ಒಂದೇ ಓವರ್ನಲ್ಲಿ ಸತತ 5 ಸಿಕ್ಸರ್; ಕೊನೆಗೂ 2 ವರ್ಷಗಳ ಹಿಂದೆ ನೀಡಿದ್ದ ಭರವಸೆ ಈಡೇರಿಸಿದ ರಿಯಾನ್ ಪರಾಗ್
ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್, ಕೇವಲ 45 ಎಸೆತಗಳಲ್ಲಿ 8 ಸಿಕ್ಸರ್ಗಳ ಸಹಾಯದಿಂದ 95 ರನ್ ಸಿಡಿಸಿದ್ದಾರೆ. ಮೊಯಿನ್ ಅಲಿ ಅವರ ಒಂದೇ ಓವರ್ನಲ್ಲಿ ಸತತ ಐದು ಸಿಕ್ಸರ್ ಬಾರಿಸುವ ಮೂಲಕ ಗಮನ ಸೆಳೆದರು.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಕೇವಲ 1 ರನ್ ಅಂತರದಿಂದ ಸೋಲು ಕಂಡಿತು. ಕೊನೆಯವರೆಗೂ ರೋಚಕವಾಗಿ ಸಾಗಿದ ಪಂದ್ಯದಲ್ಲಿ, ಆರ್ಆರ್ ತಂಡ ಮತ್ತೊಮ್ಮೆ ನಿರಾಶೆ ಅನುಭವಿಸಿತು. ಪಂದ್ಯದಲ್ಲಿ ರಾಜಸ್ಥಾನ ತಂಡದ ಸ್ಟ್ಯಾಂಡ್-ಇನ್ ನಾಯಕ ರಿಯಾನ್ ಪರಾಗ್, ಅಮೋಘ ಆಟವಾಡಿದರು. ಕೇವಲ 45 ಎಸೆತಗಳಲ್ಲಿ 6 ಬೌಂಡರಿ ಮತ್ತು 8 ಸ್ಫೋಟಕ ಸಿಕ್ಸರ್ ಸಹಾಯದಿಂದ 95 ರನ್ ಸಿಡಿಸಿದರು. ಅದರಲ್ಲೂ ಮೊಯಿನ್ ಅಲಿ ಎಸೆದ 13ನೇ ಓವರ್ನಲ್ಲಿ ಸತತ ಐದು ಸ್ಫೋಟಕ ಸಿಕ್ಸರ್ ಸಿಡಿಸಿದ್ದು ಗಮನ ಸೆಳೆಯಿತು. ಆದರೆ, ಶತಕದಂಚಿನಲ್ಲಿ ಪರಾಗ್ ಔಟಾಗುವುದರೊಂದಿಗೆ ಅವರ ಪ್ರಯತ್ನ ಸಾಲಲಿಲ್ಲ.
ಪಂದ್ಯದ ಎರಡನೇ ಇನ್ನಿಂಗ್ಸ್ ವೇಳೆ ಒಂದು ಹಂತದಲ್ಲಿ ರಾಜಸ್ಥಾನ್ ರಾಯಲ್ಸ್ 5 ವಿಕೆಟ್ ನಷ್ಟಕ್ಕೆ ಕೇವಲ 71 ರನ್ ಗಳಿಸಿತ್ತು. ಆದರೆ ರಿಯಾನ್ ಪರಾಗ್ ಮತ್ತು ಶಿಮ್ರಾನ್ ಹೆಟ್ಮೆಯರ್ ಆರನೇ ವಿಕೆಟ್ಗೆ 92 ರನ್ಗಳ ಆಕರ್ಷಕ ಜೊತೆಯಾಟ ಆಡಿದರು. ಇಲ್ಲಿ ರಿಯಾನ್ ಪರಾಗ್ ಸತತ 6 ಸಿಕ್ಸರ್ಗಳನ್ನು ಬಾರಿಸಿದರು. ಇದರಲ್ಲಿ ಮೊಯಿನ್ ಅಲಿ ಅವರ ಬೌಲಿಂಗ್ನಲ್ಲಿ ಸತತ ಐದು ಮತ್ತು ವರುಣ್ ಚಕ್ರವರ್ತಿ ಅವರ ಬೌಲಿಂಗ್ನಲ್ಲಿ ಒಂದು ಸಿಕ್ಸರ್ ಸೇರಿವೆ.
