ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್​ಸಿಬಿ ಮಣಿಸಿದ ರಾಜಸ್ಥಾನ್​ ರಾಯಲ್ಸ್ 2ನೇ ಕ್ವಾಲಿಫೈಯರ್​​ಗೆ ಲಗ್ಗೆ; ಮುಂದಿನ ಸಲ ಕಪ್​ ನಮ್ದೇ!

ಆರ್​ಸಿಬಿ ಮಣಿಸಿದ ರಾಜಸ್ಥಾನ್​ ರಾಯಲ್ಸ್ 2ನೇ ಕ್ವಾಲಿಫೈಯರ್​​ಗೆ ಲಗ್ಗೆ; ಮುಂದಿನ ಸಲ ಕಪ್​ ನಮ್ದೇ!

Rajasthan Royals: 17ನೇ ಆವೃತ್ತಿಯ ಐಪಿಎಲ್​ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ ಭರ್ಜರಿ ಗೆಲುವು ಸಾಧಿಸಿ ಎರಡನೇ ಕ್ವಾಲಿಫೈಯರ್​ಗೆ ಲಗ್ಗೆಯಿಟ್ಟಿದೆ.

ಆರ್​ಸಿಬಿ ಮಣಿಸಿದ ರಾಜಸ್ಥಾನ್​ ರಾಯಲ್ಸ್ 2ನೇ ಕ್ವಾಲಿಫೈಯರ್​​ಗೆ ಲಗ್ಗೆ
ಆರ್​ಸಿಬಿ ಮಣಿಸಿದ ರಾಜಸ್ಥಾನ್​ ರಾಯಲ್ಸ್ 2ನೇ ಕ್ವಾಲಿಫೈಯರ್​​ಗೆ ಲಗ್ಗೆ (ANI)

ಅದೃಷ್ಟದ ಆಟದೊಂದಿಗೆ ಸತತ 6 ಗೆಲುವು ದಾಖಲಿಸಿ ಪ್ಲೇಆಫ್​ ಹೆಬ್ಬಾಗಿಲು ದಾಟಿ ಬಂದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 17 ವರ್ಷಗಳ ಟ್ರೋಫಿ ಕನಸು ನನಸಾಗಿಸುವಲ್ಲಿ ವಿಫಲಗೊಂಡಿದೆ. ಅಭಿಮಾನಿಗಳ ಅಪಾರ ಪ್ರೀತಿಯ ಋಣ ಸಂದಾಯ ಮಾಡುವಲ್ಲಿ ಮತ್ತೊಮ್ಮೆ ಎಡವಿದೆ. 17ನೇ ಆವೃತ್ತಿಯ ಐಪಿಎಲ್ ಎಲಿಮಿನೇಟರ್​ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್​ಗಳಿಂದ ಶರಣಾಗುವ ಮೂಲಕ ಆರ್​ಸಿಬಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಅಭಿಯಾನ ಕೊನೆಗೊಳಿಸಿದೆ. ಅಮೋಘ ಗೆಲುವಿನೊಂದಿಗೆ ಆರ್​ಆರ್, ಕ್ವಾಲಿಫೈಯರ್​-2ಕ್ಕೆ ಲಗ್ಗೆ ಹಾಕಿದೆ.

ಟ್ರೆಂಡಿಂಗ್​ ಸುದ್ದಿ

ಆರ್​​ಆರ್​​ ಬೌಲರ್​ಗಳ ಕಟ್ಟುನಿಟ್ಟಿನ ಬೌಲಿಂಗ್ ದಾಳಿ ಮತ್ತು ಯಶಸ್ವಿ ಜೈಸ್ವಾಲ್, ರಿಯನ್ ಪರಾಗ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಫಾಫ್ ಪಡೆಯನ್ನು ಮಣಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ರಾಯಲ್ ಚಾಲೆಂಜರ್ಸ್ ಕಳಪೆ ಬ್ಯಾಟಿಂಗ್ ನಡೆಸಿತು. ಕಳೆದ 6 ಪಂದ್ಯಗಳಲ್ಲಿ ಆರ್​ಸಿಬಿ ನಡೆಸಿದ್ದ ಬ್ಯಾಟಿಂಗ್​ ಇದೇನಾ ಎನ್ನುವಂತೆ ಅನುಮಾನ ಮೂಡಿಸಿತು. ಆರ್​ಸಿಬಿ 20 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್​​ಗೆ ಕಟ್ಟಿ ಹಾಕಲಷ್ಟೇ ಶಕ್ತವಾಯಿತು. ಒಂದು ಓವರ್​ ಸ್ಕೋರ್ ಮಾಡಿದರೆ, ಮತ್ತೊಂದು ರನ್ ಗಳಿಸಲು ಪರದಾಟ ನಡೆಸಿದ್ದು ಕಂಡುಬಂತು.

