ಕೆಎಲ್ ರಾಹುಲ್‌, ಪೂರನ್‌ ಹೋರಾಟಕ್ಕೆ ದಕ್ಕದ ಜಯ; ಲಕ್ನೋ ಬಗ್ಗುಬಡಿದು ಗೆಲುವಿನ ಅಭಿಯಾನ ಆರಂಭಿಸಿದ ರಾಜಸ್ಥಾನ ರಾಯಲ್ಸ್
ಕನ್ನಡ ಸುದ್ದಿ  /  ಕ್ರಿಕೆಟ್  /  ಕೆಎಲ್ ರಾಹುಲ್‌, ಪೂರನ್‌ ಹೋರಾಟಕ್ಕೆ ದಕ್ಕದ ಜಯ; ಲಕ್ನೋ ಬಗ್ಗುಬಡಿದು ಗೆಲುವಿನ ಅಭಿಯಾನ ಆರಂಭಿಸಿದ ರಾಜಸ್ಥಾನ ರಾಯಲ್ಸ್

ಕೆಎಲ್ ರಾಹುಲ್‌, ಪೂರನ್‌ ಹೋರಾಟಕ್ಕೆ ದಕ್ಕದ ಜಯ; ಲಕ್ನೋ ಬಗ್ಗುಬಡಿದು ಗೆಲುವಿನ ಅಭಿಯಾನ ಆರಂಭಿಸಿದ ರಾಜಸ್ಥಾನ ರಾಯಲ್ಸ್

RR vs LSG: ರಾಜಸ್ಥಾನ್ ರಾಯಲ್ಸ್‌ ತಂಡವು ಗೆಲುವಿನೊಂದಿಗೆ 17ನೇ ಆವೃತ್ತಿಇಯ ಐಪಿಎಲ್‌ನಲ್ಲಿ ಶುಭಾರಂಭ ಮಾಡಿದೆ. ತವರಿನ ಅಭಿಮಾನಿಗಳ ಸಂಪೂರ್ಣ ಬೆಂಬಲದೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ರೋಚಕವಾಗಿ ಮಣಿಸಿದೆ.

ಲಕ್ನೋ ಬಗ್ಗುಬಡಿದು ಗೆಲುವಿನ ಅಭಿಯಾನ ಆರಂಭಿಸಿದ ರಾಜಸ್ಥಾನ ರಾಯಲ್ಸ್
ಲಕ್ನೋ ಬಗ್ಗುಬಡಿದು ಗೆಲುವಿನ ಅಭಿಯಾನ ಆರಂಭಿಸಿದ ರಾಜಸ್ಥಾನ ರಾಯಲ್ಸ್ (PTI)

ಐಪಿಎಲ್‌ 2024ರ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡವು ಗೆಲುವಿನ ಅಭಿಯಾನ ಆರಂಭಿಸಿದೆ. ತವರು ಮೈದಾನ ಜೈಪುರದ ಸವಾಯಿ ಮಾನ್‌ಸಿಂಗ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಪಡೆಯು ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ವಿರುದ್ಧ 20 ರನ್‌ಗಳ ಗೆಲುವು ಒಲಿಸಿಕೊಂಡಿದೆ. ಕೊನೆಯವರೆಗೂ ರೋಚಕ ಹಾಗೂ ತೀವ್ರ ಪೈಪೋಟಿಯೊಂದಿಗೆ ಸಾಗಿದ ಪಂದ್ಯದಲ್ಲಿ ಕೆಎಲ್‌ ರಾಹುಲ್‌ ಬಳಗವು ವೀರೋಚಿತ ಸೋಲು ಕಂಡಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ, 4 ವಿಕೆಟ್‌ ಕಳೆದುಕೊಂಡು 193 ರನ್‌ ಗಳಿಸಿತು. ಬೃಹತ್‌ ಗುರಿ ಬೆನ್ನಟ್ಟಿದ ಲಕ್ನೋ, ಕೊನೆಯವರೆಗೂ ಹೋರಾಡಿದರೂ 6 ವಿಕೆಟ್‌ ಕಳೆದುಕೊಂಡು 173 ರನ್‌ ಗಳಿಸಷ್ಟೇ ಶಕ್ತವಾಯ್ತು. ಕೆಎಲ್‌ ರಾಹುಲ್‌ ಮತ್ತು ನಿಕೋಲಸ್‌ ಪೂರನ್‌ ತಲಾ ಅರ್ಧಶತಕ ಸಿಡಿಸಿ ಅಬ್ಬರಿಸಿದರೂ, ತಂಡಕ್ಕೆ ಗೆಲುವು ಒಲಿಯಲಿಲ್ಲ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ, ಆರಂಭದಲ್ಳೇ ಜೋಸ್‌ ಬಟ್ಲರ್‌ ವಿಕೆಟ್‌ ಕಳೆದುಕೊಂಡಿತು. 11 ರನ್‌ ಗಳಿಸಿದ ಆಂಗ್ಲ ಬ್ಯಾಟರ್‌ ನವೀನ್‌ ಉಲ್‌ ಹಕ್‌ಗೆ ವಿಕೆಟ್‌ ಒಪ್ಪಿಸಿದರು. ಇತ್ಥಛೆಗೆ ನಡೆದ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಎರಡು ದ್ವಿಶತಕ ಸಿಡಿಸಿದ್ದ ಯಶಸ್ವ ಜೈಸ್ವಾಲ್‌ ಆಟ, ಇಲ್ಲಿ 24 ರನ್‌ಗಳಿಗೆ ಅಂತ್ಯವಾಯ್ತು. ಎರಡು ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ನಾಯಕ ಸಂಜು ಸ್ಯಾಮ್ಸನ್‌ ಹಾಗೂ ರಿಯಾನ್‌ ಪರಾಗ್‌ ಆಸರೆಯಾದರು. ವೇಗದ ಆಟಕ್ಕೆ ಕೈ ಹಾಕಿದ ಆಟಗಾರರು, ತಂಡದ ಮೊತ್ತ ಹೆಚ್ಚಿಸಿದರು. ಇವರಿಬ್ಬರ ಜೊತೆಯಾಟದಿಂದ ತಂಡದ ಮೊತ್ತ 142ಕ್ಕೇರಿತು. ಈ ವೇಳೆ ಪರಾಗ್‌ 3 ಸಿಕ್ಸರ್‌ ಸಹಿತ 43 ರನ್‌ ಗಳಿಸಿ ಔಟಾದರು.

ಇದನ್ನೂ ಓದಿ | ಗುಜರಾತ್ ವಿರುದ್ಧ ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್; ಸೂರ್ಯ, ವಿಲಿಯಮ್ಸನ್ ಸೇರಿ ಉಭಯ ತಂಡಗಳ ಪರ ಸ್ಟಾರ್ ಆಟಗಾರರೇ ಅಲಭ್ಯ

ನಾಯಕನ ಆಟವಾಡಿದ ಸಂಜು ಸ್ಯಾಮ್ಸನ್‌ 52 ಎಸೆತಗಳಿಂದ 3 ಬೌಂಡರಿ ಹಾಗೂ 6 ಸಿಕ್ಸರ್‌ ಸಹಿತ 82 ರನ್ ಗಳಿಸಿದರು.‌ ಡೆತ್‌ ಓವರ್‌ಗಳಲ್ಲಿ ಅಬ್ಬರಿಸಿದ ಧ್ರುವ್‌ ಜುರೆಲ್‌ 20 ರನ್‌ ಗಳಿಸಿ ಔಟಾದರು.

