ಜಾಂಟಿ ರೋಡ್ಸ್‌ಗೆ ಸಿಕ್ಕಿದ್ರು ಸಹೋದರ; ಸೂಪರ್ಮ್ಯಾನ್ನಂತೆ ಹಾರಿ ಕಣ್ಮನ ಸೆಳೆಯುವ ಕ್ಯಾಚ್ ಹಿಡಿದ ರವಿ ಬಿಷ್ಣೋಯ್
Ravi Bishnoi Catch: ಜಿಂಬಾಬ್ವೆ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ರವಿ ಬಿಷ್ಣೋಯ್ ಸೂಪರ್ ಮ್ಯಾನ್ನಂತೆ ಕ್ಯಾಚ್ ಹಿಡಿದು ಗಮನ ಸೆಳೆದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಜಿಂಬಾಬ್ವೆ ವಿರುದ್ಧ ಭಾರತ (ZIM vs IND) ನಡುವಿನ ಐದು ಪಂದ್ಯಗಳ ಟಿ20ಐ ಸರಣಿಯ ಮೂರನೇ ಪಂದ್ಯ ಹರಾರೆಯ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯಿತು. ಈ ಪಂದ್ಯವನ್ನು ಭಾರತ 23 ರನ್‌ಗಳಿಂದ ಗೆದ್ದುಕೊಂಡಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಇದೇ ವೇಳೆ ಟೀಮ್ ಇಂಡಿಯಾದ ಯುವ ಬೌಲರ್ ರವಿ ಬಿಷ್ಣೋಯ್ ಅದ್ಭುತ ಕ್ಯಾಚೊಂದನ್ನು ಪಡೆದು ಇಡೀ ಕ್ರಿಕೆಟ್ ಲೋಕವನ್ನೇ ಬೆರಗಾಗುವಂತೆ ಮಾಡಿದ್ದಾರೆ. ಈ ಕ್ಯಾಚ್ ಎಲ್ಲರನ್ನು ಬೆಚ್ಚಿ ಬೀಳಿಸುವುದರಲ್ಲಿ ಸಂಶಯವೇ ಇಲ್ಲ.
ಜಿಂಬಾಬ್ವೆ ಇನಿಂಗ್ಸ್‌ನ 4ನೇ ಓವರ್‌ನಲ್ಲಿ ರವಿ ಬಿಷ್ಣೋಯ್ ಈ ಅದ್ಭುತ ಕ್ಯಾಚ್ ಪಡೆದರು. ಭಾರತದ ಪರವಾಗಿ ವೇಗದ ಬೌಲರ್ ಅವೇಶ್ ಖಾನ್ ಬೌಲಿಂಗ್ ಮಾಡುತ್ತಿದ್ದ ಓವರ್ನ ಮೊದಲ ಎಸೆತದಲ್ಲಿ ಜಿಂಬಾಬ್ವೆಯ ಬ್ಯಾಟ್ಸ್‌ಮನ್ ಬ್ರಿಯಾನ್ ಬೆನೆಟ್ ಬ್ಯಾಕ್‌ವರ್ಡ್ ಪಾಯಿಂಟ್ ಕಡೆಗೆ ಬೃಹತ್ ಹೊಡೆತಕ್ಕೆ ಯತ್ನಿಸಿದರು. ಆದರೆ, ಅಲ್ಲೇ ಫೀಲ್ಡಿಂಗ್ ಮಾಡುತ್ತಿದ್ದ ರವಿ ಬಿಷ್ಣೋಯ್, ಚಿರತೆಯಂತೆ ಗಾಳಿಯಲ್ಲಿ ಹಾರಿ ಚೆಂಡನ್ನು ಎರಡೂ ಕೈಗಳಿಂದ ಬಾಚಿಕೊಂಡರು. ಅವರ ಸ್ಟನ್ನಿಂಗ್ ಕ್ಯಾಚ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಬಿಷ್ಣೋಯ್ ಅವರ ಅದ್ಭುತ ಫೀಲ್ಡಿಂಗ್ ನೋಡಿದ ಅಭಿಮಾನಿಗಳು ವಿಶ್ವ ಶ್ರೇಷ್ಠ ಫೀಲ್ಡಿಂಗ್ ಲೆಜೆಂಡ್ ಜಾಂಟಿ ರೋಡ್ಸ್ ಅವರನ್ನು ನೆನಪಿಸಿಕೊಂಡಿದ್ದಾರೆ. ರವಿ ಬಿಷ್ಣೋಯ್ ಸ್ಪೈಡರ್ಮ್ಯಾನ್ನಂತೆ ಗಾಳಿಯಲ್ಲಿ ಹಾರಿ ಬೊಂಬಾಟ್ ಕ್ಯಾಚ್ ಪಡೆದಿದ್ದು ಇದೇ ಮೊದಲಲ್ಲ. ಐಪಿಎಲ್ 2024ರಲ್ಲೂ ಇಂತಹದ್ದೇ ಕ್ಯಾಚ್ ಅನ್ನು ಬಿಷ್ಣೋಯ್ ಪಡೆದಿದ್ದರು. ಮೈದಾನದಲ್ಲಿದ್ದವರೆಲ್ಲ ಬಿಷ್ಣೋಯ್ ಅವರ ಫೀಲ್ಡಿಂಗ್ ನೋಡಿ ಆಶ್ಚರ್ಯಚಕಿತರಾದರು. ಭಾರತೀಯ ಆಟಗಾರರು ಕೂಡ ಬಿಷ್ಣೋಯ್ ಅವರ ಅದ್ಭುತ ಫೀಲ್ಡಿಂಗ್ ಅನ್ನು ಶ್ಲಾಘಿಸಿದರು.
