ಲಕ್ನೋ ವಿರುದ್ಧ ಪಂಜಾಬ್ ಕಿಂಗ್ಸ್ ತಂಡಕ್ಕೆ ನಿರಾಯಾಸದ ಗೆಲುವು; ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ನೆಗೆದ ಅಯ್ಯರ್ ಪಡೆ
ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್, 5 ವಿಕೆಟ್ ಕಳೆದುಕೊಂಡು 236 ರನ್ ಸಿಡಿಸಿತು. ಇದಕ್ಕೆ ಪ್ರತಿಯಾಗಿ ಗುರಿ ಬೆನ್ನಟ್ಟಿದ ಲಕ್ನೋ, 199 ರನ್ ಗಳಿಸಲಷ್ಟೇ ಶಕ್ತವಾಯ್ತು. ಹೀಗಾಗಿ 37 ರನ್‌ಗಳಿಂದ ಸೋಲು ಕಂಡಿತು.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಧರ್ಮಶಾಲಾದ ಸುಂದರ ಮೈದಾನದಲ್ಲಿ ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಅಬ್ಬರಿಸಿದ ಶ್ರೇಯಸ್ ಅಯ್ಯರ್ ಪಡೆ, ಪ್ಲೇಆಫ್ ಹಂತಕ್ಕೆ ಮತ್ತಷ್ಟು ಹತ್ತಿರವಾಗಿದೆ. ಅತ್ತ ಎಲ್‌ಎಸ್‌ಜಿ ತಂಡ ಸತತ ಮೂರನೇ ಸೋಲಿಗೆ ಶರಣಾಗಿದ್ದು, ತಂಡದ ಪ್ಲೇಆಫ್ ಹಾದಿ ದುರ್ಗಮವಾಗಿದೆ. ಮುಂದಿನ 3 ಪಂದ್ಯಗಳು ಲಕ್ನೋ ಪಾಲಿಗೆ ಮಾಡು ಇಲ್ಲವೆ ಮಡಿ ಎಂಬಂತಾಗಲಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್, ಪ್ರಭ್‌ಸಿಮ್ರಾನ್ ಸಿಂಗ್ ಸ್ಫೋಟಕ ಆಟದ ನೆರವಿಂದ 5 ವಿಕೆಟ್ ಕಳೆದುಕೊಂಡು 236 ರನ್ ಸಿಡಿಸಿತು. ಇದಕ್ಕೆ ಪ್ರತಿಯಾಗಿ ಗುರಿ ಬೆನ್ನಟ್ಟಿದ ಲಕ್ನೋ, ಆಯುಶ್ ಬದೋನಿ ಆಕರ್ಷಕ ಆಟದ ಹೊರತಾಗಿಯೂ 199 ರನ್ ಗಳಿಸಲಷ್ಟೇ ಶಕ್ತವಾಯ್ತು. ಇದರೊಂದಿಗೆ ಪಂಜಾಬ್ ತಂಡವು 37 ರನ್‌ಗಳಿಂದ ಭರ್ಜರಿಯಾಗಿ ಗೆದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆಯಿತು. ಅರ್‌ಸಿಬಿ ತಂಡ ಅಗ್ರಸ್ಥಾನದಲ್ಲಿ ಭದ್ರವಾಗಿದೆ.
ಬೃಹತ್ ಮೊತ್ತ ಚೇಸಿಂಗ್‌ಗೆ ಇಳಿದ ಆರಂಭದಲ್ಲೇ, ಎಲ್‌ಎಸ್‌ಜಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು. ಮಿಚೆಲ್ ಮಾರ್ಷ್ ಶೂನ್ಯಕ್ಕೆ ನಿರ್ಗಮಿಸಿದರೆ, ಮರ್ಕ್ರಾಮ್ ಆಟ 13 ರನ್‌ಗೆ ನಿಂತಿತು. ಟೂರ್ನಿಯಲ್ಲಿ ತಂಡದ ಗರಿಷ್ಠ ರನ್ ಸ್ಕೋರರ್ ನಿಕೋಲಸ್ ಪೂರನ್ 6 ರನ್ ಗಳಿಸಿದ್ದಾಗ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಮತ್ತೊಮ್ಮೆ ವೈಫಲ್ಯ ಅನುಭವಿಸಿದ ನಾಯಕ ರಿಷಭ್ ಪಂತ್, ಕೇವಲ 18 ರನ್ ಗಳಿಸಿ ಔಟಾದರು.
ಅನುಭವಿ ಆಟಗಾರ ಡೇವಿಡ್ ಮಿಲ್ಲರ್ 11 ರನ್ ಗಳಿಸಿದರು. ಈ ವೇಳೆ ಆಯುಶ್ ಬದೋನಿ ಮತ್ತು ಅಬ್ದುಲ್ ಸಮಾದ್ ಆಕರ್ಷಕ ಜೊತೆಯಾಟವಾಡಿದರು. 24 ಎಸೆತಗಳನ್ನು ಎದುರಿಸಿದ ಸಮದ್ 45 ರನ್ ಬಾರಿಸಿದರೆ, 40 ಎಸೆತಗಳಲ್ಲಿ 74 ರನ್ ಸಿಡಿಸಿದ ಬದೋನಿ ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ಔಟಾದರು. ದೊಡ್ಡ ಹೊಡೆತಗಳ ಮೂಲಕ ತಂಡದ ಸೋಲಿನ ಅಂತರ ತಗ್ಗಿಸಿದರು.
ಪ್ರಭ್‌ಸಿಮ್ರಾನ್ ಸ್ಫೋಟಕ ಆಟ
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಪರ ಪ್ರಭ್‌ಸಿಮ್ರಾನ್ ಸಿಂಗ್ ಅಬ್ಬರದ 91 ರನ್ ಸಿಡಿಸಿದರು. 48 ಎಸೆತ ಎದುರಿಸಿದ ಅವರು 6 ಬೌಂಡರಿ ಹಾಗೂ 7 ಸಿಕ್ಸರ್ ಸಿಡಿಸಿ, ಶತಕದ ಅಂಚಿನಲ್ಲಿ ಎಡವಿದರು. ನಾಯಕ ಶ್ರೇಯಸ್ 45 ರನ್ ಗಳಿಸಿದರೆ, ಶಶಾಂಕ್ ಸಿಂಗ್ ಅಜೇಯ 33 ರನ್ ಬಾರಿಸಿದರು.