ಐಪಿಎಲ್ ಪ್ಲೇಆಫ್ ಆಡಲೆಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿ ಬಿಟ್ಟುಬಂದ ಕೆಕೆಆರ್ ಆಟಗಾರ
Rahmanullah Gurbaz: ತನ್ನ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಪ್ಲೇಆಫ್ ಪಂದ್ಯಗಳಿಗಾಗಿ ರಹಮಾನುಲ್ಲಾ ಗುರ್ಬಾಜ್ ಕೋಲ್ಕತ್ತಾ ನೈಟ್ ರೈಡರ್ ಶಿಬಿರ ಸೇರಿದ್ದಾರೆ.

ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತನ್ನ ತಾಯಿಯನ್ನು ಬಿಟ್ಟು ಐಪಿಎಲ್ ಆಡಲು ಬಂದಿರುವುದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಬಹಿರಂಗಪಡಿಸಿದ್ದಾರೆ. ಐಪಿಎಲ್ ಪ್ಲೇಆಫ್ಗೂ ಮುನ್ನ ಇಂಗ್ಲೆಂಡ್ ಸ್ಫೋಟಕ ಆಟಗಾರ ಫಿಲ್ ಸಾಲ್ಟ್ ತವರಿಗೆ ಮರಳಿದ ಕಾರಣ ತನ್ನ ತಾಯಿಯನ್ನು ನೋಡಿಕೊಳ್ಳಲು ತವರಿಗೆ ಮರಳಿದ್ದ ಅಫ್ಘಾನಿಸ್ತಾನ ಕ್ರಿಕೆಟಿಗ ಗುರ್ಬಾಜ್ ಅವರಿಗೆ ಕೆಕೆಆರ್ ಮ್ಯಾನೇಜ್ಮೆಂಟ್ ಕರೆ ಮಾಡಿ ಮತ್ತೆ ಕರೆಸಿಕೊಂಡಿದೆ.
2024ರ ಐಪಿಎಲ್ನಲ್ಲಿ ಗುರ್ಬಾಜ್ ತಂಡದಲ್ಲಿದ್ದರೂ ಆಡುವ 11ರ ಬಳಗದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಇದರ ಮಧ್ಯೆ ತನ್ನ ತಾಯಿಗೆ ಆರೋಗ್ಯ ಹದಗೆಟ್ಟ ಕಾರಣ ಅರ್ಧದಲ್ಲೇ ಶ್ರೀಮಂತ ಲೀಗ್ ತೊರೆದು ಅಫ್ಘಾನಿಸ್ತಾನಕ್ಕೆ ತೆರಳಿದ್ದರು. ಆದರೆ ಫಿಲ್ ಸಾಲ್ಟ್ ಪ್ಲೇಆಫ್ಗೂ ರಾಷ್ಟ್ರೀಯ ಕರ್ತವ್ಯಕ್ಕಾಗಿ ಇಂಗ್ಲೆಂಡ್ಗೆ ಹೋದ ಕಾರಣ ಗುರ್ಬಾಜ್ಗೆ ಮತ್ತೆ ಬುಲಾವ್ ಬಂದಿತು. ಹೀಗಾಗಿ ತನ್ನ ತಾಯಿಯ ಆಶೀರ್ವಾದ ಪಡೆದು ಐಪಿಎಲ್ ಪ್ಲೇಆಫ್ಸ್ನಲ್ಲಿ ಭಾಗವಹಿಸಲು ಭಾರತಕ್ಕೆ ಬಂದರು. ಹೀಗಂತ ಸ್ವತಃ ಅವರೇ ಹೇಳಿದ್ದಾರೆ.
ರಹಮಾನುಲ್ಲಾ ಗುರ್ಬಾಜ್ ಹೇಳಿದ್ದೇನು?
'ನನ್ನ ತಾಯಿ ಇನ್ನೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನಾನು ಅಲ್ಲಿಗೆ ಹೋಗಿದ್ದೆ (ಅಫ್ಘಾನಿಸ್ತಾನದಲ್ಲಿರುವ ಮನೆಗೆ). ಫಿಲ್ ಸಾಲ್ಟ್ ನಿರ್ಗಮಿಸಿದ ನಂತರ ನನಗೆ ಕೆಕೆಆರ್ನಿಂದ ಕರೆ ಬಂತು. ಅವರು ನನಗೆ ಕರೆ ಮಾಡಿ, ‘ಗುರ್ಬಾಜ್, ನಮಗೆ ನೀವು ಬೇಕು ಎಂದು ಕೇಳಿತ್ತು. ಕೆಕೆಆರ್ ಕೂಡ ನನ್ನ ಕುಟುಂಬ ಇದ್ದಂತೆ, ಮರು ಮಾತನಾಡದೆ ನಾನು ಬರುತ್ತೇನೆ ಎಂದು ಹೇಳಿದೆ. ನನ್ನ ತಾಯಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ, ನಾನು ಪ್ರತಿದಿನ ಆಕೆಯೊಂದಿಗೆ ಮಾತನಾಡುತ್ತೇನೆ’ ಎಂದು ಹೇಳಿದ್ದಾರೆ.
ಕೆಆರ್ ಕೂಡ ನನ್ನ ಕುಟುಂಬ. ಅವರಿಗೆ ಇಲ್ಲಿ ನನ್ನ ಅಗತ್ಯವಿತ್ತು. ಆದ್ದರಿಂದ ನಾನು ಅಫ್ಘಾನಿಸ್ತಾನದಿಂದ ಭಾರತಕ್ಕೆ ಹಿಂತಿರುಗಿದೆ. ಇದು ಕಠಿಣ ನಿರ್ಧಾರ. ಆದರೆ ನಾನು ನಿರ್ವಹಿಸಬೇಕಾಗಿದೆ ಎಂದು ಗುರ್ಬಾಜ್ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಐಪಿಎಲ್ 2024ರ ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಕ್ವಾಲಿಫೈಯರ್ 1ರಲ್ಲಿ ಗೆದ್ದು ಕೆಕೆಆರ್ ಫೈನಲ್ಗೇರಿತ್ತು.
ಫೈನಲ್ನಲ್ಲಿ ಕೆಕೆಆರ್ vs ಎಸ್ಆರ್ಹೆಚ್ ಮುಖಾಮುಖಿ
ಇದೀಗ ಎರಡನೇ ಕ್ವಾಲಿಫೈಯರ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿದ ಸನ್ರೈಸರ್ಸ್ ಹೈದರಾಬಾದ್ ಮೂರನೇ ಫೈನಲ್ಗೇರಿದೆ. ಮೇ 26ರ ಭಾನುವಾರ ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಫೈನಲ್ನಲ್ಲಿ ಕೆಕೆಆರ್ ಮತ್ತು ಎಸ್ಆರ್ಹೆಚ್ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಇದೀಗ ಫೈನಲ್ನಲ್ಲಿ ಗುರ್ಬಾಜ್ ಮಿಂಚಿನ ಪ್ರದರ್ಶನ ನೀಡುವ ಮೂಲಕ ಕೆಕೆಆರ್ಗೆ ಮೂರನೇ ಟ್ರೋಫಿ ಗೆದ್ದುಕೊಡುವ ಇರಾದೆಯಲ್ಲಿದ್ದಾರೆ.
ಒಬ್ಬ ಕ್ರಿಕೆಟಿಗನಾಗಿ, ಏನು ಮಾಡಬೇಕೆಂದು ನಿಮಗೆ ತಿಳಿದಿದೆ. ಲೀಗ್ ಕ್ರಿಕೆಟ್ನಲ್ಲಿ ಕೇವಲ 4 ವಿದೇಶಿ ಆಟಗಾರರು ಮಾತ್ರ ಇಲೆವೆನ್ನಲ್ಲಿ ಆಡಬಹುದು. ನಿಮಗೆ ಅವಕಾಶ ಸಿಕ್ಕರೆ ಅದನ್ನು ಉಪಯೋಗಿಸಿಕೊಳ್ಳಬೇಕು. ನಿಮಗೆ ಅವಕಾಶ ಸಿಗದಿದ್ದರೆ, ಚೆನ್ನಾಗಿ ತಯಾರಿ ನಡೆಸಬೇಕು ಮತ್ತು ಸಿದ್ಧರಾಗಿರಬೇಕು. ನಿಮಗೆ ಅವಕಾಶ ಸಿಕ್ಕಾಗಲೆಲ್ಲಾ, ತಮ್ಮ ಸಾಮರ್ಥ್ಯ ನಿರೂಪಿಸಲು ಸಿದ್ಧರಾಗಿರಬೇಕು ಎಂದು ಗುರ್ಬಾಜ್ ಹೇಳಿದ್ದಾರೆ. ಫೈನಲ್ನಲ್ಲಿ ಎಸ್ಆರ್ಹೆಚ್ ತಂಡವನ್ನು ಕೆಕೆಆರ್ ತಂಡವನ್ನು ಮಣಿಸಿದರೆ ಮೂರನೇ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿದಂತಾಗುತ್ತದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
