RCB Captain: ನೂತನ ಕ್ಯಾಪ್ಟನ್ ಘೋಷಿಸಿದ ಆರ್​ಸಿಬಿ, ವಿರಾಟ್ ಕೊಹ್ಲಿ ಅಲ್ಲ, ರಜತ್ ಪಾಟೀದಾರ್ ಮುಂದಿನ ನಾಯಕ
ಕನ್ನಡ ಸುದ್ದಿ  /  ಕ್ರಿಕೆಟ್  /  Rcb Captain: ನೂತನ ಕ್ಯಾಪ್ಟನ್ ಘೋಷಿಸಿದ ಆರ್​ಸಿಬಿ, ವಿರಾಟ್ ಕೊಹ್ಲಿ ಅಲ್ಲ, ರಜತ್ ಪಾಟೀದಾರ್ ಮುಂದಿನ ನಾಯಕ

RCB Captain: ನೂತನ ಕ್ಯಾಪ್ಟನ್ ಘೋಷಿಸಿದ ಆರ್​ಸಿಬಿ, ವಿರಾಟ್ ಕೊಹ್ಲಿ ಅಲ್ಲ, ರಜತ್ ಪಾಟೀದಾರ್ ಮುಂದಿನ ನಾಯಕ

RCB New Captain: 18ನೇ ಆವೃತ್ತಿಯ ಐಪಿಎಲ್​​ನಲ್ಲಿ ತಮ್ಮ ತಂಡದ ನಾಯಕ ಯಾರೆಂದು ಆರ್​ಸಿಬಿ ಘೋಷಿಸಿದ್ದು, ರಜತ್ ಪಾಟೀದಾರ್ ಅವರಿಗೆ ಪಟ್ಟ ಕಟ್ಟಿದೆ.

ಆರ್​ಸಿಬಿ ನೂತನ ಕ್ಯಾಪ್ಟನ್ ಘೋಷಣೆ, ಈ ಸಲ ಕಪ್ ನಮ್ದೆ!
ಆರ್​ಸಿಬಿ ನೂತನ ಕ್ಯಾಪ್ಟನ್ ಘೋಷಣೆ, ಈ ಸಲ ಕಪ್ ನಮ್ದೆ!

ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್​ 2025ರ ಆವೃತ್ತಿಗೆ ಕೆಲವೇ ದಿನಗಳು ಬಾಕಿ ಇರುವಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೂತನ ಕ್ಯಾಪ್ಟನ್ ಘೋಷಿಸಿದೆ. ಫಾಫ್ ಡು ಪ್ಲೆಸಿಸ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ರಜತ್ ಪಾಟೀದಾರ್ ಅವರನ್ನು ನೂತನ ನಾಯಕನನ್ನಾಗಿ ನೇಮಿಸಲಾಗಿದೆ. ಇಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಆರ್​ಸಿಬಿ ಮ್ಯಾನೇಜ್​ಮೆಂಟ್ ಅಧಿಕೃತವಾಗಿ ಘೋಷಿಸಿತು. 17 ವರ್ಷಗಳಿಂಗಲೂ ಟ್ರೋಫಿ ಗೆಲ್ಲಲು ವಿಫಲವಾಗಿರುವ ಆರ್​ಸಿಬಿ ಇದೀಗ 18ನೇ ಆವೃತ್ತಿಯಲ್ಲಿ ಅದೃಷ್ಟಪರೀಕ್ಷೆಗೆ ಇಳಿದಿದೆ. ಮೊದಲು ವಿರಾಟ್ ಕೊಹ್ಲಿ ಜೊತೆಗೆ ರಜತ್ ಪಾಟೀದಾರ್ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಕೊಹ್ಲಿ ಮತ್ತೆ ನಾಯಕನಾಗಲು ನಿರಾಕರಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಆರ್​ಸಿಬಿ ಸಾಮ್ರಾಜ್ಯಕ್ಕೆ ನೂತನ ಚಕ್ರವರ್ತಿಯಾಗಿ ನೇಮಕಗೊಂಡಿರುವ ಪಾಟೀದಾರ್​ ಮೇಲೆ ದೊಡ್ಡ ಜವಾಬ್ದಾರಿಯ ಮೂಟೆ ಹೊರಬೇಕಾಗಿದೆ. 18ನೇ ಸೀಸನ್​ನಲ್ಲಿ ಕಪ್ ಗೆದ್ದು ಕೊಡುವ ಜವಾಬ್ದಾರಿ ಅವರ ಮೇಲಿದೆ. ಐಪಿಎಲ್ ಮೆಗಾ ಹರಾಜಿಗೂ ಮುನ್ನ ಪಾಟೀದಾರ್ ಅವರಿಗೆ 11 ಕೋಟಿ ರೂಪಾಯಿ ಕೊಟ್ಟು ಉಳಿಸಿಕೊಂಡಿದ್ದ ಆರ್​ಸಿಬಿ, ಇದೀಗ ಮಹತ್ವದ ಪಾತ್ರವನ್ನೂ ನೀಡಿದೆ. 2021ರಲ್ಲಿ ಆರ್​ಸಿಬಿ ಸೇರಿದ್ದ ರಜತ್ ಪಾಟೀದಾರ್ 2023ರಲ್ಲಿ ಇಂಜುರಿ ಕಾರಣ ಟೂರ್ನಿಯನ್ನು ಕಳೆದುಕೊಂಡಿದ್ದರು. 2022ರ ಐಪಿಎಲ್​​ಗೂ ಮುನ್ನ ರಜತ್​ನನ್ನು ಕೈಬಿಡಲಾಗಿತ್ತು. ಆದರೆ ಲವ್​ನೀತ್ ಸಿಸೋಡಿಯಾ ಬದಲಿಗೆ ಪಾಟೀದಾರ್​ಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. 2024ರಲ್ಲಿ 359 ರನ್​ ಸಿಡಿಸಿ ಆರ್​ಸಿಬಿ ಪ್ಲೇಆಫ್ ಪ್ರವೇಶಿಸಲು ಪ್ರಮುಖ ಪಾತ್ರವಹಿಸಿದ್ದರು ಮಧ್ಯಪ್ರದೇಶದ ಆಟಗಾರ. ಇವರು ಆರ್​ಸಿಬಿ 8ನೇ ಕ್ಯಾಪ್ಟನ್.