ಈ ಗುರಿ ಬೆನ್ನಟ್ಟಿದ ಆರ್​ಆರ್​, ಉತ್ತಮ ಆರಂಭ ಪಡೆಯಿತು. ಕಳೆದ ಐದು ಪಂದ್ಯಗಳಲ್ಲಿ ನಾಲ್ಕು ಸೋತು, 1 ರದ್ದುಗೊಂಡಿದ್ದ ಕಾರಣ, ರಾಜಸ್ಥಾನ್ ಲಯ ಕಳೆದುಕೊಂಡಿದ್ದು, ಸೋಲು ಫಿಕ್ಸ್ ಎಂದವರೇ ಹೆಚ್ಚು. ಆದರೆ, ತಂಡವು ಟೀಕೆಗಳಿಗೆ ದಿಟ್ಟು ತಿರುಗೇಟು ನೀಡಿದ ಸಂಜು ಪಡೆ ಉತ್ತಮ ಪ್ರದರ್ಶನದೊಂದಿಗೆ ಮೇ 24ರಂದು ನಡೆಯುವ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಎಂಟ್ರಿಕೊಟ್ಟಿತು. ಚೇಸಿಂಗ್​ನಲ್ಲಿ ಆರ್​​ಆರ್ 19 ಓವರ್​​ಗಳಲ್ಲಿ 6 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು. ಹಲವು ಪಂದ್ಯಗಳಿಂದ ಫಾರ್ಮ್​ನಲ್ಲಿಲ್ಲದ ಯಶಸ್ವಿ ಜೈಸ್ವಾಲ್ ಮತ್ತು ಉತ್ತಮ ಲಯದಲ್ಲಿದ್ದ ರಿಯಾನ್ ಪರಾಗ್ ಅವರು ಮಹತ್ವದ ಪಂದ್ಯದಲ್ಲಿ ಆರ್​ಸಿಬಿ ಬೌಲರ್​ಗಳ ಮೇಲೆ ಸವಾರಿ ಮಾಡಿದರು.

ಪರಾಗ್-ಜೈಸ್ವಾಲ್ ಉತ್ತಮ ಆಟ

ರಾಜಸ್ಥಾನ್ ರಾಯಲ್ಸ್ ಒತ್ತಡ ಮುಕ್ತವಾಗಿ ಬ್ಯಾಟ್ ಬೀಸಿತು. ಅದರಲ್ಲೂ ಕಳೆದ ಹಲವು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿದ್ದ ಯಶಸ್ವಿ ಜೈಸ್ವಾಲ್, ಬೌಲರ್​ಗಳ ಮೇಲೆ ಸವಾರಿ ಮಾಡಿದರು. ಜೋಸ್ ಬಟ್ಲರ್ ಅಲಭ್ಯತೆಯಲ್ಲಿ ಅವಕಾಶ ಪಡೆದ ಟಾಮ್ ಕೊಹ್ಲರ್-ಕ್ಯಾಡ್ಮೋರ್ 15 ರನ್​, ಸಂಜು ಸ್ಯಾಮ್ಸನ್ 17 ರನ್​​ಗಳಿಗೆ ಸುಸ್ತಾದರು. ಇದರ ನಡುವೆಯೂ ಜೈಸ್ವಾಲ್ 45 ರನ್ ಗಳಿಸಿ ಮಿಂಚಿದರು. 86 ರನ್​ಗೆ ಮೂರು ವಿಕೆಟ್ ಕಳೆದುಕೊಂಡರೂ ಅದಾಗಲೇ ಉತ್ತಮ ಸ್ಕೋರ್ ಬಂದಿತ್ತು. ಬಳಿಕ ಧ್ರುವ್ ಜುರೆಲ್ 8ಕ್ಕೆ ಔಟಾದರೂ, ರಿಯಾನ್ ಪರಾಗ್ (36) ಉತ್ತಮ ಬ್ಯಾಟಿಂಗ್ ಮಾಡಿದರು. ಕೊನೆಯಲ್ಲಿ ಶಿಮ್ರಾನ್ ಹೆಟ್ಮೆಯರ್ (26) ಮತ್ತು ರೊವ್ಮೆನ್ ಪೊವೆಲ್ (16*) ಫಿನಿಷ್ ಮಾಡಿದರು.

