ಕ್ವಿಂಟನ್ ಡಿ ಕಾಕ್ 97, ಗೆಲುವಿನ ಖಾತೆ ತೆರೆದ ಕೆಕೆಆರ್; ರಾಜಸ್ಥಾನ್ ರಾಯಲ್ಸ್​ಗೆ ಸತತ 2ನೇ ಸೋಲು
ಕನ್ನಡ ಸುದ್ದಿ  /  ಕ್ರಿಕೆಟ್  /  ಕ್ವಿಂಟನ್ ಡಿ ಕಾಕ್ 97, ಗೆಲುವಿನ ಖಾತೆ ತೆರೆದ ಕೆಕೆಆರ್; ರಾಜಸ್ಥಾನ್ ರಾಯಲ್ಸ್​ಗೆ ಸತತ 2ನೇ ಸೋಲು

ಕ್ವಿಂಟನ್ ಡಿ ಕಾಕ್ 97, ಗೆಲುವಿನ ಖಾತೆ ತೆರೆದ ಕೆಕೆಆರ್; ರಾಜಸ್ಥಾನ್ ರಾಯಲ್ಸ್​ಗೆ ಸತತ 2ನೇ ಸೋಲು

RR vs KKR: 18ನೇ ಆವೃತ್ತಿಯ ಐಪಿಎಲ್​ನ 6ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 8 ವಿಕೆಟ್​ಗಳ ಗೆಲುವು ದಾಖಲಿಸಿದೆ.

ಕ್ವಿಂಟನ್ ಡಿ ಕಾಕ್ 91, ಗೆಲುವಿನ ಖಾತೆ ತೆರೆದ ಕೆಕೆಆರ್; ರಾಜಸ್ಥಾನ್ ರಾಯಲ್ಸ್ ಸತತ ಎರಡನೇ ಸೋಲು
ಕ್ವಿಂಟನ್ ಡಿ ಕಾಕ್ 91, ಗೆಲುವಿನ ಖಾತೆ ತೆರೆದ ಕೆಕೆಆರ್; ರಾಜಸ್ಥಾನ್ ರಾಯಲ್ಸ್ ಸತತ ಎರಡನೇ ಸೋಲು (AFP)

ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಸಂಘಟಿತ ಹೋರಾಟ ನಡೆಸುವ ಮೂಲಕ ಇದೀಗ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸುವುದರೊಂದಿಗೆ ಐಪಿಎಲ್​ನಲ್ಲಿ ಗೆಲುವಿನ ಖಾತೆ ತೆರೆದಿದೆ. ಮತ್ತೊಂದೆಡೆ, ಮೊದಲ ಪಂದ್ಯದಲ್ಲಿ ಬೃಹತ್ ಮೊತ್ತ ಬಿಟ್ಟು ಕೊಟ್ಟು ಎಸ್​ಆರ್​ಹೆಚ್​ಗೆ ಶರಣಾಗಿದ್ದ ರಾಯಲ್ಸ್​​, ಸತತ ಎರಡನೇ ಸೋಲಿನ ಕಹಿ ಅನುಭವಿಸಿದೆ. ನಾಲ್ವರು ಬೌಲರ್​​ಗಳು ತಲಾ 2 ವಿಕೆಟ್ ಪಡೆಯುವುದರ ಜೊತೆಗೆ ಬ್ಯಾಟರ್​ ಕ್ವಿಂಟನ್ ಡಿ ಕಾಕ್​ ಆಕರ್ಷಕ 97 ರನ್​ ಬಲದಿಂದ ರಿಯಾನ್ ಪರಾಗ್ ಪಡೆಯನ್ನು 8 ವಿಕೆಟ್​ಗಳಿಂದ ಮಣಿಸಿದ ರಹಾನೆ ಪಡೆ 2 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 6 ಸ್ಥಾನ ಪಡೆದಿದೆ. 153 ರನ್ ಗುರಿ ಬೆನ್ನಟ್ಟಿದ ಕೆಕೆಆರ್, 17.3 ಓವರ್​​ಗಳಲ್ಲೇ ಗೆಲುವಿನ ಗೆರೆ ದಾಟಿದೆ.

ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಆರ್ ತಂಡ 152 ರನ್‌ಗಳ ಗುರಿಯನ್ನು ನಿಗದಿಪಡಿಸಿತು. ಆದರೆ ಕೆಕೆಆರ್ ತಂಡವು 17.3 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ ಸುಲಭವಾಗಿ ಗುರಿ ತಲುಪಿತು. ಕೆಕೆಆರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಡಿ ಕಾಕ್ 61 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್‌ ಸಹಾಯದಿಂದ ಅಜೇಯ 97 ರನ್ ಗಳಿಸಿದರು. ಗುರಿಯನ್ನು ಬೆನ್ನಟ್ಟಿದ ಡಿ ಕಾಕ್ ವೇಗವಾಗಿ ರನ್ ಗಳಿಸಿದರು. ಆದರೆ, ಮೊಯಿನ್ ಅಲಿ ಬ್ಯಾಟ್ ಕೆಲಸ ಮಾಡಲಿಲ್ಲ. ಇಬ್ಬರೂ ಮೊದಲ ವಿಕೆಟ್‌ಗೆ 41 ರನ್‌ಗಳ ಜೊತೆಯಾಟ ನೀಡಿದರು. 7ನೇ ಓವರ್‌ನಲ್ಲಿ 12 ಎಸೆತಗಳಲ್ಲಿ 5 ರನ್ ಗಳಿಸಿದ ನಂತರ ಮೊಯಿನ್ ರನೌಟ್ ಆದರು. ಅದೇ ಸಮಯದಲ್ಲಿ, ನಾಯಕ ಅಜಿಂಕ್ಯ ರಹಾನೆ 11 ನೇ ಓವರ್‌ನಲ್ಲಿ ವನಿಂದು ಹಸರಂಗ ಬಲೆಗೆ ಬಿದ್ದರು. ರಹಾನೆ 15 ಎಸೆತಗಳಲ್ಲಿ 18 ರನ್ ಸೇರಿಸಿದರು.

ಇದಾದ ನಂತರ, ಡಿ ಕಾಕ್ ಮತ್ತು ರಘುವಂಶಿ ಪಂದ್ಯವನ್ನು ಮುನ್ನಡೆಸಿದರು. ಇಬ್ಬರೂ 3ನೇ ವಿಕೆಟ್‌ಗೆ ಮುರಿಯದ 83 ರನ್‌ಗಳ ಪಾಲುದಾರಿಕೆ ಒದಗಿಸಿದರು. ಕೊನೆಯ ಮೂರು ಓವರ್‌ಗಳಲ್ಲಿ ಕೆಕೆಆರ್‌ಗೆ 17 ರನ್‌ಗಳು ಬೇಕಾಗಿದ್ದವು. ಆಗ ಜೋಫ್ರಾ ಆರ್ಚರ್ ಎಸೆದ 18 ನೇ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ಡಿ ಕಾಕ್ ಒಂದು ಬೌಂಡರಿ ಮತ್ತು ಎರಡು ಸಿಕ್ಸರ್‌ ಬಾರಿಸಿ ಕೆಕೆಆರ್ ಅನ್ನು ಗೆಲುವಿನ ಗೆರೆ ದಾಟಿಸಿದರು. 

ಆರ್​ಆರ್​ ಬ್ಯಾಟರ್​​ಗಳ ವೈಫಲ್ಯ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 151 ರನ್ ಗಳಿಸಿತು. ಆರ್‌ಆರ್ ಪರ ವಿಕೆಟ್ ಕೀಪರ್ ಧ್ರುವ್ ಜುರೆಲ್ ಅತಿ ಹೆಚ್ಚು ರನ್ ಗಳಿಸಿದರು. 28 ಎಸೆತಗಳಲ್ಲಿ 5 ಬೌಂಡರಿಗಳ ಸಹಾಯದಿಂದ 33 ರನ್, ಯಶಸ್ವಿ ಜೈಸ್ವಾಲ್ 24 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 29 ರನ್, ಹಂಗಾಮಿ ನಾಯಕ ರಿಯಾನ್ ಪರಾಗ್ 15 ಎಸೆತಗಳಲ್ಲಿ 3 ಸಿಕ್ಸರ್‌ ಸಹಾಯದಿಂದ 25 ರನ್ ಗಳಿಸಿ ನಿರಾಸೆ ಮೂಡಿಸಿದರು. ಅಂತಿಮ ಹಂತದಲ್ಲಿ ಜೋಫ್ರಾ ಆರ್ಚರ್ 16 ರನ್ ಗಳಿಸಿ ಔಟಾದರು. ಸಂಜು ಸ್ಯಾಮ್ಸನ್ (13), ನಿತೀಶ್ ರಾಣಾ (8), ವನಿಂದು ಹಸರಂಗ (4), ಶುಭಂ ದುಬೆ (9) ಮತ್ತು ಶಿಮ್ರಾನ್ ಹೆಟ್ಮೆಯರ್ (7) ತೀವ್ರ ನಿರಾಸೆ ಮೂಡಿಸಿದರು. ಕೆಕೆಆರ್ ಪರ ವರುಣ್ ಚಕ್ರವರ್ತಿ, ಮೋಯಿನ್ ಅಲಿ, ಹರ್ಷಿತ್ ರಾಣಾ ಮತ್ತು ವೈಭವ್ ಅರೋರಾ ತಲಾ ಎರಡು ವಿಕೆಟ್ ಪಡೆದರೆ, ಸ್ಪೆನ್ಸರ್ ಜಾನ್ಸನ್ ಒಂದು ವಿಕೆಟ್ ಪಡೆದರು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner