ರೋಹಿತ್-ಕೊಹ್ಲಿಗೆ ರೆಸ್ಟ್​ ನೀಡಲು ಇದುವೇ ಕಾರಣ; ಅಶ್ವಿನ್ ಆಯ್ಕೆಗೂ ಮಾಹಿತಿ ನೀಡಿದ ದ್ರಾವಿಡ್​
ಕನ್ನಡ ಸುದ್ದಿ  /  ಕ್ರಿಕೆಟ್  /  ರೋಹಿತ್-ಕೊಹ್ಲಿಗೆ ರೆಸ್ಟ್​ ನೀಡಲು ಇದುವೇ ಕಾರಣ; ಅಶ್ವಿನ್ ಆಯ್ಕೆಗೂ ಮಾಹಿತಿ ನೀಡಿದ ದ್ರಾವಿಡ್​

ರೋಹಿತ್-ಕೊಹ್ಲಿಗೆ ರೆಸ್ಟ್​ ನೀಡಲು ಇದುವೇ ಕಾರಣ; ಅಶ್ವಿನ್ ಆಯ್ಕೆಗೂ ಮಾಹಿತಿ ನೀಡಿದ ದ್ರಾವಿಡ್​

Rahul Dravid on Rohit Sharma: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಮೊದಲ ಎರಡು ಏಕದಿನ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. 3ನೇ ಪಂದ್ಯಕ್ಕೆ ಮರಳಿದ್ದಾರೆ.

ಭಾರತ ಕ್ರಿಕೆಟ್ ತಂಡದ ಹೆಡ್​​ಕೋಚ್​ ರಾಹುಲ್ ದ್ರಾವಿಡ್.
ಭಾರತ ಕ್ರಿಕೆಟ್ ತಂಡದ ಹೆಡ್​​ಕೋಚ್​ ರಾಹುಲ್ ದ್ರಾವಿಡ್. (PTI)

ಆಸ್ಟ್ರೇಲಿಯಾ ವಿರುದ್ಧದ (India vs Australia) ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ (Rohit Sharma and Virat Kohl) ವಿಶ್ರಾಂತಿ ನೀಡಿರುವುದೇಕೆ ಎಂಬ ಕುರಿತು ಟೀಮ್ ಇಂಡಿಯಾ ಹೆಡ್​ಕೋಚ್ ರಾಹುಲ್ ದ್ರಾವಿಡ್ (Rahul Dravid) ಸ್ಪಷ್ಟಪಡಿಸಿದ್ದಾರೆ. ಇಂದು (ಸೆಪ್ಟೆಂಬರ್ 22) ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ ದ್ರಾವಿಡ್, ಇಬ್ಬರಿಗೂ ವಿಶ್ರಾಂತಿ ನೀಡಿರುವುದೇಕೆ ಮತ್ತು ಆರ್​​ ಅಶ್ವಿನ್ ಅವರನ್ನು ಮರಳಿ ತಂಡಕ್ಕೆ ತೆಗೆದುಕೊಂಡಿದ್ದೇಕೆ ಎಂಬ ಕಾರಣ ವಿವರಿಸಿದ್ದಾರೆ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಏಕದಿನ ವಿಶ್ವಕಪ್‌ಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಫ್ರೆಶ್ ಆಗಿರಬೇಕು ಎಂದು ಟೀಮ್ ಮ್ಯಾನೇಜ್​ಮೆಂಟ್ ಭಾವಿಸಿದೆ. ಅದಕ್ಕಾಗಿಯೇ ನಾವು ಮೊದಲ ಎರಡು ಏಕದಿನ ಪಂದ್ಯಗಳಿಗೆ ಅವರಿಗೆ ವಿಶ್ರಾಂತಿ ನೀಡಿದ್ದೇವೆ ಎಂದು ದ್ರಾವಿಡ್ ಮಾಹಿತಿ ನೀಡಿದರು. ಇವರಿಬ್ಬರೂ ಮೂರನೇ ಏಕದಿನ ಪಂದ್ಯಕ್ಕೆ ತಂಡಕ್ಕೆ ಮರಳಲಿದ್ದಾರೆ. ಆ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಪೂರ್ಣ ವಿಶ್ವಕಪ್ ತಂಡದೊಂದಿಗೆ ಆಡಲಿದೆ. ಆ ಪಂದ್ಯಕ್ಕೆ 15 ಆಟಗಾರರ ಜೊತೆಗೆ ಇನ್ನೂ ಇಬ್ಬರನ್ನು ಆಯ್ಕೆ ಮಾಡಲಾಯಿತು.

ಅಶ್ವಿನ್ ಆಯ್ಕೆ ಯಾಕೆ?

ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸುಮಾರು 20 ತಿಂಗಳ ನಂತರ ಏಕದಿನ ತಂಡಕ್ಕೆ ಮರಳುತ್ತಿದ್ದು, ಅದು ಕೂಡ ಏಕಾಏಕಿ ವಿಶ್ವಕಪ್‌ಗೂ ಮುನ್ನವೇ ಏಕದಿನ ತಂಡಕ್ಕೆ ಮರಳುತ್ತಿರುವ ಬಗ್ಗೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ದ್ರಾವಿಡ್ ಕೂಡ ಪ್ರತಿಕ್ರಿಯಿಸಿದ್ದಾರೆ. ಅಶ್ವಿನ್ ಅವರ ಅನುಭವ ನಮಗೆ ಸಹಾಯ ಮಾಡುತ್ತದೆ. ಅವರು 8 ನೇ ಕ್ರಮಾಂಕದಲ್ಲಿಯೂ ಬ್ಯಾಟಿಂಗ್ ಮಾಡುತ್ತಾರೆ. ಯಾವುದೇ ಗಾಯದ ಸಮಸ್ಯೆಯ ಸಂದರ್ಭದಲ್ಲಿ ನಾವು ಅಶ್ವಿನ್ ಅವರನ್ನು ತೆಗೆದುಕೊಳ್ಳಲು ಯೋಜಿಸುತ್ತಿದ್ದೇವೆ ಎಂದು ದ್ರಾವಿಡ್ ಸ್ಪಷ್ಟಪಡಿಸಿದರು. ಸದ್ಯ ಅಕ್ಷರ್ ಪಟೇಲ್​ ಇಂಜುರಿಯಾಗಿದ್ದು, ರಿಕವರ್​ ಆಗದೇ ಇದ್ದರೆ ಅಶ್ವಿನ್​ ವಿಶ್ವಕಪ್ ಪ್ರಧಾನ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ.

ಸೂರ್ಯನ ಬೆಂಬಲಕ್ಕೆ ನಿಂತ ದ್ರಾವಿಡ್​

ಸತತ ಕಳಪೆ ಪ್ರದರ್ಶನ ನೀಡುತ್ತಿರುವ ಸೂರ್ಯಕುಮಾರ್​ ಅವರನ್ನು (Suryakumar Yadav) ಬೆಂಬಲಿಸಿದ ದ್ರಾವಿಡ್, ಮುಂಬರುವ 2 ಪಂದ್ಯಗಳಲ್ಲೂ ಕಣಕ್ಕಿಳಿಸುವುದಾಗಿ ಹೇಳಿದ್ದಾರೆ. ನಾವು ಸೂರ್ಯಕುಮಾರ್​​ರನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಅವರು ಏಕದಿನ ಪಂದ್ಯಗಳಲ್ಲಿಯೂ ಮಿಂಚುತ್ತಾರೆ. ಅವರಿಗೆ ಮೊದಲ 2 ಏಕದಿನ ಪಂದ್ಯಗಳಲ್ಲಿ ಆ ಅವಕಾಶ ಸಿಗುತ್ತದೆ ಎಂದು ದ್ರಾವಿಡ್ ಹೇಳಿದರು. ಸದ್ಯ ಸೂರ್ಯ ಸತತ 19 ಪಂದ್ಯಗಳಿಂದ ವೈಫಲ್ಯ ಅನುಭವಿಸುತ್ತಿದ್ದಾರೆ. ಇದರ ನಡುವೆಯೂ ಏಕದಿನ ವಿಶ್ವಕಪ್​ಗೆ ಆಯ್ಕೆ ಮಾಡಲಾಗಿದೆ. ಇದು ಸಾಕಷ್ಟು ಟೀಕೆಗೂ ಕಾರಣವಾಗಿದೆ. ಈ ಬಗ್ಗೆ ಈಗಲೂ ಚರ್ಚೆ ನಡೆಯುತ್ತಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯ ಇಂದು ಮೊಹಾಲಿಯಲ್ಲಿ ನಡೆಯಲಿದೆ. ಅತ್ತ ಆಸ್ಟ್ರೇಲಿಯಾ ತಂಡದಲ್ಲೂ ಗ್ಲೇನ್​ ಮ್ಯಾಕ್ಸ್​ವೆಲ್ ಮತ್ತು ಮಿಚೆಲ್ ಸ್ಟಾರ್ಕ್​ ಇಲ್ಲದೆ ಕಣಕ್ಕಿಳಿಯಲು ಸಜ್ಜಾಗಿದೆ. ಏಷ್ಯಾಕಪ್ ಗೆದ್ದಿರುವ ವಿಶ್ವಾಸದಲ್ಲಿರುವ ಭಾರತ ತಂಡದ ನಾಲ್ವರು ಪ್ರಮುಖ ಆಟಗಾರರು ಇಲ್ಲದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಹೇಗೆ ಎದುರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

Whats_app_banner