ಐಪಿಎಲ್ ಟೂರ್ನಿ ನಡುವೆಯೇ ಅಧಿಕೃತವಾಗಿ ಹೆಸರು ಬದಲಾಯಿಸಿಕೊಂಡ ಜೋಸ್ ಬಟ್ಲರ್; ಇನ್ಮುಂದೆ ಜೋಸ್ ಅಲ್ಲ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ ಟೂರ್ನಿ ನಡುವೆಯೇ ಅಧಿಕೃತವಾಗಿ ಹೆಸರು ಬದಲಾಯಿಸಿಕೊಂಡ ಜೋಸ್ ಬಟ್ಲರ್; ಇನ್ಮುಂದೆ ಜೋಸ್ ಅಲ್ಲ

ಐಪಿಎಲ್ ಟೂರ್ನಿ ನಡುವೆಯೇ ಅಧಿಕೃತವಾಗಿ ಹೆಸರು ಬದಲಾಯಿಸಿಕೊಂಡ ಜೋಸ್ ಬಟ್ಲರ್; ಇನ್ಮುಂದೆ ಜೋಸ್ ಅಲ್ಲ

Jos Buttler: ರಾಜಸ್ಥಾನ್ ರಾಯಲ್ಸ್ ಆರಂಭಿಕ ಆಟಗಾರ ಜೋಸ್ ಬಟ್ಲರ್ ತಮ್ಮ ಹೆಸರನ್ನು ಜೋಶ್ ಬಟ್ಲರ್ ಎಂದು ಬದಲಾಯಿಸಿಕೊಂಡಿದ್ದಾರೆ. ಈ ಕುರಿತು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ವಿಡಿಯೋ ಬಿಡುಗಡೆ ಮಾಡಿ ತಿಳಿಸಿದೆ.

ಐಪಿಎಲ್ ಟೂರ್ನಿ ನಡುವೆಯೇ ಅಧಿಕೃತವಾಗಿ ಹೆಸರು ಬದಲಾಯಿಸಿಕೊಂಡ ಜೋಸ್ ಬಟ್ಲರ್
ಐಪಿಎಲ್ ಟೂರ್ನಿ ನಡುವೆಯೇ ಅಧಿಕೃತವಾಗಿ ಹೆಸರು ಬದಲಾಯಿಸಿಕೊಂಡ ಜೋಸ್ ಬಟ್ಲರ್ (AP)

ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಜೋಸ್ ಬಟ್ಲರ್ (Jos Buttler) ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಆರಂಭಿಕ ಆಟಗಾರ, ಟೂರ್ನಿಯ ಮಧ್ಯದಲ್ಲೇ ತಮ್ಮ ಹೆಸರು ಬದಲಾವಣೆ ಮಾಡಿಕೊಂಡಿದ್ದಾರೆ. ಈವರೆಗೆ ಬಟ್ಲರ್‌ ಹೆಸರಿನಲ್ಲಿದ್ದ ಮೊದಲ ಪದ ಜೋಸ್ (Jos) ಬದಲಿಗೆ 'ಜೋಶ್' (Josh) ಎಂದು ಬದಲಾವಣೆ ಮಾಡಲಾಗಿದೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಘೋಷಣೆ ಮಾಡಲಾಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಲಾದ ವಿಡಿಯೋದಲ್ಲಿ, ಖುದ್ದು ಬಟ್ಲರ್ ಅವರೇ ಮಾತನಾಡಿದ್ದಾರೆ. ಹೆಸರಿನ 'ಸಮಸ್ಯೆಯನ್ನು ಕೊನೆಗೂ ಪರಿಹರಿಸಿದ್ದೇವೆ' ಎಂದು ಅವರು ಘೋಷಿಸಿದ್ದಾರೆ. ತಮ್ಮ ಜೀವನದುದ್ದಕ್ಕೂ ತಪ್ಪಾಗಿ 'ಜೋಶ್' ಎಂದು ಕರೆಯಲಾಗಿದೆ ಎಂದು ಬಹಿರಂಗಪಡಿಸಿದ ಅವರು, ಇದೀಗ 30ಕ್ಕೂ ಹೆಚ್ಚು ವರ್ಷಗಳ ಕಾಲ ತಪ್ಪಾಗಿದ್ದ ಹೆಸರನ್ನು ಸರಿಪಡಿಸಲಾಗಿದೆ ಎಂದಿದ್ದಾರೆ.

"ಹಾಯ್. ನಾನು ಇಂಗ್ಲೆಂಡ್ ವೈಟ್ ಬಾಲ್ ಕ್ರಿಕೆಟ್‌ ತಂಡದ ನಾಯಕ ಜೋಸ್ ಬಟ್ಲರ್. ನನ್ನ ಜೀವನದುದ್ದಕ್ಕೂ ನನ್ನನ್ನು ತಪ್ಪು ಹೆಸರಿನಿಂದ ಕರೆಯಲಾಗಿದೆ," ಎಂದು ಬಟ್ಲರ್ ವಿಡಿಯೋದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ | ಅವರಿಗೆ 42 ವರ್ಷವೇ? ವಿಂಟೇಜ್ ಧೋನಿ ಆಟಕ್ಕೆ ಶ್ಲಾಘನೆ; ಇನ್ನೂ 2 ವರ್ಷ ಐಪಿಎಲ್‌ ಆಡ್ತಾರೆ ಎಂದ ಕ್ರಿಸ್ ಶ್ರೀಕಾಂತ್

