Asia Cup 2023: ರಾಹುಲ್-ಅಯ್ಯರ್ ಅನ್ಫಿಟ್ ಆದರೆ ಯಾರಿಗೆ ಮಣೆ ಹಾಕಬೇಕು; ರವಿಶಾಸ್ತ್ರಿ, ಮಾಜಿ ಚೀಫ್ ಸೆಲೆಕ್ಟರ್ಸ್ ಬಿಸಿ ಬಿಸಿ ಚರ್ಚೆ
Asia Cup 2023: ಏಷ್ಯಾಕಪ್‌ಗೆ ತಂಡದ ಆಯ್ಕೆಯ ಕುರಿತು ಸ್ಟಾರ್ ಸ್ಪೋರ್ಟ್ಸ್ ವಿಶೇಷ ಶೋನಲ್ಲಿ ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ, ಭಾರತದ ಮಾಜಿ ಆಯ್ಕೆಗಾರರ ಅಧ್ಯಕ್ಷ ಸಂದೀಪ್ ಪಾಟೀಲ್ ಮತ್ತು ಎಂಎಸ್‌ಕೆ ಪ್ರಸಾದ್ ಭಾಗಿಯಾಗಿದ್ದು, ಈ ಬಗ್ಗೆ ಒಟ್ಟಿಗೆ ಚರ್ಚೆ ನಡೆಸಿದ್ದಾರೆ.
ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಫಿಟ್ ಆಗಿದ್ದಾರೆಯೇ? ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್ ಆಡುತ್ತಾರೆಯೇ? ಸದ್ಯ ಈ ಎರಡು ಪ್ರಶ್ನೆಗಳು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿವೆ. ಗಲ್ಲಿಯಿಂದ ಡಿಲ್ಲಿವರೆಗೂ ಇವರ ಬಗ್ಗೆಯೇ ಟಾಕ್ ನಡೆಯುತ್ತಿದೆ. ಮತ್ತೊಂದೆಡೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಗೂ ಇವರದ್ದೇ ಟೆನ್ಶನ್. ಏಷ್ಯಾಕಪ್ ಟೂರ್ನಿಗೆ ಆಗಸ್ಟ್ 20ರಂದು ತಂಡ ಪ್ರಕಟವಾಗಲಿದೆ.
ಭಾರತ ತಂಡದಲ್ಲಿ 4ನೇ ಕ್ರಮಾಂಕ ಮತ್ತು 5ನೇ ಅಥವಾ ವಿಕೆಟ್ ಕೀಪರ್ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂಬ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಅಲ್ಲದೆ, ಕೆಲವು ವರದಿಗಳು ಇಬ್ಬರೂ ಫಿಟ್ ಆಗಿದ್ದಾರೆ ಎಂದು ಹೇಳುತ್ತಿವೆ. ಈ ಇಬ್ಬರು ಸ್ಟಾರ್ ಆಟಗಾರರು ತಂಡದಲ್ಲಿ ಇರಬೇಕೆಂಬುದು ಎಲ್ಲರ ಬಯಕೆಯಾಗಿದೆ. ಆದರೆ ಈ ಇಬ್ಬರು ಆಯ್ಕೆಯಾಗುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.
ಏಷ್ಯಾಕಪ್‌ಗೆ ತಂಡದ ಆಯ್ಕೆಯ ಕುರಿತು ಸ್ಟಾರ್ ಸ್ಪೋರ್ಟ್ಸ್ ವಿಶೇಷ ಶೋನಲ್ಲಿ ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ, ಭಾರತದ ಮಾಜಿ ಆಯ್ಕೆಗಾರರ ಅಧ್ಯಕ್ಷ ಸಂದೀಪ್ ಪಾಟೀಲ್ ಮತ್ತು ಎಂಎಸ್‌ಕೆ ಪ್ರಸಾದ್ ಭಾಗಿಯಾಗಿದ್ದು, ಈ ಬಗ್ಗೆ ಒಟ್ಟಿಗೆ ಚರ್ಚೆ ನಡೆಸಿದ್ದಾರೆ. ರಾಹುಲ್- ಅಯ್ಯರ್ ಇಬ್ಬರ ಅನಿವಾರ್ಯತೆ ತಂಡಕ್ಕೆ ಎಷ್ಟಿದೆ ಎಂಬುದರ ಕುರಿತು ವಿವರಿಸಿದ್ದಾರೆ. ಅವರ ಸಂಭಾಷಣೆ ಹೀಗಿದೆ ನೋಡಿ.
