ಭಾರತ vs ಆಸ್ಟ್ರೇಲಿಯಾ 3ನೇ ಟೆಸ್ಟ್ನ ಮೊದಲ ದಿನ ಮಳೆಗೆ ಆಹುತಿ; 2ನೇ ದಿನದ ಹವಾಮಾನ ವರದಿ ಹೇಗಿದೆ?
India vs Australia 3rd Test: ಬ್ರಿಸ್ಬೇನ್ನ ಗಬ್ಬಾ ಮೈದಾನದಲ್ಲಿ ನಡೆಯುತ್ತಿರುವ ಭಾರತ vs ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನ ಮಳೆಯಿಂದಾಗಿ ರದ್ದಾಗಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನ ಮಳೆಯ ಕಾಟದಿಂದ ರದ್ದಾಗಿದೆ. ಬ್ರಿಸ್ಬೇನ್ನ ಗಬ್ಬಾ ಮೈದಾನದಲ್ಲಿ ನಡೆಯುತ್ತಿದೆ. ಆದರೆ ಬಿಟ್ಟೂ ಬಿಡದೆ ಮಳೆ ಸುರಿದ ಕಾರಣ ಪಂದ್ಯದ ಮೊದಲ ದಿನ ವಾಶ್ಔಟ್ ಆಗಿದೆ. ನಿರ್ಣಾಯಕ ಪಂದ್ಯವನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಇಂಡೋ-ಆಸೀಸ್ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ. ಟಾಸ್ ಪ್ರಕ್ರಿಯೆ ಆರಂಭವಾಗಿ, ಕೆಲವು ಓವರ್ಗಳ ತನಕ ಸುಮ್ಮನಿದ್ದ ವರುಣ 13ನೇ ಓವರ್ನ 2ನೇ ಎಸೆತದ ನಂತರ ಆರಂಭವಾಗಿತ್ತು.
ಭಾರತೀಯ ಕಾಲಮಾನದಂತೆ ಬೆಳಿಗ್ಗೆ 5.50ಕ್ಕೆ ಪಂದ್ಯ ಆರಂಭವಾಯಿತು. ಮೊದಲ ಸೆಷನ್ನಲ್ಲಿ ಕೇವಲ 13.2 ಓವರ್ಗಳನ್ನು ಆಡಲಾಗಿದೆ. ಇದರ ನಡುವೆ ಎರಡು ಬಾರಿ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಧಾರಾಕಾರಣ ಮಳೆಯ ಕಾರಣ ಪಂದ್ಯವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಇದರಿಂದ ಮೊದಲ ಸೆಷನ್ ಆಹುತಿಯಾಯಿತು. ಭೋಜನ ವಿರಾಮದ ವೇಳೆ ಜೋರಾಗಿ ಸುರಿಯುತ್ತಿದ್ದ ಮಳೆ ನಿಂತು ಪಂದ್ಯ ಆರಂಭವಾಗುವ ಭರವಸೆ ಮೂಡಿಸಿತ್ತು.
ಆದರೆ ಎರಡನೇ ಸೆಷನ್ಗೂ ವರುಣ ಕೃಪೆ ತೋರಲಿಲ್ಲ. ಹೀಗಾಗಿ 10.50ರಿಂದ ಆರಂಭವಾದ ಮೂರನೇ ಸೆಷನ್ನಲ್ಲಾದರೂ ಮಳೆ ಬಿಡುವು ಕೊಟ್ಟರೆ 1.50 ರೊಳಗೆ ಪಂದ್ಯ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಮಳೆ ಒಂದು ಕ್ಷಣವೂ ಬಿಡುವು ತೋರಲಿಲ್ಲ. ಪರಿಣಾಮ ಪಂದ್ಯದ ಮೊದಲ ದಿನವನ್ನು ರದ್ದುಗೊಳಿಸಲು ಅಂಪೈರ್ಗಳು ತೀರ್ಮಾನ ಕೈಗೊಂಡರು. ಗಬ್ಬಾ ಮೈದಾನದ ತುಂಬಾ ನೀರು ನಿಂತಿದ್ದು, ಮಳೆ ನಿಂತರೂ ನೀರು ಒಣಗಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ ರದ್ದು ಮಾಡಲು ರದ್ದುಗೊಳಿಸಲಾಯಿತು.
ಸ್ಕೋರ್ ವಿವರ
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಮೊದಲ ಸೆಷನ್ನ ಆರಂಭದಲ್ಲಿ 13.2 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದೆ. ನಾಥನ್ ಮೆಕ್‌ಸ್ವೀನಿ 4 ರನ್, ಉಸ್ಮಾನ್ ಖವಾಜ 19 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.
ನಾಳೆಯೂ ಇರಲಿದೆ ಮಳೆಯ ಆರ್ಭಟ
ಮೊದಲ ದಿನ ಮಳೆಗೆ ಆಹುತಿಯಾಗಿದೆ. ಇದೀಗ ಎರಡನೇ ದಿನವೂ ಮಳೆ ಕಾಟ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 2ನೇ ದಿನ ಮಾತ್ರವಲ್ಲ, ಮೂರನೇ ದಿನವೂ ವರುಣ ಆರ್ಭಟಿಸಲಿದ್ದಾರೆ. 2ನೇ ದಿನ ಶೇಕಡಾ 59 ರಷ್ಟು ಮಳೆ, 3ನೇ ದಿನ ಶೇಕಡಾ 60ರಷ್ಟು ಮಳೆಯಾಗುವ ನಿರೀಕ್ಷೆ ಇದೆ. ದಿನವಿಡೀ ಮೋಡ ಕವಿದ ಮತ್ತು ಆರ್ದ್ರ ವಾತಾವರಣ ಇರಲಿದೆ. ಕೊನೆಯ ಎರಡು ದಿನಗಳು ಡಿಸೆಂಬರ್ 17 ಮತ್ತು 18ರಂದು ಮಳೆಯ ಪ್ರಮಾಣ ಕಡಿಮೆ ಇರಲಿದೆ. ಆಗಾಗ್ಗೆ ಬಿಸಿಲು ಸಹ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ತಿಳಿಸಿದೆ.
ಭಾರತ ತಂಡದಲ್ಲಿ ಎರಡು ಬದಲಾವಣೆ
ಮೂರನೇ ಟೆಸ್ಟ್ ಪಂದ್ಯಕ್ಕೆ ಮಹತ್ವದ ಎರಡು ಬದಲಾವಣೆಯಾಗಿದೆ. ಹರ್ಷಿತ್ ರಾಣಾ ಮತ್ತು ಆರ್ ಅಶ್ವಿನ್ ಅವರನ್ನು ಕೈಬಿಟ್ಟು ಆಕಾಶ್ ದೀಪ್ ಮತ್ತು ರವೀಂದ್ರ ಜಡೇಜಾ ಅವರಿಗೆ ಅವಕಾಶ ನೀಡಲಾಗಿದೆ. ಅಲ್ಲದೆ, ರೋಹಿತ್ ಶರ್ಮಾ ಆರಂಭಿಕ ಸ್ಥಾನಕ್ಕೆ ಮರಳುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಮತ್ತೆ ಮಧ್ಯಮ ಕ್ರಮಾಂಕದಲ್ಲೇ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ. ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಆಸ್ಟ್ರೇಲಿಯಾ ಪ್ಲೇಯಿಂಗ್ XI
ಉಸ್ಮಾನ್ ಖವಾಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹೇಜಲ್ವುಡ್.
ಭಾರತ ಪ್ಲೇಯಿಂಗ್ XI
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ (ನಾಯಕ), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.