ಬಿಸಿಸಿಐ ಪ್ರಸ್ತಾಪಕ್ಕೆ ಒಪ್ಪಿಗೆ; ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮುಂದುವರಿಕೆ
Rahul Dravid: ಕೋಚಿಂಗ್ ಅವಧಿಯನ್ನು ವಿಸ್ತರಿಸುವ ಬಿಸಿಸಿಐ ಪ್ರಸ್ತಾಪವನ್ನು ಒಪ್ಪಿಕೊಂಡಿರುವ ದ್ರಾವಿಡ್, ಮೂರೂ ಮಾದರಿಯ ಕ್ರಿಕೆಟ್‌ಗೆ ಭಾರತ ತಂಡದ ಮುಖ್ಯ ತರಬೇತುದಾರರಾಗಿ ಮುಂದುವರೆಯಲಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ (Rahul Dravid) ಮುಂದುವರಿಯಲಿದ್ದಾರೆ. ಕೋಚಿಂಗ್ ಅವಧಿಯನ್ನು ವಿಸ್ತರಿಸುವ ಬಿಸಿಸಿಐ ಪ್ರಸ್ತಾಪವನ್ನು ಒಪ್ಪಿಕೊಂಡಿರುವ ದ್ರಾವಿಡ್, ಮೂರೂ ಮಾದರಿಯ ಕ್ರಿಕೆಟ್‌ಗೆ ತರಬೇತುದಾರರಾಗಿ ಉಳಿಯಲಿದ್ದಾರೆ.
ಸದ್ಯ ವಿಸ್ತರಣೆಯ ಅವಧಿ ಕುರಿತು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಕನಿಷ್ಠ 2024ರ ಜೂನ್‌ನಲ್ಲಿ ನಡೆಯುವ ಟಿ20 ವಿಶ್ವಕಪ್‌ವರೆಗೆ ದ್ರಾವಿಡ್ ಅವರೇ ಮುಖ್ಯ ತರಬೇತುದಾರರಾಗಿ ಮುಂದುವರೆಯುವ ಸಾಧ್ಯತೆ ಇದೆ. ಈ ಕುರಿತು ಖುದ್ದು ಬಿಸಿಸಿಐ ಪ್ರಕಟಣೆ ಹೊರಡಿಸಿದೆ.
“ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಟೀಮ್ ಇಂಡಿಯಾದ ಇತರ ಸಿಬ್ಬಂದಿ ಜೊತೆಗಿನ ಒಪ್ಪಂದವನ್ನು ವಿಸ್ತರಿಸಿದೆ. ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಏಕದಿನ ವಿಶ್ವಕಪ್ 2023ರ ನಂತರ ಅವರ ಒಪ್ಪಂದದ ಅವಧಿಯು ಅಂತ್ಯಗೊಂಡಿತ್ತು. ಆ ಬಳಿಕ ರಾಹುಲ್ ದ್ರಾವಿಡ್ ಅವರೊಂದಿಗೆ ನಡೆದ ಚರ್ಚೆಯ ಬಳಿಕ, ಅಧಿಕಾರಾವಧಿಯನ್ನು ಮುಂದುವರಿಸಲು ಸರ್ವಾನುಮತದಿಂದ ಒಪ್ಪಲಾಗಿದೆ” ಎಂದು ಬಿಸಿಸಿಐ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಅಗ್ರ ಶ್ರೇಯಾಂಕ ಸಿಕ್ಕರೂ ಐಸಿಸಿ ಟ್ರೋಫಿ ಒಲಿಯಲಿಲ್ಲ
ದ್ರಾವಿಡ್ ಅವರು 2021ರ ನವೆಂಬರ್ ತಿಂಗಳಲ್ಲಿ ಎರಡು ವರ್ಷಗಳ ಅವಧಿಗೆ ಮುಖ್ಯ ಕೋಚ್ ಆಗಿ ನೇಮಕಗೊಂಡರು. ಈ ತಿಂಗಳ ಆರಂಭದಲ್ಲಿ ಮುಗಿದ 2023ರ ಏಕದಿನ ವಿಶ್ವಕಪ್ ಅವಧಿಗೆ ಆ ಒಪ್ಪಂದದ ಅವಧಿ ಕೊನೆಗೊಂಡಿತು. ದ್ರಾವಿಡ್ ಅವರ ತರಬೇತಿ ಅವಧಿಯಲ್ಲಿ ಭಾರತ ಕ್ರಿಕೆಟ್ ತಂಡವು ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಆದರೆ ಯಾವುದೇ ಐಸಿಸಿ ಟ್ರೋಫಿ ಗೆಲುವು ಸಾಧ್ಯವಾಗಿಲ್ಲ.
ಇದನ್ನೂ ಓದಿ | ಶತಕದೊಂದಿಗೆ ಹಲವು ದಾಖಲೆ ಬರೆದ ಗಾಯಕ್ವಾಡ್; ಆಸೀಸ್ ವಿರುದ್ಧ ಈ ಸಾಧನೆ ಮಾಡಿದ ಮೊದಲ ಭಾರತೀಯ
ಮುಖ್ಯ ತರಬೇತುದಾರರಾಗಿ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ದ್ರಾವಿಡ್ ಅವರ ಮೊದಲ ನಿಯೋಜನೆಯು, ದಕ್ಷಿಣ ಆಫ್ರಿಕಾ ಪ್ರವಾಸವಾಗಿದೆ. ಡಿಸೆಂಬರ್ 10ರಿಂದ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳಲ್ಲಿ ಆಡಲು ಭಾರತ ತಂಡವು ದಕ್ಷಿಣ ಆಫ್ರಿಕಾ ಪ್ರವಾಸ ಮಾಡಲಿದೆ. ಆ ಬಳಿಕ ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ. ಮುಂದಿನ ವರ್ಷದ ಜೂನ್ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಭಾರತವು ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್‌ಗಳ ಸರಣಿಯಲ್ಲಿ ಆಡಲಿದೆ.
ಇದನ್ನೂ ಓದಿ | ಟೀಮ್ ಇಂಡಿಯಾ ಕೋಚಿಂಗ್ ಆಫರ್ ತಿರಸ್ಕರಿಸಿದ ನೆಹ್ರಾ; ಮತ್ತೆ ದ್ರಾವಿಡ್ ಕಡೆ ಮುಖ ಮಾಡಿದ ಬಿಸಿಸಿಐ
ದ್ರಾವಿಡ್ ಅವರ ಕೋಚಿಂಗ್ ಅವಧಿ ಮುಕ್ತಾಯಗೊಂಡ ಬೆನ್ನಲ್ಲೇ, ಭಾರತ ಕ್ರಿಕೆಟ್ ತಂಡದ ಮುಂದಿನ ಕೋಚ್ ಆಗುವಂತೆ ಮಾಜಿ ವೇಗಿ ಆಶಿಶ್ ನೆಹ್ರಾ ಅವರಿಗೆ ಬಿಸಿಸಿಐ ಆಫರ್ ನೀಡಿತ್ತು. ಆದರೆ ಆ ಪ್ರಸ್ತಾಪವನ್ನು ನೆಹ್ರಾ ತಿರಸ್ಕರಿಸಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ದ್ರಾವಿಡ್ ಅವರನ್ನೇ ಮುಂದುವರೆಸಲಾಗಿದೆ.