ಬಿಬಿಎಂಪಿ ಪಾರ್ಕ್ಗಳನ್ನು ಹಾಡಿ ಹೊಗಳಿದ ಆರ್ಸಿಬಿ ದಾಂಡಿಗ ಟಿಮ್ ಡೇವಿಡ್; ಸಿಂಗಾಪುರಕ್ಕೆ ಹೋಲಿಕೆ
ಆಸ್ಟ್ರೇಲಿಯಾ ಆಟಗಾರ ಟಿಮ್ ಡೇವಿಡ್ ಬೆಂಗಳೂರಿನ ಬಿಬಿಎಂಪಿ ಪಾರ್ಕ್ಗಳನ್ನು ಹೊಗಳಿದ್ದಾರೆ. ಉದ್ಯಾನವನಗಳಲ್ಲಿರುವ ಓಪನ್ ಏರ್ ಜಿಮ್ ಸಲಕರಣೆಗಳು ಫಿಟ್ನೆಸ್ ಮೂಲಸೌಕರ್ಯವನ್ನು ಒದಗಿಸುತ್ತವೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಗರ. ವಿಶ್ವಕ್ಕೆ ಐಟಿ ಸಿಟಿಯಾಗಿ ಬೆಳೆದಿರುವ ಉದ್ಯಾನ ನಗರಿ ಹಲವು ಬಾರಿ ಮೂಲಸೌಕರ್ಯಗಳ ಕೊರತೆಯ ವಿಷಯವಾಗಿ ಟೀಕೆಗಳಿಗೆ ಒಳಗಾಗುತ್ತದೆ. ಇದೀಗ ಅದೇ ಮೂಲಸೌಕರ್ಯ ವಿಷಯವಾಗಿ ಆಸ್ಟ್ರೇಲಿಯಾ ಕ್ರಿಕೆಟಿಗರಿಬ್ಬರು ಬೆಂಗಳೂರನ್ನು ಹೊಗಳಿದ್ದಾರೆ. ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ಟಿಮ್ ಡೇವಿಡ್ ಈ ಬಗ್ಗೆ ಮಾತನಾಡಿದ್ದಾರೆ. ನಗರದ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳಿದ್ದಾಗ ಆಟಗಾರರು ತಮ್ಮ ಹೋಟೆಲ್ ಜಿಮ್ಗಳಲ್ಲಿ ಹೆಚ್ಚು ಸಮಯ ಕಳೆಯುವುದಿಲ್ಲ. ಬದಲಿಗೆ ಬೆಂಗಳೂರು ನಗರದ ಸಾರ್ವಜನಿಕ ಸ್ಥಳಗಳಲ್ಲಿರುವ ಜಿಮ್ ಸೌಕರ್ಯಗಳನ್ನು ಸದ್ಬಳಕೆ ಮಾಡುತ್ತಾರೆ ಎಂಬುವುದು ಇವರ ಮಾತಿನಿಂದ ಸ್ಪಷ್ಟವಾಗುತ್ತದೆ.
ಆರ್ಸಿಬಿ ಆಟಗಾರ ಟಿಮ್ ಡೇವಿಡ್, ಬಿಬಿಎಂಪಿ ಉದ್ಯಾನವನಗಳಲ್ಲಿ ಸ್ಥಾಪಿಸಲಾಗಿರುವ ಓಪನ್ ಏರ್ ಜಿಮ್ಗಳನ್ನು ಶ್ಲಾಘಿಸಿದ್ದಾರೆ. ಅವುಗಳನ್ನು ಸಿಂಗಾಪುರಕ್ಕೆ ಹೋಲಿಸಿದ್ದು, ಅಲ್ಲಿಯೂ ಇದೇ ರೀತಿಯ ಸೌಲಭ್ಯಗಳಿವೆ ಎಂದಿದ್ದಾರೆ. ಬೆಂಗಳೂರಿನ ಪಾರ್ಕ್ಗಳಲ್ಲಿ ಇರುವ ಜಿಮ್ ಸೌಲಭ್ಯವನ್ನು ತಾವು ಬಳಸುತ್ತಿರುವುದಾಗಿ ಖುದ್ದು ಅವರೇ ಹೇಳಿಕೊಂಡಿದ್ದಾರೆ.
ಡ್ಯಾನಿಶ್ ಸೇಠ್ ನಡೆಸುವ ಆರ್ಸಿಬಿ ಇನ್ಸೈಡರ್ ಶೋನ ಎಪಿಸೋಡ್ನಲ್ಲಿ ಮಾತನಾಡಿದ ಡೇವಿಡ್, ಉದ್ಯಾನ ನಗರಿಯ ನಗರದ ಸಾರ್ವಜನಿಕ ಫಿಟ್ನೆಸ್ ಮೂಲಸೌಕರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗಾರ್ಡನ್ ಸಿಟಿ ಎಂದೇ ಕರೆಸಿಕೊಳ್ಳವ ನಗರದಲ್ಲಿ ಸಾಕಷ್ಟು ಉದ್ಯಾನವನಗಳಿವೆ. ಇದು ಅವರಿಗೆ ಇಷ್ಟವಾಗಿದೆ.
"ನಾನು ಸಿಂಗಾಪುರದಲ್ಲಿದ್ದಾಗ, ನಾನು ಸಾರ್ವಜನಿಕ ಜಿಮ್ಗಳನ್ನು ಬಳಸಿದ್ದೆ. ಅದು ನಿಜಕ್ಕೂ ಉತ್ತಮವಾಗಿವೆ," ಎಂದು ಅವರು ಹೇಳಿದರು. “ಬೆಂಗಳೂರಿನಲ್ಲಿ ನನ್ನ ತರಬೇತುದಾರ ನನಗೆ ಬಿಬಿಎಂಪಿ ಉದ್ಯಾನವನಗಳ ಬಗ್ಗೆ ಪರಿಚಯಿಸಿದರು. ಪ್ರತಿ ಪಾರ್ಕ್ಗಳಲ್ಲಿಯೂ ತಾಲೀಮು ಉಪಕರಣಗಳಿವೆ. ಇದು ಆ ಉದ್ಯಾನಗಳನನ್ನು ಎದ್ದು ಕಾಣುವಂತೆ ಮಾಡುತ್ತದೆ,” ಎಂದಿದ್ದಾರೆ.
ಬೆಂಗಳೂರು ಮತ್ತು ಸಿಂಗಾಪುರ ಸೇಮ್ ಸೇಮ್
ಬೆಂಗಳೂರಿನ ಓಪನ್ ಜಿಮ್ಗಳನ್ನು ಸಿಂಗಾಪುರದ ಜಿಮ್ಗಳಿಗೆ ಹೋಲಿಸಬಹುದೇ ಎಂದು ಕೇಳಿದಾಗ, ಡೇವಿಡ್ ಹಿಂಜರಿಯಲಿಲ್ಲ. “ಖಂಡಿತವಾಗಿಯೂ ಹೋಲಿಸಬಹುದು. ನೀವು ಪವರ್ ಹಿಟ್ಟರ್ ಆಗಲು ಬಯಸಿದರೆ, ಬೇಗನೆ ನಿಮ್ಮ ದಿನಚರಿ ಆರಂಭಿಸಿ. ಬಿಬಿಎಂಪಿ ಉದ್ಯಾನವನಗಳಿಗೆ ಹೋಗಿ ತೂಕವನ್ನು ಇಳಿಸಿ” ಎಂದು ಅವರು ಕಿವಿಮಾತು ಹೇಳಿದ್ದಾರೆ.
ವಿಡಿಯೋ ಹಂಚಿಕೊಂಡು ಬಿಬಿಎಂಪಿ
ಟಿಮ್ ಡೇವಿಡ್ ಹೇಳಿರುವ ಈ ಮಾತಿನ ತುಣುಕನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ನಗರದ ಮೂಲಸೌಕರ್ಯದ ಬಗ್ಗೆ ಬೆಳಕು ಚೆಲ್ಲಿದ್ದಕ್ಕಾಗಿ ಕ್ರಿಕೆಟಿಗನಿಗೆ ಧನ್ಯವಾದ ಅರ್ಪಿಸಿದೆ.
"ಆರ್ಸಿಬಿ ಬ್ಯಾಟರ್ ಟಿಮ್ ಡೇವಿಡ್ ಬಿಬಿಎಂಪಿ ಉದ್ಯಾನವನಗಳು ಕ್ರಿಯಾತ್ಮಕ ಫಿಟ್ನೆಸ್ ಸ್ಥಳಗಳನ್ನು ಒದಗಿಸುತ್ತಿವೆ ಎಂದು ಶ್ಲಾಘಿಸಿದ್ದಾರೆ. ಅವರ ಮಾತುಗಳು ಬೆಂಗಳೂರಿನ ಸಾರ್ವಜನಿಕ ಸ್ಥಳಗಳ ಪ್ರಮುಖ ಭಾಗವಾಗಿ ಮಾರ್ಪಟ್ಟಿರುವ ಓಪನ್ ಜಿಮ್ಗಳತ್ತ ಜನರ ಗಮನವನ್ನು ಸೆಳೆಯುತ್ತಿವೆ" ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಈ ಪೋಸ್ಟ್ ಕೆಲವೊಂದು ಟೀಕೆಗಳನ್ನೂ ಆಕರ್ಷಿಸಿದೆ. ಇಂತಹ ಮೂಲಸೌಕರ್ಯಗಳು ಹೆಚ್ಚಾಗಿ ಬೆಂಗಳೂರಿನ ಕೇಂದ್ರ ಭಾಗಗಳಿಗೆ ಸೀಮಿತವಾಗಿವೆ ಎಂದು ಜನರು ಗಮನಸೆಳೆದಿದ್ದಾರೆ. ನಗರದ ಹೊರ ವಲಯಗಳಲ್ಲಿ ಪರಿಸ್ಥಿತಿ ಬಹಳ ಭಿನ್ನವಾಗಿದೆ ಎಂದು ಹಲವರು ಹೇಳಿದ್ದಾರೆ.