ಜಸ್ಪ್ರೀತ್ ಬುಮ್ರಾ ಹಣೆಬರಹ ಬದಲಾಗಿದ್ದೇ ರವಿ ಶಾಸ್ತ್ರಿಯ ಆ ಒಂದು ಕರೆಯಿಂದ; 2018ರ ಘಟನೆ ನೆನೆದ ಮಾಜಿ ಕೋಚ್
Jasprit Bumrah : 2018ರಲ್ಲಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡುವ ಮೊದಲು ಭಾರತದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಅವರು ವೇಗಿಗೆ ಕರೆ ಮಾಡಿದ್ದ ಘಟನೆಯನ್ನು ನೆನೆದಿದ್ದಾರೆ.
ಟೀಮ್ ಇಂಡಿಯಾದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jaspreet Bumrah), ಇತ್ತೀಚೆಗೆ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನ ಪಡೆದ ದೇಶದ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಬುಮ್ರಾ ಈ ಸಾಧನೆ ಮಾಡಿದ್ದಾರೆ. ಈ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 6 ವಿಕೆಟ್, ಎರಡನೇ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಪಡೆದಿದ್ದರು.
ವಿಶ್ವ ಕ್ರಿಕೆಟ್ನ ಪ್ರಮುಖ ವೇಗಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಬುಮ್ರಾ, ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು, 2018ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ಸಮಯದಲ್ಲಿ. ಸದ್ಯ ಅವರು ಈವರೆಗೂ 34 ಟೆಸ್ಟ್ಗಳಲ್ಲಿ ಕಣಕ್ಕಿಳಿದಿದ್ದು, 150 ವಿಕೆಟ್ ಉರುಳಿಸಿದ್ದಾರೆ. ಅಮೋಘ ಸಾಧನೆ ಮಾಡಿರುವ ಬುಮ್ರಾ ಹಣೆಬರಹ ಬದಲಾಗಿದ್ದು ಮಾಜಿ ಹೆಡ್ಕೋಚ್ ರವಿ ಶಾಸ್ತ್ರಿ (Ravi Shastri) ಅವರ ಆ ಒಂದು ಫೋನ್ ಕಾಲ್ನಿಂದ.
ಕರೆ ಮಾಡಿದ್ದ ಘಟನೆ ನೆನೆದ ರವಿ ಶಾಸ್ತ್ರಿ
ಹೌದು.. ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ ಅವರನ್ನು ಟೆಸ್ಟ್ ಕ್ರಿಕೆಟ್ಗೆ ಪರಿಚಯಿಸಿದ್ದು, ಮಾಜಿ ಕೋಚ್ ರವಿ ಶಾಸ್ತ್ರಿ. ವೇಗಿಯನ್ನು ಟೆಸ್ಟ್ ಕ್ರಿಕೆಟ್ಗೆ ಪರಿಚಯಿಸಿದ್ದರ ಕುರಿತು ಶಾಸ್ತ್ರಿ ಮೆಲುಕು ಹಾಕಿದ್ದಾರೆ. ಇಂಗ್ಲೆಂಡ್ನ ಮೈಕೆಲ್ ಅಥರ್ಟನ್ ಜೊತೆಗಿನ ಸಂದರ್ಶನದಲ್ಲಿ ಶಾಸ್ತ್ರಿ, ಬುಮ್ರಾಗೆ ಕರೆ ಮಾಡಿದ್ದ ಘಟನೆಯನ್ನು ನೆನೆಸಿಕೊಂಡಿದ್ದಾರೆ. ಟೆಸ್ಟ್ನಲ್ಲಿ ಆಡುವ ಆಸಕ್ತಿ ಎನ್ನುವುದರ ಕುರಿತು ವಿಚಾರಿಸಲು ಬುಮ್ರಾಗೆ ಫೋನ್ ಮಾಡಿದ್ದೆ ಎಂದಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಆತನ ಸಾಮರ್ಥ್ಯವನ್ನು ಅರಿಯದೆ ಅನೇಕರು, ಬುಮ್ರಾ ವೈಟ್-ಬಾಲ್ ಸ್ವರೂಪ ಕ್ರಿಕೆಟಿಗ ಎಂದು ಕರೆದಿದ್ದಾರೆ. ನಾನು ಅವರಿಗೆ ಮೊದಲ ಕರೆ ಮಾಡಿದ್ದು ನನಗೆ ನೆನಪಿದೆ. ಆಗ ಕೋಲ್ಕತ್ತಾದಲ್ಲಿದ್ದೆ. ಟೆಸ್ಟ್ ಕ್ರಿಕೆಟ್ನಲ್ಲಿ ಆಸಕ್ತಿ ಇದೆಯೇ ಎಂದು ನಾನು ಬುಮ್ರಾರನ್ನು ಕೇಳಿದ್ದೆ. ನನ್ನ ಮಾತು ಕೇಳಿದ ಬುಮ್ರಾ ಜೀವನದ ಅತಿದೊಡ್ಡ ದಿನ ಎಂದು ಹೇಳಿದ್ದರು ಎಂದು ಶಾಸ್ತ್ರಿ ನೆನಪಿಸಿಕೊಂಡಿದ್ದಾರೆ.
ಸಿದ್ಧರಾಗಿರಿ ಎಂದು ಮಾಜಿ ಕೋಚ್
ಬುಮ್ರಾರನ್ನು ಟೆಸ್ಟ್ನಲ್ಲಿ ಆಡುತ್ತಾರಾ ಎಂಬುದನ್ನು ಕೇಳದೆ ವೈಟ್ಬಾಲ್ ಕ್ರಿಕೆಟಿಗ ಎಂದು ಹಣೆಪಟ್ಟಿ ಬಿಟ್ಟಿದ್ದರು. ಆದರೆ, ನನಗೆ ಗೊತ್ತಿತ್ತು. ಬುಮ್ರಾ ವಿಕೆಟ್ ಪಡೆಯಲು ಹಸಿದಿದ್ದ. ಆಡುವ ಹಸಿವು ಹೆಚ್ಚಿತ್ತು. ಅದನ್ನು ನೋಡಲು ನಾನು ಬಯಸುತ್ತಿದ್ದೆ. ಹಾಗಾಗಿ ಕರೆ ಮಾಡಿ ಸಿದ್ಧರಾಗಿರಿ ಎಂದು ನಾನು ಅವರಿಗೆ ಹೇಳಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಅವರನ್ನು ಪದಾರ್ಪಣೆ ಮಾಡಿಸಿದ್ದೆ ಎಂದು ಶಾಸ್ತ್ರಿ ಹೇಳಿದ್ದಾರೆ.
2018ರಲ್ಲಿ ಪದಾರ್ಪಣೆ ಮಾಡಿದಾಗಿನಿಂದ ಭಾರತೀಯ ವೇಗದ ದಾಳಿಯನ್ನು ಮುನ್ನಡೆಸುತ್ತಿರುವ ಬುಮ್ರಾ, 150 ವಿಕೆಟ್ಗಳ ಗಡಿ ತಲುಪಿದ್ದಾರೆ. ಆ ಮೂಲಕ ವೇಗದ 150 ಟೆಸ್ಟ್ ವಿಕೆಟ್ ಪಡೆದ ದೇಶದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೇಗಿ ಪದಾರ್ಪಣೆ ಮಾಡಿದಾಗ ನಾಯಕರಾಗಿದ್ದ ವಿರಾಟ್ ಕೊಹ್ಲಿ ಅವರೊಂದಿಗೆ ಟೆಸ್ಟ್ ಕ್ರಿಕೆಟ್ ಆಡಲು ಬುಮ್ರಾ ಉತ್ಸುಕರಾಗಿದ್ದರು ಎಂದು ಶಾಸ್ತ್ರಿ ಬಹಿರಂಗಪಡಿಸಿದ್ದಾರೆ.
‘ಟೆಸ್ಟ್ ಕ್ರಿಕೆಟ್ನಲ್ಲಿ ಸಾಧನೆ ಎಲ್ಲರಿಗೂ ನೆನಪಿರುತ್ತೆ’
ಬುಮ್ರಾ, ವಿರಾಟ್ ಕೊಹ್ಲಿ ಅವರೊಂಂದಿಗೆ ಟೆಸ್ಟ್ ಕ್ರಿಕೆಟ್ ಆಡಲು ಹತಾಶರಾಗಿದ್ದರು. ವೃತ್ತಿಜೀವನದ ಕೊನೆಯಲ್ಲಿ ಬಿಳಿ ಚೆಂಡಿನ ಸರಾಸರಿ ಯಾರೂ ನೆನಪಿಸಿಕೊಳ್ಳುವುದಿಲ್ಲ ಎಂದು ಅವರಿಗೆ ತಿಳಿದಿತ್ತು. ಟೆಸ್ಟ್ ಕ್ರಿಕೆಟ್ನಲ್ಲಿ ನಿಮ್ಮ ಪ್ರದರ್ಶನ, ಅಂಕಿ-ಸಂಖ್ಯೆಗಳನ್ನೇ ಯಾವಾಗಲೂ ನೆನಪಿಸಿಕೊಳ್ಳುತ್ತಾರೆ ಎಂದಿದ್ದರು ಎಂದು ಶಾಸ್ತ್ರಿ ಹೇಳಿದ್ದಾರೆ. 2022ರ ಜನವರಿಯಲ್ಲಿ ರವಿ ಶಾಸ್ತ್ರಿ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ನಾಯಕತ್ವ ವಹಿಸಿದ್ದರು.
ಕೋವಿಡ್ -19 ಸೋಂಕಿನಿಂದ ರೋಹಿತ್ ಅಲಭ್ಯರಾಗಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ನಲ್ಲಿ ಬುಮ್ರಾ ಅದೇ ವರ್ಷ ಭಾರತೀಯ ತಂಡವನ್ನು ಮುನ್ನಡೆಸಿದ್ದರು. 30 ವರ್ಷದ ವೇಗಿಯನ್ನು ಇಂಗ್ಲೆಂಡ್ ವಿರುದ್ಧದ ಉಳಿದ 3 ಟೆಸ್ಟ್ ಪಂದ್ಯಗಳಿಗೆ ತಂಡದಲ್ಲಿ ತಂಡದ ಉಪನಾಯಕರನ್ನಾಗಿ ಹೆಸರಿಸಲಾಗಿದೆ. ಬುಮ್ರಾ ಪ್ರಸ್ತುತ ಎರಡು ಪಂದ್ಯಗಳ ನಂತರ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. 15 ವಿಕೆಟ್ ಪಡೆದಿದ್ದಾರೆ.