IND vs ENG: ಭಾರತ ತಂಡಕ್ಕೆ ಗಾಯದ ಮೇಲೆ ಬರೆ; 2ನೇ ಟೆಸ್ಟ್‌ನಿಂದ ಜಡೇಜಾ ಜೊತೆ ರಾಹುಲ್ ಕೂಡಾ ಹೊರಕ್ಕೆ; ತಂಡ ಸೇರಿಕೊಂಡ ಮೂವರು
IND vs ENG: ಫೆಬ್ರವರಿ 2ರಿಂದ ವಿಶಾಖಪಟ್ಟಣದಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ಹೊರಬಿದ್ದಿದ್ದಾರೆ. ಹೀಗಾಗಿ ಸರ್ಫರಾಜ್ ಖಾನ್ ಸೇರಿದಂತೆ ಒಟ್ಟು ಮೂವರನ್ನು ಭಾರತ ತಂಡಕ್ಕೆ ಕರೆಸಿಕೊಳ್ಳಲಾಗಿದೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅನುಭವಿಸಿದ ಸೋಲನ್ನು ಅರಗಿಸಿಕೊಳ್ಳುವ ಮುನ್ನವೇ, ಭಾರತ ತಂಡಕ್ಕೆ ಎರಡೆರಡು ಆಘಾತಗಳು ಎದುರಾಗಿವೆ. ಫೆಬ್ರವರಿ 2ರ ಶುಕ್ರವಾರದಂದು ವಿಶಾಖಪಟ್ಟಣದಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಭಾರತದ ನಂಬರ್ ವನ್ ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತು ಬ್ಯಾಟರ್ ಕೆಎಲ್ ರಾಹುಲ್ ಹೊರಬಿದ್ದಿದ್ದಾರೆ.
ಭಾನುವಾರದ ಪಂದ್ಯದ ವೇಳೆ ಜಡೇಜಾ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದರೆ, ರಾಹುಲ್ ಬಲಗಾಲಿನ ನೋವಿನ ಬಗ್ಗೆ ದೂರು ನೀಡಿದ್ದರು. ಹೀಗಾಗಿ ಫೆಬ್ರವರಿ 02ರಿಂದ ವೈಜಾಗ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಿಂದ ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ಅವರನ್ನು ಹೊರಗಿಡಲಾಗಿದೆ ಎಂದು ಬಿಸಿಸಿಐ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಇದೇ ವೇಳೆ ಬಿಸಿಸಿಐ ವೈದ್ಯಕೀಯ ತಂಡವು ಇಬ್ಬರ ಆರೋಗ್ಯದ ಕುರಿತು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಬಿಸಿಸಿಐ ತಿಳಿಸಿದೆ.
ತಂಡ ಸೇರಿಕೊಂಡ ಮೂವರು
ಇದೇ ವೇಳೆ ಭಾರತ ತಂಡಕ್ಕೆ ಮೂವರು ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಮುಂಬೈ ಬ್ಯಾಟರ್ ಸರ್ಫರಾಜ್ ಖಾನ್, ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ ಮತ್ತು ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಎರಡನೇ ಟೆಸ್ಟ್‌ಗೆ ತಂಡಕ್ಕೆ ಸೇರಿಸಿದೆ.
ಇದನ್ನೂ ಓದಿ | ಹೈದರಾಬಾದ್ ಟೆಸ್ಟ್ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಜಸ್ಪ್ರೀತ್ ಬುಮ್ರಾಗೆ ಐಸಿಸಿ ಛೀಮಾರಿ; ಕಾರಣ ಹೀಗಿದೆ
ಅತ್ತ ಅಹಮದಾಬಾದ್‌ನಲ್ಲಿ ಗುರುವಾರ ಆರಂಭವಾಗಲಿರುವ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಮೂರನೇ ಮತ್ತು ಅಂತಿಮ ಅನಧಿಕೃತ ಟೆಸ್ಟ್ ಪಂದ್ಯಕ್ಕೆ ಭಾರತ ಎ ತಂಡದಲ್ಲಿ ವಾಷಿಂಗ್ಟನ್‌ಗೆ ಬದಲಿ ಆಟಗಾರನಾಗಿ ಸರನ್ಶ್ ಜೈನ್ ಅವರನ್ನು ಹೆಸರಿಸಲಾಗಿದೆ.
ವಿಶಾಖಪಟ್ಟಣದ ಡಾ.ವೈಎಸ್ ರಾಜಶೇಖರ್ ರೆಡ್ಡಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಬ್ಬರು ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ | ಇಂಗ್ಲೆಂಡ್ ಅನ್ನು ಹಗುರವಾಗಿ ಪರಿಗಣಿಸಬೇಡಿ; ಮೊದಲ ಟೆಸ್ಟ್ ಸೋಲಿನ ಬೆನ್ನಲ್ಲೇ ಭಾರತಕ್ಕೆ ನಾಸಿರ್ ಹುಸೈನ್ ಎಚ್ಚರಿಕೆ ಕರೆ
ಅಹಮದಾಬಾದ್‌ನಲ್ಲಿ ನಡೆದ ಇಂಗ್ಲೆಂಡ್ ಲಯನ್ಸ್ ಮತ್ತು ಭಾರತ ಎ ತಂಡಗಳ ನಡುವಿನ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತವು ಇನ್ನಿಂಗ್ಸ್ ಮತ್ತು 16 ರನ್‌ಗಳಿಂದ ಜಯ ಸಾಧಿಸಿತು. ಪಂದ್ಯದಲ್ಲಿ ಸರ್ಫರಾಜ್ ಖಾನ್ ಅಮೋಘ ಶತಕ ಸಿಡಿಸಿದ್ದರು. 161 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮತ್ತೊಂದೆಡೆ ಸುಂದರ್ ಈ ಪಂದ್ಯದಲ್ಲಿ ಎರಡು ವಿಕೆಟ್ ಕಬಳಿಸುವುದರ ಜೊತೆಗೆ ಅರ್ಧಶತಕವನ್ನೂ ಸಿಡಿಸಿದ್ದರು.
ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಆವೇಶ್ ಖಾನ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್, ಸೌರಭ್ ಕುಮಾರ್.
(This copy first appeared in Hindustan Times Kannada website. To read more like this please logon to kannada.hindustantime.com )