31 ವರ್ಷದ ರಜತ್ ಇದುವರೆಗೂ 27 ಐಪಿಎಲ್​ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ಪೈಕಿ ಬ್ಯಾಟ್ ಬೀಸಿರೋದು 24 ಇನ್ನಿಂಗ್ಸ್​ಗಳಲ್ಲಿ. 158.85ರ ಸ್ಟ್ರೈಕ್​ರೇಟ್​ನಲ್ಲಿ ರನ್ ಗಳಿಸಿರುವ ರಜತ್, 1 ಶತಕ, 7 ಅರ್ಧಶತಕ ಸಹಿತ 799 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 34.74. ಗರಿಷ್ಠ ಸ್ಕೋರ್ 112.

ಆರ್​ಸಿಬಿ ಹಿಂದಿನ ಕ್ಯಾಪ್ಟನ್​​ಗಳು​

ರಾಹುಲ್ ದ್ರಾವಿಡ್ - 2008-2008

ಕೆವಿನ್ ಪೀಟರ್​ಸನ್ - 2009-2009

ಅನಿಲ್ ಕುಂಬ್ಳೆ - 2009-2010

ಡೇನಿಯಲ್ ವೆಟ್ಟೋರಿ - 2011-2012

ವಿರಾಟ್ ಕೊಹ್ಲಿ - 2011-2023

ಶೇನ್ ವ್ಯಾಟ್ಸನ್ - 2017-2017

ಫಾಫ್ ಡು ಪ್ಲೆಸಿಸ್ - 2022-2024

ರಜತ್ ಪಾಟೀದಾರ್ - 2025 -

2024ರಲ್ಲಿ ಪ್ಲೇಆಫ್ ಪ್ರವೇಶಿಸಿದ್ದ ಆರ್​ಸಿಬಿ

2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಸಾಧ್ಯವಾದದ್ದನ್ನು ಸಾಧಿಸಿ ಪ್ಲೇಆಫ್​ಗೆ ಪ್ರವೇಶಿಸಿತ್ತು. ಆರಂಭಿಕ 8 ಪಂದ್ಯಗಳಲ್ಲಿ ಗೆದ್ದಿದ್ದೇ 1 ಪಂದ್ಯ. ಒಟ್ಟು 7 ಪಂದ್ಯ ಸೋತಿತ್ತು. ಆದರೆ, ಎರಡನೇ ಹಂತದಲ್ಲಿ ಸತತ 6 ಪಂದ್ಯಗಳನ್ನು ಜಯಿಸಿ ನಾಲ್ಕನೇ ತಂಡವಾಗಿ ಪ್ಲೇಆಫ್ ಪ್ರವೇಶಿಸಿತ್ತು. ಅದರಲ್ಲೂ ಲೀಗ್​ ಹಂತದ ಕೊನೆಯ ಪಂದ್ಯದಲ್ಲಿ ಸಿಎಸ್​ಕೆ ಗೆದ್ದ ಪಂದ್ಯ ಈಗಲೂ ಕಣ್ಣಿಗೆ ಕಟ್ಟುವಂತಿದೆ. ಅತ್ಯಂತ ರೋಚಕತೆ ಸೃಷ್ಟಿಸಿದ್ದ ಈ ಪಂದ್ಯದಲ್ಲಿ ಗೆದ್ದು ಆರ್​ಸಿಬಿ ನಾಲ್ಕನೇ ಪಡೆದಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ಸೋತು ಹೊರಬಿದ್ದಿತ್ತು.

9 ಬಾರಿ ಪ್ಲೇಆಫ್, 3 ಫೈನಲ್​

ಇದುವರೆಗೂ ಟ್ರೋಫಿ ಗೆಲ್ಲದಿದ್ದರೂ ಐಪಿಎಲ್​ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಆರ್​ಸಿಬಿ ನಾಲ್ಕನೇ ಸ್ಥಾನ ಪಡೆದಿರುವುದು ವಿಶೇಷ. 2009, 2011, 2016ರಲ್ಲಿ ಫೈನಲ್ ಪ್ರವೇಶಿಸಿದ್ದ ಆರ್​ಸಿಬಿ ರನ್ನರ್​ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 17 ವರ್ಷಗಳ ಐಪಿಎಲ್​ ಇತಿಹಾಸದಲ್ಲಿ 9 ಬಾರಿ ಪ್ಲೇಆಫ್ ಪ್ರವೇಶಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner