Video: ದೆಹಲಿಯಲ್ಲಿ ಆರ್‌ಸಿಬಿಗೆ ಬೆಂಬಲ ಕಂಡು ರವಿ ಶಾಸ್ತ್ರಿ ಮೂಕವಿಸ್ಮಿತ; ಇದು ಬೆಂಗಳೂರಿನಂತಿದೆ ಎಂದ ಮಾಜಿ ಕ್ರಿಕೆಟಿಗ
ಕನ್ನಡ ಸುದ್ದಿ  /  ಕ್ರಿಕೆಟ್  /  Video: ದೆಹಲಿಯಲ್ಲಿ ಆರ್‌ಸಿಬಿಗೆ ಬೆಂಬಲ ಕಂಡು ರವಿ ಶಾಸ್ತ್ರಿ ಮೂಕವಿಸ್ಮಿತ; ಇದು ಬೆಂಗಳೂರಿನಂತಿದೆ ಎಂದ ಮಾಜಿ ಕ್ರಿಕೆಟಿಗ

Video: ದೆಹಲಿಯಲ್ಲಿ ಆರ್‌ಸಿಬಿಗೆ ಬೆಂಬಲ ಕಂಡು ರವಿ ಶಾಸ್ತ್ರಿ ಮೂಕವಿಸ್ಮಿತ; ಇದು ಬೆಂಗಳೂರಿನಂತಿದೆ ಎಂದ ಮಾಜಿ ಕ್ರಿಕೆಟಿಗ

ಡಬ್ಲ್ಯುಪಿಎಲ್ 2024ರ ಫೈನಲ್ ಪಂದ್ಯವು ದೆಹಲಿಯಲ್ಲಿ ನಡೆಯುತ್ತಿದೆ. ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಆಡುತ್ತಿದ್ದರೂ, ಮೈದಾನದಲ್ಲಿ ಹೆಚ್ಚಿನ ಅಭಿಮಾನಿಗಳ ಬೆಂಬಲ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸಿಕ್ಕಿದೆ. ಇದು ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಅವರನ್ನು ಮೂಕವಿಸ್ಮಿತರನ್ನಾಗಿ ಮಾಡಿದೆ.

ದೆಹಲಿಯಲ್ಲಿ ಆರ್‌ಸಿಬಿಗೆ ಬೆಂಬಲ ಕಂಡು ರವಿ ಶಾಸ್ತ್ರಿ ಮೂಕವಿಸ್ಮಿತ
ದೆಹಲಿಯಲ್ಲಿ ಆರ್‌ಸಿಬಿಗೆ ಬೆಂಬಲ ಕಂಡು ರವಿ ಶಾಸ್ತ್ರಿ ಮೂಕವಿಸ್ಮಿತ

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ವಿಮೆನ್ಸ್ ಪ್ರೀಮಿಯರ್ ಲೀಗ್ (WPL 2024) ಎರಡನೇ ಆವೃತ್ತಿಯ ಫೈನಲ್ ಪಂದ್ಯ ನಡೆಯುತ್ತಿದೆ. ಚೊಚ್ಚಲ ಡಬ್ಲ್ಯೂಪಿಎಲ್‌ ಟ್ರೋಫಿ ಎತ್ತಿ ಹಿಡಿಯಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals Women vs Royal Challengers Bangalore Women) ತಂಡಗಳು ಮುಖಾಮುಖಿಯಾಗುತ್ತಿವೆ. ಪಂದ್ಯ ಡೆಲ್ಲಿಯಲ್ಲಿ ನಡೆಯುತ್ತಿದ್ದರೂ, ಆರ್‌ಸಿಬಿ ತಂಡಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ಭರ್ಜರಿ ಬೆಂಬಲ ಸಿಕ್ಕಿದೆ. ಫೈನಲ್‌ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್‌ ತವರಿನ ಆತಿಥ್ಯದಲ್ಲಿ ನಡೆಯುತ್ತಿದ್ದರೂ, ಮೆಗ್‌ ಲ್ಯಾನಿಂಗ್‌ ಬಳಗಕ್ಕೆ ಸಿಗಬೇಕಿದ್ದ ದುಪ್ಪಟ್ಟು ಬೆಂಬಲ ಆರ್‌ಸಿಬಿ ತಂಡಕ್ಕೆ ಸಿಗುತ್ತಿದೆ.

