರೆಲ್ 53 ರನ್ ಗಳಿಸಿದ್ದಾಗ ಔಟಾದರು. ಈ ವೇಳೆ ಬಂದ ಹಸರಂಗ ಗೋಲ್ಡನ್ ಡಕ್ ಆದರು. ಕೊನೆಯ ಎರಡು ಎಸೆತ ಎದುರಿಸಿದ ಮಫಾಕಾ ಎರಡು ಫೋರ್ ಗಳಿಸಿದರು. ಆದರೆ ತಂಡದ ಗೆಲುವಿಗೆ ಇದು ಸಾಧ್ಯವಾಗಲಿಲ್ಲ.