ರೋಹಿತ್ ಶರ್ಮಾಗಾಗಿ ಶತಕವೀರನ ಕೈಬಿಟ್ಟು ಸೋತ ಮುಂಬೈ ರಣಜಿ ತಂಡ; ಆರಾಧ್ಯದೈವದ ಕುರಿತು ಆಯುಷ್ ಮಾತ್ರೆ ಹೇಳಿದ್ದಿಷ್ಟು
ಕನ್ನಡ ಸುದ್ದಿ  /  ಕ್ರಿಕೆಟ್  /  ರೋಹಿತ್ ಶರ್ಮಾಗಾಗಿ ಶತಕವೀರನ ಕೈಬಿಟ್ಟು ಸೋತ ಮುಂಬೈ ರಣಜಿ ತಂಡ; ಆರಾಧ್ಯದೈವದ ಕುರಿತು ಆಯುಷ್ ಮಾತ್ರೆ ಹೇಳಿದ್ದಿಷ್ಟು

ರೋಹಿತ್ ಶರ್ಮಾಗಾಗಿ ಶತಕವೀರನ ಕೈಬಿಟ್ಟು ಸೋತ ಮುಂಬೈ ರಣಜಿ ತಂಡ; ಆರಾಧ್ಯದೈವದ ಕುರಿತು ಆಯುಷ್ ಮಾತ್ರೆ ಹೇಳಿದ್ದಿಷ್ಟು

ಆಯುಷ್ ಮಾತ್ರೆ ತಮ್ಮ ಆರಾಧ್ಯದೈವ ರೋಹಿತ್ ಶರ್ಮಾ ಅವರೊಂದಿಗೆ ಡ್ರೆಸ್ಸಿಂಗ್ ಕೊಠಡಿಯನ್ನು ಹಂಚಿಕೊಂಡಿದ್ದಾರೆ. ಹಿಟ್‌ಮ್ಯಾನ್‌ಗಾಗಿ ತಮ್ಮ ಸ್ಥಾನ ಬಿಟ್ಟುಕೊಟ್ಟ ಅವರು, ಟೀಮ್‌ ಇಂಡಿಯಾ ನಾಯಕನ ಭೇಟಿಯಾಗಿ ಖುಷಿಪಟ್ಟಿದ್ದಾರೆ. ಆದರೆ, ಮುಂಬೈ ತಂಡವು ರಣಜಿ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಸೋತಿದೆ.

ರೋಹಿತ್ ಶರ್ಮಾಗಾಗಿ ಶತಕವೀರನ ಕೈಬಿಟ್ಟು ಸೋತ ಮುಂಬೈ ರಣಜಿ ತಂಡ
ರೋಹಿತ್ ಶರ್ಮಾಗಾಗಿ ಶತಕವೀರನ ಕೈಬಿಟ್ಟು ಸೋತ ಮುಂಬೈ ರಣಜಿ ತಂಡ (Instagram/@ayush_m255)

ಅಂತೂ ಇಂತೂ ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ರಣಜಿ ಕ್ರಿಕೆಟ್‌ ಅಖಾಡಕ್ಕೆ ಧುಮುಕಿದ್ದಾರೆ. ಜಮ್ಮು ಮತ್ತು ಕಾಶ್ಮೀರ ತಂಡದ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಆರಂಭಿಕರಾಗಿ ಹಿಟ್‌ಮ್ಯಾನ್‌ ಕಣಕ್ಕಿಳಿದಿದ್ದಾರೆ. ಸತತ ಎರಡು ಇನ್ನಿಂಗ್ಸ್‌ಗಳಲ್ಲಿಯೂ ಕ್ರೀಸ್‌ಕಚ್ಚಿ ಬ್ಯಾಟ್‌ ಬೀಸುವಲ್ಲಿ ಅವರು ವಿಫಲರಾಗಿದ್ದಾರೆ. ಈ ನಡುವೆ ರೋಹಿತ್‌ ಶರ್ಮಾಗಾಗಿ ಯುವ ಆಟಗಾರನೊಬ್ಬ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ. ಮುಂಬೈ ಪ್ಲೇಯಿಂಗ್ ಇಲೆವೆನ್‌ನಲ್ಲಿ ತಮ್ಮ ಸ್ಥಾನ ತ್ಯಾಗ ಮಾಡಿದ 17 ವರ್ಷದ ಬ್ಯಾಟಿಂಗ್ ಸೆನ್ಸೇಷನ್ ಆಯುಷ್ ಮಾತ್ರೆ, ಇದೀಗ ತಮ್ಮ ಆರಾಧ್ಯ ದೈವ ರೋಹಿತ್ ಶರ್ಮಾ ಕುರಿತಾಗಿ ಹೃದಯಸ್ಪರ್ಶಿ ಸಂದೇಶ ಹಂಚಿಕೊಂಡಿದ್ದಾರೆ.

