ಇಂಪ್ಯಾಕ್ಟ್‌ ಪ್ಲೇಯರ್ ನಿಯಮ ಪಂದ್ಯದ ಸಮತೋಲನವನ್ನೇ ಹಾಳು ಮಾಡುತ್ತೆ; ರೋಹಿತ್‌ ಬಳಿಕ ವಿರಾಟ್ ಕೊಹ್ಲಿ ವಿರೋಧ
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಪ್ಯಾಕ್ಟ್‌ ಪ್ಲೇಯರ್ ನಿಯಮ ಪಂದ್ಯದ ಸಮತೋಲನವನ್ನೇ ಹಾಳು ಮಾಡುತ್ತೆ; ರೋಹಿತ್‌ ಬಳಿಕ ವಿರಾಟ್ ಕೊಹ್ಲಿ ವಿರೋಧ

ಇಂಪ್ಯಾಕ್ಟ್‌ ಪ್ಲೇಯರ್ ನಿಯಮ ಪಂದ್ಯದ ಸಮತೋಲನವನ್ನೇ ಹಾಳು ಮಾಡುತ್ತೆ; ರೋಹಿತ್‌ ಬಳಿಕ ವಿರಾಟ್ ಕೊಹ್ಲಿ ವಿರೋಧ

ಐಪಿಎಲ್‌ನ ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮವು ಆಟದ ಸಮತೋಲನವನ್ನು ಹಾಳುಮಾಡಿದೆ ಎಂದು ಆರ್‌ಸಿಬಿ ಹಿರಿಯ ಆಟಗಾರ ವಿರಾಟ್ ಕೊಹ್ಲಿ ದೂರಿದ್ದಾರೆ.

ಇಂಪ್ಯಾಕ್ಟ್‌ ಪ್ಲೇಯರ್ ನಿಯಮ ಪಂದ್ಯದ ಸಮತೋಲನವನ್ನೇ ಹಾಳು ಮಾಡುತ್ತೆ ಎಂದ ವಿರಾಟ್ ಕೊಹ್ಲಿ
ಇಂಪ್ಯಾಕ್ಟ್‌ ಪ್ಲೇಯರ್ ನಿಯಮ ಪಂದ್ಯದ ಸಮತೋಲನವನ್ನೇ ಹಾಳು ಮಾಡುತ್ತೆ ಎಂದ ವಿರಾಟ್ ಕೊಹ್ಲಿ (AFP)

ಐಪಿಎಲ್‌ನಲ್ಲಿ ಇಂಪ್ಯಾಕ್ಟ್‌ ಪ್ಲೇಯರ್ (Impact Player)‌ ನಿಯಮ ಚಾಲ್ತಿಯಲ್ಲಿದೆ. ಇದರ ಪ್ರಕಾರ ಒಬ್ಬರು ಹೆಚ್ಚುವರಿ ಆಟಗಾರನನ್ನು ಆಡಿಸುವ ಅವಕಾಶ ನೀಡಲಾಗುತ್ತದೆ. ಆದರೆ, ಪ್ರಸಕ್ತ ಟೂರ್ನಿಯಲ್ಲಿ ಆಡುತ್ತಿರುವ ಭಾರತದ ಅನುಭವಿ ಆಟಗಾರರು ಈ ನಿಯಮದ ವಿರುದ್ಧವಾಗಿ ಧ್ವನಿ ಎತ್ತಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಮೊದಲನೆಯವರಾಗಿ ನನಗೆ ಈ ನಿಯಮ ಇಷ್ಟ ಇಲ್ಲ ಎಂದು ಹೇಳಿದ್ದರು. ಇದೀಗ ಆರ್‌ಸಿಬಿ ದಿಗ್ಗಜ ವಿರಾಟ್ ಕೊಹ್ಲಿ ಕೂಡಾ ಹಿಟ್‌ಮ್ಯಾನ್‌ ವಾದಕ್ಕೆ ಸಾಥ್‌ ಕೊಟ್ಟಿದ್ದಾರೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಆಟದ ಸಮತೋಲನವನ್ನು ಹಾಳುಮಾಡುತ್ತಿದೆ ಎಂದು ಹೇಳಿದ್ದಾರೆ.

ಕಳೆದ ಆವೃತ್ತಿಯ ಪಂದ್ಯಾವಳಿಯಲ್ಲಿ ಅಳವಡಿಸಿಕೊಳ್ಳಲಾದ ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮದ ಪ್ರಕಾರ, ಇನ್ನಿಂಗ್ಸ್ ಮಧ್ಯದಲ್ಲೇ ಬದಲಿ ಆಟಗಾರನನ್ನು ಆಡುವ ಬಳಗಕ್ಕೆ ಸೇರಿಸುವ ಅವಕಾಶ ನೀಡಲಾಗುತ್ತದೆ. ಈ ಕುರಿತು, ಕೆಲವು ವಾರಗಳ ಹಿಂದಷ್ಟೇ ರೋಹಿತ್ ಶರ್ಮಾ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ವಿರಾಟ್‌ ಕೊಹ್ಲಿ ಕೂಡಾ ಆ ನಿಯಮವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.