ಡಬ್ಲ್ಯುಪಿಎಲ್ ಫೈನಲ್ ಮುಖಾಮುಖಿಯ ಸಂದರ್ಭದಲ್ಲಿ, ಅರುಣ್‌ ಜೇಟ್ಲಿ ಕ್ರೀಡಾಂಗಣ ತುಂಬೆಲ್ಲಾ ಆರ್‌ಸಿಬಿ... ಆರ್‌ಸಿಬಿ... ಎಂಬ ಘೋಷಣೆಗಳು ಮೊಳಗಿವೆ. ಸತತ ಎರಡನೇ ಬಾರಿಗೆ ಡೆಲ್ಲಿ ಕ್ಯಾಪಿಟಲ್ಸ್‌ ಫೈನಲ್‌ ಪಂದ್ಯ ಆಡುತ್ತಿದೆ. ಅಲ್ಲದೆ ಅದರದೇ ತವರಿನಲ್ಲಿ ಪಂದ್ಯ ನಡೆಯುತ್ತಿದೆ. ಆದರೆ, ಅದಕ್ಕಿಂತ ಹೆಚ್ಚಿನ ಹರ್ಷದ್ಘೋರ ಆರ್‌ಸಿಬಿ ಹೆಸರಿನಲ್ಲಿ ಕೇಳಿದೆ.

ಟಾಸ್ ಸಮಯದಲ್ಲಿ, ಯಾವ ತಂಡಕ್ಕೆ ಮೈದಾನದಲ್ಲಿ ಹೆಚ್ಚು ಬೆಂಬಲ ಇದೆ ಎಂಬುದಕ್ಕೆ ಸ್ಪಷ್ಟನೆ ಸಿಕ್ಕಿದೆ. ಫೈನಲ್‌ ಪಂದ್ಯವಾದ್ದರಿಂದ, ಭಾರತದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಅವರು ಟಾಸ್‌ ಪ್ರಕ್ರಿಯೆ ನಡೆಸಿಕೊಟ್ಟರು. ಪಂದ್ಯದಲ್ಲಿ ಟಾಸ್ ಗೆದ್ದ ಡಿಸಿ ನಾಯಕಿ ಮೆಗ್ ಲ್ಯಾನಿಂಗ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆ ನಂತರ ಮಾತನಾಡುವ ಸರದಿ ಆರ್‌ಸಿಬಿ ನಾಯಕಿ ಸ್ಮೃತಿ ಮಂಥನಾ ಅವರದ್ದು. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳು ನಡೆಯುವಾಗ ಆರ್‌ಸಿಬಿಗೆ ದೊರೆತ ಬೆಂಬಲದಂತೆಯೇ, ದೆಹಲಿಯಲ್ಲೂ ಮಂಧನಾ ಪಡೆಗೆ ಭಾರಿ ಬೆಂಬಲ ಸಿಕ್ಕಿತು. ಅವರು ಮಾತನಾಡಲು ಮುಂದೆ ಹೆಜ್ಜೆ ಇಡುತ್ತಿದ್ದಂತೆಯೇ ಜೋರಾಗಿ ಘೋಷಣೆಗಳು ಮೊಳಗಿದವು. ಪಂದ್ಯವು ಬೆಂಗಳೂರಿನಲ್ಲಿ ನಡೆಯುತ್ತಿರುವಂತೆ ಭಾಸವಾಯ್ತು.

ಇದನ್ನೂ ಓದಿ | WPL: ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟಿಂಗ್‌; ಡೆಲ್ಲಿಯಲ್ಲೂ ಆರ್‌ಸಿಬಿಗೆ ಭರ್ಜರಿ ಬೆಂಬಲ

ಪ್ರೇಕ್ಷಕರ ಘೋಷಣೆಯಿಂದ ಭಾರತದ ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಕೆಲಕಾಲ ಮೂಕವಿಸ್ಮಿತರಾದರು. “ನನಗೆ ಇದು ದೆಹಲಿ ಎಂದು ತಿಳಿದಿದೆ. ಆದರೆ ಇದು ಬೆಂಗಳೂರಿನಂತೆ ಭಾಸವಾಗುತ್ತಿದೆ” ಎಂದು ಸ್ಮೃತಿಯತ್ತ ನೋಡಿ ಹೇಳಿದ್ದಾರೆ. ದಿಲ್ಲಿಯಲ್ಲೂ ಆರ್‌ಸಿಬಿ ಹವಾ ಆ ಮಟ್ಟಕ್ಕಿತ್ತು. ಅದು ಕೂಡಾ ಆತಿಥೇಯ ತಂಡದ ವಿರುದ್ಧ ಎಂಬುದು ಮುಖ್ಯ ವಿಚಾರ.

