ಕನ್ನಡ ಸುದ್ದಿ / ಕ್ರಿಕೆಟ್ /
ರಾಜಸ್ಥಾನ್ ವಿರುದ್ಧ ಆರ್‌ಸಿಬಿ ‘ಗೋ ಗ್ರೀನ್’, ಡೆಲ್ಲಿ vs ಮುಂಬೈ: ನಾಳಿನ ಐಪಿಎಲ್ ಪಂದ್ಯಗಳ 10 ಪ್ರಮುಖ ಅಂಶಗಳು
ರಾಜಸ್ಥಾನ್ ವಿರುದ್ಧ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಸಿರು ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ. ಪ್ರತಿ ಬಾರಿಯೂ ಐಪಿಎಲ್‌ನ ಒಂದು ಪಂದ್ಯದಲ್ಲಿ ಅರ್‌ಸಿಬಿ ತಂಡ ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಿದೆ. ಇದು 'ಗೋ ಗ್ರೀನ್' ಅಭಿಯಾನದ ಭಾಗವಾಗಿದೆ.

ರಾಜಸ್ಥಾನ್ ವಿರುದ್ಧ ಆರ್‌ಸಿಬಿ, ಡೆಲ್ಲಿ vs ಮುಂಬೈ: ನಾಳಿನ ಐಪಿಎಲ್ ಪಂದ್ಯಗಳ 10 ಅಂಶಗಳು (PTI)
ಐಪಿಎಲ್ 2025ರ ಸೂಪರ್ ಸಂಡೇ ದಿನ (ಏಪ್ರಿಲ್ 13, ಭಾನುವಾರ) ಮತ್ತೊಂದು ಡಬಲ್ ಹೆಡರ್ ನಡೆಯಲಿದೆ. ದಿನದ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (RR) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯವು ಆರ್‌ಆರ್ ತವರು ಮೈದಾನ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದೇ ವೇಳೆ ದಿನದ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ (DC vs MI) ತಂಡಗಳು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಎಂದಿನಂತೆ ಮೊದಲ ಪಂದ್ಯ 3:30ಕ್ಕೆ ನಡೆದರೆ, ದಿನದ ಎರಡನೇ ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದೆ. ಭಾನುವಾರದ ಪಂದ್ಯಕ್ಕೆ ಸಂಬಂಧಿಸಿದ 10 ಪ್ರಮುಖ ಅಂಶಗಳನ್ನು ನೋಡೋಣ.
- ಐಪಿಎಲ್‌ನಲ್ಲಿ ಆರ್‌ಆರ್ ಮತ್ತು ಆರ್‌ಸಿಬಿ ತಂಡಗಳು ಈವರೆಗೆ 31 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅದರಲ್ಲಿ ಆರ್‌ಸಿಬಿ 15 ಪಂದ್ಯಗಳಲ್ಲಿ ಗೆದ್ದರೆ, ರಾಜಸ್ಥಾನ 14 ಪಂದ್ಯಗಳನ್ನು ಗೆದ್ದಿದೆ.
- ಜೈಪುರದಲ್ಲಿ ನಡೆದ ಪಂದ್ಯಗಳಲ್ಲಿ ಉಭಯ ತಂಡಗಳ ನಡುವಿನ ಪೈಪೋಟಿ ಸಮನಾಗಿದೆ. ಆದರೆ ಆತಿಥೇಯ ತಂಡ 5-4 ಅಂತರದಿಂದ ತುಸು ಮೇಲುಗೈ ಸಾಧಿಸಿದೆ. ಈ ತಂಡಗಳು ಆಡಿದ ಕೊನೆಯ ಐದು ಪಂದ್ಯಗಳಲ್ಲಿಯೂ ರಾಜಸ್ಥಾನ 3-2 ಅಂತರದಿಂದ ಮೇಲುಗೈ ಸಾಧಿಸಿದೆ.
- ರಾಜಸ್ಥಾನ ತಂಡದ ವೇಗಿ ಸಂದೀಪ್ ಶರ್ಮಾ, ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಗರಿಷ್ಠ ಏಳು ಬಾರಿ ಔಟ್ ಮಾಡಿದ್ದಾರೆ. ಸ್ವಿಂಗ್ ಹಾಗೂ ಯಾರ್ಕರ್‌ಗಳಿಂದ ಎದುರಾಳಿಯನ್ನು ಕಾಡುವ ಸಂದೀಪ್, ಆರ್‌ಸಿಬಿಗೆ ಮುಳುವಾದರೂ ಅಚ್ಚರಿಯಿಲ್ಲ.
- ಪ್ರಸಕ್ತ ವರ್ಷದ ಐಪಿಎಲ್ ಋತುವಿನಲ್ಲಿ ಸಂಜು ಸ್ಯಾಮ್ಸನ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆಡಿದ ಐದು ಪಂದ್ಯಗಳಲ್ಲಿ 36ರ ಸರಾಸರಿ ಮತ್ತು 151ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಇವರನ್ನು ಆರ್‌ಸಿಬಿ ವೇಗಿ ಭುವನೇಶ್ವರ್ ಕುಮಾರ್ ಕಾಡುವ ಸಾಧ್ಯತೆ ಇದೆ. ಒಟ್ಟು 18 ಟಿ20 ಇನ್ನಿಂಗ್ಸ್‌ಗಳಲ್ಲಿ ನಾಲ್ಕರಲ್ಲಿ ಸ್ಯಾಮ್ಸನ್ ಅವರನ್ನು ಭುವಿ ಔಟ್ ಮಾಡಿದ್ದಾರೆ.
- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ್ ವಿರುದ್ಧ ಹಸಿರು ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ. ಪ್ರತಿ ಬಾರಿಯೂ ಐಪಿಎಲ್‌ನ ಒಂದು ಪಂದ್ಯದಲ್ಲಿ ತಂಡ ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತದೆ. ಇದು 'ಗೋ ಗ್ರೀನ್' ಅಭಿಯಾನದ ಭಾಗವಾಗಿದ್ದು, ಈ ಬಾರಿ ಏಪ್ರಿಲ್ 13ರಂದು ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ (RR) ವಿರುದ್ಧ ಆಡಲಿದೆ. ಅಪರೂಪವೆಂಬಂತೆ ತವರಿನ ಹೊರಗೆ ಆಡುತ್ತಿರುವ ಪಂದ್ಯದಲ್ಲಿ ತಂಡ ಹಸಿರು ಜೆರ್ಸಿ ತೊಡುತ್ತಿದೆ.
- ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ತಂಡವು ಭರ್ಜರಿ ಫಾರ್ಮ್‌ನಲ್ಲಿದ್ದು, ಟೂರ್ನಿಯ ಏಕೈಕ ಅಜೇಯ ತಂಡ ಎನಿಸಿಕೊಂಡಿದೆ. ಆಡಿದ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದು ಬೀಗಿದೆ. ಅತ್ತ ಮುಂಬೈ ಇಂಡಿಯನ್ಸ್ ತಂಡ 1 ಪಂದ್ಯ ಮಾತ್ರ ಗೆದ್ದಿದ್ದು, ನಾಲ್ಕರಲ್ಲಿ ಸೋತಿದೆ.
- ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ರನ್ ಮಳೆ ಹರಿಯುವ ನಿರೀಕ್ಷೆ ಇದೆ. ಎರಡೂ ತಂಡಗಳು ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿವೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ದೊಡ್ಡ ಮೊತ್ತದ ರನ್ ಗಳಿಕೆಗೆ ಹೆಸರುವಾಸಿಯಾಗಿದೆ.
- ಈ ಎರಡೂ ತಂಡಗಳ ನಡುವೆ ಐಪಿಎಲ್ ಪಂದ್ಯಗಳಾದಾಗ ಮುಂಬೈ ಇಂಡಿಯನ್ಸ್ 19 ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದೆ. ಉಳಿದಂತೆ ಡೆಲ್ಲಿ ಕ್ಯಾಪಿಟಲ್ಸ್ 16ರಲ್ಲಿ ಜಯ ಸಾಧಿಸಿದೆ. ಆದರೆ, ತವರಿನಲ್ಲಿ ಡಿಸಿ ತಂಡವು ಎಂಐ ವಿರುದ್ಧ 9-5 ಅಂತರದಲ್ಲಿ ಮುನ್ನಡೆಯಲ್ಲಿದೆ.
- ಮೊದಲ ಓವರ್‌ನಲ್ಲಿ ವಿಕೆಟ್ ಪಡೆಯುವುದೆಂದರೆ ಮುಂಬೈ ತಂಡದ ಟ್ರೆಂಟ್ ಬೌಲ್ಟ್‌ಗೆ ಭಾರಿ ಇಷ್ಟ. ಕಳೆದ ಪಂದ್ಯದಲ್ಲಿ ಅವರು ಐಪಿಎಲ್‌ನಲ್ಲಿ 31ನೇ ಬಾರಿಗೆ ಮೊದಲ ಓವರ್‌ನಲ್ಲೇ ವಿಕೆಟ್ ಪಡೆದರು. ಇದು ಅತಿ ಹೆಚ್ಚು ಗಳಿಕೆ.
- ಭಾನುವಾರದ ರೋಚಕ ಪಂದ್ಯಗಳು ಟಿವಿ ಮೂಲಕ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್‌ನಲ್ಲಿ ನೇರಪ್ರಸಾರವಾಗಲಿದೆ. ಇದೇ ವೇಳೆ ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಲೈವ್‌ಸ್ಟ್ರೀಮಿಂಗ್ ಇರಲಿದೆ.
ಇದನ್ನೂ ಓದಿ | ಧೋನಿ ಹಿಡಿದಿದ್ದು ಬ್ಯಾಟಲ್ಲ, ಖಡ್ಗ ಎಂದ ರಾಯುಡು; ನಿಮ್ಮ ಆರಾಧ್ಯ ದೈವ ಊಸರವಳ್ಳಿ ಎಂದ ಸಿಕ್ಸರ್ ಸಿಧು, ವಿಡಿಯೋ
