ಗಾಯಗೊಂಡರೂ ಬದ್ಧತೆ ಮರೆಯದ ರಾಹುಲ್ ದ್ರಾವಿಡ್; ಕ್ರಚರ್ಸ್ ನೆರವಿನಿಂದ ಕುಂಟುತ್ತಲೇ ಆರ್​​ಆರ್​ ಕ್ಯಾಂಪ್ ಸೇರಿದ ಕೋಚ್
ಕನ್ನಡ ಸುದ್ದಿ  /  ಕ್ರಿಕೆಟ್  /  ಗಾಯಗೊಂಡರೂ ಬದ್ಧತೆ ಮರೆಯದ ರಾಹುಲ್ ದ್ರಾವಿಡ್; ಕ್ರಚರ್ಸ್ ನೆರವಿನಿಂದ ಕುಂಟುತ್ತಲೇ ಆರ್​​ಆರ್​ ಕ್ಯಾಂಪ್ ಸೇರಿದ ಕೋಚ್

ಗಾಯಗೊಂಡರೂ ಬದ್ಧತೆ ಮರೆಯದ ರಾಹುಲ್ ದ್ರಾವಿಡ್; ಕ್ರಚರ್ಸ್ ನೆರವಿನಿಂದ ಕುಂಟುತ್ತಲೇ ಆರ್​​ಆರ್​ ಕ್ಯಾಂಪ್ ಸೇರಿದ ಕೋಚ್

Rahul Dravid: ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ ಹೆಡ್​ಕೋಚ್ ರಾಹುಲ್ ದ್ರಾವಿಡ್ ಅವರು ಕ್ರಚರ್ಸ್ ಸಹಾಯದಿಂದ ರಾಜಸ್ಥಾನ್ ರಾಯಲ್ಸ್ ಅಭ್ಯಾಸ ಶಿಬಿರ ಸೇರಿದ್ದಾರೆ.

ಗಾಯಗೊಂಡರೂ ಬದ್ಧತೆ ಮರೆಯದ ರಾಹುಲ್ ದ್ರಾವಿಡ್; ಕ್ರಚರ್ಸ್ ನೆರವಿನಿಂದ ಕುಂಟುತ್ತಲೇ ಆರ್​​ಆರ್​ ಕ್ಯಾಂಪ್ ಸೇರಿದ ಕೋಚ್
ಗಾಯಗೊಂಡರೂ ಬದ್ಧತೆ ಮರೆಯದ ರಾಹುಲ್ ದ್ರಾವಿಡ್; ಕ್ರಚರ್ಸ್ ನೆರವಿನಿಂದ ಕುಂಟುತ್ತಲೇ ಆರ್​​ಆರ್​ ಕ್ಯಾಂಪ್ ಸೇರಿದ ಕೋಚ್

2025ರ ಇಂಡಿಯನ್ ಪ್ರೀಮಿಯರ್ ಲೀಗ್​ಗೂ (IPL 2025) ಮುನ್ನ ಭಾರೀ ಆಘಾತಕ್ಕೆ ಒಳಗಾಗಿದ್ದ ರಾಜಸ್ಥಾನ್ ರಾಯಲ್ಸ್ (Rajasthan Royals) ಈಗ ನಿಟ್ಟುಸಿರು ಬಿಟ್ಟಿದೆ. ಹೆಡ್​ಕೋಚ್​ ರಾಹುಲ್ ದ್ರಾವಿಡ್ (Rahul Dravid) ಕಾಲಿಗೆ ಗಾಯಗೊಂಡಿದ್ದರ ಹೊರತಾಗಿಯೂ ಕಾಲಿಗೆ ಫ್ರಾಕ್ಚರ್ ಮತ್ತು ಬ್ಯಾಂಡೇಜ್ ಕಟ್ಟಿಕೊಂಡೇ ಆಟಗಾರರಿಗೆ ತರಬೇತಿ ಶಿಬಿರಕ್ಕೆ ಆಗಮಿಸಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ (Video Viral) ಆಗುತ್ತಿದೆ. ರಾಜಸ್ಥಾನ್ ರಾಯಲ್ಸ್ ತನ್ನ ಅಧಿಕೃತ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದೆ.

ಬೆಂಗಳೂರಿನಲ್ಲಿ ಜರುಗಿದ ಲೋಕಲ್ ಕ್ರಿಕೆಟ್ ಪಂದ್ಯವೊಂದರಲ್ಲಿ ಕಣಕ್ಕಿಳಿದಿದ್ದ ರಾಹುಲ್ ದ್ರಾವಿಡ್ ಕಾಲಿಗೆ ಗಾಯಗೊಂಡಿದ್ದರು. ಎಸ್‌ಎಲ್‌ಎಸ್ ಕ್ರಿಕೆಟ್ ಮೈದಾನದಲ್ಲಿ ಯಂಗ್ ಲಯನ್ಸ್ ಕ್ಲಬ್ ಎದುರಿನ 50 ಓವರ್‌ಗಳ ಪಂದ್ಯದಲ್ಲಿ ದ್ರಾವಿಡ್ ಮತ್ತು ಅವರ ಮಗ ಅನ್ವಯ್ ಅವರು ವಿಜಯ್ ಕ್ರಿಕೆಟ್ ಕ್ಲಬ್ (ಮಾಲೂರು) ಪ್ರತಿನಿಧಿಸಿದ್ದರು. ಈ ಕದನದಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದ್ರಾವಿಡ್, 28 ಎಸೆತಕ್ಕೆ 29 ರನ್ ಗಳಿಸಿದ್ದರು. ಆರು ಬೌಂಡರಿಗಳನ್ನೂ ಸಿಡಿಸಿದ್ದರು. ಅವರ ಮಗ ಅನ್ವಯ್​ 22 ರನ್ ಗಳಿಸಿದರು.