ರೋಹಿತ್ ಶರ್ಮಾ ಹೇಳಿದ್ದು ಸರಿ ಇದೆ

“ನಾನು ರೋಹಿತ್ ಶರ್ಮಾ ಅವರ ಮಾತನ್ನು ಒಪ್ಪುತ್ತೇನೆ. ಮನರಂಜನೆಯು ಆಟದ ಒಂದು ಭಾಗ ಹೌದು. ಆದರೆ ಇಲ್ಲಿ‌ ಸಮತೋಲ ಇಲ್ಲ. ಇದು ಪಂದ್ಯದ ಸಮತೋಲನಕ್ಕೆ ಅಡ್ಡಿಯಾಗಿದೆ ಎಂದು ನಾನು ಭಾವಿಸುತ್ತೇನೆ. ಇದು ನನ್ನ ಅಭಿಪ್ರಾಯ ಮಾತ್ರವಲ್ಲ. ಬಹಳಷ್ಟು ಜನರು ಈ ರೀತಿ ಭಾವಿಸುತ್ತಿದ್ದಾರೆ” ಎಂದು ಕೊಹ್ಲಿ ಜಿಯೋ ಸಿನಿಮಾದಲ್ಲಿ ಹೇಳಿದ್ದಾರೆ.

ಏನಿದು ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮ?

ಐಪಿಎಲ್‌ ಪಂದ್ಯದ ವೇಳೆ ಒಂದು ನಿರ್ದಿಷ್ಟ ತಂಡದ ಇನ್ನಿಂಗ್ಸ್‌ನಲ್ಲಿ 12ನೇ ಆಟಗಾರನಿಗೆ ಆಡುವ ಅವಕಾಶ ಕೊಡುವುದೇ ಇಂಪ್ಯಾಕ್ಟ್‌ ಪ್ಲೇಯರ್ (ಬದಲಿ ಆಟಗಾರ)‌ ನಿಮಮ. ಪಂದ್ಯದ ಟಾಸ್ ಸಮಯದಲ್ಲಿ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಆಡಲು ಅವಕಾಶ ಇರುವ ಐವರು ಆಟಗಾರರ ಪಟ್ಟಿಯನ್ನು ಆಯಾ ತಂಡ ನೀಡಬೇಕು. ಪಂದ್ಯದ ಪರಿಸ್ಥಿತಿಯ ಆಧಾರದಲ್ಲಿ ಆ ತಂಡವು ನಿರ್ಧರಿಸುವ ಯಾವುದಾದರೂ ಒಬ್ಬ ಆಟಗಾರನನ್ನು ಪಂದ್ಯದ ನಡುವೆ ಮೈದಾನಕ್ಕಿಳಿಸಬಹುದು. ಇದೇ ವೇಳೆ, ಅದಾಗಲೇ ಆಡುವ ಬಳಗದಲ್ಲಿರುವ ಒಬ್ಬ ಆಟಗಾರ ಮೈದಾನದಿಂದ ಹೊರಹೋಗಬೇಕು. ಬ್ಯಾಟರ್‌ಗೆ ಪ್ರತಿಯಾಗಿ ಬೌಲರ್, ಅಥವಾ ಬೌಲರಿಗೆ ಬದಲಿಯಾಗಿ ಬ್ಯಾಟರ್‌ ಕೂಡಾ ಆಡಬಹುದು.

ರೋಹಿತ್‌ ಶರ್ಮಾ ಏನು ಹೇಳಿದ್ದರು?

ಬದಲಿ ಆಟಗಾರ ನಿಯಮದಿಂದಾಗಿ ಆಲ್‌ರೌಂಡರ್‌ಗಳಿಗೆ ಸರಿಯಾಗಿ ಅವಕಾಶ ಸಿಗುತ್ತಿಲ್ಲ ಎಂದು ಹಿಟ್‌ಮ್ಯಾನ್‌ ಕಾಳಜಿ ವ್ಯಕ್ತಪಡಿಸಿದ್ದರು. “ಈ ನಿಯಮ ಆಲ್‌ರೌಡರ್‌ಗಳ ಬೆಳವಣಿಗೆಗೆ ಅಡ್ಡಿಯಾಗಿದೆ ಎಂದು ನನಗನಿಸುತ್ತಿದೆ. ಕ್ರಿಕೆಟ್ ಎಂಬುದು 11 ಆಟಗಾರರು ಆಡುವ ಆಟ, ಅದನ್ನು 12 ಆಟಗಾರರು ಆಡುವುದು ಸರಿ ಕಾಣುವುದಿಲ್ಲ. ನಾನು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಅಭಿಮಾನಿ ಅಲ್ಲ" ಎಂದು ಮುಂಬೈ ಇಂಡಿಯನ್ಸ್‌ ಆಟಗಾರ ಹೇಳಿದ್ದರು.

ಇದನ್ನೂ ಓದಿ | ಜಯದೇವ್ ಉನದ್ಕತ್ ಇಂಪ್ಯಾಕ್ಟ್‌ ಪ್ಲೇಯರ್;‌ ಕೆಕೆಆರ್‌ ವಿರುದ್ಧದ ಕ್ವಾಲಿಫೈಯರ್‌ ಪಂದ್ಯಕ್ಕೆ ಎಸ್‌ಆರ್‌ಎಚ್ ಆಡುವ ಬಳಗ

ಇದನ್ನೂ ಓದಿ | RCB vs RR: ಒಂದೂ ಸೋಲದ ಮತ್ತು ಒಂದೂ ಗೆಲ್ಲದ ತಂಡಗಳ ನಡುವೆ ಎಲಿಮಿನೇಟರ್ ಫೈಟ್; ಯಾರ ಕೈ ಹಿಡಿಯುತ್ತೆ ಅದೃಷ್ಟ?

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner