ಅಫ್ಘಾನ್ ಭೂಕಂಪ ಸಂತ್ರಸ್ತರ ನೋವಿಗೆ ಮಿಡಿದ ಹೃದಯ; ವಿಶ್ವಕಪ್ ಪಂದ್ಯಗಳ ಶುಲ್ಕವನ್ನು ದೇಣಿಗೆ ನೀಡಲು ನಿರ್ಧರಿಸಿದ ರಶೀದ್ ಖಾನ್
Rashid Khan: ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡುವ ಪಂದ್ಯಗಳಿಂದ ಪಡೆಯುವ ಸಂಭಾವನೆಯನ್ನು ತಮ್ಮ ದೇಶ ಅಫ್ಘಾನಿಸ್ತಾನದ ಭೂಕಂಪ ಸಂತ್ರಸ್ತರಿಗೆ ನೀಡುವುದಾಗಿ ಕ್ರಿಕೆಟಿಗ ರಶೀದ್ ಖಾನ್ ಹೇಳಿಕೊಂಡಿದ್ದಾರೆ.
ಭಾರಿ ಭೂಕಂಪಗಳಿಂದಾಗಿ ಅಫ್ಘಾನಿಸ್ತಾನ (Afghanistan Earthquake) ತತ್ತರಿಸಿ ಹೋಗಿದೆ. ಪ್ರಕೃತಿಯ ಮುನಿಸಿನಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಭೂಕಂಪಗಳಿಂದಾಗಿ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈವರೆಗೆ 2,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದೇ ವೇಳೆ 9,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ದೇಶದಲ್ಲಾದ ಸಾವು ನೋವುಗಳ ಕುರಿತು ತಾಲಿಬಾನ್ ಸರ್ಕಾರ ಭಾನುವಾರ ದೃಢಪಡಿಸಿದೆ. ಈ ನಡುವೆ, ಭೂಕಂಪದ ಸಂತ್ರಸ್ತರ ನೆರವಿಗೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಆಲ್‌ರೌಂಡರ್ ರಶೀದ್ ಖಾನ್ ಧಾವಿಸಿದ್ದಾರೆ. ಇತ್ತ ಭಾರತ ದೇಶದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ರಶೀದ್ ಖಾನ್ ಆಡುತ್ತಿದ್ದಾರೆ. ಆದರೆ ಅವರ ಮನಸು ಮತ್ತು ಪ್ರಾರ್ಥನೆ ತಮ್ಮ ದೇಶದ ಜನರ ಮೇಲಿದೆ. ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡುವ ಪಂದ್ಯಗಳಿಂದ ಪಡೆಯುವ ಸಂಭಾವನೆಯನ್ನು ದೇಶದ ಭೂಕಂಪ ಸಂತ್ರಸ್ತರಿಗೆ ನೀಡುವುದಾಗಿ ಅವರು ಹೇಳಿಕೊಂಡಿದ್ದಾರೆ.
ಈ ಕುರಿತಾಗಿ ಸಾಮಾಜಿಕ ಮಾಧ್ಯಮದಲ್ಲಿ ಖುದ್ದು ರಶೀದ್ ಖಾನ್ ಘೋಷಿಸಿದ್ದಾರೆ. ರಶೀದ್ ಅವರು ಎಕ್ಸ್ (ಟ್ವಿಟರ್) ಮೂಲಕ ಈ ಕುರಿತು ಮಾಹಿತಿ ನೀಡಿದ್ದಾರೆ. “ಅಫ್ಘಾನಿಸ್ತಾನದ ಪಶ್ಚಿಮ ಪ್ರಾಂತ್ಯಗಳಲ್ಲಿ (ಹೆರಾತ್, ಫರಾಹ್ ಮತ್ತು ಬದ್ಘಿಸ್) ಭೂಕಂಪದಿಂದಾದ ಪರಿಣಾಮಗಳ ಬಗ್ಗೆ ತಿಳಿದು ನನಗೆ ದುಃಖವಾಗುತ್ತಿದೆ. ಸಂತ್ರಸ್ತರಿಗೆ ಸಹಾಯ ಮಾಡುವ ಸಲುವಾಗಿ ಕ್ರಿಕೆಟ್ ವಿಶ್ವಕಪ್ ಪಂದ್ಯದ ಶುಲ್ಕವನ್ನು ದೇಣಿಗೆಯಾಗಿ ನೀಡುತ್ತಿದ್ದೇನೆ. ಶೀಘ್ರದಲ್ಲೇ, ಅಗತ್ಯವಿರುವ ಜನರಿಗೆ ನೆರವಾಗಲು ನಿಧಿಸಂಗ್ರಹ ಅಭಿಯಾನವನ್ನು ಪ್ರಾರಂಭಿಸುತ್ತೇವೆ,” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅತ್ತ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡವು ಸೋಲಿನ ಆರಂಭ ಪಡೆದಿದೆ. ಧರ್ಮಶಾಲಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಸೋಲು ಕಂಡಿದೆ. ಹಶ್ಮತುಲ್ಲಾ ಶಾಹಿದಿ ನೇತೃತ್ವದ ತಂಡವು ಅಕ್ಟೋಬರ್ 11ರ ಬುಧವಾರದಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಭಾರತವನ್ನು ಎದುರಿಸಲಿದೆ.
ಅಕ್ಟೋಬರ್ 7ರ ಶನಿವಾರ) ಅಫ್ಘಾನಿಸ್ತಾನದಲ್ಲಿ 5 ಸರಣಿ ಭೂಕಂಪಗಳು ಸಂಭವಿಸಿದ್ದವು. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ 5.5, 4.7, 6.3, 5.9 ಮತ್ತು 4.6 ರ ತೀವ್ರತೆಯೊಂದಿಗೆ 5 ಬಾರಿ ಭೂಮಿ ಕಂಪಿಸಿದೆ. ಅರ್ಧ ಗಂಟೆಯಲ್ಲಿಯೇ 3 ಬಾರಿ ಭೂಕಂಪನವಾಗಿದೆ. ಹೆರಾತ್‌ನ ವಾಯುವ್ಯ ಭಾಗದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿದೆ.
ಅವಶೇಷಗಳಡಿ ನೂರಾರು ಜನರು ಸಿಲುಕಿ ಹಾಕಿಕೊಂಡಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ತಾಲಿಬಾನ್ ಆಡಳಿತ ಹೇಳಿದೆ. ಅವಶೇಷಗಳಡಿ ಮಕ್ಕಳು ಸಿಲುಕಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 1,329 ಮನೆಗಳು ಹಾನಿಗೊಳಗಾಗಿದ್ದು, ಅನೇಕ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.