ಮೂವರು ಮಾಜಿ ಕ್ರಿಕೆಟಿಗರ ಮಾತುಕತೆ ಹೀಗಿದೆ
ಎಂಎಸ್‌ಕೆ ಪ್ರಸಾದ್: ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಫಿಟ್ ಆಗಿದ್ದರೆ ಮುಂದಿನ ನಡೆ ಏನು?
ರವಿಶಾಸ್ತ್ರಿ: ಅವರು ಫಿಟ್ ಆಗಿದ್ದರೆ ಕೆಲವು ಪಂದ್ಯಗಳನ್ನು ಆಡಬೇಕಾಗುತ್ತದೆ. ಏಷ್ಯಾಕಪ್‌ಗೆ ಮೊದಲು ಅವರಿಗೆ ಕೆಲವು ಪಂದ್ಯಗಳನ್ನು ಆಡಿಸಿದರೆ ಉತ್ತಮ.
ಎಂಎಸ್‌ಕೆ ಪ್ರಸಾದ್: ಸರಿ, ಹಾಗಿದ್ದರೆ ಕೆಲವು ಪಂದ್ಯಗಳನ್ನು ಆಡಿದ ನಂತರ ಅವರು ಫಿಟ್ ಆಗಿದ್ದಾರೆ ಎಂದು ಹೇಳಲು ಸಾಧ್ಯವೇ?
ರವಿಶಾಸ್ತ್ರಿ: ಆದರೆ ಅವರಿಗೆ ಅಷ್ಟು ಸಮಯ ಇಲ್ಲವಲ್ಲ. ಅವರು ಎಲ್ಲಿ ಆಡಲು ಸಾಧ್ಯ? ಯಾಕಂದರೆ ಒಂದೆರಡು ವಾರಗಳಲ್ಲಿ ಏಷ್ಯಾಕಪ್ ಆರಂಭವಾಗಲಿದೆ.
ಎಂಎಸ್‌ಕೆ ಪ್ರಸಾದ್: ಎನ್‌ಸಿಎಯಲ್ಲಿ ರಾಹುಲ್ ಆಡುವುದನ್ನು ನಾನು ನೋಡಿದ್ದೇನೆ. ಅವನು ಫಿಟ್ ಆಗಿ ಕಾಣುತ್ತಾರೆ. ಅವರು ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಸಂದೀಪ್ ಪಾಟೀಲ್: ನೆಟ್ಸ್‌ನಲ್ಲಿ ಆಡುವುದೇ ಬೇರೆ, ಪಂದ್ಯದಲ್ಲಿ ಆಡುವುದೇ ಬೇರೆ. ಎರಡೂ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ.
ಎಂಎಸ್‌ಕೆ ಪ್ರಸಾದ್: ಅವರು (ರಾಹುಲ್-ಅಯ್ಯರ್) ಈಗಾಗಲೇ ಎರಡು ಪಂದ್ಯಗಳನ್ನು ಆಡಿದ್ದಾರೆ.
ಸಂದೀಪ್ ಪಾಟೀಲ್: ಆದರೆ, ಸ್ಪರ್ಧಾತ್ಮಕ ಪಂದ್ಯಗಳಲ್ಲವಲ್ಲ, ಸೌಹಾರ್ದ ಪಂದ್ಯಗಳನ್ನು ಆಡುವುದು ಮತ್ತು ರನ್ ಗಳಿಸುವುದು ಸುಲಭ. ಸ್ಪರ್ಧಾತ್ಮಕ ಪಂದ್ಯಗಳಲ್ಲಿ ರನ್ ಗಳಿಸುವುದು ಸುಲಭವಲ್ಲ.
ರವಿಶಾಸ್ತ್ರಿ: ಗಾಯಗಳು ಸಂಭವಿಸುವುದು ಸಹಜ. ನೀವು (ಆಟಗಾರರು) ತುಂಬಾ ಜಾಗರೂಕರಾಗಿರಬೇಕು. ಎಚ್ಚರ ತಪ್ಪಿದರೆ ಬೂಮ್ರಾ ಅವರಂತೆ ಒಂದಲ್ಲ, ಎರಡಲ್ಲ, 14 ತಿಂಗಳಿಂದ ಹೊರಗೆ ಕೂರುವಂತೆ ಆಗುತ್ತದೆ.
ಒಂದು ವೇಳೆ ಈ ಇಬ್ಬರು ಫಿಟ್ ಆಗಿಲ್ಲದಿದ್ದರೆ ಸೂರ್ಯಕುಮಾರ್ ಮತ್ತು ಇಶಾನ್ ಕಿಶನ್ ಅವರನ್ನು ತಂಡಕ್ಕೆ ಕರೆಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಅಲ್ಲದೆ, ವಿಂಡೀಸ್ ಸರಣಿಯಲ್ಲಿ ಪ್ರಭಾವ ಬೀರಿದ ಯುವ ಎಡಗೈ ಆಟಗಾರ ತಿಲಕ್ ವರ್ಮಾ ಅವರನ್ನೂ ಭಾರತದ 15 ಸದಸ್ಯರ ತಂಡದಲ್ಲಿ ಅವಕಾಶ ನೀಡಬೇಕು ಎಂದು ಸೂಚಿಸಿದ್ದಾರೆ. ಆದರೆ ಸ್ಯಾಮ್ಸನ್ಗೆ ಅವಕಾಶ ನೀಡುವ ಕುರಿತು ಚರ್ಚೆ ನಡೆಸಿಲ್ಲ.
4-5ನೇ ಕ್ರಮಾಂಕದ್ದೇ ಚಿಂತೆ
ಮಹತ್ವದ ಟೂರ್ನಿಗಳನ್ನು ಮುಂದಿಟ್ಟುಕೊಂಡಿರುವ ಭಾರತ ಇನ್ನೂ ಪರಿಪೂರ್ಣ ತಂಡವನ್ನು ಸಂಯೋಜಿಸಿಲ್ಲ ಎಂಬುದು ವಿಪರ್ಯಾಸ. ಅಗ್ರ ಕ್ರಮಾಂಕದಲ್ಲಿ ಯಾವುದೇ ಸಮಸ್ಯೆ ಕಾಡದಿದ್ದರೂ ನಾಲ್ಕು ಮತ್ತು ಐದನೇ ಕ್ರಮಾಂಕದಲ್ಲಿ ಯಾರನ್ನು ಆಡಿಸಬೇಕು ಎಂಬ ಗೊಂದಲ ಇನ್ನೂ ಬಗೆಹರಿದಿಲ್ಲ. ಈ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಬಿಸಿಸಿಐ, ಸೆಲೆಕ್ಟರ್ಸ್, ಟೀಮ್ ಮ್ಯಾನೇಜ್ಮೆಂಟ್ ವಿಫಲವಾಗಿದೆ.
ಸರಣಿ ಸರಣಿಗೂ ಪ್ರಯೋಗ ನಡೆಸಿರುವ ಟೀಮ್ ಮ್ಯಾನೇಜ್ಮೆಂಟ್ ಸರಿಯಾದ ಆಟಗಾರನ ಆಯ್ಕೆಗೆ ಪರಿಗಣಿಸಲು ಎಡವಿತು. ಅಯ್ಯರ್ ಮತ್ತು ರಾಹುಲ್ ಕ್ರಮವಾಗಿ 4 ಮತ್ತು 5ನೇ ಕ್ರಮಾಂಕದಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. ಈ ಸ್ಥಾನಕ್ಕೆ ಅವರು ಹೊಂದಿಕೊಂಡಿದ್ದಾರೆ. ಮ್ಯಾನೇಜ್ಮೆಂಟ್ ಕೂಡ ಅವರನ್ನೇ ನೆಚ್ಚಿಕೊಂಡಿದೆ. ಉಳಿದಂತೆ ಯಾವೊಬ್ಬ ಬ್ಯಾಟರ್ ಕೂಡ ಈ ಕ್ರಮಾಂಕದಲ್ಲಿ ಅಬ್ಬರಿಸಿಲ್ಲ.
ಹಾಗಾಗಿ ಮ್ಯಾಚ್ ಫಿಟ್ ಆಗಿದ್ದಾರೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಈ ಇಬ್ಬರಿಗೂ ಇನ್ನಷ್ಟು ಅವಕಾಶ ನೀಡಲಾಗಿದೆ. ಅವರನ್ನು ತಂಡಕ್ಕೆ ಕರೆತರುವ ಕಾರಣದಿಂದಲೇ ಏಷ್ಯಾಕಪ್ ತಂಡವನ್ನು ಪ್ರಕಟಿಸಲು ಸೆಲೆಕ್ಟರ್ಸ್ ವಿಳಂಬ ಮಾಡುತ್ತಿದ್ದಾರೆ. ಒಂದು ವೇಳೆ ಎನ್ಸಿಎ ಫೈನಲ್ ರಿಪೋರ್ಟ್ನಲ್ಲಿ ಅನ್ಫಿಟ್ ಎಂದರೆ ಸೂರ್ಯಕುಮಾರ್, ಇಶಾನ್ಗೆ ಅವಕಾಶ ಸಿಕ್ಕರೂ ಅಚ್ಚರಿ ಇಲ್ಲ.