ಜಡೇಜಾ, ರಾಣಾ ಮಿಂಚು, ಚುರುಕಿನ ಬೌಲಿಂಗ್ಗೆ ಕುಸಿದ ಇಂಗ್ಲೆಂಡ್; ಭಾರತದ ಗೆಲುವಿಗೆ ಬೇಕು 249 ರನ್
India vs England 1st ODI: ನಾಗ್ಪುರದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ 47.4 ಓವರ್ಗಳಲ್ಲಿ 248 ರನ್ಗಳಿಸಿ ಆಲೌಟ್ ಆಗಿದೆ. ಇದರೊಂದಿಗೆ ಭಾರತ ತಂಡ ಗೆಲ್ಲಲು 249 ರನ್ ಗಳಿಸಬೇಕಿದೆ.

ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ಇಂಗ್ಲೆಂಡ್ 249 ರನ್ಗಳ ಗುರಿ ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಂಗ್ಲರು 47.4 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 248 ರನ್ಗಳಿಗೆ ಆಲೌಟ್ ಆಗಿದೆ. ಪದಾರ್ಪಣೆ ಮಾಡಿದ ವೇಗಿ ಹರ್ಷಿತ್ ರಾಣಾ ಜತೆಗೆ ಮಿಂಚಿದ ರವೀಂದ್ರ ಜಡೇಜಾ ತಲಾ 3 ವಿಕೆಟ್ ಉರುಳಿಸಿ ಪ್ರವಾಸಿ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕಟ್ಟಿ ಹಾಕಲು ನೆರವಾದರು. ಈ ಮಾರಕ ಬೌಲಿಂಗ್ ನಡುವೆಯೂ ಜೋಸ್ ಬಟ್ಲರ್ ಮತ್ತು ಜೇಕಬ್ ಬೆಥಲ್ ತಲಾ ಅರ್ಧಶತಕ ಬಾರಿಸಿದರು.
ಉತ್ತಮ ಆರಂಭಕ್ಕೆ ರಾಣಾ ಬ್ರೇಕ್
ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್, ಬೃಹತ್ ಗುರಿ ಪಡೆಯುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಿತು. ಆರಂಭಿಕರು ಅಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ನಾಯಕನ ನಿರ್ಧಾರವನ್ನು ಸಮರ್ಥಿಸಿದರು. ಭಾರತೀಯ ಬೌಲರ್ಗಳ ಮೇಲೆ ದಂಡಯಾತ್ರೆ ನಡೆಸಿದ ಆರಂಭಿಕರಾದ ಫಿಲ್ ಸಾಲ್ಟ್ ಮತ್ತು ಬೆನ್ ಡಕೆಟ್ ಟಿ20ಯಂತೆ ಬ್ಯಾಟ್ ಬೀಸಿದರು. ಪರಿಣಾಮ ಮೊದಲ ವಿಕೆಟ್ಗೆ 8.5 ಓವರ್ಗಳಲ್ಲಿ 75 ರನ್ ಹರಿದು ಬಂತು. ಈ ಹಂತದಲ್ಲಿ ಅರ್ಧಶತಕದ ಅಂಚಿನಲ್ಲಿದ್ದ ಸಾಲ್ಟ್ ಅನಗತ್ಯ ರನ್ಗೆ ಓಡಲು ಯತ್ನಿಸಿ ರನೌಟ್ಗೆ ಬಲಿಯಾದರು. ಇದರೊಂದಿಗೆ 26 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಿತ 43 ರನ್ ಸಿಡಿಸಿ ಆಟವನ್ನು ಮುಗಿಸಿದರು.
ಬಳಿಕ ಸಾಲ್ಟ್ ಔಟಾಗುತ್ತಿದ್ದಂತೆ ದಾಳಿಗಿಳಿದ ಹರ್ಷಿತ್ ರಾಣಾ ಆರಂಭದಲ್ಲಿ ದಂಡಿಸಿಕೊಂಡು ತಾನೆಸೆದ 10ನೇ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ವಿಕೆಟ್ ಕಿತ್ತರು. 32 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಬೆನ್ ಡಕೆಟ್, ಹರ್ಷಿತ್ ಎಸೆದ 10ನೇ ಓವರ್ನ 3ನೇ ಎಸೆತದಲ್ಲಿ ಜೈಸ್ವಾಲ್ಗೆ ಕ್ಯಾಚ್ ಕೊಟ್ಟು ಹೊರನಡೆದರು. ಬಳಿಕ ಅದೇ ಓವರ್ನ 5ನೇ ಎಸೆತದಲ್ಲಿ ಹ್ಯಾರಿ ಬ್ರೂಕ್ ಡಕೌಟ್ಗೆ ಬಲಿಯಾದರು. ಬಳಿಕ ಭರವಸೆ ಮೂಡಿಸಿದ್ದ ಜೋ ರೂಟ್ 19 ರನ್ಗೆ ಆಟ ಮುಗಿಸಿ ಜಡೇಜಾಗೆ ಬಲಿಯಾದರು. ಈ ಹಂತದಲ್ಲಿ ಬಟ್ಲರ್ ಮತ್ತು ಬೆಥೆಲ್ ತಂಡಕ್ಕೆ ಆಸರೆಯಾದರು.
ಅರ್ಧಶತಕ ಸಿಡಿಸಿ ಮಿಂಚಿದ ಬಟ್ಲರ್, ಬೆಥೆಲ್
18.3 ಓವರ್ಗಳಲ್ಲಿ 111 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದ್ದ ಇಂಗ್ಲೆಂಡ್ಗೆ ಆಸರೆಯಾಗಿದ್ದು ನಾಯಕ ಜೋಸ್ ಬಟ್ಲರ್ ಮತ್ತು ಜೇಕಬ್ ಬೆಥೆಲ್. ಭಾರತದ ಬೌಲರ್ಗಳ ವಿರುದ್ಧ ದಿಟ್ಟ ಹೋರಾಟ ನಡೆಸಿದ ಈ ಜೋಡಿ 5ನೇ ವಿಕೆಟ್ಗೆ ಅಮೂಲ್ಯವಾದ 59 ರನ್ಗಳ ಕಾಣಿಕೆ ನೀಡಿತು. ಬಟ್ಲರ್ 67 ಎಸೆತಗಳಲ್ಲಿ 4 ಬೌಂಡರಿ ಸಹಿತ 52 ರನ್ ಗಳಿಸಿ ಅಕ್ಷರ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು. ನಾಯಕ ಔಟಾದ ನಂತರ ತಂಡವನ್ನು 200ರ ಗಡಿ ದಾಟಿಸಲು ನೆರವಾದ ಬೆಥೆಲ್ 64 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 51 ರನ್ ಬಾರಿಸಿ ಜಡ್ಡುಗೆ ಬಲಿಯಾದರು.
ಕೆಳ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗುವ ಸಾಹಸಕ್ಕೆ ಕೈ ಹಾಕಲಿಲ್ಲ. ರೋಹಿತ್ ಪಡೆಯ ಬೌಲರ್ಗಳ ದಾಳಿಗೆ ನಲುಗಿದ ಲಿಯಾಮ್ ಲಿವಿಂಗ್ಸ್ಟನ್ (5), ಬ್ರೈಡನ್ ಕಾರ್ಸ್ (10), ಆದಿಲ್ ರಶೀದ್ (8) ಮತ್ತು ಸಾಕಿಬ್ ಮಹ್ಮೂದ್ (2) ನಿರಾಸೆ ಮೂಡಿಸಿದರೆ, ಜೋಫ್ರಾ ಆರ್ಚರ್ ಅಜೇಯ 21 ರನ್ ಸಿಡಿಸಿದರು. ಜಡೇಜಾ 3 ವಿಕೆಟ್ ಕಿತ್ತರೆ, ಹರ್ಷಿತ್ ತನ್ನ ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್ ಉರುಳಿಸಿ ದಾಖಲೆ ನಿರ್ಮಿಸಿದರು. ಇವರಿಬ್ಬರಿಗೆ ಕುಲ್ದೀಪ್, ಶಮಿ, ಅಕ್ಷರ್ ತಲಾ 1 ವಿಕೆಟ್ ಪಡೆದು ಸಾಥ್ ನೀಡಿದರು.
