ಟಿ20 ವಿಶ್ವಕಪ್ನಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ; ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ ಅಫ್ಘಾನಿಸ್ತಾನಕ್ಕೆ ಜಯ
Afghanistan Beat New Zealand: ಟಿ20 ವಿಶ್ವಕಪ್ 2024 ಟೂರ್ನಿಯ 14ನೇ ಲೀಗ್ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್ ತಂಡವು ಅಫ್ಘಾನಿಸ್ತಾನ ತಂಡದ ಎದುರು ಸೋಲು ಕಂಡಿದೆ.

ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ (T20 World Cup 2024) ಮತ್ತೊಂದು ಅಚ್ಚರಿಯ ಫಲಿತಾಂಶ ಹೊರ ಬಿದ್ದಿದೆ. ಪಾಕಿಸ್ತಾನವನ್ನು ಅಮೆರಿಕ, ಐರ್ಲೆಂಡ್ ತಂಡವನ್ನು ಕೆನಡಾ ಸೋಲುಣಿಸಿದ ಬಳಿಕ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಅಫ್ಘಾನಿಸ್ತಾನ (Afghanistan Beat New Zealand) ಮಣಿಸಿದೆ. ಜೂನ್ 8ರಂದು ನಡೆದ ಗುಂಪು ಹಂತದ 14ನೇ ಪಂದ್ಯದಲ್ಲಿ ಕಿವೀಸ್ ವಿರುದ್ಧ ಆಫ್ಘನ್ 84 ರನ್ಗಳ ಭಾರಿ ಅಂತರದ ಜಯ ಸಾಧಿಸಿದೆ. ಆಫ್ಘನ್ ಆಲ್ರೌಂಡ್ ಆಟಕ್ಕೆ ನ್ಯೂಜಿಲೆಂಡ್ ಭಾರಿ ಮುಖಭಂಗಕ್ಕೆ ಒಳಗಾಗಿದೆ.
ಗಯಾನಾದ ಪ್ರಾವಿಡೆನ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಫ್ಘಾನಿಸ್ತಾನ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿತು. ರೆಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜದ್ರಾನ್ ಅವರ ಅದ್ಭುತ ಆಟದ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಕಿವೀಸ್, ಕೇವಲ 75 ರನ್ಗಳಿಗೆ ಆಲೌಟ್ ಆಯಿತು. ಆಫ್ಘನ್ ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್ನಲ್ಲೂ ಮಿಂಚಿನ ಪ್ರದರ್ಶನ ನೀಡಿತು.
ಗುರ್ಬಾಜ್ ಮತ್ತೆ ಆರ್ಭಟ, ಶತಕದ ಜೊತೆಯಾಟ
ಆರಂಭಿಕರಾದ ರೆಹಮಾನುಲ್ಲಾ ಗುರ್ಜಾಬ್ ಮತ್ತು ಇಬ್ರಾಹಿಂ ಜದ್ರಾನ್ ಮತ್ತೊಮ್ಮೆ ಶತಕದ ಜೊತೆಯಾಟವಾಡಿದರು. ಕಿವೀಸ್ ಅನುಭವಿಗಳ ಎದುರು ಅಬ್ಬರಿಸಿದರು. ಕಠಿಣ ಪಿಚ್ನಲ್ಲೂ ಉತ್ತಮ ಪ್ರದರ್ಶನ ನೀಡಿದ ಜೋಡಿ, 87 ಎಸೆತಗಳಲ್ಲಿ 103 ರನ್ ಪಾಲುದಾರಿಕೆ ನೀಡಿದರು. ಆದರೆ ಜದ್ರಾನ್ ಅರ್ಧಶತಕದ ಅಂಚಿನಲ್ಲಿ ವಿಕೆಟ್ ಒಪ್ಪಿಸಿದರು. 41 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಿತ 44 ರನ್ ಸಿಡಿಸಿದರು. ಆದರೆ ಆ ಬಳಿಕ ಬ್ಯಾಟರ್ಗಳು ಆಫ್ಘನ್ ಕೈ ಹಿಡಿಯಲಿಲ್ಲ.
ಆದರೆ, ಗುರ್ಬಾಜ್ ಕೊನೆಯವರೆಗೂ ಕ್ರೀಸ್ನಲ್ಲಿದ್ದರು. ಆ ಮೂಲಕ 150ರ ಗಡಿ ದಾಟಿಸಿದರು. ಅವರು 56 ಎಸೆತಗಳಲ್ಲಿ 5 ಸಿಕ್ಸರ್, 5 ಬೌಂಡರಿ ಸಹಿತ 80 ರನ್ ಬಾರಿಸಿದರು. ಉಳಿದಂತೆ ಅಜ್ಮತುಲ್ಲಾ ಓಮರ್ಜಾಯ್ 22 ರನ್, ಮೊಹಮ್ಮದ್ ನಬಿ 0, ರಶೀದ್ ಖಾನ್ 6, ಕರೀಮ್ ಜನ್ನತ್ 1, ಗುಲ್ಬದೀನ್ ನೈಬ್ 0, ನಜೀಬುಲ್ಲಾ 1 ರನ್ ಗಳಿಸಿದರು. ಕಿವೀಸ್ ಪರ ಟ್ರೆಂಟ್ ಬೋಲ್ಟ್ ಮತ್ತು ಮ್ಯಾಟ್ ಹೆನ್ರಿ ತಲಾ 2 ವಿಕೆಟ್ ಕಿತ್ತರು. ಲಾಕಿ ಫರ್ಗ್ಯುಸನ್ 1 ರನ್ ಗಳಿಸಿದರು.
ನ್ಯೂಜಿಲೆಂಡ್ ಅಟ್ಟರ್ಫ್ಲಾಪ್ ಪ್ರದರ್ಶನ
160 ರನ್ಗಳ ಸಾಧಾರಣ ಮೊತ್ತವಾದರೂ ಈ ಪಿಚ್ಗಳಲ್ಲಿ ಚೇಸ್ ಮಾಡುವುದು ತುಂಬಾ ಕಠಿಣವಾಗಿದೆ. ಅಫ್ಘಾನಿಸ್ತಾನ ಟೈಟ್ ಬೌಲಿಂಗ್ ನಡುವೆ ಬ್ಯಾಟರ್ಗಳು ವಿಫಲರಾದರು. ಫಜಲ್ಹಕ್ ಫಾರೂಕಿ ಬೆಂಕಿ ಬೌಲಿಂಗ್ ನಡೆಸಿದರು. ಅವರಿಗೆ ರಶೀದ್ ಖಾನ್ ಸಾಥ್ ಕೊಟ್ಟರು. ಗ್ಲೆನ್ ಫಿಲಿಪ್ಸ್ 18, ಮ್ಯಾಟ್ ಹೆನ್ರಿ 12 ರನ್ ಗಳಿಸಿ ಎರಡಂಕಿ ದಾಟಿದರು. ಫಾರೂಕಿ 3.2 ಓವರ್ಗಳಲ್ಲಿ 17 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದರೆ, ರಶೀದ್ 4 ಓವರ್ಗಳಲ್ಲಿ 17 ರನ್ ನೀಡಿ 4 ವಿಕೆಟ್, ಮೊಹಮ್ಮದ್ ನಬಿ 2 ವಿಕೆಟ್ ಪಡೆದರು.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
