ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ರಿಯಾನ್ ಪರಾಗ್ ನಾಯಕ; ಮೊದಲ 3 ಪಂದ್ಯದ ನಂತರ ಸಂಜು ಸ್ಯಾಮ್ಸನ್ ಭವಿಷ್ಯ ನಿರ್ಧಾರ
ಐಪಿಎಲ್ 2025ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮೊದಲ 3 ಪಂದ್ಯಗಳಲ್ಲಿ ರಿಯಾನ್ ಪರಾಗ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಸಂಜು ಸ್ಯಾಮ್ಸನ್ ಇನ್ನೂ ಫಿಟ್ ಆಗಿಲ್ಲ. ಹೀಗಾಗಿ ಆ ಬಳಿಕ ಅವರ ನಾಯಕತ್ವದ ಕುರಿತು ನಿರ್ಧಾರವಾಗಲಿದೆ.

ಐಪಿಎಲ್ 2025ರ ಆವೃತ್ತಿಯ ಆರಂಭಕ್ಕೂ ಮುನ್ನ ವಿವಿಧ ತಂಡಗಳಿಂದ ಹೊಸ ಹೊಸ ಅಪ್ಡೇಟ್‌ಗಳು ಸಿಗುತ್ತಿವೆ. ಇದೀಗ ರಾಜಸ್ಥಾನ್ ರಾಯಲ್ಸ್ ಬಳಗದಲ್ಲೂ ಮಹತ್ವದ ಬದಲಾವಣೆಯೊಂದು ಆಗಿದೆ. ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಯುವ ಆಟಗಾರ ರಿಯಾನ್ ಪರಾಗ್ ನಾಯಕನಾಗಿ ಮುನ್ನಡೆಸಲಿದ್ದಾರೆ. ಈ ಕುರಿತು ಫ್ರಾಂಚೈಸಿ ಗುರುವಾರ (ಮಾ.20) ತಿಳಿಸಿದೆ. ಸದ್ಯ ತಂಡದ ನಿಯಮಿತ ನಾಯಕ ಸಂಜು ಸ್ಯಾಮ್ಸನ್ ಸಂಪೂರ್ಣ ಫಿಟ್ ಆಗಿಲ್ಲ. ಹೀಗಾಗಿ ಅವರು ಮತ್ತೆ ಫಿಟ್ ಆಗುವವರೆಗೂ, ಮೊದಲ ಮೂರು ಪಂದ್ಯಕ್ಕೆ ಪರಾಗ್ ನಾಯಕನಾಗಿರಲಿದ್ದಾರೆ.
ಸಂಜು ಪಂದ್ಯಗಳಿಂದ ಹೊರಬಿದ್ದಿಲ್ಲ. ಅವರು ಎಂದಿನಂತೆ ತಂಡದ ಆಡುವ ಬಳಗದಲ್ಲಿ ಸ್ಥಾನ ಪಡೆದು ಬ್ಯಾಟಿಂಗ್ ಮಾಡಲಿದ್ದಾರೆ. ಆದರೆ, ವಿಕೆಟ್ ಕೀಪಿಂಗ್ ಕರ್ತವ್ಯಗಳಿಗೆ ಫಿಟ್ ಆಗಿಲ್ಲ. ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ, ಧ್ರುವ್ ಜುರೆಲ್ ರಾಯಲ್ಸ್ ಪರ ಮೊದಲ ಮೂರು ಪಂದ್ಯಗಳಲ್ಲಿ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ.
ಮೊದಲ ಮೂರು ಪಂದ್ಯಗಳಿಗೆ ನೂತನ ನಾಯಕನ ಘೋಷಣೆ ಕರಿತು ತಂಡದ ಸಭೆಯಲ್ಲಿ ಖುದ್ದು ಸ್ಯಾಮ್ಸನ್ ಘೋಷಿಸಿದ್ದಾರೆ. ಪರಾಗ್ ಅವರನ್ನು ನಾಯಕನನ್ನಾಗಿ ಘೋಷಿಸುವ ವಿಡಿಯೊವನ್ನು ಫ್ರಾಂಚೈಸಿಯು ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. “ಸಂಜು ಸ್ಯಾಮ್ಸನ್ ಬ್ಯಾಟರ್ ಆಗಿ ಮಾತ್ರ ನಮ್ಮ ಮೊದಲ ಮೂರು ಪಂದ್ಯಗಳನ್ನು ಆಡಲಿದ್ದಾರೆ. ರಿಯಾನ್ ಪರಾಗ್ ಈ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ!” ಎಂದು ರಾಯಲ್ಸ್ ಪೋಸ್ಟ್ ಮಾಡಿದೆ.
