ಸೋಲಿನ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಆಘಾತ; 2ನೇ ಪಂದ್ಯಕ್ಕೂ ಮುನ್ನ ಸ್ಟಾರ್ ಆಲ್​ರೌಂಡರ್​ಗೆ ಗಾಯ
ಕನ್ನಡ ಸುದ್ದಿ  /  ಕ್ರಿಕೆಟ್  /  ಸೋಲಿನ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಆಘಾತ; 2ನೇ ಪಂದ್ಯಕ್ಕೂ ಮುನ್ನ ಸ್ಟಾರ್ ಆಲ್​ರೌಂಡರ್​ಗೆ ಗಾಯ

ಸೋಲಿನ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಆಘಾತ; 2ನೇ ಪಂದ್ಯಕ್ಕೂ ಮುನ್ನ ಸ್ಟಾರ್ ಆಲ್​ರೌಂಡರ್​ಗೆ ಗಾಯ

Ravindra Jadeja Injury: ಮೊದಲ ಟೆಸ್ಟ್​ ಪಂದ್ಯದ ಸೋಲಿನ ಆಘಾತದಲ್ಲಿರುವ ಭಾರತ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಸ್ಟಾರ್​ ಆಲ್​ರೌಂಡರ್​ ರವೀಂದ್ರ ಜಡೇಜಾ ಗಾಯದ ಸಮಸ್ಯೆಗೆ ಸಿಲುಕಿದ್ದಾರೆ.

ರವೀಂದ್ರ ಜಡೇಜಾ.
ರವೀಂದ್ರ ಜಡೇಜಾ.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಐದು ಪಂದ್ಯಗಳ ಸರಣಿಯ ಮೊದಲ ಟೆಸ್ಟ್​ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ (India vs England) ಮುಜುಗರದ ಸೋಲಿನ ಆಘಾತಕ್ಕೆ ಒಳಗಾಗಿದೆ. ಗೆಲ್ಲುವ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಅವಮಾನ ಸೋಲು ಅನುಭವಿಸಿ ಸರಣಿಯಲ್ಲಿ 0-1ರಲ್ಲಿ ಹಿನ್ನಡೆ ಅನುಭವಿಸಿದೆ. ಇದೀಗ ದೊಡ್ಡ ಗಾಯದ ಭೀತಿಗೆ ಸಿಲುಕಿದೆ. ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರು ಮಂಡಿರಜ್ಜು ಗಾಯಗೊಂಡಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ ವೀರೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿದ ಜಡೇಜಾ, 87 ರನ್ ಗಳಿಸಿ ತಂಡದ ಅಗ್ರ ಸ್ಕೋರರ್ ಆಗಿದ್ದರು. ಆದರೆ 2 ನೇ ಇನ್ನಿಂಗ್ಸ್​​ನಲ್ಲಿ ನಿರಾಸೆ ಮೂಡಿಸಿದರು. ರೋಹಿತ್ ನೇತೃತ್ವದ ತಂಡ ಒಟ್ಟು 230 ರನ್‌ ಗುರಿ ಬೆನ್ನಟ್ಟುವಾಗ ಜಡೇಜಾ ಮೇಲೆ ಹೆಚ್ಚಿನ ಭರವಸೆ ಇಡಲಾಗಿತ್ತು. ಆದರೆ 2 ರನ್ ಸಿಡಿಸಿ ನಿರಾಸೆ ಮೂಡಿಸಿದರು. 28 ರನ್​ಗಳಿಂದ ಶರಣಾದ ಭಾರತ ತಂಡಕ್ಕೆ ಎರಡನೇ ಟೆಸ್ಟ್​ ಪಂದ್ಯಕ್ಕೂ ಮುನ್ನ ಜಡೇಜಾ ಗಾಯ ಆತಂಕ್ಕೆ ಸಿಲುಕುವಂತೆ ಮಾಡಿದೆ.

ರನೌಟ್​ ಆಗುವ ವೇಳೆ ಗಾಯ

ಮೊದಲ ಇನ್ನಿಂಗ್ಸ್​​ನಲ್ಲಿ ಶತಕ ವಂಚಿತ ರವೀಂದ್ರ ಜಡೇಜಾ, ಎರಡನೇ ಇನ್ನಿಂಗ್ಸ್​​ನಲ್ಲಿ 20 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಿದರು. ಇಂಗ್ಲೆಂಡ್ ವಿರುದ್ಧದ ಸಮರ ನಡೆಸಲು ಇನ್ನೂ ಒಂದು ದಿನ ಬಾಕಿ ಇತ್ತು. ಆದರೆ 35 ವರ್ಷದ ಆಟಗಾರ ಬೇಡದ ರನ್ ಕದಿಯಲು ಯತ್ನಿಸಿ ರನೌಟ್​ ಆದರು. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಸ್ಟ್ರೈಕ್​ ವಿಕೆಟ್​ಗೆ ಹೊಡೆದು ಔಟ್ ಮಾಡಿದರು. ತ್ವರಿತ ರನ್ ಗಳಿಸಲು ಯತ್ನಿಸುವ ವೇಳೆ ಮಂಡಿರಜ್ಜು ಗಾಯದ ಸಮಸ್ಯೆಗೆ ಸಿಲುಕಿದರು.

ಕ್ರೀಸ್​​ ಮುಟ್ಟಿದ ಬೆನ್ನಲ್ಲೇ ಜಡೇಜಾ ಮಂಡಿರಜ್ಜು ಗಾಯಗೊಂಡಂತೆ ಕಂಡುಬಂದಿತು. ಇದು ಭಾರತ ಪಾಲಿಗೆ ಆತಂಕಕಾರಿ ಸಂಗತಿಯಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇನ್ನೂ ಅಧಿಕೃತ ಅಪ್ಡೇಟ್​ ಹೊರಡಿಸದಿದ್ದರೂ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ವರ್ಷದ ಪ್ರಮುಖ ಟೆಸ್ಟ್ ಸರಣಿಗಳಲ್ಲಿ ದೊಡ್ಡ ತಲೆನೋವನ್ನು ಉಂಟುಮಾಡಿದೆ. ಫೆಬ್ರವರಿ 2ರಂದು ಎರಡನೇ ಟೆಸ್ಟ್ ಆರಂಭವಾಗಲಿದ್ದು ಅಷ್ಟರೊಳಗೆ ಸಿದ್ಧವಾಗುತ್ತಾರಾ ಎಂಬುದಕ್ಕೆ ಕಾಯಬೇಕಿದೆ.

ಜಡೇಜಾ ಅವರು ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯುತ್ತಮ ಆಲ್‌ರೌಂಡರ್‌ ಆಗಿದ್ದಾರೆ. ಭಾರತೀಯ ಬೌಲಿಂಗ್‌ನ ಮುಖ್ಯ ಆಧಾರ ಮಾತ್ರವಲ್ಲದೆ ಅವರು ಉತ್ತಮ ಬ್ಯಾಟರ್‌ಗಳಲ್ಲಿ ಒಬ್ಬರು. 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಜಡ್ಡು, ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ. ತದನಂತರ ಕೆಎಸ್​ ಭರತ್, ರವಿಚಂದ್ರನ್ ಅಶ್ವಿನ್, ಮತ್ತು ಅಕ್ಷರ್ ಪಟೇಲ್ ಕಣಕ್ಕಿಳಿಯಲಿದ್ದಾರೆ. ಹಾಗಾಗಿ ತಂಡಕ್ಕೆ ಅವರ ಅಗತ್ಯತೆ ಇದೆ.

ಈ ಹಿಂದೆಯೂ ಗಾಯಗೊಂಡಿದ್ದರು

ಆಸ್ಟ್ರೇಲಿಯಾ ವಿರುದ್ಧದ ಪ್ರಸಿದ್ಧ ಸಿಡ್ನಿ ಟೆಸ್ಟ್‌ನಲ್ಲಿ ಹೆಬ್ಬೆರಳು ಮುರಿತದ ನಂತರ 2021ರಲ್ಲಿ ಇಂಗ್ಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಯನ್ನು ಕಳೆದುಕೊಂಡಿದ್ದ ಜಡೇಜಾ, ಈಗ ಮತ್ತೆ ಇಂಜುರಿಗೆ ತುತ್ತಾದರೆ ಸಾಕಷ್ಟು ಕಷ್ಟವಾಗುತ್ತದೆ. ಮುಂದೋಳಿನ ಗಾಯ ಎಂದು ಘೋಷಿಸಲ್ಪಟ್ಟ ಕಾರಣ ಅವರು ವರ್ಷದ ನಂತರ ದಕ್ಷಿಣ ಆಫ್ರಿಕಾ ಪ್ರವಾಸವನ್ನು ತಪ್ಪಿಸಿಕೊಂಡಿದ್ದರು.

2022ರ ಏಷ್ಯಾಕಪ್ ಟೂರ್ನಿಯ ಮಧ್ಯದಲ್ಲಿ ಮೊಣಕಾಲಿನ ಗಾಯಕ್ಕೆ ಒಳಗಾಗಿ ಹೊರಗುಳಿದಿದ್ದ ಜಡ್ಡು, ನಂತರ ಅವರು 2022ರ ಟಿ20 ವಿಶ್ವಕಪ್ ಮತ್ತು ಬಾಂಗ್ಲಾದೇಶ ಪ್ರವಾಸವನ್ನು ಕಳೆದುಕೊಂಡಿದ್ದರು. ಆ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿ ಹಲವು ತಿಂಗಳ ಕಾಲ ವಿಶ್ರಾಂತಿ ಪಡೆದಿದ್ದ ಆಲ್​ರೌಂಡರ್​ ಸ್ಟ್ರಾಂಗ್​ ಕಂಬ್ಯಾಕ್ ಮಾಡಿದರು. ಏಕದಿನ ವಿಶ್ವಕಪ್​ನಲ್ಲೂ ಮಹತ್ವದ ಪಾತ್ರವಹಿಸಿದ್ದರು.

ಮೊದಲ ಟೆಸ್ಟ್​ ಪಂದ್ಯದ ಸಂಕ್ಷಿಪ್ತ ಸ್ಕೋರ್​ ವಿವರ

ಇಂಗ್ಲೆಂಡ್​ ಮೊದಲ ಇನ್ನಿಂಗ್ಸ್: 246/10 (ಬೆನ್​ಸ್ಟೋಕ್ಸ್​ 70, ಅಶ್ವಿನ್ 68/3)

ಭಾರತ ಮೊದಲ ಇನ್ನಿಂಗ್ಸ್​: 436/10 (ರವೀಂದ್ರ ಜಡೇಜಾ 87, ಜೋ ರೂಟ್ 79/4)

ಇಂಗ್ಲೆಂಡ್​ ಎರಡನೇ ಇನ್ನಿಂಗ್ಸ್​: 420/10 (ಒಲ್ಲಿ ಪೋಪ್ 196, ಜಸ್ಪ್ರೀತ್ ಬುಮ್ರಾ 41/4)

ಭಾರತ ಎರಡನೇ ಇನ್ನಿಂಗ್ಸ್​: 202/10 (ರೋಹಿತ್​ 39, ಟಾಮ್​ ಹಾರ್ಟ್ಲೆ 33/7)

Whats_app_banner