ಭಾರತ ಅಂಡರ್‌ 19 ತಂಡದ ಆರಂಭಿಕ ಆಟಗಾರ ಮಾತ್ರೆ, ತಮ್ಮ ಪ್ರಥಮ ದರ್ಜೆ ವೃತ್ತಿಜೀವನದ ಆರಂಭದಲ್ಲೇ ಉತ್ತಮ ಅಂಕಿ-ಅಂಶಗಳನ್ನು ದಾಖಲಿಸಿದ್ದಾರೆ. 6 ಪಂದ್ಯಗಳಲ್ಲಿ 40.09ರ ಸರಾಸರಿಯಲ್ಲಿ 441 ರನ್ ಗಳಿಸಿದ್ದಾರೆ. ಸಣ್ಣ ವಯಸ್ಸಿನಲ್ಲಿ ದೇಶೀಯ ಕ್ರಿಕೆಟ್‌ನ ಆರಂಭಿಕ ಪಂದ್ಯಗಳಲ್ಲಿ ಉತ್ತಮ ಸ್ಥಿರತೆ ಪ್ರದರ್ಶಿಸಿದ್ದಾರೆ. ಆದರೂ, ಭಾರತೀಯ ಟೆಸ್ಟ್ ತಂಡ ನಾಯಕ ರೋಹಿತ್‌ಗಾಗಿ ಅವರು ತಮ್ಮ ಸ್ಥಾನ ಬಿಟ್ಟುಕೊಡಬೇಕಾಯ್ತು.

ಫಾರ್ಮ್ ಕಂಡುಕೊಳ್ಳಲು ರಣಜಿ ಟ್ರೋಫಿ ಆಡುತ್ತಿರುವ ರೋಹಿತ್‌, ಮುಂಬೈ ಪರ ಎರಡೂ ಇನ್ನಿಂಗ್ಸ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾದರು.

ಇದೀಗ ತಮ್ಮ ಆರಾಧ್ಯ ದೈವ ರೋಹಿತ್ ಶರ್ಮಾ ಅವರೊಂದಿಗೆ ಡ್ರೆಸ್ಸಿಂಗ್ ಕೊಠಡಿಯನ್ನು ಹಂಚಿಕೊಂಡಿರುವ ಮಾತ್ರೆ , ತಮ್ಮ ಖುಷಿಯ ದಿನದ ಬಗ್ಗೆ ಹಂಚಿಕೊಂಡಿದ್ದಾರೆ.