ಜಿಂಬಾಬ್ವೆ ಪ್ರವಾಸದಲ್ಲಿ ಫೀಲ್ಡಿಂಗ್ ಜೊತೆಗೆ ಬಿಷ್ಣೋಯ್ ಬೌಲಿಂಗ್ನಿಂದಲೂ ಪ್ರಭಾವಿತರಾಗಿದ್ದಾರೆ. ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯದಲ್ಲಿ ಲೆಗ್ಸ್ಪಿನ್ನರ್ ಚೆಂಡಿನ ಮೂಲಕ ಅದ್ಭುತ ಪ್ರದರ್ಶನ ನೀಡಿ 4 ವಿಕೆಟ್ ಕಬಳಿಸಿದ್ದರು. ಕೇವಲ 13 ರನ್ ಬಿಟ್ಟುಕೊಟ್ಟಿದ್ದರು. 2ನೇ ಪಂದ್ಯದಲ್ಲಿ ಸ್ಪಿನ್ನರ್ ತಮ್ಮ ಬೌಲಿಂಗ್‌ನಲ್ಲಿ ಪ್ರಭಾವ ಬೀರಲು ವಿಫಲರಾದರು. 4 ಓವರ್ ಬೌಲ್ ಮಾಡಿದರೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಆದರೆ, ಫೀಲ್ಡಿಂಗ್‌ನಲ್ಲಿ ಸಖತ್ ಪ್ರದರ್ಶನ ನೀಡಿದರು. ತಮ್ಮ ಫೀಲ್ಡಿಂಗ್‌ನಿಂದ ಇಬ್ಬರನ್ನು ಔಟ್ ಮಾಡಿದರು.
3ನೇ ಪಂದ್ಯದಲ್ಲಿ ಭರ್ಜರಿ ಗೆಲುವು
ಜಿಂಬಾಬ್ವೆ ವಿರುದ್ಧ 3ನೇ ಟಿ20ಐ ಪಂದ್ಯದಲ್ಲೂ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಹರಾರೆಯ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಪಂದ್ಯದಲ್ಲಿ ಭಾರತ 23 ರನ್‌ಗಳಿಂದ ಜಯಭೇರಿ ಬಾರಿಸಿದೆ. ಇದರೊಂದಿಗೆ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ನಾಯಕ ಶುಭ್ಮನ್ ಗಿಲ್ ಆಕರ್ಷಕ ಅರ್ಧಶತಕ, ಯಶಸ್ವಿ ಜೈಸ್ವಾಲ್ ಹಾಗೂ ಋತುರಾಜ್ ಗಾಯಕ್ವಾಡ್ ಅಬ್ಬರಿಸಿದರು. ವಾಷಿಂಗ್ಟನ್ ಸುಂದರ್ ಮಾರಕ ದಾಳಿ ಹಾಗೂ ಖಲೀಲ್ ಅಹ್ಮದ್ ಎಕಾನಮಿ ಬೌಲಿಂಗ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಸ್ಫೋಟಕ ಆರಂಭ ಮತ್ತು ಕೊನೆಯಲ್ಲಿ ಕಂಬ್ಯಾಕ್ ನೆರವಿಂದ ನಾಲ್ಕು ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್ ನಡೆಸಿದ ಸಿಕಂದರ್ ರಾಜಾ ಬಳಗ, 6 ವಿಕೆಟ್ ನಷ್ಟಕ್ಕೆ ಕಳೆದುಕೊಂಡು 159 ರನ್ ಗಳಿಸಿತು. ಇದರೊಂದಿಗೆ ಸರಣಿಯಲ್ಲಿ ಹಿನ್ನಡೆ ಅನುಭವಿಸಿತು. ಶುಭ್ಮನ್ 49 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಹಿತ 66 ರನ್ ಗಳಿಸಿದರೆ, ಋತುರಾಜ್ 28 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಿತ 49 ರನ್ ಗಳಿಸಿ ಔಟಾದರು. ವಾಷಿಂಗ್ಟನ್ ಸುಂದರ್ 4 ಓವರ್ಗಳಲ್ಲಿ 15 ರನ್ ನೀಡಿ 3 ವಿಕೆಟ್ ಪಡೆದರು.