ಭಾರತ ತಂಡಕ್ಕೆ ಎಂಟ್ರಿಕೊಟ್ಟ ರಾಹುಲ್ ದ್ರಾವಿಡ್ ಸುಪುತ್ರ; ತಂದೆಯ ದಿಟ್ಟ ಹೆಜ್ಜೆಗಳನ್ನು ಅನುಸರಿಸಿದ ಮಗ ಸಮಿತ್
Samit Dravid: ಮಹಾರಾಜ ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್ ಪರ ಆಡುತ್ತಿರುವ ಸಮಿತ್ ದ್ರಾವಿಡ್ ಅವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಅವರು ಭಾರತ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯ ಆಡಲಿದ್ದಾರೆ.
ಮಹಾರಾಜ ಟ್ರೋಫಿ (Maharaja Trophy) ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಸಮಿತ್ ದ್ರಾವಿಡ್, ಟೀಮ್ ಇಂಡಿಯಾಗೆ ಕಾಲಿಡಲು ಸಜ್ಜಾಗಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್, ಭಾರತ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದರೊಂದಿಗೆ ದ್ರಾವಿಡ್ ಮಗನ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಆರಂಭವಾಗುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಬಹು ಸ್ವರೂಪದ ಸರಣಿಯ ಮೂಲಕ ಸಮಿತ್ ದ್ರಾವಿಡ್ ನೀಲಿ ಜೆರ್ಸಿ ತೊಟ್ಟು ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ಪುದುಚೇರಿಯಲ್ಲಿ ಸೆಪ್ಟೆಂಬರ್ 21, 23 ಮತ್ತು 26ರಂದು ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಭಾರತ ತಂಡವನ್ನು ಉತ್ತರ ಪ್ರದೇಶದ ಮೊಹಮ್ಮದ್ ಅಮಾನ್ ಮುನ್ನಡೆಸಲಿದ್ದಾರೆ. ಏಕದಿನ ಸರಣಿಯ ಬಳಿಕ ನಾಲ್ಕು ದಿನಗಳ ಎರಡು (ಟೆಸ್ಟ್) ಪಂದ್ಯಗಳು ಚೆನ್ನೈನಲ್ಲಿ ಆರಂಭವಾಗಲಿದೆ. ಮೊದಲು ಪಂದ್ಯವು ಸೆಪ್ಟೆಂಬರ್ 30ರಂದು ಆರಂಭವಾದರೆ, ಎರಡನೇ ಪಂದ್ಯ ಅಕ್ಟೋಬರ್ 7ರಿಂದ 10ರವರೆಗೆ ನಡೆಯಲಿದೆ. ಈ ಸರಣಿಯಲ್ಲಿ ಮಧ್ಯಪ್ರದೇಶದ ಸೋಹಮ್ ಪಟವರ್ಧನ್ ಭಾರತ ಕಿರಿಯರ ತಂಡವನ್ನು ಮುನ್ನಡೆಸಲಿದ್ದಾರೆ.
ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿರುವ ಸಮಿತ್ ದ್ರಾವಿಡ್, ಪ್ರಸ್ತುತ ಕೆಎಸ್‌ಸಿಎ ಮಹಾರಾಜ ಟಿ20 ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯುತ್ತಿದ್ದು, ದ್ರಾವಿಡ್ ಪುತ್ರ ಮೈಸೂರು ವಾರಿಯರ್ಸ್ ಪರ ಆಡುತ್ತಿದ್ದಾರೆ.
ಮಹಾರಾಜ ಟ್ರೋಫಿಯಲ್ಲಿ ಸಮಿತ್ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಆಡಿದ 7 ಇನ್ನಿಂಗ್ಸ್‌ಗಳಲ್ಲಿ 82 ರನ್ ಗಳಿಸಿದ್ದಾರೆ. ಇದರಲ್ಲಿ ಗರಿಷ್ಠ ರನ್ 33. ಪಂದ್ಯಾವಳಿಯಲ್ಲಿ ಇನ್ನೂ ಅವರು ಬೌಲಿಂಗ್ ಮಾಡಿಲ್ಲ.
ಕೂಚ್ ಬೆಹಾರ್ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ
ಆದರೆ, ಈ ವರ್ಷದ ಆರಂಭದಲ್ಲಿ ನಡೆದ ಕೂಚ್ ಬೆಹಾರ್ ಟ್ರೋಫಿಯಲ್ಲಿ ಸಮಿತ್ ಅಮೋಘ ಪ್ರದರ್ಶನ ನೀಡಿದ್ದರು. ಪಂದ್ಯಾವಳಿಯಲ್ಲಿ ಕರ್ನಾಟಕವು ಚೊಚ್ಚಲ ಪ್ರಶಸ್ತಿ ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 18ರ ಹರೆಯದ ಸಮಿತ್, 8 ಪಂದ್ಯಗಳಲ್ಲಿ 362 ರನ್ ಸಿಡಿಸಿದ್ದರು. ಜಮ್ಮು ಮತ್ತು ಕಾಶ್ಮೀರ ವಿರುದ್ಧ 98 ರನ್ ಗಳಿಸಿ ಸ್ವಲ್ಪದರಲ್ಲೇ ಶತಕ ವಂಚಿತರಾಗಿದ್ದರು. ಮುಂಬೈ ವಿರುದ್ಧದ ಫೈನಲ್ ಪಂದ್ಯದಲ್ಲಿ 2 ವಿಕೆಟ್ ಸೇರಿದಂತೆ ಎಂಟು ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಪಡೆದ ಸಮಿತ್, ಬೌಲಿಂಗ್‌ನಲ್ಲಿಯೂ ನಿರ್ಣಾಯಕ ಪಾತ್ರ ವಹಿಸಿದ್ದರು.
ಏಕದಿನ ಸರಣಿಗೆ ಭಾರತ ಅಂಡರ್ 19 ತಂಡ
ರುದ್ರ ಪಟೇಲ್, ಸಾಹಿಲ್ ಪರಖ್, ಕಾರ್ತಿಕೇಯ ಕೆಪಿ, ಮೊಹಮ್ಮದ್ ಅಮಾನ್, ಕಿರಣ್ ಚೋರ್ಮಾಲೆ, ಅಭಿಗ್ಯಾನ್ ಕುಂಡು, ಹರ್ವಂಶ್ ಸಿಂಗ್ ಪಂಗಾಲಿಯಾ, ಸಮಿತ್ ದ್ರಾವಿಡ್, ಯುಧಜಿತ್ ಗುಹಾ, ಸಮರ್ಥ್ ಎನ್, ನಿಖಿಲ್ ಕುಮಾರ್, ಚೇತನ್ ಶರ್ಮಾ, ಹಾರ್ದಿಕ್ ರಾಜ್, ರೋಹಿತ್ ರಾಜವತ್, ಮೊಹಮ್ಮದ್ ಎನಾನ್.
ನಾಲ್ಕು ದಿನಗಳ ಸರಣಿಗೆ ಭಾರತ ಅಂಡರ್ 19 ತಂಡ
ವೈಭವ್ ಸೂರ್ಯವಂಶಿ, ನಿತ್ಯಾ ಪಾಂಡ್ಯ, ವಿಹಾನ್ ಮಲ್ಹೋತ್ರಾ, ಸೋಹಮ್ ಪಟವರ್ಧನ್, ಕಾರ್ತಿಕೇಯ ಕೆಪಿ, ಸಮಿತ್ ದ್ರಾವಿಡ್, ಅಭಿಗ್ಯಾನ್ ಕುಂಡು, ಹರ್ವಂಶ್ ಸಿಂಗ್ ಪಂಗಾಲಿಯಾ, ಚೇತನ್ ಶರ್ಮಾ, ಸಮರ್ಥ್ ಎನ್, ಆದಿತ್ಯ ರಾವತ್, ನಿಖಿಲ್ ಕುಮಾರ್, ಅನ್ಮೋಲ್ಜೀತ್ ಸಿಂಗ್, ಆದಿತ್ಯ ಸಿಂಗ್, ಮೊಹಮ್ಮದ್ ಎನಾನ್.