ರೋಹಿತ್​ ಶರ್ಮಾ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ; ಭವಿಷ್ಯ ನುಡಿದ ಭಾರತದ ಮೂವರು ದಿಗ್ಗಜ ಕ್ರಿಕೆಟಿಗರು
ಕನ್ನಡ ಸುದ್ದಿ  /  ಕ್ರಿಕೆಟ್  /  ರೋಹಿತ್​ ಶರ್ಮಾ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ; ಭವಿಷ್ಯ ನುಡಿದ ಭಾರತದ ಮೂವರು ದಿಗ್ಗಜ ಕ್ರಿಕೆಟಿಗರು

ರೋಹಿತ್​ ಶರ್ಮಾ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ; ಭವಿಷ್ಯ ನುಡಿದ ಭಾರತದ ಮೂವರು ದಿಗ್ಗಜ ಕ್ರಿಕೆಟಿಗರು

Rohit Sharma Retirement: ರೋಹಿತ್​ ಶರ್ಮಾ ಅವರ ಟೆಸ್ಟ್​ ಕ್ರಿಕೆಟ್ ವೃತ್ತಿಜೀವನಕ್ಕೆ ಸಂಬಂಧಿಸಿ ಭಾರತದ ಮಾಜಿ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್, ರವಿ ಶಾಸ್ತ್ರಿ, ಸಂಜಯ್ ಮಂಜ್ರೇಕರ್​ ಭವಿಷ್ಯ ನುಡಿದಿದ್ದಾರೆ.

ರೋಹಿತ್​ ಶರ್ಮಾ ಟೆಸ್ಟ್ ಕ್ರಿಕೆಟ್ ಬದುಕು ಅಂತ್ಯ; ಭವಿಷ್ಯ ನುಡಿದ ಭಾರತದ ಮೂವರು ದಿಗ್ಗಜ ಕ್ರಿಕೆಟಿಗರು
ರೋಹಿತ್​ ಶರ್ಮಾ ಟೆಸ್ಟ್ ಕ್ರಿಕೆಟ್ ಬದುಕು ಅಂತ್ಯ; ಭವಿಷ್ಯ ನುಡಿದ ಭಾರತದ ಮೂವರು ದಿಗ್ಗಜ ಕ್ರಿಕೆಟಿಗರು

ಮೆಲ್ಬೊರ್ನ್​ ಕ್ರಿಕೆಟ್ ಮೈದಾನದಲ್ಲಿ ಜರುಗಿದ ನಾಲ್ಕನೇ ಪಂದ್ಯವು ರೋಹಿತ್​ ಶರ್ಮಾ ಟೆಸ್ಟ್​ ವೃತ್ತಿಜೀವನದ ಕೊನೆಯ ಪಂದ್ಯವಾಗಿದೆ ಎಂದು ಭಾರತದ ಮಾಜಿ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್, ರವಿ ಶಾಸ್ತ್ರಿ ಮತ್ತು ಸಂಜಯ್ ಮಂಜ್ರೇಕರ್ ಒಂದೇ ಧ್ವನಿಯಲ್ಲಿ ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಿಂದ ರೋಹಿತ್ ಹೊರಗುಳಿದ ಬೆನ್ನಲ್ಲೇ ಮೂವರು ದಿಗ್ಗಜರು ಈ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಪ್ರಸ್ತುತ ಸರಣಿಯಲ್ಲಿ 3 ಟೆಸ್ಟ್​​ಗಳ 5 ಇನ್ನಿಂಗ್ಸ್​​ಗಳಲ್ಲಿ 31 ರನ್ ಗಳಿಸಿ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆ ಹಿಟ್​ಮ್ಯಾನ್ ವಿರುದ್ಧ ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ಅವರನ್ನು ತಂಡದಿಂದ ಕೈಬಿಡುವ ಬಗ್ಗೆ ಮ್ಯಾನೇಜ್​ಮೆಂಟ್ ನಿರ್ಧರಿಸಿತ್ತು.

ಪಂದ್ಯಕ್ಕೂ ಮುನ್ನಾ ದಿನ ನಡೆದಿದ್ದ ಬೆಳವಣಿಗೆಗಳು ರೋಹಿತ್​ ಶರ್ಮಾ 5ನೇ ಟೆಸ್ಟ್​ ಪಂದ್ಯ ಆಡುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದವು. ಅದರಂತೆಯೇ ಇಂದು ನಡೆದಿದ್ದು ವಿಶೇಷವೇನೂ ಅನಿಸುತ್ತಿಲ್ಲ. 37 ವರ್ಷದ ರೋಹಿತ್ 5ನೇ ಟೆಸ್ಟ್​ಗೆ ವಿಶ್ರಾಂತಿ ಪಡೆದಿದ್ದಾರೆ ಎಂದು ನಾಯಕ ಜಸ್ಪ್ರೀತ್ ಬುಮ್ರಾ ಹೇಳಿದ್ದರೂ, ಟೀಮ್ ಮ್ಯಾನೇಜ್‌ಮೆಂಟ್ ನಡೆ ಅನುಮಾನ ಹುಟ್ಟಿಸಿದೆ. ಇದರ ನಡುವೆಯೇ ದಿಗ್ಗಜ ಕ್ರಿಕೆಟಿಗರು ರೋಹಿತ್​ ಟೆಸ್ಟ್ ವೃತ್ತಿಜೀವನದ ಕುರಿತು ಭವಿಷ್ಯ ನುಡಿಯುತ್ತಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್ ಫೈನಲ್​ಗೆ ಭಾರತ ತಂಡ ಅರ್ಹತೆ ಪಡೆಯದಿದ್ದರೆ, ಮೆಲ್ಬೋರ್ನ್ ಟೆಸ್ಟ್ ರೋಹಿತ್ ಅವರ ಕೊನೆಯ ಪಂದ್ಯವಾಗಲಿದೆ ಎಂದು ಗವಾಸ್ಕರ್ ಹೇಳಿದ್ದಾರೆ.

ಸುನಿಲ್ ಗವಾಸ್ಕರ್ ಹೇಳಿದ್ದೇನು?

ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​ನ ನಾಲ್ಕನೇ ಆವೃತ್ತಿಯು ಇಂಗ್ಲೆಂಡ್ ವಿರುದ್ಧದ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಆದರೆ, ಆಯ್ಕೆದಾರರು 2027ರ ಫೈನಲ್​​ನಲ್ಲಿ ಆಡುವ ಆಟಗಾರನನ್ನು ಹುಡುಕುವ ಸಾಧ್ಯತೆ ಇದೆ. ಭಾರತ ಫೈನಲ್ ತಲುಪುತ್ತದೆಯೇ ಅಥವಾ ಇಲ್ಲವೇ ಎಂಬುದು ನಂತರದ ವಿಷಯ. ಆದರೆ ಪ್ರಸ್ತುತ ಚಿಂತಿಸುತ್ತಿರುವ ಆಯ್ಕೆ ಸಮಿತಿಯ ಆಲೋಚನೆ ಇದಾಗಿದೆ. ರೋಹಿತ್ ಶರ್ಮಾ ಕೊನೆಯ ಬಾರಿಗೆ ಟೆಸ್ಟ್ ಆಡುವುದನ್ನು ನಾವು ನೋಡಿದ್ದೇವೆ ಎಂದು ಗವಾಸ್ಕರ್​ ಹೇಳಿಕೆ ನೀಡಿದ್ದಾರೆ.

ಸಿಡ್ನಿ ಟೆಸ್ಟ್​ ಬಳಿಕ ಹಿಟ್​ಮ್ಯಾನ್ ನಿವೃತ್ತಿ ಎಂದ ರವಿ ಶಾಸ್ತ್ರಿ

ಅದೇ ಸಮಯದಲ್ಲಿ ರವಿ ಶಾಸ್ತ್ರಿ ಮಾತನಾಡಿ, 'ನಾನು ಟಾಸ್ ಅವಧಿಯಲ್ಲಿ ಕೇಳುವ ಮೊದಲೇ, ಜಸ್ಪ್ರೀತ್ ಬುಮ್ರಾ ಅವರು ರೋಹಿತ್​ ಹೊರಗುಳಿಯಲು ನಿರ್ಧರಿಸಿದ್ದಾರೆ. ಅವರ ಸ್ಥಾನವನ್ನು ಶುಭ್ಮನ್ ಗಿಲ್ ತುಂಬಲಿದ್ದಾರೆ ಎಂದುಬಿಟ್ಟರು. ರನ್ ಗಳಿಸಲು ಸಾಧ್ಯವಾಗದಿದ್ದಾಗ ಮಾನಸಿಕವಾಗಿ ಸಿದ್ದರಿಲ್ಲದಿದ್ದಾಗ ಹೀಗೆ ಸಂಭವಿಸುವುದು ಸಹಜ. ಈ ಪಂದ್ಯದಿಂದ ಹೊರಗುಳಿಯಲು ಒಪ್ಪಿಕೊಂಡಿರುವುದು ನಾಯಕನ ಅತ್ಯಂತ ಧೈರ್ಯಶಾಲಿ ನಿರ್ಧಾರವಾಗಿತ್ತು ಎಂದು ಹೇಳಿದ್ದಾರೆ.

ಭಾರತ ಮುಂದಿನ ಟೆಸ್ಟ್ ಸರಣಿಯನ್ನು ಜೂನ್​ನಲ್ಲಿ ಆಡಲಿದೆ. ದೇಶೀಯ ಆವೃತ್ತಿಯು ನಡೆಯುತ್ತಿದ್ದರೆ, ಅವರು ಮತ್ತಷ್ಟು ಆಡುವ ಬಗ್ಗೆ ಯೋಚಿಸಬಹುದಿತ್ತು. ಆದರೆ ಈ ಟೆಸ್ಟ್ ನಂತರ ಅವರು ನಿವೃತ್ತಿ ಘೋಷಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಶಾಸ್ತ್ರಿ ಹೇಳಿದ್ದಾರೆ. ಬಿಜಿಟಿ ಸರಣಿಯಲ್ಲಿ ಭಾರತ 1-2 ಅಂತರದಲ್ಲಿ ಹಿನ್ನಡೆ ಅನುಭವಿಸಿದೆ. ಸರಣಿ ಉಳಿಸಿಕೊಳ್ಳಲು ಟೀಮ್ ಇಂಡಿಯಾ, ಸಿಡ್ನಿ ಟೆಸ್ಟ್ ಗೆಲ್ಲಲೇಬೇಕು. ಸೋತರೆ, ಡಬ್ಲ್ಯುಟಿಸಿ ಫೈನಲ್ ತಲುಪುವ ಎಲ್ಲಾ ಭರವಸೆಗಳು ಅಂತ್ಯವಾಗುತ್ತವೆ.

ರೋಹಿತ್​ ನಿರ್ಧಾರ ಶ್ಲಾಘಿಸಿದ ಮಂಜ್ರೇಕರ್​

ಸಂಜಯ್ ಮಂಜ್ರೇಕರ್​ ಮಾತನಾಡಿ, ಅವರು ಚಿಕ್ಕವರಲ್ಲ ಮತ್ತು ಭಾರತದಲ್ಲಿ ಯುವಕರ ಕೊರತೆ ಇದೆ ಎಂದಲ್ಲ. ಅತ್ಯಂತ ಪ್ರತಿಭಾವಂತ ಆಟಗಾರರು ತಂಡಕ್ಕೆ ಬರುವ ಹೊಸ್ತಿಲಲ್ಲಿದ್ದಾರೆ. ಇದು ಕಠಿಣ ನಿರ್ಧಾರ. ಆದರೆ ಪ್ರತಿಯೊಬ್ಬರೂ ಒಂದು ದಿನ ಆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ರೋಹಿತ್ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಸಂಪೂರ್ಣವಾಗಿ ರೋಹಿತ್ ಶರ್ಮಾ ಅವರ ನಿರ್ಧಾರ. ಸರಿಯಾದ ಸಮಯದಲ್ಲಿ ತಂಡಕ್ಕಾಗಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು, ಆದರೆ ಈ ವಿಷಯದ ಬಗ್ಗೆ ರಹಸ್ಯ ಅರ್ಥವಾಗಲಿಲ್ಲ. ಟಾಸ್​ನಲ್ಲಿಯೂ ಈ ಬಗ್ಗೆ ಚರ್ಚೆಯಾಗಲಿಲ್ಲ ಎಂದಿದ್ದಾರೆ.

Whats_app_banner