ರೆಹಮಾನುಲ್ಲಾ ಗುರ್ಬಾಜ್, ಫಾರೂಕಿ ಮಿಂಚು; ಉಗಾಂಡ ಬೇಟೆಯಾಡಿ 125 ರನ್ನುಗಳ ಗೆಲುವು ಸಾಧಿಸಿದ ಅಫ್ಘಾನಿಸ್ತಾನ
ICC T20 World Cup Afghanistan vs Uganda: ಟಿ20 ವಿಶ್ವಕಪ್ ಟೂರ್ನಿಯ 5ನೇ ಪಂದ್ಯದಲ್ಲಿ ಉಗಾಂಡ ತಂಡದ ವಿರುದ್ಧ ಅಫ್ಘಾನಿಸ್ತಾನ 125 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಬಹುನಿರೀಕ್ಷಿತ ಟಿ20 ವಿಶ್ವಕಪ್ 2024 ಟೂರ್ನಿಯ 5ನೇ ಪಂದ್ಯದಲ್ಲಿ ಸಿ ಗುಂಪಿನ ಕ್ರಿಕೆಟ್ ಶಿಶು ಉಗಾಂಡ ವಿರುದ್ಧ ಅಫ್ಘಾನಿಸ್ತಾನ ಭರ್ಜರಿ ಗೆಲುವು ಸಾಧಿಸಿದೆ. ರೆಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಝದ್ರಾನ್ ಅವರ ಆಕ್ರಮಣಕಾರಿ ಅರ್ಧಶತಕ ಮತ್ತು ಫಜಲ್ಹಕ್ ಫಾರೂಕಿ ಅವರ ಭರ್ಜರಿ ಬೌಲಿಂಗ್ ನೆರವಿನಿಂದ ಉಗಾಂಡ ಎದುರು ಅಫ್ಘನ್ 125 ರನ್ಗಳ ದಿಗ್ವಿಜಯ ದಾಖಲಿಸಿದೆ.
ಗಯಾನಾದ ಪ್ರಾವಿಡೆನ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯವು ಏಕಪಕ್ಷೀಯವಾಗಿ ನಡೆಯಿತು. ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘನ್, ಸಖತ್ ಜೋಷ್ನಲ್ಲಿ ಬ್ಯಾಟಿಂಗ್ ನಡೆಸಿತು. ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 183 ರನ್ ಪೇರಿಸಿತು. ಆದರೆ ಈ ಗುರಿ ಬೆನ್ನಟ್ಟಿದ ಉಗಾಂಡ ನಿರೀಕ್ಷಿತ ಸೋಲು ಕಂಡಿತು. ಫಜಲ್ಹಕ್ ಫಾಲೂಕಿ ಅವರಿಗೆ ಉಗಾಂಡ 58 ರನ್ಗಳಿಗೆ ಆಲೌಟ್ ಆಯಿತು.
ಫಜಲ್ಹಕ್ ಫಾಲೂಕಿ ಬೌಲಿಂಗ್ ದರ್ಬಾರ್
ಪ್ರತಿಷ್ಠಿತ ಟೂರ್ನಿಯಲ್ಲಿ ಉಗಾಂಡ ಸೋಲಿನ ಆರಂಭ ಪಡೆಯಿತು. ಅದರಲ್ಲೂ ವೇಗಿ ಫಜಲ್ಹಕ್ ಫಾರೂಕಿ ಅವರ ಬೆಂಕಿ-ಬಿರುಗಾಳಿ ಬೌಲಿಂಗ್ ದಾಳಿಗೆ ಕ್ರಿಕೆಟ್ ಶಿಶು ಎದುರಾಳಿ ತತ್ತರಿಸಿತು. ನಾಲ್ಕು ಓವರ್ಗಳಲ್ಲಿ ಕೇವಲ 9 ರನ್ ನೀಡಿದ ಫಾರೂಕಿ 5 ವಿಕೆಟ್ ಉರುಳಿಸಿದ್ದಾರೆ. ರಿಯಾಜತ್ ಅಲಿ ಶಾ (11) ಮತ್ತು ರಾಬಿನ್ಸನ್ ಒಬುಯಾ (14) ಇವರು ಮಾತ್ರ ಎರಡಂಕಿಯ ಮೊತ್ತ ದಾಟಿದ್ದಾರೆ.
ರೋನಾಕ್ ಪಟೇಲ್ (4), ರಿಯಾಜತ್ ಅಲಿ ಶಾ (0), ರಾಬಿನ್ಸನ್ ಒಬುಯಾ (14), ಬ್ರಿಯಾನ್ ಮಸಾಬ (0), ಅಲ್ಪೇಶ್ ರಂಜಾನಿ (0) ಅವರನ್ನು ಫಾರೂಕಿ ಔಟ್ ಮಾಡಿದರೆ, ನವೀನ್ ಉಲ್ ಹಕ್ ಮತ್ತು ನಾಯಕ ರಶೀದ್ ಖಾನ್ ತಲಾ 2 ವಿಕೆಟ್ ಉರುಳಿಸಿದ್ದಾರೆ. ಮುಜೀಬ್ ಉರ್ ರೆಹಮಾನ್ 1 ವಿಕೆಟ್ ಕಿತ್ತು ಸಾಥ್ ನೀಡಿದ್ದಾರೆ. ಉಗಾಂಡ ಬ್ಯಾಟರ್ಗಳು ಯಾರೊಬ್ಬರೂ ಪೈಪೋಟಿ ನೀಡಲು ಯತ್ನಿಸಲಿಲ್ಲ.
ಬ್ಯಾಟಿಂಗ್ನಲ್ಲೂ ಅಫ್ಘನ್ ವೈಭವ
ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಅದ್ಭುತ ಆರಂಭ ಪಡೆಯಿತು. ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಝದ್ರಾನ್ ಅವರು ಭರ್ಜರಿ 154 ರನ್ಗಳ ಭದ್ರ ಬುನಾದಿ ಹಾಕಿಕೊಟ್ಟರು. ಜಿದ್ದಿಗೆ ಬಿದ್ದವರಂತೆ ಉಗಾಂಡ ಬೌಲರ್ಗಳ ಮೇಲೆ ಸವಾರಿ ನಡೆಸಿದ ಈ ಜೋಡಿ ತಲಾ ಅರ್ಧಶತಕವನ್ನೂ ಸಿಡಿಸಿದರು. ಮೊದಲ ವಿಕೆಟ್ಗೆ 87 ಎಸೆತಗಳಲ್ಲಿ 157 ರನ್ ಪೇರಿಸಿದರು.
ಗುರ್ಬಾಜ್ 45 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 4 ಬೌಂಡರಿಗಳ ಸಹಿತ 76 ರನ್ ಬಾರಿಸಿದರೆ, ಇಬ್ರಾಹಿಂ ಝದ್ರಾನ್ ಅವರು 46 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸಹತ 70 ರನ್ ಗಳಿಸಿದ್ದಾರೆ. ನಜೀಬುಲ್ಲಾ 2, ಮೊಹಮ್ಮದ್ ನಬಿ 14, ಅಜ್ಮತುಲ್ಲಾ 5, ಗುಲ್ಬದೀನ್ ನೈಬ್, ರಶೀದ್ ಖಾನ್ 2 ರನ್ ಗಳಿಸಿದರು. ಕಾಸ್ಮಾಸ್ ಕ್ಯೆವುಟಾ, ಬ್ರಿಯಾನ್ ಮಸಾಬ ತಲಾ 2 ವಿಕೆಟ್ ಉರುಳಿಸಿ ಮಿಂಚಿದರು.
- ಅಫ್ಘಾನಿಸ್ತಾನ ಮುಂದಿನ ಪಂದ್ಯ - ಜೂನ್ 7ರಂದು ನ್ಯೂಜಿಲೆಂಡ್ ವಿರುದ್ಧ
- ಉಗಾಂಡ ಮುಂದಿನ ಪಂದ್ಯ - ಜೂನ್ 5ರಂದು ಪಪುವಾ ನ್ಯೂಗಿನಿಯಾ ವಿರುದ್ಧ
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