ಕನ್ನಡ ಸುದ್ದಿ  /  ಕ್ರಿಕೆಟ್  /  ಗುಜರಾತ್ ಟೈಟಾನ್ಸ್ ಬೊಂಬಾಟ್ ಚೇಸಿಂಗ್; ರಾಜಸ್ಥಾನ್ ರಾಯಲ್ಸ್‌ಗೆ‌ ಮೊದಲ ಸೋಲುಣಿಸಿದ ರಶೀದ್ ಖಾನ್

ಗುಜರಾತ್ ಟೈಟಾನ್ಸ್ ಬೊಂಬಾಟ್ ಚೇಸಿಂಗ್; ರಾಜಸ್ಥಾನ್ ರಾಯಲ್ಸ್‌ಗೆ‌ ಮೊದಲ ಸೋಲುಣಿಸಿದ ರಶೀದ್ ಖಾನ್

IPL 2024: ಐಪಿಎಲ್‌ 17ರ ಆವೃತ್ತಿಯ 24ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡವು ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿದೆ. ಸಂಜು ಸ್ಯಾಮ್ಸನ್ ನೇತೃತ್ವದ ಆರ್‌ಆರ್‌ ಟೂರ್ನಿಯಲ್ಲಿ ಸತತ ನಾಲ್ಕು ಗೆಲುವುಗಳ ಬಳಿಕ ಮೊದಲ ಸೋಲು ಕಂಡಿದೆ.

ರಾಜಸ್ಥಾನ್ ರಾಯಲ್ಸ್‌ಗೆ‌ ಮೊದಲ ಸೋಲುಣಿಸಿದ ಗುಜರಾತ್ ಟೈಟಾನ್ಸ್
ರಾಜಸ್ಥಾನ್ ರಾಯಲ್ಸ್‌ಗೆ‌ ಮೊದಲ ಸೋಲುಣಿಸಿದ ಗುಜರಾತ್ ಟೈಟಾನ್ಸ್ (AP)

ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಅಜೇಯ ಓಟದಲ್ಲಿದ್ದ ರಾಜಸ್ಥಾನ್‌ ರಾಯಲ್ಸ್‌ಗೆ, ಗುಜರಾತ್‌ ಟೈಟಾನ್ಸ್ ಮೊದಲ ಸೋಲುಣಿಸಿದೆ. ಜೈಪುರದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಕೊನೆಯ ಎಸೆತದವರೆಗೂ ರೋಚಕವಾಗಿ ಸಾಗಿದ ಪಂದ್ಯದಲ್ಲಿ ಶುಭ್ಮನ್‌ ಗಿಲ್‌ ಪಡೆ ಗೆದ್ದು ಬೀಗಿದೆ. ಡೆತ್‌ ಓವರ್‌ಗಳಲ್ಲಿ ರಾಹುಲ್‌ ತೆವಾಟಿಯಾ ಹಾಗೂ ರಶೀದ್‌ ಖಾನ್‌ ಹೋರಾಟಕ್ಕೆ ಜಯ ಒಲಿದಿದೆ. ಈ ಗೆಲುವಿನೊಂದಿಗೆ ಟೈಟಾನ್ಸ್‌ ಆರು ಅಂಕ ಸಂಪಾದಿಸಿದೆ.

ಟ್ರೆಂಡಿಂಗ್​ ಸುದ್ದಿ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌, 3 ವಿಕೆಟ್‌ ಕಳೆದುಕೊಂಡು 196 ರನ್‌ ಗಳಿಸಿತು. ಚೇಸಿಂಗ್‌ ನಡೆಸಿದ ಗುಜರಾತ್‌, ಕೊನೆಯ ಎಸೆತದಲ್ಲಿ ಬೌಂಡರಿಯೊಂದಿಗೆ 7 ವಿಕೆಟ್‌ ಕಳೆದುಕೊಂಡು 199 ರನ್‌ ಗಳಿಸಿತು. ಇದರೊಂದಿಗೆ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.

ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌ ರಾಯಲ್ಸ್‌ ಪರ, ಈ ಬಾರಿಯೂ ಆರಂಭಿಕ ಆಟಗಾರ ಜೈಸ್ವಾಲ್‌ ಯಶಸ್ವಿಯಾಗಲಿಲ್ಲ. ಬೌಂಡರಿಗಳೊಂದಿಗೆ ರಕ್ಷಣಾತ್ಮಕ ಆಟವಾಡಲು ಮುಂದಾದ ಅವರು, 24 ರನ್‌ ಗಳಿಸಿ ಉಮೇಶ್‌ ಯಾದವ್‌ಗೆ ವಿಕೆಟ್‌ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಶತಕ ಸಿಡಿಸಿ ಅಬ್ಬರಿಸಿದ್ದ ಜಾಸ್‌ ಬಟ್ಲರ್‌, ಈ ಬಾರಿ 8 ರನ್ ಗಳಿಸಿ ಔಟಾದರು. ಆಗ ಶುರುವಾಗಿದ್ದೇ ನಾಯಕ ಸಂಜು ಸ್ಯಾಮ್ಸನ್‌ ಮತ್ತು ರಿಯಾನ್‌ ಪರಾಗ್‌ ಸ್ಫೋಟಕ ಆಟ.

ಶತಕದ ಜೊತೆಯಾಟ

ಪ್ರಸಕ್ತ ಆವೃತ್ತಿಯಲ್ಲಿ ಭರ್ಜರಿ ಫಾಮ್‌ನಲ್ಲಿರುವ ಅನ್‌ಕ್ಯಾಪ್ಡ್‌ ಆಟಗಾರ ರಿಯಾನ್‌ ಪರಾಗ್‌, ಟೂರ್ನಿಯಲ್ಲಿ ಮತ್ತೊಂದು ಅರ್ಧಶತಕ ಸಿಡಿಸಿದರು. ಅಲ್ಲದೆ ನಾಯಕ ಸಂಜು ಸ್ಯಾಮ್ಸನ್‌ ಜೊತೆಗೆ ಶತಕದ ಜೊತೆಯಾಟದಲ್ಲಿ ಭಾಗಿಯಾದರು. ಒಟ್ಟು 48 ಎಸೆತಗಳನ್ನು ಎದುರಿಸಿದ ಅವರು, 3 ಬೌಂಡರಿ ಹಾಗೂ 5 ಸ್ಫೋಟಕ ಸಿಕ್ಸರ್‌ಗಳ ನೆರವಿಂದ 76 ರನ್‌ ಸಿಡಿಸಿ ಔಟಾದರು. ಅತ್ತ ಅಬ್ಬರದಾಟವಾಡಿದ ನಾಯಕ ಸ್ಯಾಮ್ಸನ್‌ ಕೂಡಾ, 38 ಎಸೆತಗಳಿಂದ 7 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ 68 ರನ್‌ ಗಳಿಸಿದರು. ಕೊನೆಯಲ್ಲಿ ಹೆಟ್ಮಾಯರ್‌ 13 ರನ್‌ ಗಳಿಸಿ ತಂಡದ ಮೊತ್ತ ಹಿಗ್ಗಿಸಿದರು. ಅಂತಿಮವಾಗಿ ರಾಜಸ್ಥಾನ ಕೇವಲ 3 ವಿಕೆಟ್ ಕಳೆದುಕೊಂಡು 196 ರನ್ ಗಳಿಸಿತು.

ಗುಜರಾತ್‌ ಟೈಟಾನ್ಸ್‌ ಚೇಸಿಂಗ್

ಬೃಹತ್ ಗುರಿ ಬೆನ್ನಟ್ಟಿದ ಗುಜರಾತ್‌ಗೆ ಉತ್ತಮ ಆರಂಭ ಸಿಕ್ಕಿತು. ನಾಯಕ ಶುಭ್ಮನ್‌ ಗಿಲ್‌ ಹಾಗೂ ಸಾಯಿ ಸುದರ್ಶನ್‌ ಜವಾಬ್ದಾರಿಯುತ ಆಟವಾಡಿದರು. ಟೂರ್ನಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಸುದರ್ಶನ್‌ 35 ರನ್‌ ಗಳಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಲು ಬಂದ ಮ್ಯಾಥ್ಯೂ ವೇಡ್‌ 4 ರನ್‌ ಗಳಿಸಿ ಔಟಾದರೆ, ಅವರ ಬೆನ್ನಲ್ಲೇ ಅಭಿನವ್‌ ಮನೋಹರ್‌ ಕೂಡಾ 1 ರನ್‌ ಗಳಿಸಿ ಔಟಾದರು. ಇಬ್ಬರನ್ನೂ ಕ್ಲೀನ್‌ ಬೋಲ್ಡ್‌ ಮಾಡಿದ ಕುಲ್ದೀಪ್‌ ಸೇನ್‌ ಪಂದ್ಯಕ್ಕೆ ಮಹತ್ವದ ತಿರುವು ಕೊಟ್ಟರು.

ಇದನ್ನೂ ಓದಿ | T20 World Cup: ಟಿ20 ವಿಶ್ವಕಪ್‌ಗೆ ವಿರಾಟ್ ಕೊಹ್ಲಿ ಆಯ್ಕೆ ಕುರಿತು ಅಜಿತ್ ಅಗರ್ಕರ್ ಮಹತ್ವದ ಸುಳಿವು

ಶುಭ್ಮನ್‌ ಗಿಲ್‌ ಜವಾಬ್ದಾರಿಯುತ ಆಟ

16 ರನ್‌ ಗಳಿಸಿದ್ದ ವಿಜಯ್‌ ಶಂಕರ್‌, ಚಾಹಲ್‌ ಎಸೆತದಲ್ಲಿ ಕ್ಲೀನ್‌ ಬೋಲ್ಡ್‌ ಆದರು. ಇದರೊಂದಿಗೆ ಟೂರ್ನಿಯಲ್ಲಿ ಮತ್ತೊಮ್ಮೆ ವಿಫಲರಾದರು. ನಾಯಕನಾಟವಾಡುತ್ತಿದ್ದ ಶುಭ್ಮನ್‌ ಗಿಲ್‌, ರನ್‌ ರೇಟ್‌ ಕಡಿಮೆಯಿದ್ದ ಕಾರಣದಿಂದ ವೇಗದ ಆಟಕ್ಕೆ ಕೈಹಾಕಲೇ ಬೇಕಾಯ್ತು. 44 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ 72 ರನ್‌ ಗಳಿಸಿದ್ದಾಗ ಚಹಾಲ್‌ ಮೋಡಿಗೆ ಬಲಿಯಾದರು. ಕೇಶವ್‌ ಮಹಾರಾಜ್‌ ಸಲಹೆಯೊಂದಿಗೆ ಸ್ಪಿನ್‌ ಮಂತ್ರ ಪ್ರಯೋಗಿಸಿದ ಯೂಜಿ, ಎದುರಾಳಿ ನಾಯಕನ ವಿಕೆಟ್‌ ಪಡೆದರು.

ಕೊನೆಯ ಎಸೆತದಲ್ಲಿ ಗೆಲುವು

ಡೆತ್‌ ಓವರ್‌ಗಳಲ್ಲಿ ಶಾರುಖ್ ಖಾನ್‌ 14 ರನ್‌ ಗಳಿಸಿದರೆ, ರಾಹುಲ್‌ ತೆವಾಟಿಯಾ ಹಾಗೂ ರಶೀದ್‌ ಖಾನ್‌ ತಂಡವನ್ನುಗೆಲ್ಲಿಸುವ ಶಪಥ ಮಾಡಿದರು. ಕೊನೆಯ ಎಸೆತದವರೆಗೂ ಅಬ್ಬರಿಸಿದ ರಶೀದ್‌ ಖಾನ್‌ 24 ರನ್‌ ಗಳಿಸಿ, ಕೊನೆಯ ಎಸೆತದಲ್ಲಿ ಬೌಂಡರಿಯೊಂದಿಗೆ ತಂಡವನ್ನು ಗೆಲ್ಲಿಸಿದರು. ಉತ್ತಮ ಸಾಥ್‌ ಕೊಟ್ಟ ತೆವಾಟಿಯಾ 22 ರನ್‌ ಗಳಿಸಿದರು. ಕೊನೆಯ ಎಸೆತದಲ್ಲಿ ತಂಡಕ್ಕೆ 15 ರನ್‌ ಬೇಕಿತ್ತು. 3 ಬೌಂಡರಿಗಳೊಂದಿಗೆ ರಶೀದ್‌ ಖಾನ್‌ ಆ ಗುರಿಯನ್ನು ಬೆನ್ನಟ್ಟಿದರು. 

IPL_Entry_Point