ಆರ್‌ಸಿಬಿ ಅಭಿಮಾನಿಗಳು ಅಪಾರ ಅಭಿಮಾನಕ್ಕೆ ನಾಯಕಿ ಮಂಧಾನ ಸ್ತಬ್ಧರಾದರು. ಮುಗ್ದವಾಗಿ ನಗುತ್ತಾ ತಮ್ಮ ಮಾತು ಮುಂದುವರೆಸಿದರು. “ಟಾಸ್‌ ಗೆದ್ದಿದ್ದರೆ ನಾವು ಕೂಡಾ ಮೊದಲು ಬ್ಯಾಟಿಂಗ್ ಮಾಡುತ್ತಿದ್ದೆವು. ನಾವು ಈಗ ಉತ್ತಮವಾಗಿ ಬೌಲಿಂಗ್ ಮಾಡಬೇಕು. ನಮ್ಮ ಯೋಜನೆಗಳಿಗೆ ಅಂಟಿಕೊಂಡು ಉತ್ತಮ ಕ್ರಿಕೆಟ್ ಆಡಬೇಕು. ನಾವು ಇಲ್ಲಿಯವರೆಗೆ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇವೆ. ಇದೇ ಪಿಚ್‌ನಲ್ಲಿ ನಮಗಿದು 4ನೇ ಹಾಗೂ ಕೊನೆಯ ಪಂದ್ಯ,” ಎಂದು ಸ್ಮೃತಿ ಟಾಸ್‌ ಸೋತ ಬಳಿಕ ಮಾತನಾಡಿದರು.

ಡಬ್ಲ್ಯುಪಿಎಲ್ 2024ರಲ್ಲಿ ಆರ್‌ಸಿಬಿ ಮತ್ತು ಡೆಲ್ಲಿ ತಂಡಗಳು ಇದು ಮೂರನೇ ಬಾರಿ ಪರಸ್ಪರ ಮುಖಾಮುಖಿಯಾಗುತ್ತಿವೆ. ಈ ಎರಡೂ ಪಂದ್ಯಗಳಲ್ಲಿ ಡೆಲ್ಲಿ ತಂಡ ಗೆದ್ದಿದೆ. ಕಳೆದ ವರ್ಷ ನಡೆದ ಎರಡು ಪಂದ್ಯಗಳಲ್ಲೂ ಆರ್‌ಸಿಬಿ ವಿರುದ್ಧ ಲ್ಯಾನಿಂಗ್‌ ಪಡೆ ಗೆದ್ದಿತ್ತು. ಡೆಲ್ಲಿ ವಿರುದ್ಧ ಆಡಿದ ಎಲ್ಲಾ ನಾಲ್ಕು ಪಂದ್ಯ ಸೋತಿರುವ ಸ್ಮೃತಿ ಮಂಧಾನ ಪಡೆ, ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ | ಆರ್‌ಸಿಬಿ ಪರ ವಿರಾಟ್‌ ಕೊಹ್ಲಿ ಜೊತೆ ಇನ್ನಿಂಗ್ಸ್‌ ಆರಂಭಿಸುವ ಕುರಿತು ನಾಯಕ ಫಾಫ್ ಡು ಪ್ಲೆಸಿಸ್ ಮಾತು

ಡಬ್ಲ್ಯುಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ 5 ರನ್​ಗಳ ಗೆಲುವು ದಾಖಲಿಸಿರುವ ಆರ್​​ಸಿಬಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದೀಗ ಅದೇ ರೀತಿಯಲ್ಲಿ ಬಲಿಷ್ಠ ಡೆಲ್ಲಿಯನ್ನೂ ಸೋಲಿಸುವ ನಿರೀಕ್ಷೆಯಲ್ಲಿದೆ.

ಮಹಿಳಾ ಪ್ರೀಮಿಯರ್ ಲೀಗ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner