Breaking: ಏಕದಿನ ವಿಶ್ವಕಪ್‌ಗೆ ಭಾರತ ಅಂತಿಮ ತಂಡ ಪ್ರಕಟ; ಅನುಭವಿ ಅಶ್ವಿನ್ಗೆ ಅದೃಷ್ಟ, ಗಾಯಾಳು ಅಕ್ಷರ್ಗೆ ದುರಾದೃಷ್ಟ
India final World Cup 2023 squad: ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಯಾಗಿದೆ. ಗಾಯಗೊಂಡಿದ್ದ ಅಕ್ಷರ್ ಪಟೇಲ್ ಫಿಟ್ನೆಸ್ ಸಾಬೀತುಪಡಿಸಲು ವಿಫಲರಾಗಿದ್ದು, 15 ಸದಸ್ಯರ ಭಾರತ ತಂಡದಲ್ಲಿ ಅವಕಾಶ ನೀಡಲಾಗಿದೆ.
ಏಕದಿನ ವಿಶ್ವಕಪ್ ಟೂರ್ನಿಗೂ (ODI World Cup 2023) ಮುನ್ನವೇ ಭಾರತ ತಂಡಕ್ಕೆ (Team India) ಆಘಾತವಾಗಿದೆ. ತಂಡಕ್ಕೆ ಆಯ್ಕೆಯಾಗಿದ್ದ ಪ್ರಮುಖ ಆಲ್ರೌಂಡರ್ ಇಂಜುರಿ ಕಾರಣ ಹೊರಬಿದ್ದಿದ್ದಾರೆ. ಗಾಯದ ಸಮಸ್ಯೆಗೆ ತುತ್ತಾಗಿ ಫಿಟ್ನೆಸ್ ಸಾಬೀತುಪಡಿಸಲು ವಿಫಲರಾದ ಭಾರತ ತಂಡದ ಸ್ಪಿನ್ ಆಲ್ರೌಂಡರ್ ಅಕ್ಷರ್ ಪಟೇಲ್ (Axar Patel) ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಏಕದಿನ ವಿಶ್ವಕಪ್‌ಗೆ ಅಂತಿಮ ತಂಡ ಪ್ರಕಟವಾಗಿದ್ದು, ಅನುಭವಿ ಆಟಗಾರ, ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ಗೆ (Ravichandran Ashwin) ಅಂತಿಮ 15ರ ತಂಡದಲ್ಲಿ ಅವಕಾಶ ನೀಡಲಾಗಿದೆ.
ಏಷ್ಯಾಕಪ್ನಲ್ಲಿ ಅಕ್ಷರ್ ಗಾಯ
ಏಷ್ಯಾಕಪ್ ಟೂರ್ನಿಯಲ್ಲಿ (Asia Cup 2023) ಅಕ್ಷರ್ ಪಟೇಲ್ ಗಾಯಗೊಂಡರು. ಸೂಪರ್-4 ಹಂತದ ಕೊನೆಯ ಪಂದ್ಯದಲ್ಲಿ ಸೆಪ್ಟೆಂಬರ್ 15ರಂದು ಬಾಂಗ್ಲಾದೇಶ ವಿರುದ್ಧ ಕಣಕ್ಕಿಳಿದ ಅಕ್ಷರ್, ಮಣಿಕಟ್ಟು ಮತ್ತು ಸ್ನಾಯುಸೆಳೆತಕ್ಕೆ ಒಳಗಾಗಿದ್ದರು. ಆದರೂ ಆ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಗಮನ ಸೆಳೆದಿದ್ದರು. ಪಂದ್ಯ ಮುಗಿದ ಮರುದಿನವೇ ಭಾರತಕ್ಕೆ ಮರಳಿದ್ದ ಅಕ್ಷರ್ ಪಟೇಲ್, ಬೆಂಗಳೂರಿನ ರಾಷ್ಟ್ರೀಯ ಅಕಾಡೆಮಿಯಲ್ಲಿ ಪುನಃಶ್ಚೇತನ ತರಬೇತಿಗೆ ಒಳಗಾದರು. ಆದರೆ ಚೇತರಿಸಿಕೊಂಡಿಲ್ಲ ಎಂದು ವರದಿಯಾಗಿದೆ.
ಇಂದು ಸೆಪ್ಟೆಂಬರ್ 28ರಂದು ವಿಶ್ವಕಪ್ ಟೂರ್ನಿಯ ಎಲ್ಲಾ ತಂಡಗಳ ಅಂತಿಮ ಬದಲಾವಣೆಗೆ ಡೆಡ್ಲೈನ್ ನೀಡಲಾಗಿತ್ತು. ಅದರಂತೆ ಈವರೆಗೆ ಅಕ್ಷರ್ ಫಿಟ್ನೆಸ್ ವರದಿಗಾಗಿ ಕಾಯುತ್ತಿದ್ದ ಭಾರತ ತಂಡಕ್ಕೆ ನಿರಾಸೆಯಾಗಿದೆ. ಅಕ್ಷರ್ ಪಟೇಲ್ ಚೇತರಿಸಿಕೊಂಡಿಲ್ಲ ಎಂದು ವರದಿ ಬಂದಿದೆ. ಹಾಗಾಗಿ ಅನುಭವಿ ಆಟಗಾರ ರವಿಚಂದ್ರನ್ ಅಶ್ವಿನ್ಗೆ ಅವಕಾಶ ನೀಡಲಾಗಿದೆ. ಅಕ್ಷರ್ಗೆ ಇಂಜುರಿಗೆ ಒಳಗಾದ ಪರಿಣಾಮವೇ ಆಸ್ಟ್ರೇಲಿಯಾ ಸರಣಿಗೆ ಅಶ್ವಿನ್ರನ್ನು ಆಯ್ಕೆ ಮಾಡಲಾಗಿತ್ತು.
ಆಸೀಸ್ ವಿರುದ್ದ ಅಶ್ವಿನ್ ಅದ್ಭುತ ಪ್ರದರ್ಶನ
ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಅಶ್ವಿನ್, 4 ವಿಕೆಟ್ ಪಡೆದು ಮಿಂಚಿದರು. ಮೊದಲ ಪಂದ್ಯದಲ್ಲಿ 1 ವಿಕೆಟ್, ಎರಡನೇ ಪಂದ್ಯದಲ್ಲಿ 3 ವಿಕೆಟ್ ಕಬಳಿಸಿದ ಅಶ್ವಿನ್ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೆ, ಬ್ಯಾಟಿಂಗ್ ಪಿಚ್ನಲ್ಲಿ ಪ್ರಮುಖ ಬ್ಯಾಟರ್ಗಳಿಗೆ ಚಳ್ಳೆ ತಿನ್ನಿಸಿದ್ದು ಆಯ್ಕೆದಾರರ ಗಮನ ಸೆಳೆಯಿತು. ಆದರೆ ಅಶ್ವಿನ್ಗೆ ವಾಷಿಂಗ್ಟನ್ ಸುಂದರ್ ದೊಡ್ಡ ಪೈಪೋಟಿ ನೀಡಿದ್ದರು. ಆದರೆ ಸಿಕ್ಕ ಅವಕಾಶದಲ್ಲಿ ಸಾಮರ್ಥ್ಯ ಸಾಬೀತುಪಡಿಸಲು ವಿಫಲರಾದರು. ಹಾಗಾಗಿ ಅಶ್ವಿನ್ಗೆ ಮಣೆ ಹಾಕಲಾಗಿದೆ.
ಅಶ್ವಿನ್ಗೆ ಇದು ಮೂರನೇ ವಿಶ್ವಕಪ್
ಇದು ಅಶ್ವಿನ್ಗೆ 3ನೇ ಏಕದಿನ ವಿಶ್ವಕಪ್. ಹಾಗೂ ತವರಿನಲ್ಲಿ ಅವರ 2ನೇ ವಿಶ್ವಕಪ್. 2011ರಲ್ಲಿ ಭಾರತದಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿ ಭಾಗವಾಗಿದ್ದಅಶ್ವಿನ್, ಆಸ್ಟ್ರೇಲಿಯಾದಲ್ಲಿ ನಡೆದ 2015ರ ಆವೃತ್ತಿಯಲ್ಲೂ ಕಣಕ್ಕಿಳಿದಿದ್ದರು. ಆದರೆ, ಇಬ್ಬರು ಲೆಗ್ ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದ ಕಾರಣ 2019ರ ವಿಶ್ವಕಪ್‌ಗೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದರು. ಇದೀಗ ಮತ್ತೊಮ್ಮೆ ತಂಡದಲ್ಲಿ ಅವಕಾಶ ಪಡೆಯುವಲ್ಲಿ ಸಫಲರಾಗಿದ್ದಾರೆ. 2011ರ ಏಕದಿನ ವಿಶ್ವಕಪ್ ಮತ್ತು 2023ರ ಏಕದಿನ ವಿಶ್ವಕಪ್ ಆಡುತ್ತಿರುವ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಮಾತ್ರ ಇದ್ದಾರೆ.
ತಂಡದೊಂದಿಗೆ ಗುವಾಹಟಿಗೆ ಆಗಮಿಸಿದ ಅಶ್ವಿನ್
ವಿಶ್ವಕಪ್ ಅಭ್ಯಾಸ ಪಂದ್ಯಗಳಿಗೂ ಮುನ್ನ ಟೀಮ್ ಇಂಡಿಯಾ ಗುವಾಹಟಿಗೆ ಆಗಮಿಸಿದೆ. ಇಲ್ಲಿನ ವಿಮಾನ ನಿಲ್ದಾಣದಿಂದ ಆಟಗಾರರು ಹೊರ ಬರುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಭಾರತ ತಂಡಕ್ಕೆ ಜೈಕಾರ ಹಾಕಿದರು. ಆಸ್ಟ್ರೇಲಿಯಾ ಸರಣಿಗಾಗಿ ಭಾರತದ ಏಕದಿನ ತಂಡದ ಭಾಗವಾಗಿದ್ದ ರವಿಚಂದ್ರನ್ ಅಶ್ವಿನ್, 2023ರ ವಿಶ್ವಕಪ್‌ಗೆ ಅಕ್ಷರ್ ಪಟೇಲ್ ಲಭ್ಯತೆಯ ಅನಿಶ್ಚಿತತೆಯ ನಡುವೆ ಮೆನ್ ಇನ್ ಬ್ಲೂ ಜೊತೆ ಗುವಾಹಟಿಗೆ ಪ್ರಯಾಣಿಸಿದ್ದಾರೆ.
ಅಕ್ಟೋಬರ್ 5ರಿಂದ ಟೂರ್ನಿ ಆರಂಭ
ಭಾರತದಲ್ಲಿ ಅಕ್ಟೋಬರ್ 5ರಿಂದ ಕ್ರಿಕೆಟ್ ಹಬ್ಬ ಶುರುವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮತ್ತು ರನ್ನರ್ಅಪ್ ತಂಡಗಳು ಮುಖಾಮುಖಿಯಾಗಲಿವೆ. ಟೀಮ್ ಇಂಡಿಯಾ ಅಕ್ಟೋಬರ್ 8ರಂದು ಶನಿವಾರ ಆಸ್ಟ್ರೇಲಿಯಾ ಎದುರು ಸೆಣಸಾಟ ನಡೆಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಏಕದಿನ ವಿಶ್ವಕಪ್‌ಗೆ ಭಾರತ ಅಂತಿಮ ತಂಡ
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ.