ಆರ್‌ಆರ್ vs ಆರ್‌ಸಿಬಿ, ಡಿಸಿ vs ಎಂಐ ನಡುವೆ ರೋಚಕ ಐಪಿಎಲ್ ಪಂದ್ಯ; ಜೈಪುರ-ದೆಹಲಿ ಪಿಚ್ ಹಾಗೂ ಹವಾಮಾನ ವರದಿ
IPL 2025: ಐಪಿಎಲ್ 18ನೇ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ತವರಿನ ಹೊರಗೆ ಆಡಿದ ಪಂದ್ಯಗಳಲ್ಲಿ ಒಂದನ್ನೂ ಸೋತಿಲ್ಲ. ರಾಜಸ್ಥಾನ ರಾಯಲ್ಸ್ ತವರಿನಲ್ಲಿ ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯಲಿರುವ ತಂಡ, ಟೂರ್ನಿಯ ನಾಲ್ಕನೇ ಗೆಲುವಿಗೆ ಎದುರು ನೋಡುತ್ತಿದೆ.

ಐಪಿಎಲ್‌ನಲ್ಲಿ ಭಾನುವಾರ ಮತ್ತೆ ಎರಡು ಪಂದ್ಯಗಳು ನಡೆಯುತ್ತಿವೆ. ವಾರಾಂತ್ಯ ದಿನ (ಏಪ್ರಿಲ್ 13) ಆಗಿರುವುದರಿಂದ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗಲಿದೆ. ಅದರಲ್ಲೂ ದಿನದ ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡ ಆಡುತ್ತಿರುವುದು ಇನ್ನೂ ವಿಶೇಷ. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (RR) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯದಲ್ಲಿ ಆರ್‌ಸಿಬಿ ತಂಡವು ಹಸಿರು ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ. ಇದೇ ವೇಳೆ ದಿನದ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದೆ.
ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ತವರಿನ ಹೊರಗೆ ಆಡಿದ ಪಂದ್ಯಗಳಲ್ಲಿ ಒಂದನ್ನೂ ಸೋತಿಲ್ಲ. ಅತ್ತ ರಾಜಸ್ಥಾನ ತಂಡ ಈವರೆಗೆ 2 ಪಂದ್ಯಗಳಲ್ಲಿ ಗೆದ್ದು 3ರಲ್ಲಿ ಸೋತಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಭರ್ಜರಿ ಫಾರ್ಮ್‌ನಲ್ಲಿದ್ದು, ಟೂರ್ನಿಯ ಅಜೇಯ ತಂಡ ಎನಿಸಿಕೊಂಡಿದೆ. ಆಡಿದ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಗೆದ್ದಿದೆ. ಅತ್ತ ಮುಂಬೈ ಇಂಡಿಯನ್ಸ್ ತಂಡ 1 ಪಂದ್ಯ ಮಾತ್ರ ಗೆದ್ದಿದ್ದು, ನಾಲ್ಕರಲ್ಲಿ ಸೋತಿದೆ.
ಅರುಣ್ ಜೇಟ್ಲಿ ಕ್ರೀಡಾಂಗಣದ ಪಿಚ್ ವರದಿ
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ರನ್ ಮಳೆ ಹರಿಯುವ ನಿರೀಕ್ಷೆ ಇದೆ. ಎರಡೂ ತಂಡಗಳು ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿವೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ದೊಡ್ಡ ಮೊತ್ತದ ರನ್ ಗಳಿಕೆಗೆ ಹೆಸರುವಾಸಿಯಾಗಿದೆ. ಕಡಿಮೆ ಸ್ಕೋರಿಂಗ್ ಪಂದ್ಯವಾಗಿಸಲು ಕ್ಯುರೇಟರ್‌ಗಳು ಪ್ರಯತ್ನಿಸದ ಹೊರತು ಪಿಚ್‌ನಲ್ಲಿ ಯಾವುದೇ ಬದಲಾವಣೆಯಾಗುವ ನಿರೀಕ್ಷೆ ಇಲ್ಲ.
ದೆಹಲಿ ಹವಾಮಾನ ವರದಿ
ಪಂದ್ಯದ ದಿನ ದೆಹಲಿಯಲ್ಲಿ ಮಳೆ ಬರುವ ಸಾಧ್ಯತೆ ಇಲ್ಲ. ಪಂದ್ಯಕ್ಕೂ ಎರಡು ದಿನಗಳ ಮೊದಲು ದೆಹಲಿಯಲ್ಲಿ ಧೂಳಿನ ಗಾಳಿ ಬೀಸಿತ್ತು. ತಾಪಮಾನ ಕೂಡಾ ಸ್ವಲ್ಪ ಕಡಿಮೆಯಾಗಿದೆ.
ಸವಾಯಿ ಮಾನ್ಸಿಂಗ್ ಕ್ರೀಡಾಂಗಣ ಪಿಚ್ ವರದಿ
ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣವು ಬೌಲಿಂಗ್ ಸ್ನೇಹಿ ಪಿಚ್ ಆಗಲಿದೆ. ಬ್ಯಾಟರ್‌ಗಳು ಸಾಮಾನ್ಯವಾಗಿ ಇಲ್ಲಿ ರನ್ ಗಳಿಸಲು ಕಷ್ಟಪಡುತ್ತಾರೆ. ಇಲ್ಲಿ ಈವರೆಗೆ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ 200 ರನ್‌ಗಳ ಗಡಿ ದಾಟಿವೆ. ಹೀಗಾಗಿ ಇದು ಬೌಲರ್‌ಗಳು ಮೇಲುಗೈ ಸಾಧಿಸಲು ಸಾಧ್ಯವಾಗುವ ಪಂದ್ಯ. ಟಾಸ್ ಗೆದ್ದ ತಂಡವು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಲು ಮುಂದಾಗುತ್ತದೆ. ಈವರೆಗೆ 64.91ರಷ್ಟು ತಂಡಗಳು ಚೇಸಿಂಗ್ ಮಾಡಿ ಗೆದ್ದಿವೆ.
ಜೈಪುರ ಹವಾಮಾನ ವರದಿ
ಆರ್‌ಸಿಬಿ ಪಂದ್ಯಕ್ಕೆ ಜೈಪುರ ಹವಾಮಾನದ ಬಗ್ಗೆ ಚಿಂತಿಸಬೇಕಾಗಿಲ್ಲ. ಭಾನುವಾರ ಮಳೆಯಾಗುವ ಸಾಧ್ಯತೆಯಿಲ್ಲ. ಮಧ್ಯಾಹ್ನ ಬಿಸಿಲು ಹೆಚ್ಚಾಗಲಿದ್ದು, ಮೋಡ ಕವಿದ ವಾತಾವರಣದ ಸಾಧ್ಯತೆ ಶೇ. 3ರಷ್ಟು ಇದೆ.