ರಿಯಾನ್ ಪರಾಗ್ ಅವರ ಬ್ಯಾಟಿಂಗ್ಗೆ ಮೊಯಿನ್ ಅಲಿ ಬಳಿ ಉತ್ತರವಿರಲಿಲ್ಲ. ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಅನ್ನು ದಂಡಿಸಿದ ಪರಾಗ್, ಈಡನ್ ಗಾರ್ಡನ್ಸ್ ಮೈದಾನದಲ್ಲಿ ಸೇರಿದ್ದ ಕೆಕೆಆರ್ ಅಭಿಮಾನಿಗಳನ್ನು ಕೆಲಕಾಲ ಮೌನವಾಗಿಸಿದರು.
ಕೊನೆಗೂ ಈಡೇರಿದ ಭರವಸೆ
ರಿಯಾನ್ ಪರಾಗ್ 2023ರಲ್ಲಿ ಎಕ್ಸ್ (ಹಿಂದೆ ಟ್ವಿಟರ್)ನಲ್ಲಿ ಒಂದು ಪೋಸ್ಟ್ ಮಾಡಿದ್ದರು. ಅದರಲ್ಲಿ ಅವರು “ಈ ಐಪಿಎಲ್ನಲ್ಲಿ ಒಂದು ಹಂತದಲ್ಲಿ ನಾನು ಒಂದೇ ಓವರ್ನಲ್ಲಿ 4 ಸಿಕ್ಸರ್ಗಳನ್ನು ಹೊಡೆಯುತ್ತೇನೆ ಎಂದು ನನ್ನ ಆಂತರಾತ್ಮ ಹೇಳುತ್ತಿದೆ” ಎಂದು ಹೇಳಿಕೊಂಡಿದ್ದರು. ಆದರೆ, ಅದಾಗಿ ಎರಡು ವರ್ಷಗಳ ನಂತರ ಆ ಮಾತು ಸಾಧ್ಯವಾಗಿದೆ. ಕೊನೆಗೂ ಅವರು ಒಂದೇ ಓವರ್ನಲ್ಲಿ ನಾಲ್ಕಕ್ಕಿಂತ ಹೆಚ್ಚು, ಅಂದರೆ ಸತತ ಐದು ಸಿಕ್ಸರ್ಗಳನ್ನು ಹೊಡೆಯುವ ಮೂಲಕ ತಮ್ಮ ಭರವಸೆಯನ್ನು ಪೂರೈಸಿದ್ದಾರೆ.
ಇಲ್ಲಿದೆ ವಿಡಿಯೋ
ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಪರಾಗ್, ತಮ್ಮ ಆಟವನ್ನು ವೇಗಗೊಳಿಸಬೇಕಾಗಿತ್ತು. ಹೀಗಾಗಿ ಇನ್ನಿಂಗ್ಸ್ನ 18ನೇ ಓವರ್ನಲ್ಲಿ ವಿಕೆಟ್ ಕಳೆದುಕೊಂಡರು. ಹರ್ಷಿತ್ ರಾಣಾ ಪ್ರಮುಖ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
ಅಂತಿಮ ಓವರ್ನಲ್ಲಿ ರಾಜಸ್ಥಾನ್ ರಾಯಲ್ಸ್ ಗೆಲುವಿಗೆ 22 ರನ್ಗಳ ಅವಶ್ಯಕತೆಯಿತ್ತು. ಶುಭಂ ದುಬೆ ಸತತ 6, 4 ಮತ್ತು 6 ರನ್ ಗಳಿಸಿ ಅಂತಿಮ ಎಸೆತದಲ್ಲಿ ಕೇವಲ 3 ರನ್ ಬೇಕಾಯ್ತು. ಆದರೆ ರಾಜಸ್ಥಾನವು ಆ ಎಸೆತದಲ್ಲಿ ಕೇವಲ ಒಂದು ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಕೆಕೆಆರ್ ತಂಡವು ಒಂದು ರನ್ನಿಂದ ಪಂದ್ಯವನ್ನು ಗೆದ್ದು, ತಮ್ಮ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿದೆ.