ಶ್ರೇಯಸ್ ಅಯ್ಯರ್ ಹೊಗಳುವ ಭರದಲ್ಲಿ ಪರೋಕ್ಷವಾಗಿ ವಿರಾಟ್ ಕೊಹ್ಲಿ ಟೀಕಿಸಿದರೇ ರವಿ ಶಾಸ್ತ್ರಿ?
Ravi Shastri: ಗುಜರಾತ್ ಟೈಟಾನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಶತಕ ತ್ಯಾಗ ಮಾಡಿದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಹೊಗಳುವ ಭರದಲ್ಲಿ ರವಿ ಶಾಸ್ತ್ರಿ ಅವರು ಪರೋಕ್ಷವಾಗಿ ವಿರಾಟ್ ಕೊಹ್ಲಿ ಟೀಕಿಸಿದ್ದಾರೆ.

ಇದು ಶ್ರೇಯಸ್ ಅಯ್ಯರ್ ಅವರ 10ನೇ ಐಪಿಎಲ್ ಆವೃತ್ತಿ. ಚೊಚ್ಚಲ ಶತಕ ಸಿಡಿಸುವ ಸುವರ್ಣಾವಕಾಶ ಅವರ ಮುಂದಿತ್ತು. 97 ರನ್ ಗಳಿಸಿದ್ದ ಅಯ್ಯರ್, 3 ರನ್ ಗಳಿಸುವುದು ದೊಡ್ಡ ವಿಷಯವೇನು ಆಗಿರಲಿಲ್ಲ. ಹೀಗಿದ್ದರೂ ತಂಡದ ಹಿತಾಸಕ್ತಿ ನೋಡಿದ ಶ್ರೇಯಸ್ ಗೆಲುವಿನ ದೃಷ್ಟಿಕೋನವನ್ನು ಮುಂದಿಟ್ಟುಕೊಂಡು ತಮ್ಮ ಶತಕ ತ್ಯಾಗ ಮಾಡಿದರು. ಕೊನೆಯ ಓವರ್ನಲ್ಲಿ ಶತಕದ ಬಗ್ಗೆ ತಲೆಕೆಡಿಸಿಕೊಳ್ಳಬೇಡ, ನೀನು ನಿನ್ನ ಆಟ ಆಡು ಎಂದು ಶಶಾಂಕ್ ಸಿಂಗ್ಗೆ 26.75 ಕೋಟಿ ವೀರ ಅಯ್ಯರ್ ಹೇಳಿದ್ದರು. ಅದರಂತೆ ಓವರ್ನಲ್ಲಿ ಶಶಾಂಕ್ 5 ಬೌಂಡರಿ ಸಹಿತ 23 ರನ್ ಬಾರಿಸಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಇದೇ ಸ್ಕೋರ್ನಿಂದಾಗಿ ಪಂಜಾಬ್ ಕಿಂಗ್ಸ್ ಗೆಲ್ಲಲು ಸಾಧ್ಯವಾಯಿತು!
ಈ ವಿಚಾರಕ್ಕೆ ಸಂಬಂಧಿಸಿ ಶ್ರೇಯಸ್ ಅಯ್ಯರ್ ನಡೆಯನ್ನು ಶ್ಲಾಘಿಸಿರುವ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ, 2019ರಲ್ಲಿ ನಡೆದಿದ್ದ ಘಟನೆಗೆ ಪರೋಕ್ಷವಾಗಿ ವಿರಾಟ್ ಕೊಹ್ಲಿ ಅವರನ್ನು ಟೀಕಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನ 5ನೇ ಹಾಗೂ ಉಭಯ ತಂಡಗಳ ತಮ್ಮ ಮೊದಲ ಪಂದ್ಯವು ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ಕಳೆದ ವರ್ಷ ಕೆಕೆಆರ್ ತಂಡಕ್ಕೆ ಟ್ರೋಫಿ ಗೆದ್ದುಕೊಟ್ಟಿದ್ದ ಅಯ್ಯರ್ ಈ ಸಲ ಪಂಜಾಬ್ ಕಿಂಗ್ಸ್ ಪರ ಪದಾರ್ಪಣೆ ಮಾಡಿದರು. ಗುಜರಾತ್ ಟೈಟಾನ್ಸ್ ವಿರುದ್ಧ ಕಣಕ್ಕಿಳಿದ ಅಯ್ಯರ್, ತಾನು ಎದುರಿಸಿದ ಮೊದಲ ಎಸೆತದಿಂದಲೇ ಬಿರುಸಿನ ಆಟಕ್ಕೆ ಕೈ ಹಾಕಿದರು. 17ನೇ ಓವರ್ನಲ್ಲಿ 38 ಎಸೆತಗಳಲ್ಲಿ 90 ರನ್ ಗಳಿಸಿದ್ದ ಅಯ್ಯರ್, ಮುಂದಿನ ಮೂರು ಓವರ್ಗಲ್ಲಿ ಎದುರಿಸಿದ್ದು 4 ಎಸೆತ ಮಾತ್ರ. ಗಳಿಸಿದ್ದು 7 ರನ್.
ಶ್ರೇಯಸ್ ಅಯ್ಯರ್ ನಡೆಗೆ ಮೆಚ್ಚುಗೆ
ನಾಯಕ ಅಯ್ಯರ್ ನೀಡಿದ ಅನುಮತಿಯಂತೆ ಶಶಾಂಕ್ ಮುಂದಿನ ಮೂರು ಓವರ್ಗಳಲ್ಲಿ 275ರ ಸ್ಟ್ರೈಕ್ರೇಟ್ನಲ್ಲಿ ಸ್ಕೋರ್ ಮಾಡಿದರು. 16 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 44 ರನ್ ಬಾರಿಸಿದರು. ಇದರೊಂದಿಗೆ ಶ್ರೇಯಸ್ 97 ರನ್ ಗಳಿಸಿ ಔಟಾಗದೆ ಉಳಿದರು. ಅವರ ಇನ್ನಿಂಗ್ಸ್ನಲ್ಲಿ 5 ಬೌಂಡರಿ, 9 ಸಿಕ್ಸರ್ಗಳಿದ್ದವು. ಪಂದ್ಯದ ನಂತರ ಈ ಬಗ್ಗೆ ಮಾತಾಡಿದ ಶಶಾಂಕ್, ಶತಕ ಸಿಡಿಸಲು ಸಿಂಗಲ್ ತೆಗೆದುಕೊಳ್ಳುವುದಾಗಿ ತಿಳಿಸಿದ್ದೆ. ಆದರೆ, ತನ್ನ ಶತಕದ ಬಗ್ಗೆ ಚಿಂತಿಸಬೇಡಿ. ತಂಡದ ಸ್ಕೋರ್ ಹೆಚ್ಚಿಸಿ ಎಂದು ಸ್ಪಷ್ಟವಾಗಿ ಹೇಳಿದ್ದರು ಎಂದು ಶಶಾಂಕ್ ಮಾಹಿತಿ ನೀಡಿದ್ದಾರೆ. ಶ್ರೇಯಸ್ ಅಯ್ಯರ್ ಅವರ ಈ ನಡೆಗೆ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದು ತಂಡಕ್ಕಾಗಿ ಆಡುವವರ ಲಕ್ಷಣ ಎಂದು ಶ್ಲಾಘಿಸುತ್ತಿದ್ದಾರೆ.
ಇನ್ನಿಂಗ್ಸ್ ವಿರಾಮದ ಸಮಯದಲ್ಲಿ ಭಾರತದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಅವರು ತಮ್ಮ ನಾಯಕ ಶ್ರೇಯಸ್ ಅಯ್ಯರ್ ಅವರು ಶತಕ ಸಿಡಿಸಲು ಸಾಧ್ಯವಾಗದೇ ಇರಲು ಕಾರಣವೇನು ಎಂದು ಶಶಾಂಕ್ ಬಳಿ ಕೇಳಿದ್ದರು. ನಾನು ತುಂಬಾ ಪ್ರಾಮಾಣಿಕವಾಗಿ ಹೇಳುತ್ತೇನೆ, ಮೊದಲ ಎಸೆತದಿಂದ ಶ್ರೇಯಸ್ ನನಗೆ ಹೇಳಿದರು, 'ಶಶಾಂಕ್, ನನ್ನ ಶತಕದ ಬಗ್ಗೆ ಯೋಚಿಸಬೇಡಿ. ನಿಮ್ಮ ಆಟವನ್ನು ಆಡಿ. ದೊಡ್ಡ ಹೊಡೆತಗಳಿಗೆ ಕೈ ಹಾಕಿ. ಆದ್ದರಿಂದ, ಓವರ್ಗೂ ಮುನ್ನ ನನ್ನೊಂದಿಗೆ ಮಾತನಾಡಿದ ರೀತಿಗೆ ಅಭಿನಂದನೆಗಳು ಎಂದು ಶಶಾಂಕ್ ಹೇಳಿದ್ದರು. ಶ್ರೇಯಸ್ ಅವರ ನಿಸ್ವಾರ್ಥ ಆಟವು ಪಿಬಿಕೆಎಸ್ 243 ರನ್ ಪೇರಿಸಲು ಸಾಧ್ಯವಾಯಿತು. ಇದು ಗುಜರಾತ್ ಟೈಟಾನ್ಸ್ ತಂಡವನ್ನು 11 ರನ್ನಿಂದ ಸೋಲಿಸಲು ಕಾರಣವಾಯಿತು.
ಪರೋಕ್ಷವಾಗಿ ಕೊಹ್ಲಿ ಟೀಕಿಸಿದ ರವಿ ಶಾಸ್ತ್ರಿ
ಶಶಾಂಕ್ ಅವರ ಉತ್ತರವನ್ನು ಕೇಳಿದ ಶಾಸ್ತ್ರಿ, ಆಟಗಾರರು ತಂಡದ ಅಗತ್ಯಗಳನ್ನು ನೋಡುವುದಕ್ಕಿಂತ ವೈಯಕ್ತಿಕ ಮೈಲಿಗಲ್ಲುಗಳಿಗೆ ಹೆಚ್ಚಿನ ಮೌಲ್ಯವನ್ನು ನೀಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಶ್ರೇಯಸ್ ಅವರ ವರ್ತನೆಯನ್ನು ಶ್ಲಾಘಿಸಿದ ಶಾಸ್ತ್ರಿ, ‘ತಂಡದ ಆಟ ಎಂದು ಹೇಳಲು ಇದು ಸರಿಯಾದ ವಿಷಯ’ ಎಂದಿದ್ದಾರೆ. ಶಾಸ್ತ್ರಿ ಯಾವುದೇ ಹೆಸರು ಉಲ್ಲೇಖಿಸದೇ ಪರೋಕ್ಷವಾಗಿ ಕೊಹ್ಲಿಯನ್ನು ಟೀಕಿಸಿದ್ದಾರೆ. ಶಶಾಂಕ್ ತಮ್ಮ ಶತಕದ ಬಗ್ಗೆ ಯೋಚಿಸದಿರುವ ಶ್ರೇಯಸ್ ಉದ್ದೇಶ ಬಹಿರಂಗಪಡಿಸಿದ ಕೂಡಲೇ, ಐಪಿಎಲ್ನಲ್ಲಿ ಕೆಕೆಆರ್ ವಿರುದ್ಧ ಶತಕ ಪೂರೈಸಲು ಸ್ಟ್ರೈಕ್ ಉಳಿಸಿಕೊಳ್ಳಲು ಕೊಹ್ಲಿ ಡಬಲ್ಸ್ ಓಡಲು ನಿರಾಕರಿಸಿದ ವಿಡಿಯೋಗಳು ವೈರಲ್ ಆಗುತ್ತಿವೆ. ಈ ಇನ್ನಿಂಗ್ಸ್ ನೆನಪಿಸಿಕೊಂಡೇ ಕೊಹ್ಲಿ ಅವರನ್ನು ಪರೋಕ್ಷವಾಗಿ ಟೀಕಿಸಿದರೆಯೇ ಎನ್ನಬಹುದು.
2019ರ ಐಪಿಎಲ್ನಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಸ್ಟಾರ್ ಕೊಹ್ಲಿ 96 ರನ್ ಗಳಿಸಿದ್ದಾಗ ಸ್ಟ್ರೈಕ್ನಲ್ಲಿದ್ದ ಮಾರ್ಕಸ್ ಸ್ಟೋಯ್ನಿಸ್ 2ನೇ ರನ್ಗೆ ಯತ್ನಿಸಿದರು. ಆದರೆ ಒಂದು ರನ್ಗೆ ಸುಮ್ಮನಾದ ಕೊಹ್ಲಿ ಶತಕ ಸಿಡಿಸಲು ಕೊಹ್ಲಿ ಸ್ಟ್ರೈಕ್ ಕಾಯ್ದಕೊಂಡರು. ಬಾಂಗ್ಲಾದೇಶ ವಿರುದ್ಧದ 2023ರ ಏಕದಿನ ವಿಶ್ವಕಪ್ ಪಂದ್ಯದಲ್ಲೂ ಕೊಹ್ಲಿ ತಮ್ಮ ಶತಕಕ್ಕೆ ಆದ್ಯತೆ ನೀಡಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದರು.
ಇದನ್ನೂ ಓದಿ: ಐಪಿಎಲ್ ಅಂಕಪಟ್ಟಿ; ಟೇಬಲ್ ಟಾಪರ್ ಯಾರು?
