ಬಟ್ಲರ್ ಅಲಭ್ಯ, ಶಿಮ್ರಾನ್ ಹೆಟ್ಮೆಯರ್ ಇನ್; ಆರ್‌ಸಿಬಿ ವಿರುದ್ಧದ ಎಲಿಮನೇಟರ್ ಕದನಕ್ಕೆ ರಾಜಸ್ಥಾನ್ ರಾಯಲ್ಸ್ ತಂಡ
ಆರ್‌ಸಿಬಿ ತಂಡದ ವಿರುದ್ಧದ ನಿರ್ಣಾಯಕ ಕದನಕ್ಕೆ ಬಲಿಷ್ಠ ತಂಡವನ್ನು ಕಣಕ್ಕಿಳಿಸಲು ರಾಜಸ್ಥಾನ್ ರಾಯಲ್ಸ್ ಚಿಂತಿಸುತ್ತಿದೆ. ತಂಡದಲ್ಲಿ ಹಲವು ಸ್ಫೋಟಕ ಆಟಗಾರರಿದ್ದು, ಬೆಂಚ್ ಸಾಮರ್ಥ್ಯ ಕೂಡಾ ಉತ್ತಮವಾಗಿದ.
ಐಪಿಎಲ್ 2024ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆರಂಭ ನೋಡಿದವರು, ಈ ತಂಡ ಸುಲಭವಾಗಿ ಅಗ್ರಸ್ಥಾನ ಪಡೆದು ಕಪ್ ಗೆಲ್ಲುತ್ತೆ ಎಂಬ ಲೆಕ್ಕಾಚಾರ ಹಾಕಿದ್ದರು. ಮೊದಲ 9 ಪಂದ್ಯಗಳಲ್ಲಿ ಬರೋಬ್ಬರಿ 8 ಪಂದ್ಯ ಗೆದ್ದ ತಂಡವು ಅಂಕಪಟ್ಟಿಯ ಅಗ್ರಸ್ಥಾನದಲ್ಲಿತ್ತು. ಆದರೆ, ಆ ನಂತರ ಒಂದೇ ಒಂದು ಪಂದ್ಯ ಗೆಲ್ಲಲಾಗದೆ ಫಾರ್ಮ್ ಕಳೆದುಕೊಂಡಿದೆ. ಅತ್ತ ಸತತ ಆರು ಪಂದ್ಯಗಳಲ್ಲಿ ಗೆದ್ದು ಪ್ರಚಂಡ ಫಾರ್ಮ್‌ನಲ್ಲಿರುವ ಆರ್‌ಸಿಬಿ, ಇದೀಗ ಸಂಜು ಸ್ಯಾಮ್ಸನ್ ಪಡೆಯ ಎದುರಾಳಿ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನವಾದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ನಿರ್ಣಾಯಕ ಎಲಿಮನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡವು, ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಮುನ್ನಡೆಯುತ್ತದೆ. ಅತ್ತ ಸೋಲುವ ತಂಡವು ಟೂರ್ನಿಗೆ ವಿದಾಯ ಹೇಳಲಿದೆ.
ಟೂರ್ನಿಯಲ್ಲಿ ರಾಜಸ್ಥಾನ ಮತ್ತು ಬೆಂಗಳೂರು ತಂಡಗಳು ಭಿನ್ನ ರೀತಿಯ ಅಭಿಯಾನ ಹೊಂದಿದ್ದವು. ಆರ್‌ಸಿಬಿ ತಂಡವು ಮೊದಲಾರ್ಧದಲ್ಲಿ ಸತತ ಸೋಲುಗಳೊಂದಿಗೆ ಕಂಗೆಟ್ಟು, ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿತ್ತು. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಆರ್‌ಸಿಬಿ ತಂಡವು ಸೋಲಿನೊಂದಿಗೆ ಅಭಿಯಾನ ಆರಂಭಿಸಿತು. ಮೊದಲ 8 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಆದರೆ, ಆ ಬಳಿಕ ಆಗಿದ್ದೇ ಬೇರೆ. ಇದೀಗ ಉಭಯ ತಂಡಗಳ ಎಲಿಮನೇಟರ್ ಕದನ ಕುತೂಹಲ ಮೂಡಿಸಿದೆ.
ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಡುವ ಬಳಗ ಮಾತ್ರವಲ್ಲದೆ ಬೆಂಚ್ ಸಾಮರ್ಥ್ಯ ಕೂಡಾ ಬಲಿಷ್ಠವಾಗಿದೆ. ಈವರೆಗಿನ ಪಂದ್ಯಗಳಲ್ಲಿ ತಂಡವು ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಯನ್ನು ಚಾಣಾಕ್ಷತನದಿಂದ ಬಳಸಿದೆ. ಮೊದಲು ಬ್ಯಾಟಿಂಗ್ ಮಾಡಿದಾಗ ಆರು ಬ್ಯಾಟರ್‌ಗಳು ಮತ್ತು ಐದು ಬೌಲರ್‌ಗಳನ್ನು ಕಣಕ್ಕಿಳಿಸಿ, ಹೆಚ್ಚುವರಿ ಬ್ಯಾಟರ್ ಕರೆತರುವ ಅಗತ್ಯವಿಲ್ಲದಿದ್ದರೆ ಚೇಸಿಂಗ್ ವೇಳೆ ಆರನೇ ಸ್ಪೆಷಲಿಸ್ಟ್ ಬೌಲರ್ ಆಯ್ಕೆ ಮಾಡುತ್ತದೆ. ಒಂದು ವೇಳೆ ಆರು ಸ್ಪೆಷಲಿಸ್ಟ್ ಬೌಲರ್‌ಗಳೊಂದಿಗೆ ಮೊದಲು ಫೀಲ್ಡಿಂಗ್ ಮಾಡಿದರೆ, ಆರು ಸ್ಪೆಷಲಿಸ್ಟ್ ಬ್ಯಾಟರ್‌ಗಳನ್ನು ಚೇಸ್‌ಗಾಗಿ ಕಣಕ್ಕಿಳಿಸುತ್ತದೆ.