ಈ ಪಂದ್ಯವು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್​ ಗ್ರೂಪ್-3 ಲೀಗ್​​ನ ಸೆಮಿಫೈನಲ್ ಪಂದ್ಯವಾಗಿತ್ತು. ಇನ್ನಿಂಗ್ಸ್​ನ 18ನೇ ಓವರ್​​ನಲ್ಲಿ ದ್ರಾವಿಡ್ ಅವರು ಸಿಂಗಲ್ ಕದಿಯಲು ಪ್ರಯತ್ನಿಸುತ್ತಿದ್ದಾಗ ಸ್ನಾಯು ಸೆಳೆತಕ್ಕೆ ಒಳಗಾದರು. ನಡೆಯಲು ಸಾಧ್ಯವಾಗದ ಮಟ್ಟಿಗೆ ಗಾಯ ಗಂಭೀರವಾಗಿತ್ತು. ಕಾಲಿಗೆ ಬ್ಯಾಂಡೇಜ್ ಹಾಕಲಾಗಿತ್ತು. ಹೀಗಾಗಿ ಈ ಸಲ ರಾಜಸ್ಥಾನ್ ರಾಯಲ್ಸ್​ಗೆ ಕೋಚಿಂಗ್ ನೀಡುವುದು ಅನುಮಾನ ಎಂದು ವರದಿಯಾಗಿತ್ತು. ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೂ ಆತಂಕ ಸೃಷ್ಟಿ ಮಾಡಿತ್ತು. ಇದೀಗ ಆರ್​ಆರ್​ ಅಭ್ಯಾಸದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ದ್ರಾವಿಡ್ ನಡೆಗೆ ಶ್ಲಾಘನೆ

ದ್ರಾವಿಡ್ ಗುಣಮುಖರಾಗುವುದು ಕಷ್ಟ. 2025ರ ಐಪಿಎಲ್​ನಲ್ಲಿ ಆರ್​​ಆರ್​ಗೆ​ ತರಬೇತಿ ಸಿಗುವುದಿಲ್ಲ ಎಂದು ವರದಿಯಾದ ಬೆನ್ನಲ್ಲೇ ಅಚ್ಚರಿ ಎಂಬಂತೆ ದ್ರಾವಿಡ್ ಮೈದಾನಕ್ಕೆ ಆಗಮಿಸಿದ್ದಾರೆ. ಎದ್ದು ನಿಲ್ಲಲೂ ಸಾಧ್ಯವಾಗದೇ ಕ್ರಚಸ್​ ಸಹಾಯದಿಂದ ಮೈದಾನಕ್ಕೆ ಬಂದಿದ್ದಾರೆ. ಅವರ ನಡೆಗೆ ಕ್ರಿಕೆಟ್ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಇದು ಕ್ರಿಕೆಟ್ ಮೇಲಿರುವ ಬದ್ಧತೆಯನ್ನು ತೋರಿಸುತ್ತದೆ ಎಂದು ನೆಟ್ಟಿಗರು ಪ್ರಶಂಶಿಸುತ್ತಿದ್ದಾರೆ.

ವಿಡಿಯೋದಲ್ಲಿ, ದ್ರಾವಿಡ್ ಗಾಲ್ಫ್ ಗಾಡಿಯ ಮೇಲೆ ಕುಳಿತಿರುವುದನ್ನು ಕಾಣಬಹುದು. ಗಾಯದ ನೋವಿದ್ದರೂ ಅವನ ಮುಖದಲ್ಲಿ ನಗು ಹೂವಿನಂತೆ ಅರಳಿತ್ತು. ನಂತರ, ಅವರು ಕೆಳಗಿಳಿದು ಊರುಗೋಲುಗಳ ಸಹಾಯದಿಂದ ನೆಟ್ಸ್​ ಕಡೆಗೆ ಹೋಗುತ್ತಾರೆ. ಪ್ರಾಕ್ಟೀಸ್ ಮಾಡುತ್ತಿದ್ದ ಆಟಗಾರರಿಗೆ ಕೈಕುಲುಕಿದ ಅವರು, ಕುಳಿತೇ ಆಟಗಾರರ ಅಭ್ಯಾಸ ವೀಕ್ಷಿಸುತ್ತಾರೆ ಮತ್ತು ಸಲಹೆ ನೀಡುತ್ತಾರೆ.

ಇದರ ನಂತರ, ರಿಯಾನ್ ಪರಾಗ್ ಅವರೊಂದಿಗೆ ತಮಾಷೆ ಮಾಡುತ್ತಾರೆ. ಪರಾಗ್​ಗೆ ಕೆಲವು ಬ್ಯಾಟಿಂಗ್ ಸಲಹೆಗಳನ್ನೂ ನೀಡುತ್ತಾರೆ. ಯಶಸ್ವಿ ಜೈಸ್ವಾಲ್ ಅವರು ದ್ರಾವಿಡ್ ಅವರೊಂದಿಗೆ ತಮ್ಮ ಬ್ಯಾಟಿಂಗ್ ಬಗ್ಗೆ ಚರ್ಚಿಸುತ್ತಿದ್ದಾರೆ. ಅದೇ ಸಮಯದಲ್ಲಿ, ವೇಗದ ಬೌಲರ್ ತುಷಾರ್ ದೇಶಪಾಂಡೆ ಕೂಡ ಕಾಣಿಸಿಕೊಂಡಿದ್ದಾರೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner