ಗೆಲುವಿನೊಂದಿಗೆ ಐಪಿಎಲ್ ಅಭಿಯಾನ ಅಂತ್ಯಗೊಳಿಸಿದ ರಾಜಸ್ಥಾನ್ ರಾಯಲ್ಸ್; ಸಿಎಸ್‌ಕೆ ತಂಡಕ್ಕೆ 10ನೇ ಸೋಲು
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ 18ನೇ ಆವೃತ್ತಿಯಲ್ಲಿ 10ನೇ ಸೋಲು ಕಂಡಿದೆ. ಅತ್ತ ರಾಜಸ್ಥಾನ್ ರಾಯಲ್ಸ್ ತಂಡವು ಸಿಎಸ್‌ಕೆ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಈ ಬಾರಿಯ ತನ್ನ ಐಪಿಎಲ್ ಅಭಿಯಾನ ಮುಗಿಸಿದೆ.

ರಾಜಸ್ಥಾನ್ ರಾಯಲ್ಸ್ ತಂಡವು ಗೆಲುವಿನೊಂದಿಗೆ ಐಪಿಎಲ್ 2025ರಲ್ಲಿ (IPL 2025) ತನ್ನ ಅಭಿಯಾನ ಮುಗಿಸಿದೆ. ಅತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡವು (Chennai Super Kings vs Rajasthan Royals) ತನ್ನ ಸೋಲಿನ ಸರಪಳಿಯನ್ನು ಮುಂದುವರೆಸಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಆರ್ ತಂಡವು 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಟೂರ್ನಿಯಿಂದ ಈಗಾಗಲೇ ಹೊರಬಿದ್ದಿರುವ ರಾಜಸ್ಥಾನ, ಲೀಗ್ ಹಂತದಲ್ಲಿ ತನ್ನ ಕೊನೆಯ ಪಂದ್ಯ ಆಡಿತು. ಒಟ್ಟು 14 ಪಂದ್ಯಗಳಲ್ಲಿ 4 ಗೆಲುವುಗಳೊಂದಿಗೆ 8 ಅಂಕ ಸಂಪಾದಿಸಿದ ತಂಡವು ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸಿಎಸ್‌ಕೆ 8 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 17.1 ಓವರ್‌ಗಳಲ್ಲಿ ಗುರಿ ತಲುಪಿತು. ಸಿಎಸ್‌ಕೆ ತಂಡವು ಪ್ರಸಕ್ತ ಆವೃತ್ತಿಯಲ್ಲಿ 10ನೇ ಸೋಲು ಕಂಡಿದೆ. ಕೇವಲ 3 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ.
ಪಂದ್ಯದ ಆರಂಭದಲ್ಲೇ ಯೆಲ್ಲೋ ಆರ್ಮಿಗೆ ಹಿನ್ನಡೆಯಾಯ್ತು. ಡಿವೋನ್ ಕಾನ್ವೆ 10 ರನ್ ಹಾಗೂ ಊರ್ವಿಲ್ ಪಟೇಲ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಈ ವೇಳೆ ಆರ್ ಅಶ್ವಿನ್ ಜೊತೆಗೂಡಿದ ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಅರ್ಧಶತಕದ ಜೊತೆಯಾಟವಾಡಿದರು. ವೇಗದ ಆಟವಾಡಿದ ಆಯುಷ್, 20 ಎಸೆತಗಳಲ್ಲಿ 43 ರನ್ ಸಿಡಿಸಿ ಔಟಾದರು. ಅವರ ಬೆನ್ನಲ್ಲೇ ಅಶ್ವಿನ್ ಕೂಡಾ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ರವೀಂದ್ರ ಜಡೇಜಾ ಕೇವಲ 1 ರನ್ ಗಳಿಸಿದರು. ಈ ವೇಳೆ ಶಿವಂ ದುಬೆ ಹಾಗೂ ಬ್ರೆವಿಸ್ ಅವರಿಂದ ಉತ್ತಮ ಜೊತೆಯಾಟ ಬಂತು. ಬ್ರೆವಿಸ್ 25 ಎಸೆತಗಳಲ್ಲಿ 42 ರನ್ ಗಳಿಸಿದರು. ನಿಧಾನವಾಗಿ ರನ್ ಗಳಿಸಿದ ದುಬೆ 39 ರನ್ ಪೇರಿಸಿದರು. ನಾಯಕ ಎಂಎಸ್ ಧೋನಿ ಆಟ 16 ರನ್‌ಗಳಿಗೆ ಅಂತ್ಯವಾಯ್ತು.
ರಾಜಸ್ಥಾನ ಸುಲಭ ಚೇಸಿಂಗ್
ಚೇಸಿಂಗ್‌ಗಿಳಿದ ರಾಜಸ್ಥಾನಕ್ಕೆ ಉತ್ತಮ ಆರಂಭ ಸಿಕ್ಕಿತು. ಯಶಸ್ವಿ ಜೈಸ್ವಾಲ್ ಮತ್ತೆ ಅಬ್ಬರಿಸಿ 37 ರನ್ ಗಳಿಸಿ ಔಟಾದರು. ಈ ವೇಳೆ ಒಂದಾದ ನಾಯಕ ಸಂಜು ಸ್ಯಾಮ್ಸನ್ ಹಾಗೂ ವೈಭವ್ ಸೂರ್ಯವಂಶಿ 98 ರನ್‌ಗಳ ಜೊತೆಯಾಟವಾಡಿದರು. ಸ್ಯಾಮ್ಸನ್ 41 ರನ್ ಗಳಿಸಿದರೆ, ಅರ್ಧಶತಕ ಸಿಡಿಸಿದ ವೈಭವ್ 57 ರನ್ ಗಳಿಸಿ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. ಪರಾಗ್ 3 ರನ್ ಗಳಿಸಿದರೆ, ಧ್ರುವ್ ಜುರೆಲ್ ಹಾಗೂ ಶಿಮ್ರಾನ್ ಹೆಟ್ಮಯರ್ ತಂಡವನ್ನು ಬೇಗನೆ ಗೆಲುವಿನ ದಡ ಸೇರಿಸಿದರು. ಜುರೆಲ್ ಅಜೇಯ 31 ರನ್ ಗಳಿಸಿದರು.
ಪ್ರಸಕ್ತ ಆವೃತ್ತಿಯಲ್ಲಿ ಸಿಎಸ್‌ಕೆ ತಂಡವು ಮೊದಲು ಬ್ಯಾಟಿಂಗ್ ಮಾಡಿದ ಎಲ್ಲಾ 5 ಪಂದ್ಯಗಳಲ್ಲೂ ಸೋಲು ಕಂಡಿದೆ. ಚೆನ್ನೈ ತಂಡವು ಈ ಬಾರಿ ಒಟ್ಟು 10 ಪಂದ್ಯಗಳಲ್ಲಿ ಸೋತಿದ್ದು, 2022ರ ಬಳಿಕ ಮತ್ತೊಮ್ಮೆ 10 ಪಂದ್ಯಗಳಲ್ಲಿ ಸೋತ ಕಳಪೆ ದಾಖಲೆ ಮಾಡಿದೆ. ಅತ್ತ ರಾಜಸ್ಥಾನ ತಂಡವು ಈ ಬಾರಿ ಚೇಸಿಂಗ್ ಮಾಡಿದ 10 ಪಂದ್ಯಗಳಲ್ಲಿ ಈ ಬಾರಿ ಇದು ಎರಡನೇ ಗೆಲುವು ಸಾಧಿಸಿದೆ. ಉಳಿದಂತೆ 7 ಪಂದ್ಯಗಳಲ್ಲಿ ಸೋತಿದೆ.