ಡ್ರೆಸ್ಸಿಂಗ್ ಕೋಣೆ ಹಂಚಿಕೊಳ್ಳುವುದು ನಂಬಲಸಾಧ್ಯವಾದ ಕ್ಷಣ

“ಟಿವಿಯಲ್ಲಿ ಅವರು ಬ್ಯಾಟಿಂಗ್ ಮಾಡುವುದನ್ನು ನೋಡುವ ಮೂಲಕ ಕ್ರಿಕೆಟ್ ಆಡಲು ಪ್ರಾರಂಭಿಸಿದೆ. ಇಂದು ನನ್ನ ಆರಾಧ್ಯ ದೈವದೊಂದಿಗೆ ಡ್ರೆಸ್ಸಿಂಗ್ ಕೋಣೆಯನ್ನು ಹಂಚಿಕೊಳ್ಳುವುದು ನಂಬಲಸಾಧ್ಯವಾದ ಕ್ಷಣ. ಮುಂದೆ ಸಾಗಲು ಸಾಕಷ್ಟು ಕಲಿಯಬೇಕಾಗಿದೆ” ಎಂದು ಮಾತ್ರೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಸರ್ವಿಸಸ್ ವಿರುದ್ಧದ ಕೊನೆಯ ರಣಜಿ ಟ್ರೋಫಿ ಪಂದ್ಯದಲ್ಲಿ ಮಾತ್ರೆ 116 ರನ್ ಸಿಡಿಸಿದ್ದರು. ಆ ಮೂಲಕ ಮುಂಬೈ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ವರ್ಷವಷ್ಟೇ ಲಿಸ್ಟ್ ಎ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 17ರ ಹರೆಯದ ಆಟಗಾರ, ಆ ಸ್ವರೂಪದಲ್ಲಿ 65.42ರ ಸರಾಸರಿಯಲ್ಲಿ 458 ರನ್ ಗಳಿಸಿದ್ದಾರೆ.

ರೋಹಿತ್ ಶರ್ಮಾ ಇನ್ನೂ ಫಾರ್ಮ್‌ ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ. ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಅವರ ಪ್ರದರ್ಶನ ಇತ್ತೀಚೆಗೆ ತೀರಾ ಕಳಪೆಯಾಗಿದೆ. ನ್ಯೂಜಿಲೆಂಡ್ ವಿರುದ್ಧ ತವರಿನ ಸರಣಿ ನಂತರ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್‌ ಟ್ರೋಫಿಯಲ್ಲೂ ವಿಫಲರಾದರು. ಇದೀಗ ಸುಮಾರು ಒಂದು ದಶಕದ ನಂತರ ದೇಶೀಯ ರೆಡ್-ಬಾಲ್ ಕ್ರಿಕೆಟ್‌ಗೆ ಮರಳಿದ ಅವರು, ಜಮ್ಮು-ಕಾಶ್ಮೀರ ವಿರುದ್ಧದ ರಣಜಿ ಟ್ರೋಫಿ ಪಂದ್ಯದ ಆರಂಭಿಕ ಇನ್ನಿಂಗ್ಸ್‌ನಲ್ಲಿ ಕೇವಲ 3 ರನ್ (19 ಎಸೆತ) ಗಳಿಸಿದರು. ಆ ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತೆ 28 ರನ್ ಗಳಿಸಿ ಸುಸ್ತಾದರು.

ರೋಹಿತ್‌ ತಂಡ ಸೇರಿಯೂ ಸಿಗದ ಲಾಭ

ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದ ಆಟಗಾರನ್ನು ಹೊರಗಿಟ್ಟು ರೋಹಿತ್‌ ಶರ್ಮಾರನ್ನು ಆಡಿಸಿಯೂ ಮುಂಬೈ ತಂಡಕ್ಕೆ ಲಾಭವಾಗಿಲ್ಲ. ತಂಡವು ಜಮ್ಮು ಮತ್ತು ಕಾಶಮೀರ ವಿರುದ್ಧ ಸೋಲು ಕಂಡಿದೆ. ಮುಂದೆ ಜನವರಿ 30ರಿಂದ ಆರಂಭವಾಗುವ ಮೇಘಾಲಯ ವಿರುದ್ಧದ ಮುಂದಿನ ರಣಜಿ ಪಂದ್ಯದಲ್ಲಿ ರೋಹಿತ್ ಆಡುವ ಬಳಗಕ್ಕೆ ಮರಳುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

Whats_app_banner