ಆರ್​ಸಿಬಿ ಪರ ಗರಿಷ್ಠ 34 ರನ್, ಮ್ಯಾಕ್ಸಿ ಮತ್ತೆ ಫೇಲ್

ಆರಂಭಿಕರಾಗಿ ಕಣಕ್ಕಿಳಿದ ಫಾಫ್ ಡು ಪ್ಲೆಸಿಸ್ (14)​, ಆರಂಭದಿಂದಲೂ ರನ್ ಗಳಿಸಲು ಪರದಾಡಿದರೆ, ಮತ್ತೊಂದೆಡೆ ವಿರಾಟ್ ಕೊಹ್ಲಿ (24 ಎಸೆತ, 33 ರನ್, 3 ಬೌಂಡರಿ, 1 ಸಿಕ್ಸರ್) ಬೌಲರ್​​ಗಳ ದಿಟ್ಟ ಹೋರಾಟಕ್ಕೆ ಪ್ರತಿರೋಧ ನೀಡುತ್ತಿದ್ದರು. ಆದರೆ ಟೈಮ್​ ಔಟ್ ನಂತರದ ಓವರ್​​ನಲ್ಲಿ ಯುಜ್ವೇಂದ್ರ ಚಹಲ್​ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿ ಕ್ಯಾಚ್ ನೀಡಿದರು. ಕ್ಯಾಮರೂನ್ ಗ್ರೀನ್ 27, ರಜತ್ ಪಾಟೀದಾರ್​ 34 ರನ್​ಗಳಿಗೆ ಔಟಾದರು. ಗ್ಲೆನ್ ಮ್ಯಾಕ್ಸ್​ವೆಲ್ ಮತ್ತೊಮ್ಮೆ ಡಕೌಟ್​ಗೆ ಹೊರನಡೆದರೆ, ಮಹಿಪಾಲ್ ಲೊಮ್ರೋರ್ ಅಮೂಲ್ಯ 32 ರನ್ ಪೇರಿಸಿದರು. ದಿನೇಶ್ ಕಾರ್ತಿಕ್ 11, ಸ್ವಪ್ನಿಲ್ ಸಿಂಗ್ 9, ಕರಣ್ ಶರ್ಮಾ 5 ರನ್ ಪೇರಿಸಿದರು.

ಎಸ್​ಆರ್​ಹೆಚ್​ ವಿರುದ್ಧ ಕ್ವಾಲಿಫೈಯರ್​ -2 ಪಂದ್ಯ

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹೀನಾಯ ಸೋಲು ಕಂಡಿರುವ ಸನ್​​ರೈಸರ್ಸ್ ಹೈದರಾಬಾದ್ ಎದುರು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸೆಣಸಾಟ ನಡೆಸಲು ಆರ್​ಆರ್​ ಸಜ್ಜಾಗಿದೆ. ಮೇ 24ರ ಶುಕ್ರವಾರ ಚೆನ್ನೈನ ಚಿದಂರಂ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಇಲ್ಲಿ ಗೆದ್ದವರು ಫೈನಲ್​ಗೆ ಅರ್ಹತೆ ಪಡೆದುಕೊಳ್ಳಲಿದ್ದಾರೆ.

 

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