“ದಾರಿಹೋಕರಿಂದ ಹಿಡಿದು ನನ್ನ ಅಮ್ಮನವರೆಗೆ, ನನ್ನ ಜನ್ಮದಿನದ ಕಾರ್ಡ್‌ನಲ್ಲಿಯೂ ತಪ್ಪಾದ ಹೆಸರಿದೆ. ಹೀಗಾಗಿ, ನನ್ನ ದೇಶವನ್ನು 13 ವರ್ಷಗಳ ಕಾಲ ಪ್ರತಿನಿಧಿಸಿದ ನಂತರ ಮತ್ತು ಎರಡು ವಿಶ್ವಕಪ್ ಗೆಲುವಿನ ನಂತರ, ಅಂತಿಮವಾಗಿ ಆ ಸಮಸ್ಯೆಯನ್ನು ಪರಿಹರಿಸುವ ಸಮಯ ಬಂದಿದೆ. ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ನಾನು ಈಗ ಅಧಿಕೃತವಾಗಿ ಜೋಶ್ ಬಟ್ಲರ್ ಆಗಿದ್ದೇನೆ” ಎಂದು ರಾಜಸ್ಥಾನ್‌ ರಾಯಲ್ಸ್‌ ಆಟಗಾರ ಹೇಳಿದ್ದಾರೆ.

ವಿಡಿಯೋದಲ್ಲಿ, ಜನರು ಯಾವಾಗಲೂ ತಮ್ಮನ್ನು 'ಜೋಶ್' ಎಂದು ಕರೆಯುತ್ತಿದ್ದ ಬಗ್ಗೆ ಬಟ್ಲರ್ ಹೇಳಿದ್ದಾರೆ. ಆದರೆ, ಕೊನೆಯಲ್ಲಿ ವಿಡಿಯೋಗೆ ಹಾಸ್ಯಮಯ ತಿರುವು ನೀಡಲಾಗಿದೆ. ಬಟ್ಲರ್ ತಮ್ಮ ಹೆಸರನ್ನು ಜೋಶ್ ಎಂದು ಬದಲಾಯಿಸಿದ ತಕ್ಷಣ, ದೃಶ್ಯ ನಿರ್ಮಾಪಕರು ಥ್ಯಾಂಕ್ಸ್‌ ಜೋಸ್ ಎಂದಿದ್ದಾರೆ. ಹೆಸರನ್ನು ಬದಲಾಯಿಸಿದರೂ, ಬಟ್ಲರ್‌ ಮುಂದೆಯೂ ಹೆಚ್ಚಾಗಿ ಜೋಸ್‌ ಬಟ್ಲರ್‌ ಎಂದು ಕರೆಸಿಕೊಳ್ಳಲಿದ್ದಾರೆ ಎಂದು ಹಾಸ್ಯಮಯವಾಗಿ ಹೇಳಲಾಗಿದೆ.

ಹೆಸರು ಬದಲಾವಣೆ ಬಳಿಕ ಮೊದಲ ಐಪಿಎಲ್‌ ಪಂದ್ಯ

ಹೆಸರು ಬದಲಾವಣೆಯ ಬೆನ್ನಲ್ಲೇ ಬಟ್ಲರ್‌ ಐಪಿಎಲ್ ಪಂದ್ಯವನ್ನಾಡಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ (MI vs RR) ತಂಡಗಳು ಏಪ್ರಿಲ್‌ 1ರ ಸಂಜೆ ಮುಂಬೈನಲ್ಲಿ ಮುಖಾಮುಖಿಯಾಗಲಿವೆ. ಐಪಿಎಲ್ 2022ರ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ಗೆದ್ದಿರುವ ಬಟ್ಲರ್, ಆ ಆವೃತ್ತಿಯಲ್ಲಿ ನಾಲ್ಕು ಸ್ಫೋಟಕ ಶತಕಗಳೊಂದಿಗೆ 863 ರನ್ ಗಳಿಸಿದ್ದರು. ಈ ಬಾರಿಯು ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ. ಆದರೆ, ಐಪಿಎಲ್ 2024ರ ಆವೃತ್ತಿಯಲ್ಲಿ ಬಟ್ಲರ್ ಉತ್ತಮ ಆರಂಭ ಪಡೆದಿಲ್ಲ. ಈವರೆಗೆ ಆಡಿದ ಎರಡು ಪಂದ್ಯಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತಲಾ 11 ರನ್ ಮಾತ್ರ ಗಳಿಸಿದ್ದಾರೆ. ಇಂದು ಮುಂಬೈ ವಿರುದ್ಧ ಹೊಸ ಹೆಸರಿನೊಂದಿಗೆ ಕಣಕ್ಕಿಳಿಯುತ್ತಿರುವ ಬಟ್ಲರ್‌, ಪ್ರದರ್ಶನದಲ್ಲೂ ಸುಧಾರಣೆ ಕಾಣುವ ವಿಶ್ವಾಸದಲ್ಲಿದ್ದಾರೆ.

Whats_app_banner