ಯುವ ಆಟಗಾರ ರಿಯಾನ್, 2019ರಲ್ಲಿ ಫ್ರಾಂಚೈಸಿ ಪರ ಐಪಿಎಲ್ ಅಭಿಯಾನ ಆರಂಭಿಸಿದರು. ಆರಂಭದ ವರ್ಷಗಳಲ್ಲಿ ಸಾಕಷ್ಟು ಟೀಕೆಗಳಿಗೆ ಒಳಗಾದರು. ಅಸ್ಸಾಂನ ಬಲಗೈ ಬ್ಯಾಟರ್, ಹಲವು ಕಠಿಣ ಸನ್ನಿವೇಶಗಳನ್ನು, ಟೀಕೆಗಳನ್ನು ಸಹಿಸಿಕೊಂಡರು. ಮೊದಲ ಐದು ಋತುಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣಕ್ಕೆ ತೀವ್ರ ಟೀಕೆಗಳನ್ನು ಎದುರಿಸಿದರು. ಆದರೆ, ಕಳೆದ ವರ್ಷ ಎಲ್ಲಾ ಟೀಕೆಗಳಿಗೂ ಬ್ಯಾಟ್‌ನಿಂದಲೇ ಉತ್ತರಿಸಿದರು. ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕೆಲವೇ ಬ್ಯಾಟ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಹಲವು ವರ್ಷಗಳಲ್ಲಿ ತಂಡದ ಪರ ಆಡಿದರೂ, ಪರಾಗ್ ರಾಯಲ್ಸ್ ತಂಡವನ್ನು ಮುನ್ನಡೆಸುತ್ತಿರುವುದು ಇದೇ ಮೊದಲು.
ರಾಜಸ್ಥಾನ್ ರಾಯಲ್ಸ್ ಪೋಸ್ಟ್
ಕಳೆದ ಆವೃತ್ತಿಯಲ್ಲಿ ಆರ್‌ಆರ್ ಪರ 16 ಪಂದ್ಯಗಳಲ್ಲಿ ಆಡಿರುವ ಪರಾಗ್, 149.3ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ 573 ರನ್ ಗಳಿಸಿದ್ದಾರೆ. 4 ಅರ್ಧಶತಕಗಳ ಸಹಿತ ಸೀಸನ್‌ನ ಮೂರನೇ ಅತಿ ಹೆಚ್ಚು ರನ್ ಕಲೆ ಹಾಕಿದ ಆಟಗಾರ ಎನಿಸಿಕೊಂಡರು.
ಟಿ20 ಸರಣಿ ವೇಳೆ ಗಾಯ
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಸಮಯದಲ್ಲಿ ಜೋಫ್ರಾ ಆರ್ಚರ್ ಅವರ ಬೌನ್ಸರ್ ಎಸತಕ್ಕೆ ಸ್ಯಾಮ್ಸನ್ ಗಾಯಗೊಂಡಿದ್ದರು. ಗಾಯದ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ತಿಂಗಳು ಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸ್ಯಾಮ್ಸನ್ ಚೇತರಿಸಿಕೊಳ್ಳುತ್ತಿದ್ದಾರೆ. ಈ ವಾರದ ಆರಂಭದಲ್ಲಿ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಪುನಶ್ಚೇತನವನ್ನು ಪೂರ್ಣಗೊಳಿಸಿದ 30 ವರ್ಷದ ಕ್ರಿಕೆಟಿಗ, ಮುಂಬರುವ ಋತುವಿಗೆ ಮುಂಚಿತವಾಗಿ ಸೋಮವಾರವಷ್ಟೇ ಮೊದಲ ಅಭ್ಯಾಸ ಅವಧಿಯಲ್ಲಿ ಭಾಗವಹಿಸಿದರು.
2008ರಲ್ಲಿ ಉದ್ಘಾಟನಾ ಆವೃತ್ತಿಯಲ್ಲಿ ಐಪಿಎಲ್ ಚಾಂಪಿಯನ್ ಆಗಿದ್ದ ರಾಯಲ್ಸ್, ಈ ಬಾರಿ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿದೆ. ಮಾರ್ಚ್ 23ರಂದು ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.