ಬೃಹತ್‌ ಮೊತ್ತ ಚೇಸಿಂಗ್‌ಗಿಳಿದ ಲಕ್ನೋ, ಆರಂಭದಲ್ಲೇ ಕ್ವಿಂಟನ್‌ ಡಿಕಾಕ್‌ ವಿಕೆಟ್‌ ಕಳೆದುಕೊಂಡಿತು. ಲಕ್ನೋ ತಂಡಕ್ಕೆ ಪದಾರ್ಪಣೆ ಮಾಡಿದ ಕನ್ನಡಿಗ ದೇವದತ್‌ ಪಡಿಕ್ಕಲ್‌ ಡಕೌಟ್‌ ಆದರು. ಆಯುಶ್‌ ಬದೋನಿ ಕೂಡಾ ಕೇವಲ 1 ರನ್‌ ಗಳಿಸಿ ನಿರಾಶೆ ಮೂಡಿಸಿದರು. ಈ ವೇಳೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ನಾಯಕ ರಾಹುಲ್‌ ಮೇಲೆ ಬಿತ್ತು. ಬದಲಿ ಆಟಗಾರ ದೀಪಕ್‌ ಹೂಡಾ ಜೊತೆಗೂಡಿ 49 ರನ್ ಕಲೆ ಹಾಕಿದರು. ಹೂಡಾ ಆಟ 26 ರನ್‌ಗಳಿಗೆ ಅಂತ್ಯವಾಯ್ತು.‌

ಗೆಲುವಿಗೆ ಶತಾಯ ಗತಾಯ ಪ್ರಯತ್ನಿಸಿದ ರಾಹುಲ್‌ ಹಾಗೂ ಪೂರನ್‌

ಈ ವೇಳೆ ಒಂದಾದ ರಾಹುಲ್‌ ಹಾಗೂ ಪೂರನ್‌, ಸ್ಫೋಟಕ ಆಟದ ಮೊರೆ ಹೋದರು. ತಂಡದ ಗೆಲುವಿನ ಗುರಿಯೊಂದಿಗೆ ಅಬ್ಬರಿಸಿ ತಲಾ ಅರ್ಧಶತಕ ಸಿಡಿಸಿದರು. 58 ರನ್‌ ಗಳಿಸಿ ರಾಹುಲ್‌ ಮೈದಾನದಲ್ಲಿ ಇರುವವರೆಗೂ ಗೆಲುವು ಲಕ್ನೋ ಕೈಯಲ್ಲಿತ್ತು. 44 ಎಸೆತಗಳಲ್ಲಿ ರಾಹುಲ್‌ 58 ರನ್‌ ಗಳಿಸಿ ಸಂದೀಪ್‌ ಶರ್ಮಾಗೆ ವಿಕೆಟ್‌ ಒಪ್ಪಿಸಿದರು. ಸ್ಟೋಯ್ನಿಸ್‌ ಬಂದ ವೇಗದಲ್ಲೇ ಹಿಂದಿರುಗಿದರು. ಕೊನೆಯ ಎರಡು ಓವರ್‌ ಲಕ್ನೋ ಅಂದುಕೊಂಡಂತಿರಲಿಲ್ಲ. ಆವೇಶ್‌ ಖಾನ್‌ ಎಸೆದ ಕೊನೆಯ ಓವರ್‌ನಲ್ಲಿ 27 ರನ್‌ಗಳ ಅಗತ್ಯವಿತ್ತು. ಸ್ಫೋಟಕ ಆಟಗಾರರಾದ ಪೂರನ್‌ ಹಾಗೂ ಕೃನಾಲ್‌ ಪಾಂಡ್ಯ ಮೈದಾನದಲ್ಲಿದ್ದರೂ, ಒಂದೇ ಒಂದು ಬೌಂಡರಿ ಗಳಿಸಲು ಸಾಧ್ಯವಾಗಲಿಲ್ಲ. ಈ ಓವರ್‌ನಲ್ಲಿ ಕೇವಲ 6 ರನ್‌ ಮಾತ್ರ ಬಂತು. ಕೊನೆಗೆ ತಂಡವು 173 ರನ್‌ಗಳಿಗೆ ಆಟ ಮುಗಿಸಿತು.

Whats_app_banner