ಟೂರ್ನಿಯಲ್ಲಿ ವಿವಿಧ ಪ್ರಯೋಗ ಮಾಡಿ ಇಂಪ್ಯಾಕ್ಟ್ ಪ್ಲೇಯರ್ ಬಳಿಸಿಕೊಂಡಿರುವ ರಾಜಸ್ಥಾನ, ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಂತರ ವೇಗಿ ನಾಂದ್ರೆ ಬರ್ಗರ್ ಬದಲಿಗೆ ಧ್ರುವ್ ಜುರೆಲ್ ಅವರನ್ನು ಕರೆತಂದಿತು. ಆ ನಂತರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಭಾರಿ ಕುಸಿತ ಕಂಡ ಬಳಿಕ ಮೊದಲ ಇನ್ನಿಂಗ್ಸ್‌ನಲ್ಲಿಯೇ ಹೆಚ್ಚುವರಿ ಬ್ಯಾಟರ್ ಆಗಿ ಡೊನೊವನ್ ಫೆರೇರಾ ಅವರನ್ನು ಆಡಿಸಿತು. ಟೂರ್ನಿಯಲ್ಲಿ ನಿಧಾನಗತಿಯ ಪಿಚ್‌ನಲ್ಲಿ ರಾಜಸ್ಥಾನ ಬ್ಯಾಟ್ ಬೀಸಲು ವಿಫಲವಾಗಿದೆ. ಇದಕ್ಕೆ ಚೆನ್ನೈ ಹಾಗೂ ಪಂಜಾಬ್ ವಿರುದ್ಧದ ಕೊನೆಯ ಎರಡು ಪಂದ್ಯಗಳೇ ಸಾಕ್ಷಿ. ಹೀಗಾಗಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ತಂಡದ ಇಂಪ್ಯಾಕ್ಟ್ ಪ್ಲೇಯರ್ ಬಳಕೆ ಕುತೂಹಲ ಮೂಡಿಸಿದೆ.
ತಂಡದ ಆಯ್ಕೆಗೆ ಯಾರಿದ್ದಾರೆ? ಯಾರಿಲ್ಲ?
ಜೋಸ್ ಬಟ್ಲರ್ ತವರಿಗೆ ಮರಳಿದ್ದಾರೆ. ಹೀಗಾಗಿ ತಂಡದಲ್ಲಿ ಅವರ ಲಭ್ಯತೆ ಇಲ್ಲ. ಅತ್ತ ಗಾಯದ ಕಾರಣದಿಂದಾಗಿ ಮೇ 2ರಿಂದ ತಂಡದಿಂದ ಹೊರಗಿರುವ ವಿಂಡೀಸ್ ದೈತ್ಯ ಶಿಮ್ರಾನ್ ಹೆಟ್ಮೆಯರ್, ತಂಡದ ಕೊನೆಯ ಲೀಗ್ ಪಂದ್ಯದ ವೇಳೆ ಫಿಟ್ ಆಗಿದ್ದರು ಎಂದು ವರದಿಯಾಗಿತ್ತು. ಆದರೆ ಕೆಕೆಆರ್ ವಿರುದ್ಧದ ಪಂದ್ಯದ ವೇಳೆ ತಂಡದ ಆಡುವ ಬಳಗದಲ್ಲಿ ಅವರು ಇರಲಿಲ್ಲ. ಕೊನೆಗೆ ಪಂದ್ಯ ರದ್ದಾದ ಕಾರಣದಿಂದ ಸ್ಪಷ್ಟ ಚಿತ್ರಣ ಸಿಗಲಿಲ್ಲ. ಇದೀಗ ಆರ್‌ಸಿಬಿ ವಿರುದ್ಧ ಅವರು ಆಡುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಅವರು ತಂಡ ಸೇರಿಕೊಂಡರೆ, ರೋವ್ಮನ್ ಪೊವೆಲ್ ಅಥವಾ ಫೆರೇರಾ ತಂಡದಿಂದ ಹೊರಬೀಳಲಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ತಂಡ
ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್ ಕೀಪರ್), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಆವೇಶ್ ಖಾನ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಹಾಲ್, ರೋವ್ಮನ್ ಪೊವೆಲ್/ಡೊನೊವನ್ ಫೆರೇರಾ/ನಾಂದ್ರೆ ಬರ್ಗರ್ (ಇಂಪ್ಯಾಕ್ಟ್ ಪ್ಲೇಯರ್).
ಇದನ್ನೂ ಓದಿ | ಈ ಮೂವರನ್ನು ಕಟ್ಟಿಹಾಕಿದ್ರೆ ಆರ್‌ಸಿಬಿ ಗೆಲುವು ಸಲೀಸು; ರಾಜಸ್ಥಾನ್ ರಾಯಲ್ಸ್ ಸಾಮರ್ಥ್ಯ-ದೌರ್ಬಲ್ಯ ಹಾಗೂ ಎಕ್ಸ್ ಫ್ಯಾಕ್ಟರ್
ಇದನ್ನೂ ಓದಿ | RCB vs RR: ಒಂದೂ ಸೋಲದ ಮತ್ತು ಒಂದೂ ಗೆಲ್ಲದ ತಂಡಗಳ ನಡುವೆ ಎಲಿಮಿನೇಟರ್ ಫೈಟ್; ಯಾರ ಕೈ ಹಿಡಿಯುತ್ತೆ ಅದೃಷ್ಟ?
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)